ಸಿನಿಮಾ

ಜಿಲ್ಲೆಯಾದ್ಯಂತ ದೇವೇಗೌಡರ 91ನೇ ಹುಟ್ಟುಹಬ್ಬ ಆಚರಣೆ

ಹಾಸನ: ಮಣ್ಣಿನ ಮಗ, ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡರ 91ನೇ ವರ್ಷದ ಹುಟ್ಟುಹಬ್ಬವನ್ನು ಗುರುವಾರ ಜಿಲ್ಲೆಯಾದ್ಯಂತ ಸಡಗರ ಸಂಭ್ರಮದಿಂದ ಆಚರಿಸಲಾಯಿತು.
ಜಿಲ್ಲೆಯ ವಿವಿಧ ದೇವಾಲಯಗಳಲ್ಲಿ ಜೆಡಿಎಸ್ ಪಕ್ಷದ ಮುಖಂಡರು, ಕಾರ‌್ಯಕರ್ತರು ಹಾಗೂ ಅಭಿಮಾನಿಗಳು ವಿಶೇಷ ಪೂಜೆ ಸಲ್ಲಿಸಿ, ಗೌಡರು ಇನ್ನೂ ನೂರಾರು ಕಾಲ ಬಾಳಲಿ, ದೇವರು ಅವರಿಗೆ ಆರೋಗ್ಯವನ್ನು ಕೊಟ್ಟು ಕಾಪಾಡಲಿ ಎಂದು ಪ್ರಾರ್ಥಿಸಿದರು. ಇನ್ನೂ ತಾಲ್ಲೂಕು ಕೇಂದ್ರಗಳಲ್ಲಿ ಸರ್ಕಾರಿ ಆಸ್ಪತ್ರೆಗಳಿಗೆ ತೆರಳಿ ಒಳ ರೋಗಿಗಳಿಗೆ ಹಣ್ಣುಹಂಪಲು ವಿತರಿಸಿದರು. ಇದಲ್ಲದೆ ಇನ್ನೂ ಕೆಲವೆಡೆ ಬೃಹತ್ ಗಾತ್ರದ ಕೇಕ್ ಕತ್ತರಿಸಿ ಸಿಹಿ ಹಂಚಿ ಸಂಭ್ರಮಿಸಿದರು.
ದೇವೇಗೌಡರ ಭಾವಚಿತ್ರಕ್ಕೆ, ಕ್ಷೀರಾಭಿಷೇಕ
ಹಾಸನ ನಗರದ ಅಜಾದ್ ರಸ್ತೆಯ ದರ್ಗಾದಲ್ಲಿಯು ವಿಶೇಷ ಪೂಜೆ ಸಲ್ಲಿಸಿದ ಅಭಿಮಾನಿಗಳು ನಂತರ ಹೇಮಾವತಿ ಪ್ರತಿಮೆ ಬಳಿ ದೇವೇಗೌಡರ ಭಾವಚಿತ್ರಕ್ಕೆ, ಕ್ಷೀರಾಭಿಷೇಕ ಮಾಡಿ ದೇವೇಗೌಡರಿಗೆ ಶುಭ ಕೋರಿದರು
ಈ ಸಂಧರ್ಭದಲ್ಲಿ ಶಾಸಕ ಎಚ್.ಪಿ. ಸ್ವರೂಪ್ ಮಾತನಾಡಿ, ಮಾಜಿ ಪ್ರಧಾನಿಗಳು, ರಾಷ್ಟ್ರ ಕಂಡ ಅಪರೂಪದ ರಾಜಕಾರಿಣಿ ಹಾಗೂ ಧೀಮಂತ ನಾಯಕ ಎಚ್.ಡಿ ದೇವೇಗೌಡ ಅವರ 92ನೇ ವರ್ಷದ ಹುಟ್ಟುಹಬ್ಬದ ಅಂಗವಾಗಿ ಬೆಳಿಗ್ಗೆಯಿಂದಲೆ ವಿಶೇಷ ಪೂಜಾ ಕೈಂಕರ್ಯಗಳನ್ನು ನಡೆಸಲಾಗುತ್ತಿದೆ ಎಂದರು
ಪಕ್ಷಾತೀತವಾಗಿ ಎಲ್ಲಾ ಪಕ್ಷಗಳ ಜೊತೆ ಉತ್ತಮ ಒಡನಾಟ ಹೊಂದಿರುವ ದೇವೇಗೌಡರು, ಹುಟ್ಟು ಹೋರಾಟಗಾರರಾಗಿ ದೇಶಕ್ಕೆ ನೀಡಿರುವ ಕೊಡುಗೆ ಅಪಾರ, ಗಡಿ ಸಮಸ್ಯೆ, ಕಾವೇರಿ ನದಿ ಸಮಸ್ಯೆ ಸೇರಿದಂತೆ ರಾಜ್ಯ ಹಾಗೂ ರಾಷ್ಟ್ರಮಟ್ಟದ ಸಮಸ್ಯೆಗಳಲ್ಲಿ ಪಕ್ಷಾತೀತವಾಗಿ ಎಲ್ಲಾ ರಾಜಕೀಯ ಪಕ್ಷಗಳು ಸಲಹೆ ಪಡೆಯುವ ಏಕೈಕ ವ್ಯಕ್ತಿ ಪೂಜ್ಯ ದೇವೇಗೌಡರು ಎಂದು ಬಣ್ಣಿಸಿದರು.
ಈ ಸಂದರ್ಭದಲ್ಲಿ ಜೆಡಿಎಸ್ ತಾಲ್ಲೂಕು ಅಧ್ಯಕ್ಷ ಎಸ್.ದ್ಯಾವೇಗೌಡ, ಜೆಡಿಎಸ್ ಮುಖಂಡರಾದ ಲಕ್ಷಣ್, ಸ್ವಾಮಿಗೌಡ, ಗಿರೀಶ್ ಚನ್ನವೀರಪ್ಪ, ಬಿದರಿ ಕೆರೆ ಜಯರಾಂ, ಮಹೇಶ್, ಇಮ್ರಾನ್, ಸಮೀರ್ ಇನ್ನಿತರರು ಉಪಸ್ಥಿತರಿದ್ದರು.

