ಜಿಲ್ಲಾಸ್ಪತ್ರೆಯಲ್ಲಿ ಸಿಟಿ ಸ್ಕ್ಯಾನ್ ಸೇವೆ ಇಂದಿನಿಂದ

ಗದಗ:ಬಡ ಹಾಗೂ ಮಧ್ಯಮ ವರ್ಗದ ರೋಗಿಗಳಿಗೆ ಆರೋಗ್ಯ ತಪಾಸಣೆಯಲ್ಲಿ ದುಬಾರಿಯೆನಿಸಿದ್ದ ಸಿಟಿ ಸ್ಕ್ಯಾನ್ (ಕಂಪ್ಯೂಟೆಡ್ ಟೋಮೊಗ್ರಾಫಿ) ಗುರುವಾರದಿಂದ ಜಿಲ್ಲಾಸ್ಪತ್ರೆಯಲ್ಲಿ ಆರಂಭಗೊಳ್ಳಲಿದೆ.

ಕಳೆದ 10 ವರ್ಷಗಳಿಂದ ಜಿಲ್ಲಾಸ್ಪತ್ರೆಯ ಬಹು ಬೇಡಿಕೆಗಳಲ್ಲೊಂದಾಗಿದ್ದ ಸಿಟಿ ಸ್ಕ್ಯಾನ್ ಖಾಸಗಿ ಸಂಸ್ಥೆಯ ಸಹಭಾಗಿತ್ವದಲ್ಲಿ ಗುರುವಾರದಿಂದ ಸೇವೆ ಆರಂಭಿಸಲಿದ್ದು, ಜಿಲ್ಲಾಸ್ಪತ್ರೆ ಹಾಗೂ ಜಿಮ್್ಸ ರೋಗಿಗಳ ಚಿಕಿತ್ಸೆಗೆ ಸಹಕಾರಿಯಾಗಲಿದೆ.

ಗದಗ ಜಿಲ್ಲಾಸ್ಪತ್ರೆಯಲ್ಲಿ ದಾಖಲಾಗುವ ರೋಗಿಗಳಲ್ಲಿ ಬಡವರೇ ಅಧಿಕ. ಜಿಲ್ಲಾಸ್ಪತ್ರೆಯಲ್ಲಿ ಸಿಟಿ ಸ್ಕ್ಯಾನ್ ಹಾಗೂ ಎಂಆರ್​ಐ ಸ್ಕ್ಯಾನ್ ಲಭ್ಯವಿರದ ಕಾರಣ ದುಬಾರಿ ಬೆಲೆಯ ಸ್ಕ್ಯಾನ್ ಮಾಡಿಸಿಕೊಳ್ಳುವುದು ಬಡವರಿಗೆ ಹೊರೆಯಾಗಿತ್ತು. ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ರೋಗಿಗಳು ಖಾಸಗಿ ಆಸ್ಪತ್ರೆ ಇಲ್ಲವೇ, ಹುಬ್ಬಳ್ಳಿಯ ಕಿಮ್ಸ್​ಗೆ ತೆರಳಬೇಕಿತ್ತು. ಇದೀಗ ಜಿಲ್ಲಾಸ್ಪತ್ರೆಯಲ್ಲಿ ಸಿಟಿ ಸ್ಕ್ಯಾನ್ ಸೌಲಭ್ಯ ಆರಂಭವಾಗುತ್ತಿದ್ದು, ರೋಗಿಗಳು ಉಚಿತವಾಗಿ ಸಿಟಿ ಸ್ಕ್ಯಾನ್ ಸೌಲಭ್ಯ ಪಡೆಯಬಹುದಾಗಿದೆ.

ಖಾಸಗಿ ಆಸ್ಪತ್ರೆಯಲ್ಲಿ ರೋಗಿಗಳು ಕನಿಷ್ಠ 2,500 ರೂ. ನಿಂದ 5,000 ರೂ. ವರೆಗೆ ಸಿಟಿ ಸ್ಕ್ಯಾನ್​ಗೆ ಹಣ ವ್ಯಯಿಸಬೇಕಿತ್ತು. ಜಿಲ್ಲಾಸ್ಪತ್ರೆಯಲ್ಲಿ ದಾಖಲಾಗುವ ರೋಗಿಗಳಿಗೆ ಸಿಟಿ ಸ್ಕ್ಯಾನ್ ಸೌಲಭ್ಯ ಉಚಿತವಾಗಿ ದೊರೆಯಲಿದ್ದು, ಖಾಸಗಿ ಆಸ್ಪತ್ರೆಯಲ್ಲಿನ ರೋಗಿಗಳಿಗೆ ರಿಯಾಯಿತಿಯಲ್ಲಿ ದರ ನಿಗದಿ ಮಾಡಲಾಗಿದೆ.

