ಜಿಲ್ಲೆಯ ಅಭಿವೃದ್ಧಿಗೆ ವಿಶೇಷ ಯೋಜನೆ

ಚಿಕ್ಕಬಳ್ಳಾಪುರ: ಆಡಳಿತ ಯಂತ್ರಕ್ಕೆ ಚುರುಕು ಮುಟ್ಟಿಸುವುದರ ಜತೆಗೆ ಜಿಲ್ಲೆಯ ಸಮಗ್ರ ಅಭಿವೃದ್ಧಿಗೆ ವಿಶೇಷ ಯೋಜನೆ ರೂಪಿಸುವುದಾಗಿ ಕೃಷಿ ಸಚಿವ ಎನ್.ಎಚ್.ಶಿವಶಂಕರರೆಡ್ಡಿ ಭರವಸೆ ನೀಡಿದರು.

ಜಿಲ್ಲಾಡಳಿತ ಭವನದಲ್ಲಿ ಸೋಮವಾರ ವಿವಿಧ ಸಂಘ-ಸಂಸ್ಥೆಗಳಿಂದ ಹಮ್ಮಿಕೊಂಡಿದ್ದ ಅಭಿನಂದನಾ ಸಮಾರಂಭದಲ್ಲಿ ಮಾತನಾಡಿದರು. ಜಿಲ್ಲೆ ಸರ್ವಾಂಗೀಣ ಅಭಿವೃದ್ಧಿ ಕಾಣಬೇಕು. ಇದಕ್ಕೆ ಶಿಕ್ಷಣ, ಕೃಷಿ, ತೋಟಗಾರಿಕೆ, ರೇಷ್ಮೆ ಸೇರಿ ವಿವಿಧ ಕ್ಷೇತ್ರಗಳ ಪ್ರಗತಿ, ಕೈಗಾರಿಕೆಗಳ ಸ್ಥಾಪನೆ ಮತ್ತು ಉದ್ಯೋಗಾವಕಾಶ ಹೆಚ್ಚಳ, ನೀರಾವರಿ ಸಮಸ್ಯೆ ಪರಿಹಾರಕ್ಕೆ ಸಂಬಂಧಿಸಿದಂತೆ ಐದು ವರ್ಷಗಳ ಯೋಜನೆ ರೂಪಿಸಲಾಗುವುದು. ಅದರಂತೆ ಪ್ರತಿವರ್ಷ ಹಂತ ಹಂತವಾಗಿ ನಿಗದಿತ ಗುರಿ ಸಾಧಿಸಲು ಕ್ರಮಕೈಗೊಳ್ಳುವುದಾಗಿ ತಿಳಿಸಿದರು.

ಮೂರು ಹಂತದ ಶುದ್ಧೀಕರಣ: ಎತ್ತಿನಹೊಳೆ ಯೋಜನೆ, ಹೆಬ್ಬಾಳ ಮತ್ತು ನಾಗವಾರ ಕೆರೆ ತ್ಯಾಜ್ಯ ಸಂಸ್ಕರಿಸಿದ ನೀರು ಪೂರೈಕೆ ಯೋಜನೆಗೆ ಚಾಲನೆ ನೀಡಲಾಗಿದೆ. ಇದರ ನಡುವೆ ಆರೋಗ್ಯಕ್ಕೆ ಹಾನಿಕಾರಕವಾದ ಕಲುಷಿತ ನೀರನ್ನು ಕೆರೆಗಳಿಗೆ ಹರಿಸಲಾಗುತ್ತಿದೆಂಬ ಆರೋಪಗಳು ಕೇಳಿಬರುತ್ತಿವೆ. ಆದರೆ, ಜನರು ಅನುಮಾನಪಡುವ ಅವಶ್ಯಕತೆಯಿಲ್ಲ. ಇದೀಗ ಎಚ್.ಎನ್.ವ್ಯಾಲಿ ನೀರನ್ನು ಎರಡು ಹಂತದ ಬದಲಿಗೆ ಮೂರು ಬಾರಿ ಶುದ್ಧೀಕರೀಸಲಾಗುತ್ತದೆ. ಇದಕ್ಕೆ 600ಕೋಟಿ ರೂ. ವೆಚ್ಚ ಅಂದಾಜಿಸಲಾಗಿದೆ ಎಂದರು.

