ಜಿಲ್ಲೆಯಾದ್ಯಂತ 27ಕ್ಕೆ ಮೇವು ವಿತರಣೆ

 

ಶಿವರಾಜ ಎಂ. ಬೆಂಗಳೂರು

ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನಾಲ್ಕೂ ತಾಲೂಕಿನಲ್ಲಿ ಮೇವು ದಾಸ್ತಾನಿನಲ್ಲಿ ತೊಡಗಿರುವ ಜಿಲ್ಲಾಡಳಿತ ಮೇ 27ರಿಂದ ಮೇವು ಬ್ಯಾಂಕ್ ಮೂಲಕ ವಿತರಿಸಲು ಸಿದ್ಧತೆ ನಡೆಸಿದೆ.

ಬರಪೀಡಿತ ಜಿಲ್ಲೆಯಲ್ಲಿ ರಾಸುಗಳಿಗೆ ಮೇವಿನ ಕೊರತೆ ಎದುರಾಗಿರುವುದನ್ನು ಮನಗಂಡ ಜಿಲ್ಲಾಧಿಕಾರಿ ತುರ್ತಾಗಿ ಮೇವು ಬ್ಯಾಂಕ್ ತೆರೆಯಲು ಆದೇಶ ಹೊರಡಿಸಿದ್ದರು. ಆಯಾ ತಾಲೂಕಿನ ತಹಸೀಲ್ದಾರ್ ನೇತೃತ್ವದಲ್ಲಿ ಪಶುಪಾಲನಾ ಇಲಾಖೆ ಸಹಯೋಗದಲ್ಲಿ ಪ್ರತಿ ತಾಲೂಕಿನಲ್ಲಿ ನಾಲ್ಕು ಕಡೆಗಳಲ್ಲಿ ಕೇಂದ್ರ ತೆರೆಯಲಾಗಿದೆ. ಪ್ರತಿ ಕೇಂದ್ರದಲ್ಲಿ 10 ರಿಂದ 15 ಟನ್ ದಾಸ್ತಾನು ಮಾಡಲಾಗಿದೆ. ಒಂದು ತಾಲೂಕಿನಲ್ಲಿ 40 ಟನ್​ನಷ್ಟು ಮೇವು ಸಂಗ್ರಹಿಸಿದ್ದು, ಬೇಡಿಕೆ ಆಧರಿಸಿ ಮೇವು ಆಮದು ಮಾಡಿಕೊಳ್ಳಲು ಜಿಲ್ಲಾಡಳಿತ ಮುಂದಾಗಿದೆ.

ಮೇವು ಬ್ಯಾಂಕ್ ತೆರೆಯಲು ಏಪ್ರಿಲ್ ಮಾಸಾಂತ್ಯಕ್ಕೆ ಗಡುವು ನಿಗದಿಪಡಿಸಲಾಗಿತ್ತು. ಆದರೆ ಟೆಂಡರ್ ಪ್ರಕ್ರಿಯೆ ವಿಳಂಬದಿಂದಾಗಿ ಮೇನಲ್ಲಿ ಮೇವು ಬ್ಯಾಂಕ್ ಕಾರ್ಯಾರಂಭಕ್ಕೆ ಸಿದ್ಧತೆ ನಡೆದಿದೆ.

ಕೆಜಿಗೆ 2 ರೂಪಾಯಿ: ಮೇವು ಖರೀದಿ ಕೇಂದ್ರಗಳಲ್ಲಿ ಕೆಜಿ ಒಣ ಹುಲ್ಲಿಗೆ 2 ರೂ. ದರ ನಿಗದಿಪಡಿಸಲಾಗಿದೆ. ಒಬ್ಬ ರೈತನಿಗೆ ದಿನಕ್ಕೆ 25 ಕೆ.ಜಿ ಮೇವು ವಿತರಿಸಲಾಗುವುದು. ಮೇವು ಕೇಂದ್ರಕ್ಕೆ ದೂರದಿಂದ ಬರುವ ರೈತರಾದರೆ ವಾರಕ್ಕಾಗುವಷ್ಟು ಮೇವನ್ನು ಒಂದೇ ದಿನ ವಿತರಿಸುವ ಯೋಚನೆ ಇದೆ. ಅಗತ್ಯಕ್ಕೆ ಅನುಸಾರವಾಗಿ ಕೆಲವೊಂದು ನಿಯಮ ಮಾರ್ಪಾಡು ಮಾಡಿಕೊಳ್ಳಲಾಗುವುದು. ರೈತರು ತಮ್ಮ ಬಳಿಯಿರುವ ರಾಸುಗಳ ಸಂಖ್ಯೆ ಬಗ್ಗೆ ಇಲಾಖೆಯಿಂದ ಪಡೆದ ದಾಖಲೆ ಸಲ್ಲಿಸಬೇಕು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

