ಜಿಲ್ಲೆಯಾದ್ಯಂತ ಮಕರ ಸಂಕ್ರಾಂತಿ ಸಂಭ್ರಮ

ಚಿಕ್ಕಮಗಳೂರು: ಮಕರ ರಾಶಿ ಪ್ರವೇಶಿಸಿ ಉತ್ತರಾಯಣಕ್ಕೆ ಕಾಲಿಡುವ ಸೂರ್ಯ ರಶ್ಮಿಯ ಪುಣ್ಯ ದಿನವಾದ ಮಕರ ಸಂಕ್ರಾಂತಿ ಹಬ್ಬವನ್ನು ನಗರದಲ್ಲಿ ಸಂಭ್ರಮದಿಂದ ಮಂಗಳವಾರ ಆಚರಿಸಲಾಯಿತು.

ಪರಸ್ಪರ ಶುಭಾಶಯ ಎಳ್ಳು-ಬೆಲ್ಲ ವಿನಿಯಮ ಮಾಡಿಕೊಂಡ ಜನರು ಸಂಕಷ್ಟಗಳು ದೂರವಾಗಲಿ, ಪ್ರೀತಿ, ವಿಶ್ವಾಸ, ಸಾಮರಸ್ಯ ಹೆಚ್ಚಾಗಲೆಂದು ಪರಸ್ಪರ ಆಶಿಸಿದರು. ಸಂಕ್ರಾಂತಿ ಸುಗ್ಗಿಯ ಹಬ್ಬವೂ ಆಗಿರುವುದರಿಂದ ರೈತರು ಈ ವರ್ಷದ ಮೊದಲ ಭತ್ತದ ಬೆಳೆಯಲ್ಲಿ ಅಕ್ಕಿ ತೆಗೆದು ಅದರಿಂದ ಅಡುಗೆ ತಯಾರಿಸಿ ದೇವರಿಗೆ ನೈವೇದ್ಯ ಮಾಡಿದರು.

ತಮಿಳುನಾಡಿನ ನೂರಾರು ಕುಟುಂಬಗಳು ಪೊಂಗಲ್ ಸಹಿತ ವಿಶೇಷ ಆಚರಿಸಿದರು. ಮಣ್ಣಿನ ಮಡಕೆಯಲ್ಲಿ ಸಿಹಿ, ಕಾರ ಪೊಂಗಲ್ ಮಾಡಿ ಕೊಲ್ಲಾಪುರದಮ್ಮ ದೇವಸ್ಥಾನದಲ್ಲಿ ವಿಶೇಷ ಪುಜೆ ನೆರವೇರಿಸಿದರು.

ಸಂಪ್ರದಾಯದ ಕೆಲವು ಆಚರಣೆ ಬಿಟ್ಟು ಹೋಗಿದ್ದರೂ ಹಬ್ಬದ ಸಂಭ್ರಮ ಕಡಿಮೆಯಾಗಿಲ್ಲ. ಹಲವು ಮನೆಗಳಲ್ಲಿ ವಾರದಿಂದಲೇ ಎಳ್ಳು ಬೆಲ್ಲ, ಕೊಬ್ಬರಿ ಮಿಶ್ರಣದ ತಯಾರಿ ಮಾಡಿಕೊಂಡಿದ್ದರು. ಮಂಗಳವಾರ ಮಧ್ಯಾಹ್ನದಿಂದಲೇ ಮಕ್ಕಳು, ಮಹಿಳೆಯರು ಮನೆ ಮನೆಗೆ ತೆರಳಿಎಳ್ಳು ಬೆಲ್ಲ ಹಂಚಿ ಸಂಭ್ರಮಿಸಿದರು.

ಹೊಸ ಉಡುಗೆ ತೊಟ್ಟ ಯುವತಿಯರು, ಮಹಿಳೆಯರು ಮಕ್ಕಳು ಸಿಹಿ, ಎಳ್ಳು ಬೆಲ್ಲವನ್ನು ಹಂಚಿಕೆ ಮಾಡಿದರು. ಕೋಟೆ ಬಡಾವಣೆ, ಕಲ್ಯಾಣ ನಗರ, ವಿಜಯಪುರ, ಬಸವನಹಳ್ಳಿ, ಕೆಂಪನಳ್ಳಿ, ಹುಡ್ಕೊ, ಗೃಹ ಮಂಡಳಿ ಬಡಾವಣೆಗಳಲ್ಲಿ ಗುಂಪು ಗುಂಪಾಗಿ ಎಳ್ಳು ಬೆಲ್ಲ ಹಂಚಿಕೆ ಮಾಡಿದರು.

ಕೆಲವರು ದೇವಾಲಯಗಳಿಗೆ ತೆರಳಿ ಪೂಜೆ ಸಲ್ಲಿಸಿದರು. ನಗರದ ಶ್ರೀ ಬೋಳರಾಮೇಶ್ವರ ದೇವಸ್ಥಾನಕ್ಕೆ ತೆರಳಿ ವಿಶೇಷ ಪೂಜೆ ಮಾಡಿದರು. ದೇವಸ್ಥಾನ ಆವರಣದ ನಾಗರ ವಿಗ್ರಹಗಳಿಗೆ ಹಾಲೆರೆದರು. ಗ್ರಾಮೀಣ ಭಾಗದ ಕೆಲವು ಕಡೆ ನಾಗರ ವಿಗ್ರಹಗಳಿಗೆ ಹಾಲೆರೆದು ಸಂಕ್ರಾಂತಿಯನ್ನು ವಿಶೇಷವಾಗಿ ಆಚರಿಸಿದರು.