ಜಿಲ್ಲೆಯಲ್ಲಿ ಮತದಾರರ ಸಂಖ್ಯೆ ಇಳಿಮುಖ

ಚಿಕ್ಕಮಗಳೂರು : ಜಿಲ್ಲೆಯ ಮತದಾರರ ಪಟ್ಟಿ ಪರಿಷ್ಕರಣೆ ನಂತರ ಮತದಾರರ ಪಟ್ಟಿಯಲ್ಲಿ 11,164 ಮತದಾರರು ಕಡಿಮೆಯಾಗಿದ್ದಾರೆ ಎಂದು ಜಿಲ್ಲಾ ಚುನಾವಣಾಧಿಕಾರಿ ಎಂ.ಕೆ.ಶ್ರೀರಂಗಯ್ಯ ತಿಳಿಸಿದರು.

2018ರ ಏ.30ರಲ್ಲಿ ಐದು ವಿಧಾನಸಭಾ ಕ್ಷೇತ್ರಗಳಲ್ಲಿ 9,37,199 ಮತದಾರರರಿದ್ದರು. ಇದೀಗ ಪರಿಷ್ಕರಣೆ ನಂತರ ಮತದಾರರ ಸಂಖ್ಯೆ 9,26,035ಕ್ಕೆ ಇಳಿದಿದೆ ಎಂದು ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದರು.

ಏ.30ರ ವೇಳೆಗೆ ಶೃಂಗೇರಿ ಕ್ಷೇತ್ರದಲ್ಲಿದ್ದ 1,66,026 ಮತದಾರರ ಸಂಖ್ಯೆ 1,64,400ಕ್ಕೆ, ಮೂಡಿಗೆರೆಯಲ್ಲಿದ್ದ 1,70,250 ಮತದಾರರ ಸಂಖ್ಯೆ 1,67,150ಕ್ಕೆ ಕುಸಿದಿದ್ದರೆ, ಚಿಕ್ಕಮಗಳೂರು ಕ್ಷೇತ್ರದಲ್ಲಿದ್ದ 1,16,230 ಸಂಖ್ಯೆ 2,12,992ಕ್ಕೆ ಏರಿದ್ದರೆ, 1,82,853 ಸಂಖ್ಯೆ ಇದ್ದ ತರೀಕೆರೆ ಕ್ಷೇತ್ರದಲ್ಲಿ 1,81,671ಕ್ಕೆ ಕುಸಿದಿದೆ. 2,01,840 ಮತದಾರರಿದ್ದ ಕಡೂರು ಕ್ಷೇತ್ರದಲ್ಲಿ ಈಗ ಅದು 1,99,822ಕ್ಕೆ ಇಳಿದಿದೆ ಎಂದರು.

6,585 ಹೊಸ ಸೇರ್ಪಡೆ : ವಿಶೇಷ ಪರಿಷ್ಕರಣೆಯಲ್ಲಿ ಒಟ್ಟು 6,585 ಮಂದಿ ಹೊಸ ಮತದಾರರು ಸೇರ್ಪಡೆಯಾಗಿದ್ದರೆ. ಮತದಾರರ ಪಟ್ಟಿಯಿಂದ ಶೃಂಗೇರಿಯಲ್ಲಿ 2,261, ಮೂಡಿಗೆರೆ 2,634, ಚಿಕ್ಕಮಗಳೂರು 2,266, ತರೀಕೆರೆ 1,539, ಕಡೂರು 2,067 ಸೇರಿದಂತೆ ಒಟ್ಟು 10,767 ಮತದಾರರ ಹೆಸರನ್ನು ಕೈಬಿಡಲಾಗಿದೆ ಎಂದು ಎಂ.ಕೆ.ಶ್ರೀರಂಗಯ್ಯ ತಿಳಿಸಿದರು.

