More

    ಜಿಲ್ಲೆಯ ಎಲ್ಲ ಮಕ್ಕಳಿಗೂ ಪೋಲಿಯೋ ಲಸಿಕೆ ನೀಡಿ – ಜಿಲ್ಲಾಧಿಕಾರಿ ಎಂ.ಜಿ.ಹಿರೇಮಠ

    ಬೆಳಗಾವಿ: ಅಲೆಮಾರಿ ಜನಾಂಗ, ಗುಡ್ಡಗಾಡು ನಿವಾಸಿಗಳು ಹಾಗೂ ವಲಸೆ ಕಾರ್ಮಿಕರ ಮಕ್ಕಳು ಸೇರಿದಂತೆ ಯಾವುದೇ ಮಗು ಪೋಲಿಯೋ ಲಸಿಕೆಯಿಂದ ವಂಚಿತವಾಗದಂತೆ ಎಚ್ಚರ ವಹಿಸಬೇಕು. ಜನವಸತಿ ಹೊರತುಪಡಿಸಿ ಬೇರೆ ಕಡೆಗಳಲ್ಲಿ ವಾಸಿಸುವ ಮಕ್ಕಳಿಗೂ ಲಸಿಕೆ ನೀಡಲು 23 ಮೊಬೈಲ್ ತಂಡ ರಚಿಸಲಾಗಿದೆ ಎಂದು ಜಿಲ್ಲಾಧಿಕಾರಿ ಎಂ.ಜಿ.ಹಿರೇಮಠ ಮಾಹಿತಿ ನೀಡಿದರು.

    ಫೆ.27ರಂದು ರಾಷ್ಟ್ರೀಯ ಪಲ್ಸ್‌ಪೋಲಿಯೋ ಕಾರ್ಯಕ್ರಮದ ಹಿನ್ನೆಲೆಯಲ್ಲಿ ನಗರದ ಜಿಲ್ಲಾಧಿಕಾರಿ ಕಚೇರಿಯ ಸಭಾಂಗಣದಲ್ಲಿ ಗುರುವಾರ ಹಮ್ಮಿಕೊಂಡಿದ್ದ ಪೂರ್ವಭಾವಿ ಸಭೆಯಲ್ಲಿ ಮಾತನಾಡಿ, ಪೋಲಿಯೋ ಮುಕ್ತ ಭಾರತ ನಿರ್ಮಿಸಲು ಎಲ್ಲ ಪಾಲಕರು, ಇಲಾಖೆಯವರು ಹಾಗೂ ಸಂಘ-ಸಂಸ್ಥೆಗಳು ಕೈ ಜೋಡಿಸಬೇಕು ಎಂದರು.

    ಅಗತ್ಯ ಸಿದ್ಧತೆ ಮಾಡಿಕೊಳ್ಳಿ: 2011ರಿಂದ ಈಚೆಗೆ ಭಾರತದಲ್ಲಿ ಯಾವುದೇ ವೈಲ್ಡ್ ಪೋಲಿಯೋ ವೈರಸ್ ಪ್ರಕರಣ ಕಂಡುಬಂದಿಲ್ಲ. 2017ರಲ್ಲಿ ಕೊನೆಯದಾಗಿ ಬಿಹಾರ ಮೂಲದ ಕಾರ್ಮಿಕರ ಮಕ್ಕಳಲ್ಲಿ ಹಾಗೂ ಬೆಂಗಳೂರಿನಲ್ಲಿ ಪೋಲಿಯೋ ಪ್ರಕರಣ ವರದಿಯಾಗಿತ್ತು. 21 ವರ್ಷದಿಂದ ಬೆಳಗಾವಿ ಜಿಲ್ಲೆಯಲ್ಲಿ ಯಾವುದೇ ಪೋಲಿಯೋ ಪ್ರಕರಣ ಕಂಡುಬಂದಿಲ್ಲ ಎನ್ನುವುದು ಹೆಮ್ಮೆಯ ವಿಷಯ. ಜಿಲ್ಲೆಯಲ್ಲಿ ಒಟ್ಟು 2,397 ಪೋಲಿಯೋ ಬೂತ್ ಸ್ಥಾಪಿಸಲಾಗಿದೆ.