ಅಕ್ರಮ ಗಣಿಗಾರಿಕೆಗೆ ಕಡಿವಾಣ: ಅಂತರ್ಜಲಮಟ್ಟ ಹೆಚ್ಚಳ ಮತ್ತು ನೀರಾವರಿ ಸಮಸ್ಯೆ ಬಗೆಹರಿಸುವ ಉದ್ದೇಶದಿಂದ ಕೆರೆ ಮತ್ತು ರಾಜಕಾಲುವೆಗಳ ಅಕ್ರಮ ಒತ್ತುವರಿ ತೆರವು, ರಾಜಾರೋಷವಾಗಿ ನಡೆಯುತ್ತಿರುವ ಮರಳು ಮತ್ತು ಕಲ್ಲು ಗಣಿಗಾರಿಕೆಗೆ ಕಡಿವಾಣ ಹಾಕಲಾಗುವುದು. ನೀರಾವರಿ ಯೋಜನೆಗಳಿಂದ ಈ ಭಾಗಕ್ಕೆ ನೀರು ಹರಿಯುವ ಮುನ್ನ ಜಿಲ್ಲೆಯ ಎಲ್ಲ ಕೆರೆಗಳ ಮತ್ತು ರಾಜಕಾಲುವೆಗಳ ಪುನಶ್ಚೇತನ ಕಾರ್ಯ ಕೈಗೊಳ್ಳಲಾಗುವುದು ಎಂದು ಸಚಿವರು ತಿಳಿಸಿದರು.

ಜಿಪಂ ಅಧ್ಯಕ್ಷ ಎಚ್.ವಿ.ಮಂಜುನಾಥ್, ಸ್ಥಾಯಿ ಸಮಿತಿ ಅಧ್ಯಕ್ಷ ನರಸಿಂಹಮೂರ್ತಿ, ಸಿಇಒ ಗುರುದತ್ ಹೆಗಡೆ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕಾರ್ತಿಕ್ ರೆಡ್ಡಿ, ಕಾಂಗ್ರೆಸ್ ಜಿಲ್ಲಾಧ್ಯಕ್ಷ ಕೆ.ಎನ್.ಕೇಶವರೆಡ್ಡಿ, ಮಾಜಿ ಶಾಸಕರಾದ ಕೆ.ಪಿ.ಬಚ್ಚೇಗೌಡ, ಎನ್.ಸಂಪಂಗಿ ಮತ್ತಿತರರಿದ್ದರು.

ಸಂಘ-ಸಂಸ್ಥೆಗಳಿಂದ ಮನವಿ: ರೈತ, ಮಹಿಳಾ, ದಲಿತ ಸೇರಿ ವಿವಿಧ ಸಂಘ ಸಂಸ್ಥೆಗಳು ನೂತನ ಸಚಿವರನ್ನು ಅಭಿನಂದಿಸಿ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಮನವಿ ಸಲ್ಲಿ್ಲದವು. ಒಂದು ದಶಕದ ಬಳಿಕ ಜಿಲ್ಲೆಯವರಿಗೆ ಸಚಿವ ಸ್ಥಾನ ಸಿಕ್ಕಿದೆ. ಇದರಿಂದ ಈ ಭಾಗದ ಸಮಸ್ಯೆಗಳ ಪರಿಹಾರಕ್ಕೆ ಹೆಚ್ಚಿನ ಒತ್ತು ನೀಡಬೇಕೆಂದು ಒತ್ತಾಯಿಸಿದವು. ಇದಕ್ಕೆ ಪ್ರತಿಕ್ರಿಯಿಸಿದ ಸಚಿವರು, ಬೆಂಗಳೂರಿನಲ್ಲಿ ಕಚೇರಿ ಉದ್ಘಾಟನೆ ಮತ್ತು ಅಧಿಕಾರಿಗಳ ಸಭೆ ಕೈಗೊಂಡಿರುವುದರಿಂದ ಸಮಯದ ಅಭಾವವಿದೆ. ಮುಂದಿನ ದಿನಗಳಲ್ಲಿ ಜಿಲ್ಲೆಯ ಹೋರಾಟಗಾರರನ್ನೊಳಗೊಂಡ ಸಭೆ ಕರೆದು ಸಂವಾದ ನಡೆಸುವುದಾಗಿ ಭರವಸೆ ನೀಡಿದರು.

