ಲಂಕಾದಲ್ಲಿ ಸರಣಿ ಬಾಂಬ್​ ಸ್ಫೋಟ ಹಿನ್ನೆಲೆ: ಮಂಡ್ಯ ಜಿಲ್ಲೆಯಾದ್ಯಂತ ಬಾಂಬ್​ ನಿಷ್ಕ್ರಿಯ ತಂಡದಿಂದ ತಪಾಸಣೆ

ಮಂಡ್ಯ: ಶ್ರೀಲಂಕಾದಲ್ಲಿ ಐಸಿಸ್ ಉಗ್ರರು ಸರಣಿ ಬಾಂಬ್ ದಾಳಿ ನಡೆಸಿದ ಹಿನ್ನೆಲೆಯಲ್ಲಿ ಮಂಡ್ಯ ಜಿಲ್ಲೆಯಲ್ಲೂ ಪೊಲೀಸರು ಕಟ್ಟೆಚ್ಚರ ವಹಿಸಿದ್ದಾರೆ. ಉಗ್ರರ ಹಿಟ್ ಲಿಸ್ಟ್​ನಲ್ಲಿರುವ ಜೀವನಾಡಿ ಕನ್ನಂಬಾಡಿ ಕಟ್ಟೆಯ ಸುತ್ತ ಮೂರು ದಿನಗಳಿಂದ ಹದ್ದಿನ ಕಣ್ಣಿಟ್ಟಿದ್ದಾರೆ. ನಗರದ ರೈಲ್ವೆ ನಿಲ್ದಾಣ, ಚರ್ಚ್ ಸೇರಿ ಪ್ರಮುಖ ಸ್ಥಳಗಳಲ್ಲಿ ಬಾಂಬ್ ನಿಷ್ಕ್ರೀಯ ದಳ ಹಾಗೂ ಶ್ವಾನದಳ ಸಿಬ್ಬಂದಿ ಬುಧವಾರ ಪರಿಶೀಲನೆ ನಡೆಸಿದರು.

ಎಸ್.ಪಿ. ಶಿವಪ್ರಕಾಶ್ ದೇವರಾಜ್ ನೇತೃತ್ವದಲ್ಲಿ ರೈಲ್ವೆ ನಿಲ್ದಾಣಕ್ಕೆ ತೆರಳಿದ ಸಿಬ್ಬಂದಿ ಪ್ರಯಾಣಿಕರ ಲಗೇಜ್​ಗಳು, ಕಸದ ತೊಟ್ಟಿಗಳು, ಅಂಗಡಿ ಮಳಿಗೆಗಳ ಬಳಿಯಿದ್ದ ಬಾಕ್ಸ್​ಗಳನ್ನು ಪರಿಶೀಲಿಸಿದರು. ನಂತರ ಚರ್ಚ್, ಮಸೀದಿ, ದೇವಾಲಯಗಳು ಸೇರಿ ಜನನಿನಿಬಿಡ ಸ್ಥಳಗಳಲ್ಲಿ ತಪಾಸಣೆ ನಡೆಸಿದರು.

ನಂತರ ಮಾತನಾಡಿದ ಎಸ್​ಪಿ, ಶ್ರೀಲಂಕಾ ಬಾಂಬ್ ಸ್ಪೋಟದ ಹಿನ್ನೆಲೆಯಲ್ಲಿ ಸಾರ್ವಜನಿಕ ಸ್ಥಳಗಳಲ್ಲಿ ತಪಾಸಣೆ ಮಾಡಲಾಗುತ್ತಿದೆ. ಕೆಆರ್​ಎಸ್​ನಲ್ಲಿ ರಾಜ್ಯ ಕೈಗಾರಿಕಾ ಭದ್ರತಾ ಪಡೆ ಭದ್ರತಾ ಮೇಲ್ವಿಚಾರಣೆ ವಹಿಸಿಕೊಂಡಿದೆ. ಮಂಡ್ಯ ಜಿಲ್ಲಾ ಪೊಲೀಸರು ಕೂಡ ಹೆಚ್ಚಿನ ನಿಗಾವಹಿಸಿದ್ದಾರೆ. ಅಂತೆಯೇ, ಜಿಲ್ಲೆಯ ಪ್ರವಾಸಿ ತಾಣಗಳಾದ ಶಿಂಷಾ, ಬ್ಲಫ್​, ಪ್ರಮುಖ ದೇವಾಲಯಗಳು ಸೇರಿ ಎಲ್ಲ ಜನನಿಬಿಡ ಸ್ಥಳಗಳ ಮೇಲೆ ನಿಗಾ ವಹಿಸಲಾಗಿದೆ. ಜಿಲ್ಲೆಯಲ್ಲಿ ಎಲ್ಲಿಯೂ ಆತಂಕದ ವಾತಾವರಣ ಇಲ್ಲ ಎಂದರು.

Leave a Reply

Your email address will not be published. Required fields are marked *