ಜಿಲ್ಲೆಯಲ್ಲಿ ಪೋಲಿಯೋ ಲಸಿಕೆ ಫೆ. 3ರಿಂದ


ಗದಗ: ಜಿಲ್ಲೆಯಲ್ಲಿ ಪ್ರಸಕ್ತ ಸಾಲಿನ ಮೊದಲ ಸುತ್ತಿನ ಪಲ್ಸ್ ಪೋಲಿಯೋ ಲಸಿಕೆ ಕಾರ್ಯಕ್ರಮ ಫೆ. 3ರಿಂದ 6ರ ವರೆಗೆ ಹಮ್ಮಿಕೊಳ್ಳಲಾಗಿದ್ದು, ಜಿಲ್ಲಾ ಹಾಗೂ ತಾಲೂಕು ಮಟ್ಟದ ಅಧಿಕಾರಿಗಳು ಅಗತ್ಯ ಪೂರ್ವ ಸಿದ್ಧತೆ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಜಿಲ್ಲಾಧಿಕಾರಿ ಎಂ.ಜಿ. ಹಿರೇಮಠ ಸೂಚಿಸಿದರು.

ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಸೋಮವಾರ ಜರುಗಿದ ರಾಷ್ಟ್ರೀಯ ಪಲ್ಸ್ ಪೋಲಿಯೋ ಕಾರ್ಯಕ್ರಮದ ಜಿಲ್ಲಾ ಮಟ್ಟದ ಟಾಸ್ಕ್​ಫೋರ್ಸ್ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ‘ನಗರ, ಪಟ್ಟಣ, ಗ್ರಾಮೀಣ ಪ್ರದೇಶ ಸೇರಿ ವಿಶೇಷವಾಗಿ ತಾಂಡಾಗಳಲ್ಲಿ ಪಲ್ಸ್ ಪೋಲಿಯೋ ಕುರಿತು ಅರಿವು ಮೂಡಿಸುವ ಕಾರ್ಯವಾಗಬೇಕು. ಬಸ್ ನಿಲ್ದಾಣ, ರೈಲು ನಿಲ್ದಾಣ ಹಾಗೂ ಜನನಿಬಿಡ ಪ್ರದೇಶಗಳಲ್ಲಿ ಲಸಿಕೆಯ ಬೂತ್​ಗಳನ್ನು ತೆರೆಯಬೇಕು. ಸಂಚಾರಿ ವಾಹನಗಳ ಮೂಲಕ ಲಸಿಕೆ ವಿತರಣೆಗೆ ಸಾರಿಗೆ ಇಲಾಖೆಯು ಆರೋಗ್ಯ ಇಲಾಖೆಗೆ ಅಗತ್ಯ ವಾಹನಗಳನ್ನು ಒದಗಿಸಬೇಕು’ ಎಂದು ಸೂಚಿಸಿದರು. ಡಿಎಚ್​ಒ ಡಾ. ವಿರೂಪಾಕ್ಷರೆಡ್ಡಿ ಮಾದಿನೂರ, ಜಿಲ್ಲಾ ಶಸ್ತ್ರ ಚಿಕಿತ್ಸಕ ಜಿ.ಎಸ್. ಪಲ್ಲೇದ, ಜಿಲ್ಲಾ ಆರ್​ಸಿಎಚ್ ಅಧಿಕಾರಿ ಡಾ. ಎಸ್.ಎಂ. ಹೊನಕೇರಿ, ಜಿಲ್ಲಾ ಕುಷ್ಠರೋಗ ನಿಯಂತ್ರಣಾಧಿಕಾರಿ ಡಾ. ರೇಣುಕಾ ಕೊರವನವರ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕ ರಾಮಕೃಷ್ಣ ಪಡಗಣ್ಣವರ, ಪ್ರಭಾರಿ ಡಿಡಿಪಿಐ ಜಿ.ಎಲ್. ಬಾರಾಟಕ್ಕೆ ಹಾಗೂ ತಾಲೂಕು ವೈದ್ಯಾಧಿಕಾರಿಗಳು, ಜಿಲ್ಲಾ ಮಟ್ಟದ ವಿವಿಧ ಇಲಾಖೆ ಅಧಿಕಾರಿಗಳು ಉಪಸ್ಥಿತರಿದ್ದರು.