ಕಾಮಧೇನು ವೃದ್ಧಾಶ್ರಮದಲ್ಲಿ ಆಚರಣೆ: ನಗರದ ಹೊರವಲಯದಲ್ಲಿ ಇರುವ ಕಾಮಧೇನು ವೃದ್ಧಾಶ್ರಮದಲ್ಲಿ ದೇವೇಗೌಡರ ಹುಟ್ಟುಹಬ್ಬದ ಅಂಗವಾಗಿ ಕೇಕ್ ಕತ್ತರಿಸಿ ವೃದ್ಧರಿಗೆ ಸಿಹಿ ಹಂಚಲಾಯಿತು. ಈ ಸಂದರ್ಭದಲ್ಲಿ ಮಾತನಾಡಿದ ಜಿ.ಪಂ. ಮಾಜಿ ಸದಸ್ಯೆ ಭವಾನಿ ರೇವಣ್ಣ, ಗೌಡರು ನಮಗೆಲ್ಲರಿಗೂ ಮಾರ್ಗದರ್ಶಕರು. ಅವರ ಹುಟ್ಟುಹಬ್ಬವನ್ನುಸಡಗರ ಸಂಭ್ರಮದಿಂದ ಆಚರಿಸಲಾಗುತ್ತಿದೆ. ಕಾಮಧೇನು ವೃದ್ಧಾಶ್ರಮಕ್ಕೆ 1 ಲಕ್ಷ ರೂ. ದೇಣಿಗೆ ನೀಡಿದ ಅವರು, ಮುಂದೆ ಕಟ್ಟಡ ಕಾಮಗಾರಿಗೆ 5 ಲಕ್ಷ ಕೊಡುವುದಾಗಿ ಭರವಸೆ ನೀಡಿದರು.
ಈ ಸಂದರ್ಭದಲ್ಲಿ ಒಕ್ಕಲಿಗರ ಸಂಘದ ನಿರ್ದೇಶಕ ಸುಮುಖರಘು, ನಗರಸಭೆ ಸದಸ್ಯ ಸಿ.ಆರ್.ಶಂಕರ್, ಕಾಮಧೇನು ವೃದ್ಧಾಶ್ರಮದ ವ್ಯವಸ್ಥಾಪಕರು ಇನ್ನಿತರರು ಹಾಜರಿದ್ದರು.

Latest Posts

ಲೈಫ್‌ಸ್ಟೈಲ್