ಜಿಲ್ಲೆಗೂ ವ್ಯಾಪಿಸಿದ ಐಎಂಎ ಕಮಟು

ರಾಮನಗರ: ಬಹುಕೋಟಿ ಐಎಂಎ ವಂಚನೆ ಪ್ರಕರಣ ಜಿಲ್ಲೆಗೂ ವ್ಯಾಪಿಸಿದ್ದು, ಜಿಲ್ಲೆಯಲ್ಲೇ 100 ಕೋಟಿ ರೂ.ಗೂ ಅಧಿಕ ಹಣ ಹೂಡಿಕೆಯಾಗಿದೆ ಎನ್ನುವ ಮಾಹಿತಿ ಲಭ್ಯವಾಗಿದೆ.

ಐ ಮಾನಿಟರಿ ಅಡ್ವೈಸರಿ (ಐಎಂಎ) ಮಾಲೀಕ ಮುನಾವರ್ ಖಾನ್, ಸಾವಿರಾರು ಮಂದಿಯಿಂದ ಲಾಭಾಂಶದ ಆಸೆ ತೋರಿಸಿ ಸುಮಾರು 10 ಸಾವಿರ ಕೋಟಿ ರೂ. ಸಂಗ್ರಹಿಸಿ ಇದೀಗ ಪರಾರಿಯಾಗಿದ್ದು, ಜಿಲ್ಲೆಯ ನೂರಾರು ಮಂದಿ ಇದೀಗ ಹಣಕ್ಕಾಗಿ ಬೇಡುವ ಸ್ಥಿತಿಗೆ ತಲುಪಿದ್ದಾರೆ.

ಸದ್ಯದ ಮಟ್ಟಿಗೆ ಜಿಲ್ಲೆಯಲ್ಲಿ ಎಷ್ಟು ಮಂದಿ ಹಣ ಕಳೆದುಕೊಂಡಿದ್ದಾರೆ ಎನ್ನುವ ಮಾಹಿತಿ ಸ್ಪಷ್ಟವಾಗಿಲ್ಲ. ಆದರೆ, ಹಣ ಕಳೆದುಕೊಂಡ ವ್ಯಕ್ತಿಯೊಬ್ಬರು ಹೇಳುವಂತೆ 100 ಕೋಟಿ ರೂ.ಗಳಿಗೂ ಹೆಚ್ಚು ಹಣ ಐಎಂಎ ಪಾಲಾಗಿದೆ ಎನ್ನಲಾಗಿದೆ. ಕಳೆದ 13 ವರ್ಷಗಳಿಂದಲೂ ನೂರಾರು ಮಂದಿ ಹಣ ಹೂಡಿಕೆ ಮಾಡಿದ್ದು, ಲಾಭಾಂಶ ಪಡೆಯುತ್ತ ಬಂದಿದ್ದರು. ಇದನ್ನು ನೋಡಿದ ಮತ್ತೊಬ್ಬರು ಹಣ ಹೂಡಿಕೆ ಮಾಡಿದ್ದು, ಇದೀಗ ಕಂಗಾಲಾಗಿದ್ದಾರೆ.