ಜಾಗೃತಿ ಅಭಿಯಾನ 30ರಿಂದ:

ಜಿಲ್ಲೆಯಲ್ಲಿ ಜ. 30ರಿಂದ ಫೆ. 13ರ ವರೆಗೆ ಕುಷ್ಠರೋಗ ಜಾಗೃತಿ ಅಭಿಯಾನ ಜರುಗಲಿದ್ದು, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯು ಜಿಲ್ಲಾ ಹಾಗೂ ತಾಲೂಕು ಮಟ್ಟದ ಸಮಿತಿಗಳನ್ನು ರಚಿಸಿ ಕಾರ್ಯಕ್ರಮದ ರೂಪುರೇಷೆಗಳನ್ನು ಹಾಕಿಕೊಳ್ಳಬೇಕು. ಫೆ. 8ರಂದು ಜರುಗುವ ರಾಷ್ಟ್ರೀಯ ಜಂತು ಹುಳು ನಿವಾರಣೆ ದಿನಾಚರಣೆ ಪ್ರಯುಕ್ತ ಜಿಲ್ಲೆಯ 1ರಿಂದ 19 ವಷದೊಳಗಿನ ಎಲ್ಲ ಮಕ್ಕಳಿಗೆ ಮಾತ್ರೆಗಳನ್ನು ನೀಡಲು ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಜಿಲ್ಲಾಧಿಕಾರಿ ಎಂ.ಜಿ. ಹಿರೇಮಠ ತಿಳಿಸಿದರು.

ವಿದ್ಯುತ್ ಕಡಿತಗೊಳ್ಳದಂತೆ ಎಚ್ಚರಿಕೆ ವಹಿಸಿ

ಪೋಲಿಯೋ ಹನಿ ಶೇಖರಣೆ, ಸಂಸ್ಕರಣೆಗಾಗಿ ನಿರಂತರ ವಿದ್ಯುತ್ ಸರಬರಾಜು ಇರುವಂತೆ ಹೆಸ್ಕಾಂ ಅಧಿಕಾರಿಗಳು ನಿಗಾ ವಹಿಸಬೇಕು. ಶಿಕ್ಷಣ ಇಲಾಖೆಯು ಜಿಲ್ಲೆಯ ಎಲ್ಲ ಪ್ರಾಥಮಿಕ ಹಾಗೂ ಪ್ರೌಢ ಶಾಲೆಗಳಲ್ಲಿ ನಿತ್ಯದ ಪ್ರಾರ್ಥನೆ ಸಲ್ಲಿಸುವ ಸಮಯದಲ್ಲಿ ಮಕ್ಕಳಿಗೆ ಮಾಹಿತಿ ನೀಡಿ ಪಾಲಕರಿಗೆ ಪೋಲಿಯೋ ಕಾರ್ಯಕ್ರಮ ಕುರಿತು ಮಾಹಿತಿ ರವಾನಿಸಬೇಕು. ಜಿಲ್ಲೆಯಲ್ಲಿ ಯಾವುದೇ ಮಕ್ಕಳು ಪೋಲಿಯೋ ಲಸಿಕೆಯಿಂದ ವಂಚಿತರಾಗದಂತೆ ಅಗತ್ಯ ಕ್ರಮ ಕೈಗೊಂಡು ಕಾರ್ಯಕ್ರಮ ಯಶಸ್ವಿಗೊಳಿಸಬೇಕು ಎಂದು ಜಿಲ್ಲಾಧಿಕಾರಿ ಸೂಚಿಸಿದರು.