ಹೊಸದಾಗಿ ಮತದಾರರ ಪಟ್ಟಿಗೆ ಶೃಂಗೇರಿಯಲ್ಲಿ 1,596, ಮೂಡಿಗೆರೆ 1,118, ಚಿಕ್ಕಮಗಳೂರು 1,377, ತರೀಕೆರೆ 1,037, ಕಡೂರು 1,457 ಮತದಾರರು ಸೇರ್ಪಡೆಯಾಗಿದ್ದಾರೆ. ಒಟ್ಟು 2,906 ಪುರುಷರು, 3,669 ಮಹಿಳೆಯರು ಸೇರಿದ್ದಾರೆ. ಶೃಂಗೇರಿ, ಮೂಡಿಗೆರೆ ಮತ್ತು ಚಿಕ್ಕಮಗಳೂರು ಕ್ಷೇತ್ರದಲ್ಲಿ ಪರಿಷ್ಕರಣೆ ನಂತರವೂ ಮಹಿಳಾ ಮತದಾರರ ಸಂಖ್ಯೆ ಹೆಚ್ಚಾಗಿರುವುದು ವಿಶೇಷ ಎಂದರು.

10,833 ಯುವ ಮತದಾರರು: ಜಿಲ್ಲೆಯ ಐದು ಕ್ಷೇತ್ರಗಳಲ್ಲಿ 10,833 ಮತದಾರರು 18 ರಿಂದ 19 ವರ್ಷ ವಯಸ್ಸಿನ ಯುವ ಮತದಾರರಾಗಿದ್ದಾರೆ. 9,15,202 ಮತದಾರರು 19 ವರ್ಷಕ್ಕಿಂತ ಮೇಲ್ಪಟ್ಟವರಾಗಿದ್ದಾರೆ. ಪರಿಷ್ಕೃತಗೊಂಡ ಮತದಾರರ ಪಟ್ಟಿಯನ್ನು ಆಯಾ ಗ್ರಾಪಂ ಮತ್ತು ಆಯಾ ತಹಸೀಲ್ದಾರ್ ಕಚೇರಿಯಲ್ಲಿ ಪ್ರಕಟಿಸಲಾಗಿದೆ. ಹೊಸದಾಗಿ ಹೆಸರು ಸೇರಿಸಲು ಇನ್ನೂ ಅವಕಾಶವಿದೆ ಎಂದು ಎಂ.ಕೆ.ಶ್ರೀರಂಗಯ್ಯ ಮಾಹಿತಿ ನೀಡಿದರು.

52 ಹೊಸ ಮತಗಟ್ಟೆ ಸ್ಥಾಪನೆ: ಲೋಕಸಭೆ ಹಾಗೂ ಸ್ಥಳೀಯ ಸಂಸ್ಥೆಗಳ ಚುನಾವಣೆ ಹಿನ್ನೆಲೆಯಲ್ಲಿ ಜಿಲ್ಲೆಯ ಐದು ವಿಧಾನಸಭಾ ಕ್ಷೇತ್ರಗಳಲ್ಲಿ 52 ಹೊಸ ಮತಗಟ್ಟೆ ಸ್ಥಾಪಿಸಲಾಗಿದೆ. ಶೃಂಗೇರಿಯಲ್ಲಿ 7, ಮೂಡಿಗೆರೆ 5, ಚಿಕ್ಕಮಗಳೂರು 20, ತರೀಕೆರೆ 7 ಮತ್ತು ಕಡೂರಲ್ಲಿ 14 ಮತಗಟ್ಟೆಗಳನ್ನು ಸ್ಥಾಪಿಸಲಾಗಿದೆ. ಇಬ್ಬರು ಮತದಾರರಿದ್ದ ಕಾರಣಕ್ಕೆ ಚಿಕ್ಕಮಗಳೂರು ಕ್ಷೇತ್ರದ ಮುತ್ತೋಡಿ ಮತಗಟ್ಟೆಯನ್ನು ರದ್ದುಪಡಿಸಿ ಅಲ್ಲಿದ್ದವರ ಹೆಸರನ್ನು ಪಕ್ಕದ ಮತಗಟ್ಟೆಗೆ ಸೇರಿಸಲಾಗಿದೆ ಎಂದು ಎಂ.ಕೆ.ಶ್ರೀರಂಗಯ್ಯ ತಿಳಿಸಿದರು