ಇನ್ನೆರೆಡು ತಿಂಗಳಲ್ಲಿ ಎಂಆರ್​ಐ ಸ್ಕ್ಯಾನ್ ಸೌಲಭ್ಯ

ಗದಗ ಜಿಲ್ಲಾಸ್ಪತ್ರೆಯಲ್ಲಿ ಈಗಾಗಲೇ 1.5 ಕೋಟಿ ರೂ. ಮೌಲ್ಯದ 32 ಸ್ಲೈಸ್ ಸಿಟಿ ಸ್ಕ್ಯಾನ್ ಅಳವಡಿಸಲಾಗಿದ್ದು, ಗುರುವಾರದಿಂದ ರೋಗಿಗಳಿಗೆ ಸಿಟಿ ಸ್ಕ್ಯಾನ್ ಸೌಲಭ್ಯ ದೊರೆಯಲಿದೆ. ಆಧುನಿಕ ತಂತ್ರಜ್ಞಾನವುಳ್ಳ 5.5 ಕೋಟಿ ರೂ. ಮೌಲ್ಯದ ಎಂಆರ್​ಐ ಸ್ಕ್ಯಾನ್ ವಿದೇಶದಿಂದ ಆಮದು ಮಾಡಿಕೊಳ್ಳಲಾಗುತ್ತಿದೆ. ಎರಡು ತಿಂಗಳೊಳಗಾಗಿ ಎಂಆರ್​ಐ ಸ್ಕ್ಯಾನ್ ಆರಂಭಿಸುವ ಗುರಿ ಹೊಂದಲಾಗಿದೆ.

ಅಪಘಾತದಲ್ಲಿ ಗಾಯಗೊಂಡವರಿಗೆ, ತಲೆ, ಕೈ-ಕಾಲು, ಹೊಟ್ಟೆ ಶಸ್ತ್ರಚಿಕಿತ್ಸೆಗೊಳಪಡುವ ರೋಗಿಗಳು, ಕಿಡ್ನಿ ಸ್ಟೋನ್, ಟಿಬಿ, ಕ್ಯಾನ್ಸರ್ ಸೇರಿ ವಿವಿಧ ಶಸ್ತ್ರಚಿಕಿತ್ಸೆಗೊಳಪಡುವವರಿಗೆ ವೈದ್ಯರ ಸಲಹೆ ಮೇರೆಗೆ ಸಿಟಿ ಸ್ಕ್ಯಾನ್ ಸೌಲಭ್ಯವಿದೆ.

ಡಾ. ವೀರೇಶ ಹಂಚಿನಾಳ, ಜಿಲ್ಲಾಸ್ಪತ್ರೆ ವೈದ್ಯ

ಗದಗ ಜಿಲ್ಲಾಸ್ಪತ್ರೆಯಲ್ಲಿ ದಿನನಿತ್ಯ 30ರಿಂದ 40 ರೋಗಿಗಳಿಗೆ ಸಿಟಿ ಸ್ಕ್ಯಾನ್ ಅವಶ್ಯಕತೆಯಿದ್ದು, ಅದರಲ್ಲಿ 10ರಿಂದ 15 ರೋಗಿಗಳಿಗೆ ಸಿಟಿ ಸ್ಕ್ಯಾನ್ ತುರ್ತಾಗಿ ಬೇಕಾಗುತ್ತಿತ್ತು. ಕಳೆದ 10 ವರ್ಷಗಳಿಂದ ಸಿಟಿ ಸ್ಕ್ಯಾನ್ ಪೂರೈಸುವಂತೆ ಮೇಲಧಿಕಾರಿಗಳಿಗೆ ಮನವಿ ಮಾಡಲಾಗಿತ್ತು. ವೈದ್ಯರ ಸಲಹೆ ಮೇರೆಗೆ ಶಸ್ತ್ರಚಿಕಿತ್ಸೆಗೊಳಪಡುವ ರೋಗಿಗಳಿಗೆ ಸಿಟಿ ಸ್ಕ್ಯಾನ್ ಸೌಲಭ್ಯ ಉಚಿತವಾಗಿ ದೊರೆಯಲಿದೆ.

|ಡಾ. ಜಿ.ಎಸ್. ಪಲ್ಲೇದ, ಜಿಲ್ಲಾಸ್ಪತ್ರೆ ಶಸ್ತ್ರಚಿಕಿತ್ಸಕ

Leave a Reply

Your email address will not be published. Required fields are marked *