ಜಿಲ್ಲೆಯ ಮತದಾರರ ಅಂತಿಮ ಪಟ್ಟಿ ಪ್ರಕಟ

ವಿಜಯವಾಣಿ ಸುದ್ದಿಜಾಲ ಕಲಬುರಗಿ
ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಮತದಾನ ಹಕ್ಕು ಹೊಂದಿರುವವರ ಜಿಲ್ಲೆಯ ಮತದಾರರ ಅಂತಿಮ ಪಟ್ಟಿ ಜಿಲ್ಲಾ ಚುನಾವಣಾಧಿಕಾರಿಗಳು ಆಗಿರುವ ಜಿಲ್ಲಾಧಿಕಾರಿ ಆರ್.ವೆಂಕಟೇಶಕುಮಾರ ಬುಧವಾರ ಇಲ್ಲಿ ಪ್ರಕಟಿಸಿದರು.

ಜಿಲ್ಲೆಯಲ್ಲಿ 20, 99,162 ಮತದಾರರಿದ್ದಾರೆ. ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಬುಧವಾರ ಮತದಾರ ಪಟ್ಟಿ ಪ್ರಕಟಿಸಿ ರಾಜಕೀಯ ಪಕ್ಷಗಳ ಮುಖಂಡರ ಜತೆಗೆ ಚರ್ಚೆ ನಡೆಸಿದ ಬಳಿಕ, ಪತ್ರಕರ್ತರೊಂದಿಗೆ ಮಾತನಾಡಿದ ಡಿಸಿ, ಜಿಲ್ಲೆಯಲ್ಲಿ 1064332 ಪುರುಷ, 1034830 ಮಹಿಳಾ ಮತದಾರರಿದ್ದಾರೆ. ಈ ಪೈಕಿ 10490 ವಿಕಲಚೇತನ ಹಾಗೂ 3945 ವಿಐಪಿ ಮತದಾರರೆಂದು ಗುರುತಿಸಲಾಗಿದೆ ಎಂದು ತಿಳಿಸಿದರು.

ಕರಡು ಮತದಾರರ ಪಟ್ಟಿಗೆ ಆಕ್ಷೇಪಣೆ ಆಹ್ವಾನಿಸಿದ ಸಮಯದಲ್ಲಿ ನಕಲಿ ಹೆಸರು ಮತ್ತು ಭಾವಚಿತ್ರ, ಮರಣ ಹೊಂದಿದ ಹಾಗೂ ಬೇರಡೆ ವರ್ಗಾವಣೆಯಾದಂತಹ ಸುಮಾರು 19,000 ಮತದಾರರನ್ನು ಪಟ್ಟಿಯಿಂದ ತೆಗೆದು ಹಾಕುವ ಮೂಲಕ ಅಂತಿಮ ಪಟ್ಟಿ ಪ್ರಕಟಿಸಲಾಗಿದೆ. ಈ ಪಟ್ಟಿ ಎಲ್ಲ ತಹಸೀಲ್ದಾರರು ಹಾಗೂ ಪಾಲಿಕೆ ಇನ್ನಿತರ ಸ್ಥಳೀಯ ಸಂಸ್ಥೆಗಳಲ್ಲಿ ಲಭ್ಯವಿರುತ್ತದೆ ಎಂದು ಹೇಳಿದರು. ಹೊಸದಾಗಿ ಸೇರ್ಪಡೆಯಾಗುವ ಹೆಸರು ಉಪಪಟ್ಟಿಯಲ್ಲಿ ಪ್ರಕಟಿಸಲಾಗುವುದು ಎಂದರು.

ದೂರುಗಳಿದ್ದರೆ ಸಹಾಯವಾಣಿಗೆ ಸಂಪರ್ಕಿಸಿ

ಚುನಾವಣೆಗೆ ಸಂಬಂಧಿಸಿದ ದೂರುಗಳನ್ನು ದಾಖಲಿಸಲು ಜಿಲ್ಲೆಯಲ್ಲಿ 1950 ಉಚಿತ ಸಹಾಯವಾಣಿ ಸಂಖ್ಯೆ ಪ್ರಾರಂಭಿಸಲಾಗಿದೆ. ಈಗ ಸ್ಥಿರ ದೂರವಾಣಿಯಿಂದ ಕರೆ ಮಾಡಬಹುದು. ಮುಂದಿನ ದಿನಗಳಲ್ಲಿ ಮೊಬೈಲ್ನಿಂದಲೂ ದೂರು ದಾಖಲಿಸಲು ಅವಕಾಶ ಕಲ್ಪಿಸಲಾಗುತ್ತಿದೆ ಎಂದು ಡಿಸಿ ವೆಂಕಟೇಶಕುಮಾರ ತಿಳಿಸಿದರು. ಎಲ್ಲ ಪಕ್ಷಗಳ ಬೂತ್ಮಟ್ಟದ ಏಜೆಂಟರುಗಳ ಯಾದಿಯನ್ನು ಆದಷ್ಟು ಬೇಗ ಸಲ್ಲಿಸಬೇಕೆಂದು ವಿವಿಧ ಪಕ್ಷಗಳ ಮುಖಂಡರಿಗೆ ಸೂಚನೆ ನೀಡಿದರು. ಇದರಿಂದ ಎರಡು ಕಡೆ ಇರುವ ಹೆಸರುಗಳನ್ನು ಡಿಲಿಟ್ ಮಾಡಲು ಅನುವು ಆಗಲಿದೆ ಎಂದು ಹೇಳಿದರು. ಸಭೆಯಲ್ಲಿ ಮನೋಹರ ಪೋದ್ದಾರ, ರವಿ ಕುಲಕರ್ಣಿ, ಶಿವಕುಮಾರ ಬಾಳಿ ಅನೇಕರು ಪಾಲ್ಗೊಂಡಿದ್ದರು.