ವಿಜಯವಾಣಿ ಸುದ್ದಿಜಾಲ ಕೋಲಾರ
ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷರಾಗಿ ನಗರದ ಕೋಟೆ ಬಡಾವಣೆಯ ಸೈಯದ್ ಆಫ್ರಿದ್ ೨೧೯೧೧ ಮತಗಳನ್ನು ಪಡೆದು ತಮ್ಮ ಸಮೀಪದ ಪ್ರತಿಸ್ಪರ್ಧಿ ಸಾದಿಕ್ ವಿರುದ್ದ ೧೨೨೩೦ ಮತಗಳ ಅಂತರದಲ್ಲಿ ಭರ್ಜರಿಯಾಗಿ ಗೆಲುವು ಸಾಧಿಸಿದ್ದಾರೆ.
ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿಯ ನೇತೃತ್ವದಲ್ಲಿ ಕಳೆದ ವರ್ಷ ಆನ್ ಲೈನ್ ಮುಖಾಂತರ ನಡೆದ ಅಂತರಿಕ ಚುನಾವಣೆಯಲ್ಲಿ ಸೈಯದ್ ಆಫ್ರಿದ್ ೨೧೯೧೧ ಮತಗಳನ್ನು ಪಡೆದು ಗೆಲುವು ಸಾಧಿಸಿದ್ದಾರೆ.
ನೂತನ ಜಿಲ್ಲಾ ಅಧ್ಯಕ್ಷ ಸೈಯದ್ ಆಫ್ರಿದ್ ಕಾಂಗ್ರೆಸ್ ಪಕ್ಷದ ವಿಧ್ಯಾರ್ಥಿ ಕಾಂಗ್ರೆಸ್ ಮೂಲಕ ರಾಜಕೀಯ ಜೀವನ ಆರಂಭಿಸಿ ಯುವ ಕಾಂಗ್ರೆಸ್ ನಲ್ಲಿ ವಿವಿಧ ಜವಾಬ್ದಾರಿಗಳನ್ನು ನಿರ್ವಹಿಸಿದ್ದಾರೆ ಕಳೆದ ವಿಧಾನಸಭೆ, ಲೋಕಸಭೆ ಸೇರಿದಂತೆ ಸ್ಥಳೀಯ ಸಂಸ್ಥೆಗಳ ಚುನಾವಣೆಗಳಲ್ಲಿ ಕಾಂಗ್ರೆಸ್ ಪಕ್ಷದ ಪರವಾಗಿ ಸಕ್ರಿಯವಾಗಿ ಪಾಲ್ಗೊಂಡು ಕಾಂಗ್ರೆಸ್ ಅಭ್ಯರ್ಥಿಗಳ ಗೆಲುವಿಗೆ ಶ್ರಮಿಸಿದ್ದಾರೆ.
ನೂತನ ಅಧ್ಯಕ್ಷ ಸೈಯದ್ ಆಫ್ರಿದ್ ಮಾತನಾಡಿ, ಕಾಂಗ್ರೆಸ್ ಪಕ್ಷದಲ್ಲಿ ಜವಾಬ್ದಾರಿಯುತ ಸ್ಥಾನಕ್ಕೆ ಜಿಲ್ಲೆಯ ಜನತೆಯು ಆಶೀರ್ವಾದ ಮಾಡಿದ್ದಾರೆ. ಕಾಂಗ್ರೆಸ್ ಪಕ್ಷವನ್ನು ಬೂತ್ ಮಟ್ಟದಿಂದ ಸಮಸ್ಯೆಗಳ ಆಧಾರದಲ್ಲಿ ಪಕ್ಷವನ್ನು ಯುವ ಸಮುದಾಯದ ಮಧ್ಯೆ ಸಂಘಟಿಸುವ ಕೆಲಸವನ್ನು ಮಾಡುವ ಜೊತೆಗೆ ಮುಂಬರಲಿರುವ ಎಲ್ಲಾ ಚುನಾವಣೆಗಳಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳ ಗೆಲುವು ಮುಖ್ಯವಾಗಿದೆ. ಜೊತೆಗೆ ರಾಜ್ಯ ಸರ್ಕಾರದ ಯೋಜನೆಗಳನ್ನು ಜನಕ್ಕೆ ತಲುಪಿಸುವುದು ಮತ್ತು ಯೋಜನೆಗಳ ಬಗ್ಗೆ ಪ್ರಚಾರ ಮಾಡುವುದು ಯುವ ಕಾಂಗ್ರೆಸ್ ನ ಗುರಿಯಾಗಿದೆ ಎಂದರು.
ಚಿತ್ರ ೦೮ ಕೆ.ಎಲ್.ಆರ್. ೦೨ : ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷರಾದ ನಗರದ ಕೋಟೆ ಬಡಾವಣೆಯ ಸೈಯದ್ ಆಫ್ರಿದ್ ರವರ ಭಾವಚಿತ್ರ