ಜಿಲ್ಲೆಯಲ್ಲಿ ಅನುಕೂಲಕರ ವರ್ಷಧಾರೆ

ಕಾರವಾರ: ಜಿಲ್ಲೆಯಲ್ಲಿ ಹದವಾಗಿ ಮಳೆಯಾಗುತ್ತಿರುವುದು ರೈತರಿಗೆ ಖುಷಿ ತಂದಿದೆ. ಈ ವರ್ಷ ಇದುವರೆಗೆ ಒಮ್ಮೆಲೆ ಭಾರಿ ಮಳೆಯಾಗಿ ನೆರೆ ಹಾವಳಿ ಬಂದಿಲ್ಲ. ಮಳೆ ಕಡಿಮೆಯಾಗಿ ಬರವೂ ಉಂಟಾಗಿಲ್ಲ.

ಮುಂಗಾರು ಪೂರ್ವ (ಮಾರ್ಚ್​ನಿಂದ ಏಪ್ರಿಲ್ ಅಂತ್ಯದವರೆಗೆ) ಉತ್ತಮ ಮಳೆಯಾಗಿತ್ತು. ಜೂನ್​ನಲ್ಲಿ ಇಡೀ ಜಿಲ್ಲೆಯಲ್ಲಿ ಉತ್ತಮ ಮಳೆಯಾಗಿ ಬಿತ್ತನೆಗೆಗೆ ಅನುಕೂಲ ಮಾಡಿಕೊಟ್ಟಿತ್ತು. ಈಗ ಜುಲೈನಲ್ಲಿ ಆಗೊಮ್ಮೆ, ಈಗೊಮ್ಮೆ ಮಳೆ ಬಂದು ಹೋಗುತ್ತವೆ. ಇದು ಬಿತ್ತನೆ ಗದ್ದೆಗಳಿಗೆ ಅನುಕೂಲಕರವಾಗಿದೆ. ಆದರೆ, ಮಲೆನಾಡಿನ ಎತ್ತರದ ಗದ್ದೆಗಳಲ್ಲಿ ಇನ್ನೂ ಸಾಕಷ್ಟು ನೀರಾಗಿಲ್ಲ. ಇದರಿಂದ ನಾಟಿಗೆ ಕೊಂಚ ಹಿನ್ನಡೆಯಾಗಿದೆ.

ಹಳಿಯಾಳದಲ್ಲಿ ಇನ್ನೂ ಕಡಿಮೆ

ಕರ್ನಾಟಕ ರಾಜ್ಯ ನೈಸರ್ಗಿಕ ವಿಪತ್ತು ನಿರ್ವಹಣಾ ಕೇಂದ್ರ (ಕೆಎಸ್​ಎನ್​ಡಿಎಂಸಿ) ಮಾಹಿತಿಯಂತೆ ಜಿಲ್ಲೆಯ ಸರಾಸರಿಗೆ ಹೋಲಿಸಿದರೆ ಶೇ. 7 ರಷ್ಟು ಹೆಚ್ಚುವರಿ ಮಳೆಯಾಗಿದೆ. ಆದರೆ, ಹಳಿಯಾಳ, ಮುಂಡಗೋಡ ಹಾಗೂ ಯಲ್ಲಾಪುರ ತಾಲೂಕುಗಳಲ್ಲಿ ವಾಡಿಕೆಗಿಂತ ಕಡಿಮೆ ಮಳೆಯಾಗಿದೆ. ಹಳಿಯಾಳ ತಾಲೂಕಿನಲ್ಲಿ ಕಳೆದ ವರ್ಷ ಶೇ. 79 ರಷ್ಟು ಮಳೆ ಕೊರತೆ ಉಂಟಾಗಿತ್ತು. ಆದರೆ, ಈ ಬಾರಿ ಜೂನ್​ನಲ್ಲಿ ಶೇ. 25 ರಷ್ಟು ಹೆಚ್ಚುವರಿ ಮಳೆಯಾಗಿದ್ದು ಸಮಾಧಾನಕ್ಕೆ ಕಾರಣವಾಗಿದೆ. ಈಗ ಕೊಂಚ ಮಳೆ ಕಡಿಮೆ ಅನ್ನಿಸಿದರೂ ಬೆಳೆಗೇನೂ ನಷ್ಟವಿಲ್ಲ ಎಂಬುದು ಕೃಷಿ ಇಲಾಖೆ ಅಧಿಕಾರಿಗಳ ಅಭಿಪ್ರಾಯ.