ರಮಜಾನ್​ನಿಂದ ಹಣವಿಲ್ಲ: ಬಹುತೇಕ ಹೂಡಿಕೆದಾರರು 3 ಲಕ್ಷ ರೂ.ನಿಂದ 1 ಕೋಟಿ ರೂ.ವರೆಗೂ ಹೂಡಿಕೆ ಮಾಡಿದ್ದಾರೆ. ಹೂಡಿಕೆದಾರರಿಗೆ ಪ್ರತಿ ತಿಂಗಳು ಲಾಭಾಂಶ ನೀಡಲಾಗುತ್ತಿತ್ತು. ಆದರೆ ಚುನಾವಣೆ ಆರಂಭವಾಗುತ್ತಿದ್ದಂತೆ ಲಾಭಾಂಶ ನೀಡುವುದನ್ನು ನಿಲ್ಲಿಸಿ ಬಿಟ್ಟಿದ್ದಾರೆ. ಈ ಬಗ್ಗೆ ಕೇಳಿದರೆ, ಚುನಾವಣೆ ಹಿನ್ನೆಲೆಯಲ್ಲಿ ಕೆಲವರು ಹಣ ಪಡೆದುಕೊಂಡಿದ್ದಾರೆ. ಚುನಾವಣೆ ಮುಗಿದ ನಂತರ ನೀಡುತ್ತೇನೆ ಎಂದು ಹೇಳಿ ಹೂಡಿಕೆದಾರರನ್ನು ನಂಬಿಸಿದ್ದಾರೆ. ಆದರೆ, ಚುನಾವಣೆ ಮುಗಿದು, ರಮಜಾನ್ ಕಳೆದರೂ ಲಾಭಾಂಶ ಕೈಸೇರಿಲ್ಲ.

ಮಧ್ಯಮ ವರ್ಗದ ಹೂಡಿಕೆದಾರರು: ಐಎಂಎಯಲ್ಲಿ ಹಣ ಹೂಡಿಕೆ ಮಾಡಿರುವವರಲ್ಲಿ ಬಹುತೇಕ ಮಧ್ಯಮ ವರ್ಗದವರೇ ಆಗಿದ್ದಾರೆ. ಕೆಲವರು ಲಾಭದ ಆಸೆಗಾಗಿ ಜಮೀನು ಮಾರಾಟ ಮಾಡಿ ಹಣ ಹೂಡಿದ್ದರೆ, ಮತ್ತೆ ಕೆಲವರು ವ್ಯಾಪಾರ ವಹಿವಾಟಿನಿಂದ ಬರುತ್ತಿದ್ದ ಲಾಭ ಹೂಡಿಕೆ ಮಾಡಿದ್ದಾರೆ. ಆದರೆ, ಇದೀಗ ವಂಚನೆ ಪ್ರಕರಣ ಬೆಳಕಿಗೆ ಬರುತ್ತಿದ್ದಂತೆ ಎಲ್ಲವನ್ನೂ ಕಳೆದುಕೊಂಡು ಕಂಗಾಲಾಗಿದ್ದಾರೆ.

ದೂರು ನೀಡಿಲ್ಲ: ಕಳೆದ ಎರಡು ದಿನಗಳ ಹಿಂದಷ್ಟೇ ಪ್ರಕರಣ ಬೆಳಕಿಗೆ ಬಂದಿದ್ದು, ಜಿಲ್ಲೆಯಿಂದ ಹೂಡಿಕೆ ಮಾಡಿದ್ದ ನೂರಾರು ಮಂದಿ ಈವರೆಗೂ ಯಾವುದೇ ಪ್ರಕರಣ ದಾಖಲಿಸಲು ಮುಂದಾಗಿಲ್ಲ. ಇದಕ್ಕೆ ಯಾರಿಗೆ ದೂರು ನೀಡಬೇಕೆನ್ನುವ ಮಾಹಿತಿ ಹಾಗೂ ಗೊಂದಲ ಕಾರಣ ಎನ್ನಲಾಗಿದೆ.

