ಸುಭಾಷ ಧೂಪದಹೊಂಡ ಕಾರವಾರ
ಹಚ್ಚ ಹಸುರಿನ ಕಾಡಿನ ಆಹ್ಲಾದಕರ ಪರಿಸರ. ಟೆನ್ಶನ್ ಇಲ್ಲದ ಗ್ರಾಮೀಣ ಜೀವನ ಇದು ಉತ್ತರ ಕನ್ನಡದ ವಾತಾವರಣ. ಹೀಗಿದ್ದರೂ ಜಿಲ್ಲೆಯಲ್ಲಿ ಬಿಪಿ ಶುಗರ್ನಂಥ ಸಮಸ್ಯೆಯಿಂದ ಬಳಲುತ್ತಿರುವವರಿಗೇನೂ ಕಡಿಮೆ ಇಲ್ಲ. ಕರೊನಾ ಮಹಾಮಾರಿಯ ಹಿನ್ನೆಲೆಯಲ್ಲಿ ಆರೋಗ್ಯ ಇಲಾಖೆ ನಡೆಸುತ್ತಿರುವ ನಿರಂತರ ಸಮೀಕ್ಷೆಯಲ್ಲಿ ಈ ವಿಚಾರ ಬಹಿರಂಗವಾಗಿದೆ.
ಜಿಲ್ಲೆಯಲ್ಲಿ 47,039 ಜನರು ರಕ್ತದ ಒತ್ತಡ(ಬಿಪಿ)ದಿಂದ ಬಳಲುತ್ತಿದ್ದಾರೆ. 27962 ಜನರಿಗೆ ಮಧುಮೇಹ(ಶುಗರ್)ವಿದೆ. 327 ಜನರು ಡಯಾಲಿಸಿಸ್ ಮಾಡಿಸಿಕೊಳ್ಳುತ್ತಿದ್ದಾರೆ. 5951 ಜನರಿಗೆ ಇತರ ವಿವಿಧ ಆರೋಗ್ಯ ಸಮಸ್ಯೆಗಳಿವೆ. ಎಂದು ವರದಿ ಹೇಳುತ್ತದೆ.
ಆರೋಗ್ಯ ಕಾರ್ಯಕರ್ತೆಯರು ಮನೆ, ಮನೆಗೆ ತೆರಳಿ ಜನರ ಆರೋಗ್ಯ ತಪಾಸಣೆ ನಡೆಸುತ್ತಿದ್ದಾರೆ. ಜೂನ್ 10 ರ ವರದಿಯಂತೆ ಜಿಲ್ಲೆಯ 3,56,663 ಮನೆಗಳ 16,01,902 ಜನಸಂಖ್ಯೆಯ ಸರ್ವೆ ಕಾರ್ಯ ನಡೆಸಿ ವರದಿ ನೀಡಿದ್ದಾರೆ. ಈ ವರದಿ ಪ್ರಾಥಮಿಕವಾಗಿದ್ದರೂ ಜಿಲ್ಲೆಯಲ್ಲೂ ವ್ಯಾಪಿಸಿರುವ ವಿವಿಧ ಕಾಯಿಲೆಗಳ ಮಾಹಿತಿ ನೀಡಿದೆ. ಸಾಮಾನ್ಯವಾಗಿ ಡೆಂಘೆ, ಚಿಕೂನ್ಗುನ್ಯಾದಂಥ ಸಾಂಕ್ರಾಮಿಕ ರೋಗಗಳ ಬಗ್ಗೆ ಆರೋಗ್ಯ ಇಲಾಖೆ ಮಾಹಿತಿ ಸಂಗ್ರಹಿಸುತ್ತದೆ. ಆದರೆ, ಈ ಬಾರಿ ಸಾಮಾನ್ಯ ಮಾಹಿತಿಯನ್ನೂ ಸಂಗ್ರಹಿಸಿದ್ದು, ಶಾಂತ ಜಿಲ್ಲೆಯಲ್ಲೂ ಇಷ್ಟು ಸಂಖ್ಯೆಯಲ್ಲಿ ಜನರಿಗೆ ರಕ್ತದೊತ್ತಡದಂಥ ಸಮಸ್ಯೆ ಇದೆ ಎಂಬುದು ಅಚ್ಚರಿಯ ವಿಚಾರವಾಗಿದೆ. ಕರೊನಾ ದೃಷ್ಟಿಯಿಂದಲೂ ಇವರೆಲ್ಲರನ್ನೂ ಹೈ ರಿಸ್ಕ್ ಜನರು ಎಂದು ಆರೋಗ್ಯಾಧಿಕಾರಿಗಳು ಹೇಳುತ್ತಾರೆ.