1.84 ಲಕ್ಷ ಜಾನುವಾರು: ಜಿಲ್ಲೆಯಲ್ಲಿ ಸರಾಸರಿ 1.84 ಲಕ್ಷ ಜಾನುವಾರುಗಳಿವೆ. ಅವುಗಳಿಗೆ ದಿನಕ್ಕೆ ತಲಾ 5 ಕೆಜಿಯಂತೆ ಮೇವು ವಿತರಣೆಗೆ ಕ್ರಮಕೈಗೊಳ್ಳಲಾಗಿದೆ. ಈ ಬಾರಿಯೂ ಮಳೆ ಪ್ರಮಾಣ ಕಡಿಮೆಯಾಗುವ ಮಾಹಿತಿ ಇರುವುದರಿಂದ ಜಾನುವಾರುಗಳಿಗೆ ಅಗತ್ಯ ಮೇವು ದಾಸ್ತಾನಿಗೆ ಈಗಲೇ ಪೂರ್ವ ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಬೇಡಿಕೆ ಬಂದಿಲ್ಲ: ಕಳೆದ ಅಕ್ಟೋಬರ್​ನಿಂದಲೇ ಜಿಲ್ಲೆಯಾದ್ಯಂತ ಮೇವು ಕಿಟ್ ವಿತರಿಸಿರುವುದರಿಂದ ಮೇವಿನ ಕೊರತೆ ಕಂಡುಬಂದಿಲ್ಲ. ಮೇವು ಪೂರೈಸುವಂತೆ ರೈತರಿಂದ ದೊಡ್ಡಮಟ್ಟದಲ್ಲಿ ಬೇಡಿಕೆ ಬಂದಿಲ್ಲ. ಆದರೂ ಮುನ್ನೆಚ್ಚರಿಕೆ ಕ್ರಮವಾಗಿ ಮೇವು ದಾಸ್ತಾನು ಮಾಡಲಾಗಿದೆ ಎಂದು ಪಶುಪಾಲನಾ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.

ಜಿಲ್ಲಾಧಿಕಾರಿ ಆದೇಶದಂತೆ ಜಿಲ್ಲೆಯ ನಾಲ್ಕೂ ತಾಲೂಕಗಳಲ್ಲಿ ಅಗತ್ಯವಾದಷ್ಟು ಮೇವು ದಾಸ್ತಾನು ಮಾಡಲಾಗಿದೆ. ಮುಂದಿನ ವಾರದಿಂದಲೇ ರೈತರಿಗೆ ವಿತರಿಸಲಾಗುವುದು. ಬೇಡಿಕೆ ಆಧರಿಸಿ ಮೇವು ದಾಸ್ತಾನಿಗೆ ಕ್ರಮಕೈಗೊಳ್ಳಲಾಗುವುದು.

| ಡಾ.ಅನಿಲ್​ಕುಮಾರ್, ಮುಖ್ಯ ಪಶುವೈದ್ಯಾಧಿಕಾರಿ, ಪಶುಪಾಲನಾ ಇಲಾಖೆ, ಬೆಂ.ಗ್ರಾಮಾಂತರ

ರಾಸುಗಳಿಗೆ ಮೇವಿನ ಕೊರತೆಯಾಗದಂತೆ ಮೇವು ದಾಸ್ತಾನಿಗೆ ಆಯ್ದ ಕೇಂದ್ರ ಭಾಗಗಳಲ್ಲಿ ಮೇವು ಬ್ಯಾಂಕ್ ತೆರೆಯಲಾಗಿದೆ. ಮೇವು ಬ್ಯಾಂಕ್ ಕೇಂದ್ರಗಳಲ್ಲಿ ಅಗತ್ಯ ಸಿದ್ಧತೆ ನಡೆಸಿದ್ದು, ಹಂತ ಹಂತವಾಗಿ ಕೇಂದ್ರಗಳ ವಿಸ್ತರಣೆಗೆ ಚಿಂತನೆ ನಡೆಸಲಾಗಿದೆ.

| ಡಾ.ನಾರಾಯಣಸ್ವಾಮಿ, ಜಿಲ್ಲಾ ಪಶು ಸಂಗೋಪಾನಾ ಇಲಾಖೆ, ಪ್ರಭಾರ ಉಪನಿರ್ದೇಶಕ

Leave a Reply

Your email address will not be published. Required fields are marked *