15 ಲಕ್ಷ ರೂ. ಹೂಡಿಕೆ: ರಾಮನಗರದ ನಿವಾಸಿಯಾದ ವಸೀಂ ಎನ್ನುವರು ಐಎಂಎನಲ್ಲಿ ಒಟ್ಟು 15 ಲಕ್ಷ ರೂ. ಹೂಡಿಕೆ ಮಾಡಿದ್ದರು. ಇತ್ತೀಚಿಗೆ 7 ಲಕ್ಷ ರೂ.ಗಳನ್ನು ವಾಪಸ್ ಪಡೆದುಕೊಂಡಿದ್ದರು. ಅಲ್ಲದೆ, ಉಳಿದ ಹಣ ನೀಡುವಂತೆಯೂ ಸಂಸ್ಥೆಗೆ ಮನವಿ ನೀಡಿದ್ದರು. ರಮಜಾನ್ ಆರಂಭಕ್ಕೂ ಮುನ್ನವೇ ಲಾಭಾಂಶ ನೀಡುವುದನ್ನು ನಿಲ್ಲಿಸಿದ್ದರು. ಈ ಬಗ್ಗೆ ಕೇಳಿದಾಗ ಮೇ 15ರಂದು ನೀಡುವುದಾಗಿ ತಿಳಿಸಿದ್ದರು. ಮತ್ತೆ ವಿಚಾರಿಸಿದಾಗ ಚುನಾವಣೆಯಲ್ಲಿ ಹಣವನ್ನು ಬೇರೆಯವರಿಗೆ ನೀಡಲಾಗಿದೆ. ನಿಮಗೆ ಜೂ.5ಕ್ಕೆ ಹಣ ನೀಡುವುದಾಗಿ ಸಂಸ್ಥೆ ಹೇಳಿತ್ತು. ಆದರೆ, ಈಗ ಹಣವೂ ಇಲ್ಲ ಲಾಭಾಂಶವೂ ಇಲ್ಲ ಎನ್ನುವಂತೆ ಆಗಿದೆ.

ಮಗಳ ಮದುವೆಗೆ ಹಣವೂ ಇಲ್ಲ: ಚನ್ನಪಟ್ಟಣದ ರಶೀದ್ ಮತ್ತು ರುಕ್ಸಾನಾ ದಂಪತಿ ಕಣ್ಣೀರ ಕಥೆಯೇ ಬೇರೆ ಇದೆ. ಮಗಳ ಮದುವೆಗೆಂದು ಇದ್ದ ನಿವೇಶನ ಮಾರಿ ಸುಮಾರು 40 ಲಕ್ಷ ರೂ.ಗಳನ್ನು ಹೂಡಿಕೆ ಮಾಡಿದ್ದರು. ಆದರೆ ಈಗ ಹಣವೂ ಇಲ್ಲ, ನಿವೇಶನವೂ ಇಲ್ಲ ಜತೆಗೆ ಮಗಳ ಮದುವೆಗೆ ಹಣವೂ ಇಲ್ಲದಂತಾಗಿದೆ. ಮಗಳ ಮದುವೆ ನಿಶ್ಚಯಕ್ಕೆ ಮುಂದಾಗಿದ್ದ ದಂಪತಿ ಕಳೆದ ತಿಂಗಳು ಹಣ ಹಿಂದಿರುಗಿಸುವಂತೆ ಅರ್ಜಿ ಸಲ್ಲಿಸಿದ್ದರು. ಆದರೆ, ಹಣ ಕೈಸೇರುವ ಮುನ್ನವೇ ಸಂಸ್ಥೆ ಬಾಗಿಲು ಮುಚ್ಚಿದೆ.

ಲಾಭಾಂಶ ಸಿಗುವ ನಂಬಿಕೆ ಮೇಲೆ ಹಣ ಹೂಡಿದ್ದೆ. 8 ಲಕ್ಷ ರೂ. ಬರಬೇಕಿದೆ. ಯಾರನ್ನು ನಂಬುವುದು ಎನ್ನುವುದೇ ತಿಳಿಯುತ್ತಿಲ್ಲ. ಸರ್ಕಾರ ನ್ಯಾಯ ಕೊಡಿಸಬೇಕು. ಮಾಧ್ಯಮದವರು ಬೆಂಬಲಕ್ಕೆ ನಿಲ್ಲಬೇಕು.

| ವಸೀಂ, ವಂಚನೆಗೊಳಗಾದವ, ರಾಮನಗರ, ನಿವಾಸಿ