ಹೊರ ಊರಿನಿಂದ ಬಂದ 4 ಸಾವಿರ ಜನ: ಜಿಲ್ಲೆಯಲ್ಲಿ ಇದುವರೆಗೆ ಹೊರ ದೇಶ, ರಾಜ್ಯ ಜಿಲ್ಲೆಯಿಂದ ಬಂದ 4301 ಜನರಿದ್ದು, ಅದರಲ್ಲಿ 33 ಜನರಿಗೆ ಜ್ವರ ಅಥವಾ ಇತರ ಸಣ್ಣಪುಟ್ಟ ಕರೊನಾ ಲಕ್ಷಣಗಳಿವೆ ಎಂದು ಆರೋಗ್ಯ ಇಲಾಖೆ ವರದಿ ತಿಳಿಸಿದೆ.
ಆರೋಗ್ಯ ಸಮೀಕ್ಷೆಯಂತೆ ಜೂನ್ 10 ರವರೆಗೆ ಜಿಲ್ಲೆಯಲ್ಲಿ ಹೊರ ದೇಶದಿಂದ ಬಂದ 8 ಜನರಿದ್ದಾರೆ. ಹೊರ ರಾಜ್ಯಗಳಿಂದ ಬಂದ 1152 ಜನರಿದ್ದಾರೆ. ಹೊರ ಜಿಲ್ಲೆಗಳಿಂದ ಬಂದ 3141 ಜನರಿದ್ದಾರೆ ಎಂದು ವರದಿ ಹೇಳುತ್ತದೆ. ಒಟ್ಟಾರೆ ಜಿಲ್ಲೆಯಲ್ಲಿ 210 ಜನರಿಗೆ ಜ್ವರ ಕಾಣಿಸಿದ್ದು, 14 ಜನರಿಗೆ ನಿರಂತರವಾಗಿ ಜ್ವರವಿದೆ. ಕರೊನಾ ಶಂಕೆಯ ಹಿನ್ನೆಲೆಯಲ್ಲಿ 91 ಜನರ ಗಂಟಲ ದ್ರವದ ಮಾದರಿ ಪರೀಕ್ಷಿಸಲಾಗುತ್ತಿದೆ.
ಮಳೆಗಾಲದಲ್ಲಿ ವಿವಿಧ ಕಾರಣಗಳಿಂದ ಸಾಕಷ್ಟು ಜನರಿಗೆ ಜ್ವರ ಬರುತ್ತದೆ. ಆಸ್ಪತ್ರೆಗೆ ಬರುವವರ ಸಂಖ್ಯೆ ಹೆಚ್ಚಲಿದೆ. ಇದರಿಂದ ನಾವು ನಿರಂತರವಾಗಿ ಆರೋಗ್ಯ ಸಮೀಕ್ಷೆ ನಡೆಸಿ ವರದಿ ನೋಡುತ್ತಿದ್ದೇವೆ. ಮನೆ, ಮನೆಗೆ ತೆರಳಿ ಜಾಗೃತಿ ಮೂಡಿಸುವ ಕಾರ್ಯವನ್ನು ಆರೋಗ್ಯ, ಆಶಾ ಕಾರ್ಯಕರ್ತೆಯರಿಂದ ಮುಂದುವರಿಸಲಿದ್ದೇವೆ. | ಡಾ.ಹರೀಶ ಕುಮಾರ ಕೆ. ಜಿಲ್ಲಾಧಿಕಾರಿ ಉತ್ತರ ಕನ್ನಡ
10 ವರ್ಷದ ಕೆಳಗಿನ ಮಕ್ಕಳು, ವೃದ್ಧರು, ಗರ್ಭಿಣಿಯರ ಜತೆ ಮಧುಮೇಹ, ಉಸಿರಾಟದ ತೊಂದರೆ ಹಾಗೂ ಇತರ ಗಂಭೀರ ಕಾಯಿಲೆಯಿಂದ ಬಳಲುತ್ತಿರುವವರನ್ನು ಕರೊನಾ ಸಮಯದಲ್ಲಿ ಹೈ ರಿಸ್ಕ್ ಎಂದು ಹೇಳಲಾಗುತ್ತದೆ. ಆರೋಗ್ಯ ಸಮೀಕ್ಷೆಯಿಂದ ನಮ್ಮಲ್ಲಿ ಎಷ್ಟು ಜನ ಹೈ ರಿಸ್ಕ್ ವರ್ಗದಲ್ಲಿ ಇದ್ದಾರೆ ಎಂಬುದು ನಮಗೆ ತಿಳಿದಿದೆ. ನಾವು ಅವರನ್ನು ಕೇಂದ್ರೀಕರಿಸಿ ಮತ್ತಷ್ಟು ಎಚ್ಚರ ವಹಿಸಲು ಅನುಕೂಲವಾಗಿದೆ. ಮಧುಮೇಹ ಹೊಂದಿರುವ ಜನರು ಸ್ವತಃ ತುಂಬಾ ಎಚ್ಚರಿಕೆಯಿಂದ ಇರಬೇಕು. | ಡಾ. ಶರದ್ ನಾಯಕ ಡಿಎಚ್ಒ