ಜಿಲ್ಲೆಗೆ ಸಿಎಂ ಎಚ್​ಡಿಕೆ ಕೊಡುಗೆ ಏನು?

ಭದ್ರಾವತಿ: ಎಲ್ಲ ಸಮಾಜಗಳ ಜತೆ ಸಂಪರ್ಕ ಹೊಂದಿರುವ ವೀರಶೈವ ಸಮಾಜವು ಪ್ರಭಾವಿ ನಾಯಕತ್ವ, ಶಕ್ತಿಯನ್ನು ಹೊಂದಿದೆ. ಇದನ್ನು ಗಮನಹರಿಸಿ ಮುನ್ನಡೆಸುವ ಜವಾಬ್ದಾರಿ ವೇದಿಕೆ ಮೇಲಿರುವ ಮುಖಂಡರ ಮೇಲಿದೆ. ಮುಂದಿನ ಎರಡು ದಿನಗಳಲ್ಲಿ ಆ ಪ್ರಯತ್ನ ಮಾಡಿ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಮನವಿ ಮಾಡಿದರು.

ಭಾನುವಾರ ವೀರಶೈವ ಸಭಾಭವನದಲ್ಲಿ ಹಮ್ಮಿಕೊಂಡಿದ್ದ ಸ್ನೇಹಮಿಲನ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ರಾಜ್ಯದ ಅಧಿಕಾರ ಹಿಡಿದಿರುವ ಕುಮಾರಸ್ವಾಮಿ ಈ ಜಿಲ್ಲೆಯ ಜನತೆಗೆ ತಮ್ಮ ಆಡಳಿತದಲ್ಲಿ ಯಾವ ಕೊಡುಗೆ ನೀಡಿದ್ದಾರೆ ಎಂಬುದನ್ನು ಬಹಿರಂಗಪಡಿಸಲಿ. ಅದು ಬಿಟ್ಟು ಸುಳ್ಳು ಹೇಳಿಕೊಂಡು ಪ್ರಚಾರ ಸಭೆ ನಡೆಸುವುದರಲ್ಲಿ ಕೇವಲ ನನ್ನನ್ನು ಟೀಕಿಸುವ ಉದ್ದೇಶವಿದೆಯೇ ಹೊರತು ಅದರಲ್ಲಿ ಸತ್ಯಾಂಶವಿಲ್ಲ ಎಂದು ಹೇಳಿದರು.

ಹಾಸನ ಶಾಸಕ ಪ್ರೀತಂಗೌಡ, ಜಾತಿ ಆಧಾರದ ಮೇಲಿನ ಚುನಾವಣೆ ಇದಲ್ಲ, ಇದು ದೇಶ ಹಾಗೂ ಪ್ರಜೆಗಳ ಭವಿಷ್ಯದ ಚುನಾವಣೆ. ಇದನ್ನು ಮರೆತ ಜನರು ನಮ್ಮ ವಿರುದ್ಧ ಇಲ್ಲದ ಟೀಕೆ ನಡೆಸಿದ್ದಾರೆ ಎಂದು ಕಾಂಗ್ರೆಸ್, ಜೆಡಿಎಸ್ ವಿರುದ್ಧ ಹರಿಹಾಯ್ದರು.

ಜಿಲ್ಲಾ ಬಿಜೆಪಿ ಅಧ್ಯಕ್ಷ ಎಸ್.ರುದ್ರೇಗೌಡ, ಪ್ರಮುಖರಾದ ಎಸ್.ಎಸ್.ಜ್ಯೋತಿಪ್ರಕಾಶ್, ಕಾ.ಪು.ಸಿದ್ದಲಿಂಗಸ್ವಾಮಿ, ಚನ್ನಬಸಪ್ಪ, ಆರ್.ಎಸ್.ಶೋಭಾ, ಸಿ.ಮಂಜುಳಾ, ಮಂಗೋಟೆ ರುದ್ರೇಶ್, ಕೂಡ್ಲಿಗೆರೆ ಹಾಲೇಶ್, ವೀರಶೈವ ಸಭಾದ ಕೆ.ಸಿ.ವೀರಭದ್ರಪ್ಪ, ಲೋಹಿತಾಶ್ವ, ಬಿ.ಎಸ್.ಮಹೇಶಕುಮಾರ್, ಆರ್.ಮಹೇಶಕುಮಾರ್, ಸಿದ್ದಲಿಂಗಯ್ಯ, ಉದಯಕುಮಾರ್, ಅಡವೀಶಯ್ಯ, ಎಚ್.ಎನ್. ಮಹಾರುದ್ರ ಇತರರಿದ್ದರು.