ಶೇ. 52 ರಷ್ಟು ಬಿತ್ತನೆ: ಜಿಲ್ಲೆಯಲ್ಲಿ ಈ ವರ್ಷ ಒಟ್ಟು 79,022 ಹೆಕ್ಟೇರ್ ಬಿತ್ತನೆ ಗುರಿ ಹೊಂದಲಾಗಿತ್ತು. ಈ ವರೆಗೆ 41,419 ಹೆಕ್ಟೇರ್ (ಶೇ.52.4) ಬಿತ್ತನೆ ಕಾರ್ಯ ಮುಗಿದಿದೆ. ಹಳಿಯಾಳ, ಮುಂಡಗೋಡ, ಯಲ್ಲಾಪುರ, ಹಾಗೂ ಶಿರಸಿ ತಾಲೂಕಿನ ಬನವಾಸಿ ಹೋಬಗಳಿಗಳಲ್ಲಿ ಬಿತ್ತನೆ ಮುಕ್ತಾಯವಾಗಿದೆ. ಸಿದ್ದಾಪುರ, ಶಿರಸಿಯ ಇತರ ಭಾಗಗಳು, ಕರಾವಳಿಯಲ್ಲಿ ಈಗ ಬಿತ್ತನೆ ಕಾರ್ಯ ನಡೆದಿದೆ.

ಕಾರವಾರದಲ್ಲಿ ಸುರಿದ ಭಾರಿ ಮಳೆ

ಕಾರವಾರ: ಜಿಲ್ಲೆಯಲ್ಲಿ ಶುಕ್ರವಾರ ಬೆಳಗಿನಿಂದ ಸಂಜೆಯವರೆಗೆ ಉತ್ತಮ ಮಳೆಯಾಗಿದೆ. ಕಾರವಾರದಲ್ಲಿ ಸುರಿದ ಭಾರಿ ಮಳೆಯಿಂದ ಜನಜೀವನ ಅಸ್ತವ್ಯಸ್ತವಾಯಿತು. ಬೆಳಗ್ಗೆ 8 ರಿಂದ ಸಂಜೆ 5.30 ರವರೆಗೆ ತಾಲೂಕಿನಲ್ಲಿ 34.4 ಮಿಮೀ ಮಳೆಯಾಗಿದೆ. ಇದರಿಂದ ಕಚೇರಿ, ಶಾಲೆ, ಕಾಲೇಜ್​ಗಳಿಗೆ ತೆರಳುವವರು ತೊಂದರೆ ಅನುಭವಿಸಿದರು. ನಗರದ ಬೈತಖೋಲ್​ನಲ್ಲಿ ರಾಷ್ಟ್ರೀಯ ಹೆದ್ದಾರಿ 66 ರಲ್ಲಿ ನೀರು ತುಂಬಿದ್ದರಿಂದ ಕೆಲ ಕಾಲ ಹೆದ್ದಾರಿ ಸಂಚಾರಕ್ಕೆ ಅಡಚಣೆ ಉಂಟಾಯಿತು. ಅಲ್ಲದೆ, ನಗರದ ಕೆಎಚ್​ಬಿ ಕಾಲನಿಯಲ್ಲಿ ಹಲವೆಡೆ ರಸ್ತೆಗಳಲ್ಲಿ ನೀರು ತುಂಬಿದ್ದರಿಂದ ತೊಂದರೆ ಉಂಟಾಯಿತು. ಯಲ್ಲಾಪುರ ಹಾಗೂ ಸಿದ್ದಾಪುರ ಭಾಗದಲ್ಲೂ ಗುರುವಾರ ರಾತ್ರಿಯಿಂದ ಉತ್ತಮ ಮಳೆಯಾಗಿದ್ದರಿಂದ ಶುಕ್ರವಾರ ಗಂಗಾವಳಿ ಹಾಗೂ ಅಘನಾಶಿನಿ ನದಿಗಳೂ ತುಂಬಿ ಹರಿದವು. ಶುಕ್ರವಾರ ಬೆಳಗಿನಿಂದ ಜಿಲ್ಲೆಯ ಕುಮಟಾ ಹಾಗೂ ಹೊನ್ನಾವರ ತಾಲೂಕಿನ ವಿವಿಧೆಡೆ ಸರಾಸರಿ 60 ಮಿಮೀಗಿಂತ ಹೆಚ್ಚು ಮಳೆಯಾಗಿದೆ.

ಮಳೆಯ ಪ್ರಮಾಣ

ಶುಕ್ರವಾರ ಬೆಳಗಿನ ವರದಿಯಂತೆ ಹಿಂದಿನ 24 ಗಂಟೆಗಳ ಅವಧಿಯಲ್ಲಿ ಸರಾಸರಿ 51 ಮಿಮೀ ಮಳೆಯಾಗಿದೆ. ಅಂಕೋಲಾದಲ್ಲಿ 53, ಭಟ್ಕಳ- 42, ಹಳಿಯಾಳ-15.2, ಹೊನ್ನಾವರ-35, ಕಾರವಾರ-67.4, ಕುಮಟಾ-58.8, ಮುಂಡಗೋಡ- 15.8, ಸಿದ್ದಾಪುರ- 44.8, ಶಿರಸಿ-54.4, ಜೊಯಿಡಾ- 78.2, ಯಲ್ಲಾಪುರದಲ್ಲಿ 96 ಮಿಮೀ ಮಳೆಯಾಗಿದೆ.

ರಸ್ತೆಗೆ ನುಗ್ಗಿದ ಹಳ್ಳದ ನೀರು

ಅಂಕೋಲಾ: ತಾಲೂಕಿನ ಮಂಜಗುಣಿಯ ಗಣಪತಿ ದೇವಸ್ಥಾನ ಸಮೀಪದ ಹರಿಕಂತ್ರ ಕೊಪ್ಪದ ರಸ್ತೆಯಲ್ಲಿ ಗಂಗಾವಳಿ ಹಳ್ಳದ ನೀರು ರಸ್ತೆಗೆ ನುಗ್ಗಿ ಪಿಚಿಂಗ್ ಕುಸಿದು ಬಿದ್ದಿದೆ. ಇನ್ನು ವಿದ್ಯುತ್ ಕಂಬ ಕೂಡ ಧರೆಗುರುಳುವ ಸಾಧ್ಯತೆಯಿದೆ.ಮಂಜಗುಣಿ ತಾರಿಯಿಂದ ಸುಮಾರು 400 ಮೀ. ಉದ್ದವಿರುವ ಈ ರಸ್ತೆಗೆ ಅಳವಡಿಸಲಾದ ಪಿಚಿಂಗ್ ಕುಸಿದಿದ್ದು, ರಸ್ತೆ ಡಾಂಬರು ಕಾಣದೆ ಅನಾಥವಾಗಿದೆ. ಮಳೆಗಾಲದಲ್ಲಿ ಕೆಮ್ಮಣ್ಣಿನ ರಸ್ತೆಯಲ್ಲಿ ಸಂಚರಿಸಬೇಕಾದ ಸ್ಥಿತಿ ಇಲ್ಲಿಯ ನಾಗರಿಕರದ್ದು ಮತ್ತು ಭಕ್ತರದ್ದಾಗಿದೆ. ಇಲ್ಲಿ ಶಾಶ್ವತ ಪರಿಹಾರ ಮಾಡುವಂತೆ ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳು ಕ್ರಮ ಕೈಗೊಳ್ಳಬೇಕು ಎಂದು ಸ್ಥಳೀಯರಾದ ಚಂದ್ರಕಾಂತ ಹರಿಕಂತ್ರ, ಆಕಾಶ ಹರಿಕಂತ್ರ ಆಗ್ರಹಿಸಿದ್ದಾರೆ.

ಜೂನ್ ತಿಂಗಳಲ್ಲಿ ಜಿಲ್ಲೆಯಲ್ಲಿ ಶೇ. 30 ರಷ್ಟು ಹೆಚ್ಚುವರಿ ಮಳೆಯಾಗಿತ್ತು. ಜುಲೈ ತಿಂಗಳಲ್ಲಿ ಮಳೆ ಕೊಂಚ ಕಡಿಮೆಯಾಗಿದೆ. ಕಳೆದ ವರ್ಷಕ್ಕೆ ಹೋಲಿಸಿದಲ್ಲಿ ಅಂಥ ಕಡಿಮೆ ಏನಿಲ್ಲ. ಹಳಿಯಾಳ, ಮುಂಡಗೋಡ, ಯಲ್ಲಾಪುರದಲ್ಲಿ ವಾಡಿಕೆಗಿಂತ ಕೊಂಚ ಕಡಿಮೆ ಮಳೆಯಾಗಿದೆ. ಆದರೆ, ಸದ್ಯಕ್ಕೆ ಬೆಳೆಗೆ ಏನೂ ತೊಂದರೆ ಇಲ್ಲ.

| ಮಹಾಂತೇಶಪ್ಪ ಕೃಷಿ ಇಲಾಖೆ ಜಂಟಿ ನಿರ್ದೇಶಕ