    ಬಸ್‌ನಿಲ್ದಾಣ, ರೈಲ್ವೆ ನಿಲ್ದಾಣ ಮುಂತಾದ ಕಡೆ ಟ್ರಾನ್ಸಿಟ್‌ಬೂತ್ ಸ್ಥಾಪಿಸಿದ್ದು, 9,435 ಕಾರ್ಯಕರ್ತೆಯರನ್ನು ಹಾಗೂ 647 ಮೇಲ್ವಿಚಾರಕರನ್ನು ನೇಮಿಸಲಾಗಿದೆ. ಹೀಗಾಗಿ, ಎಲ್ಲ ಮಕ್ಕಳಿಗೆ ಲಸಿಕೆ ಹಾಕಲು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಿಂದ ಎಲ್ಲ ಆರೋಗ್ಯ ಕಾರ್ಯಕರ್ತೆಯರಿಗೆ ತರಬೇತಿ ನೀಡಬೇಕು. ಅಲ್ಲದೆ, ಇನ್ನಿತರ ಅಗತ್ಯ ಪೂರ್ವಸಿದ್ಧತೆ ಮಾಡಿಕೊಳ್ಳಬೇಕು ಎಂದು ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಹಿರೇಮಠ ಸೂಚಿಸಿದರು.

    ಆರ್‌ಸಿಎಚ್‌ಒ ಡಾ.ಆರ್.ಐ. ಗಡಾದ ಮಾತನಾಡಿ, ಫೆ. 27ರಿಂದ ನಾಲ್ಕು ದಿನ ಪೋಲಿಯೋ ಲಸಿಕೆ ಅಭಿಯಾನ ನಡೆಸಲಾಗುವುದು. ಮೊದಲ ದಿನ ಬೂತ್‌ಗಳಲ್ಲಿ ಪೋಲಿಯೋ ಹನಿ ನೀಡಲಾಗುವುದು. ಅನಿವಾರ್ಯ ಕಾರಣಗಳಿಂದ ಲಸಿಕೆ ವಂಚಿತ ಮಕ್ಕಳಿಗೆ ಮನೆಮನೆಗೆ ತೆರಳುವ ಮೂಲಕ ಪೋಲಿಯೋ ಹನಿ ನೀಡಲಾಗುವುದು ಎಂದರು. ಜಿಲ್ಲಾ ಆರೋಗ್ಯಾಧಿಕಾರಿ ಎಸ್. ವಿ.ಮುನ್ಯಾಳ, ಜಿಲ್ಲಾ ಸರ್ವೇಕ್ಷಣಾ ಅಧಿಕಾರಿ ಡಾ.ಬಾಲಕೃಷ್ಣ ತುಕ್ಕಾರ, ಕಾರ್ಮಿಕ, ಹೆಸ್ಕಾಂ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಅಧಿಕಾರಿಗಳು, ಖಾಸಗಿ ಮತ್ತು ಸರ್ಕಾರಿ ಆಸ್ಪತ್ರೆ ವೈದ್ಯಾಧಿಕಾರಿಗಳು, ಸಿಬ್ಬಂದಿ, ತಾಲೂಕು ಮಟ್ಟದ ಅಧಿಕಾರಿಗಳು, ಸಂಘ-ಸಂಸ್ಥೆಗಳ ಪದಾಧಿಕಾರಿಗಳು ಇದ್ದರು.

    See also  ಕಾಂಗ್ರೆಸ್ ಭವನ ಬೆಳಗಾವಿ ಜಿಲ್ಲೆಗೆ ಕೊಡುಗೆ
    Array

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts