ಚಿತ್ರದುರ್ಗ: ಜಿಲ್ಲಾಸ್ಪತ್ರೆಯಲ್ಲಿ ಸಂಪೂರ್ಣ ಸೊಂಟ ಹಾಗೂ ಮೊಣಕಾಲು ಕೀಲು ಬದಲಾವಣೆ ಶಸ್ತ್ರಚಿಕಿತ್ಸೆ ಪ್ರಾರಂಭಿಸಲಾಗಿದೆ ಎಂದು ಜಿಲ್ಲಾ ಶಸ್ತ್ರ ಚಿಕಿತ್ಸಕ ಡಾ.ಎಸ್.ಪಿ. ರವೀಂದ್ರ ಹೇಳಿದರು.
ವಯಸ್ಸಾದಂತೆ ಹಲವರಲ್ಲಿ ಸೊಂಟ, ಮೊಣಕಾಲು ಸವೆತ ಉಂಟಾಗಿ ತೊಂದರೆ ಅನುಭವಿಸಬೇಕಾಗುತ್ತದೆ. ಇದನ್ನು ತಪ್ಪಿಸಲು ಸೊಂಟ, ಮೊಣಕಾಲು ಜತೆ ಬೆನ್ನುಹುರಿ ಶಸ್ತ್ರಚಿಕಿತ್ಸೆಯನ್ನೂ ಇಲ್ಲಿ ಕೈಗೊಳ್ಳಲಾಗುವುದು ಎಂದು ಶನಿವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಪ್ರತಿ ಶನಿವಾರ ಅಥವಾ ಸೋಮವಾರ ಶಸ್ತ್ರಚಿಕಿತ್ಸೆ ನಡೆಯಲಿದೆ. ಇನ್‌ಪ್ಲಾಂಟ್ಸ್ ಸಹಿತ ಎಬಿ-ಎಆರ್‌ಕೆ ಅಡಿ ಬಿಪಿಎಲ್ ಕಾರ್ಡ್‌ದಾರಿಗೆ ಉಚಿತವಾಗಿ ಶಸ್ತ್ರ ಚಿಕಿತ್ಸೆ ನಡೆಸಲಾಗುವುದು. ಬೆಂಗಳೂರಿನ ಕೀಲು, ಮೂಳೆ ತಜ್ಞ ಡಾ. ವಿಜಯಕುಮಾರ್ ಮಾರ್ಗದರ್ಶನದಲ್ಲಿ ಸದ್ಯ ಇಬ್ಬರು ರೋಗಿಗಳಿಗೆ ಟೋಟಲ್ ಹಿಪ್‌ರಿಪ್ಲೇಸ್‌ಮೆಂಟ್ ಶಸ್ತ್ರಚಿಕಿತ್ಸೆಗೆ ತಯಾರಿ ನಡೆಸಲಾಗಿದೆ ಎಂದರು.
ಜಿಲ್ಲಾಸ್ಪತ್ರೆ ಟ್ರಾಮಾ ಸೆಂಟರ್‌ನಲ್ಲಿ ಪ್ರತಿ ತಿಂಗಳು 100-150 ಮೂಳೆ ಸಂಬಂಧಿ ಶಸ್ತ್ರಚಿಕಿತ್ಸೆ ನಡೆಸಲಾಗುತ್ತಿದೆ ಎಂದು ಕೀಲುಮೂಳೆ ವಿಭಾಗದ ತಜ್ಞವೈದ್ಯ ಡಾ.ಎಸ್.ಪಿ. ದಿನೇಶ್ ಮಾಹಿತಿ ನೀಡಿದರು. ತಜ್ಞ ಡಾ. ಶ್ರೀಧರ್, ಡಾ. ಬಸವರಾಜ್ ಶಸ್ತ್ರಚಿಕಿತ್ಸೆಯಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದರು.
* 114 ಕೋಟಿ ರೂ.ಅನುದಾನದಲ್ಲಿ 180 ಬೆಡ್ ಆಸ್ಪತ್ರೆ
* ಶೀಘ್ರವೇ ಕಿಮೋಥೆರಪಿ ಘಟಕ ಕಾರ್ಯಾರಂಭ
ಜಿಲ್ಲಾಸ್ಪತ್ರೆ ಆವರಣದಲ್ಲಿ ಕೆಎಂಇಆರ್‌ಸಿಯ 114 ಕೋಟಿ ರೂ.ಅನುದಾನದಲ್ಲಿ 180 ಹಾಸಿಗೆ ಸಾಮರ್ಥ್ಯದ ನೂತನ ಆಸ್ಪತ್ರೆ ನಿರ್ಮಾಣದ ಟೆಂಡರ್ ಪ್ರಕ್ರಿಯೆ ಅಂತಿಮ ಹಂತದಲ್ಲಿದೆ. 90 ಕೋಟಿ ರೂ.ವೆಚ್ಚದಲ್ಲಿ ಸುಸಜ್ಜಿತ ಆಸ್ಪತ್ರೆ ಕಟ್ಟಡ ನಿರ್ಮಾಣ, 7 ಕೋಟಿ ರೂ. ವೈದ್ಯಕೀಯ ಉಪಕರಣಗಳ ಖರೀದಿ ಹಾಗೂ 7 ಕೋಟಿ ರೂ.ಗಳನ್ನು 2 ವರ್ಷಗಳ ಕಾಲ ವೇತನಕ್ಕೆ ಮೀಸಲಿಡಲಾಗಿದೆ. 5 ಕೋಟಿ ರೂ. ವೆಚ್ಚದಲ್ಲಿ ಹಳೆಯ ಆಸ್ಪತ್ರೆ ಕಟ್ಟಡ ನವೀಕರಣ ನಡೆದಿದೆ ಎಂದು ತಿಳಿಸಿದರು.
ಕೇಂದ್ರದ ಪಿಎಂ ಅಬೀಮ್ ಅಡಿಯಲ್ಲಿ 1.10 ಕೋಟಿ ರೂ.ವೆಚ್ಚದಲ್ಲಿ ಜಿಲ್ಲಾ ಸಮಗ್ರ ಸಾರ್ವಜನಿಕ ಆರೋಗ್ಯ ಪರೀಕ್ಷಾ ಪ್ರಯೋಗಾಲಯ ಸ್ಥಾಪಿಸಲಾಗುವುದು. ಕ್ಯಾನ್ಸರ್ ರೋಗಿಗಳಿಗೆ ಶೀಘ್ರವೇ ಕಿಮೋಥೆರಪಿ ಘಟಕ ಕಾರ್ಯಾರಂಭ ಮಾಡಲಿದೆ. ನಿಮ್ಹಾನ್ಸ್ ಸಹಯೋಗದಲ್ಲಿ ಕರ್ನಾಟಕ ಬ್ರೈನ್ ಹೆಲ್ತ್ ಇನ್ಸಿಯೇಟ್ ಕಾರ್ಯಕ್ರಮ ಆರಂಭಿಸಲಾಗಿದೆ.
ಪ್ರತಿ ಶುಕ್ರವಾರ ನಿಮಾನ್ಸ್‌ನ ನರರೋಗ ತಜ್ಞ ಡಾ. ಕಿರಣ್‌ಗೌಡ ಬೆಳಗ್ಗೆ 9ರಿಂದ ಸಂಜೆ 4 ರವರೆಗೆ ಚಿಕಿತ್ಸೆ ನೀಡುವರು. ದಾವಣಗೆರೆ ವಿ ಶ್ವಾರಾಧ್ಯ ಕ್ಯಾನ್ಸರ್ ಆಸ್ಪ ತ್ರೆ ಸಹಯೋಗದಲ್ಲಿ ಪ್ರತಿ ಸೋಮವಾರ ಹಾಗೂ ಶುಕ್ರವಾರ ತಪಾಸಣೆ ಮತ್ತು ಚಿಕಿತ್ಸೆ ನೀಡಲಾಗುತ್ತಿದೆ. ಇಂಡಿಯಾನ ಹಾರ್ಟ್ ಸೆಂಟರ್ ಸಹಯೋಗದಲ್ಲಿ ಪ್ರತಿ ಗುರುವಾರ ಹೃದ್ರೋಗಿಗಳ ತಪಾಸಣೆ ನಡೆಸಲಾಗುತ್ತಿದೆ ಎಂದು ರವೀಂದ್ರ ಹೇಳಿದರು.