ಸಮ್ಮಿಶ್ರ ಪಕ್ಷದ ನಾಯಕರ ಸಮಾಗಮ: ಸ್ಥಳೀಯ ಕಾಂಗ್ರೆಸ್ ಮುಖಂಡರಿಗಿಂತ ಹೆಚ್ಚಿಗೆ ಜೆಡಿಎಸ್​ನವರೇ ಆಗಮಿಸಿ ನೂತನ ಸಚಿವರನ್ನು ಅಭಿನಂದಿಸಿದ್ದು ವಿಶೇಷವಾಗಿತ್ತು. ಸಚಿವರ ಬೆಂಬಲಿಗರು, ಬಾಗೇಪಲ್ಲಿ ಮಾಜಿ ಶಾಸಕರು ಸೇರಿ ಬೆರಳೆಣಿಕೆಯಲ್ಲಿ ಕಾಂಗ್ರೆಸ್ ನಾಯಕರಿದ್ದರು. ಇದರ ನಡುವೆ ಮುನಿಸಿಕೊಂಡಿರುವ ಚಿಕ್ಕಬಳ್ಳಾಪುರ ಶಾಸಕ ಡಾ.ಕೆ.ಸುಧಾಕರ್ ಮತ್ತು ಅವರ ಬೆಂಬಲಿಗರು ಕಾಣಿಸಿಕೊಳ್ಳಲೇ ಇಲ್ಲ. ಇದು ಇಬ್ಬರ ನಡುವಿನ ಭಿನ್ನಮತ ತಣ್ಣಗಾಗಿಲ್ಲ ಎನ್ನುವುದನ್ನು ತೋರಿಸಿತು.

ಇನ್ನೂ ರಾಜ್ಯದಲ್ಲಿ ಜೆಡಿಎಸ್ ಜತೆ ಕಾಂಗ್ರೆಸ್ ಕೈ ಜೋಡಿಸಿರುವ ಹಿನ್ನೆಲೆಯಲ್ಲಿ ತೆನೆ ಹೊತ್ತ ಮಹಿಳೆ ಪಕ್ಷದ ಮುಖಂಡರು ಸಚಿವರೊಂದಿಗೆ ಕಾಣಿಸಿಕೊಂಡರು. ಜೆಡಿಎಸ್​ನ ಮಾಜಿ ಶಾಸಕ ಕೆ.ಪಿ.ಬಚ್ಚೇಗೌಡ, ಜಿಪಂ ಸದಸ್ಯರಾದ ಕೆ.ಸಿ.ರಾಜಾಕಾಂತ್, ಕೆ.ಎಂ.ಮುನೇಗೌಡ ಸಚಿವರಿಗೆ ಹೂಗುಚ್ಛ ನೀಡಿ ಅಭಿನಂದಿಸಿದರು.

ನೂತನ ಸಚಿವರ ಭರವಸೆಗಳು…

  • ಚಿಕ್ಕಬಳ್ಳಾಪುರ ಜಿಲ್ಲೆಯ ಅಭಿವೃದ್ಧಿಗೆ ಐದು ವರ್ಷಗಳ ಸಮಗ್ರ ಯೋಜನೆ
  • ಚಿಕ್ಕಬಳ್ಳಾಪುರ, ಬಾಗೇಪಲ್ಲಿ ಮತ್ತು ಚಿಂತಾಮಣಿ ಕ್ಷೇತ್ರದಲ್ಲಿ ಕೈಗಾರಿಕೆಗಳ ಸ್ಥಾಪನೆ ಮತ್ತು ಉದ್ಯೋಗಾವಕಾಶ ಹೆಚ್ಚಳ
  • ಶೀಘ್ರದಲ್ಲಿಯೇ ಮೆಡಿಕಲ್ ಕಾಲೇಜ್ ಕಾಮಗಾರಿ ಆರಂಭ
  • ಮುದ್ದೇನಹಳ್ಳಿಯಲ್ಲಿನ ವಿಟಿಯು ಕಾಲೇಜಿನಲ್ಲಿ ಹೊಸ ವಿಭಾಗೀಯ ಸಂಸ್ಥೆಗಳು, ಬೆಂಗಳೂರು ಉತ್ತರ ವಿವಿ ಕಾರ್ಯಾರಂಭ
  • ಜಿಲ್ಲೆಯ ಎಲ್ಲ ಕೆರೆ ಮತ್ತು ರಾಜಕಾಲುವೆಗಳ ಪುನಶ್ಚೇತನ ಕಾರ್ಯ

Leave a Reply

Your email address will not be published. Required fields are marked *