ಜಿಲ್ಲಾಸ್ಪತ್ರೆಗೆ ರೋಗಿಗಳ ಮಹಾಪೂರ!

ಹಾವೇರಿ: ಜಿಲ್ಲೆಯಲ್ಲಿ ಪ್ರವಾಹ ತಗ್ಗಿ ವಾರ ಕಳೆದರೂ ನೆರೆ ಸಂತ್ರಸ್ತರ ಗೋಳು ಮಾತ್ರ ಹೆಚ್ಚುತ್ತಲೇ ಇದೆ. ನಗರದ ಜಿಲ್ಲಾಸ್ಪತ್ರೆಗೆ ಬರುವ ನೆರೆ ಸಂತ್ರಸ್ತ ರೋಗಿಗಳ ಸಂಖ್ಯೆ ದಿಢೀರನೆ ಹೆಚ್ಚಳವಾದ ಹಿನ್ನೆಲೆಯಲ್ಲಿ ರೋಗಿಗಳು ನೆಲಹಾಸಿನ ಮೇಲೆ ಹಾಕಿರುವ ಗಾದಿಯ ಮೇಲೆಯೇ ಮಲಗಿಕೊಂಡು ಚಿಕಿತ್ಸೆ ಪಡೆದುಕೊಳ್ಳುವ ಅನಿವಾರ್ಯತೆ ಎದುರಾಗಿದೆ.

400 ಬೆಡ್​ಗಳಿದ್ದರೂ ಸಾಲುತ್ತಿಲ್ಲ: ಜಿಲ್ಲಾಸ್ಪತ್ರೆಯಲ್ಲಿ 400 ಬೆಡ್​ಗಳ (ಮಂಚ ಹಾಗೂ ಹಾಸಿಗೆ ಸೇರಿ) ವ್ಯವಸ್ಥೆಯಿದೆ. ಈ ಹಿಂದೆ ದಿನಕ್ಕೆ 30ರಿಂದ 40 ಒಳ ರೋಗಿಗಳು ಬರುತ್ತಿದ್ದರು. ಹೀಗಾಗಿ, ಬೆಡ್​ಗಳಿಗೆ ಕೊರತೆ ಎದುರಾಗಿರಲಿಲ್ಲ. ಆದರೆ, ಜಿಲ್ಲೆಯಲ್ಲಿ ವರದಾ ನದಿಗೆ ಪ್ರವಾಹ ಉಂಟಾದ ಹಿನ್ನೆಲೆಯಲ್ಲಿ ಆಸ್ಪತ್ರೆಗೆ ದಾಖಲಾಗುವವರ ಸಂಖ್ಯೆ ದ್ವಿಗುಣಗೊಂಡಿದೆ.

ದಿನಕ್ಕೆ ಕನಿಷ್ಠವೆಂದರೂ 80ರಿಂದ 100ರಷ್ಟು ಒಳರೋಗಿಗಳು ದಾಖಲಾಗುತ್ತಿದ್ದಾರೆ. ಆದ್ದರಿಂದ ಆಸ್ಪತ್ರೆಯ ಬೆಡ್​ಗಳು ಭರ್ತಿಯಾಗಿವೆ. ಹೀಗಾಗಿ ಅನಿವಾರ್ಯ ಎಂಬಂತೆ ಅವಶ್ಯವಿರುವ ರೋಗಿಗಳಿಗೆ ಗಾದಿ, ಹಾಸಿಗೆ ನೀಡಿ ನೆಲಹಾಸಿನ ಮೇಲೆ ಮಲಗಿಸಿ ಚಿಕಿತ್ಸೆ ನೀಡಲಾಗುತ್ತಿದೆ.

ನೆರೆ ಸಂತ್ರಸ್ತರಿಗೆ ಆದ್ಯತೆ: ಜಿಲ್ಲೆಯ ಹಾನಗಲ್ಲ, ಶಿಗ್ಗಾಂವಿ, ಸವಣೂರ, ಹಾವೇರಿ, ಗುತ್ತಲ ಭಾಗದಲ್ಲಿ ಹೆಚ್ಚಿನ ಪ್ರವಾಹ ಉಂಟಾದ ಕಾರಣ ರೋಗಿಗಳ ಸಂಖ್ಯೆ ಅಧಿಕವಾಗಿದೆ. ಇದೀಗ ಪ್ರವಾಹ ಇಳಿಮುಖವಾದ ನಂತರ ಸಂತ್ರಸ್ತರಿಗೆ ನಾನಾ ರೋಗಗಳ ಭೀತಿ ಎದುರಾಗಿದೆ.

ನೆರೆ ಸಂತ್ರಸ್ತರಿಗೆ ಹೆಚ್ಚಿನ ಆದ್ಯತೆ ನೀಡಿ ಚಿಕಿತ್ಸೆ ನೀಡಲಾಗುತ್ತಿದೆ. ಆರೋಗ್ಯದಲ್ಲಿ ಸುಧಾರಣೆ ಕಂಡವರನ್ನು ಹಾಗೂ ಚಿಕ್ಕಪುಟ್ಟ ಸಮಸ್ಯೆ ಎದುರಾದವರಿಗೆ ತಕ್ಷಣಕ್ಕೆ ಚಿಕಿತ್ಸೆ ನೀಡಿ, ಒಂದು ದಿನದಲ್ಲಿ ವಾಪಸ್ ಕಳುಹಿಸಲಾಗುತ್ತಿದೆ.

ಆದರೆ, ರೋಗಿಗಳ ಸಂಖ್ಯೆ ಇನ್ನೂ ಅಧಿಕವಾಗುವ ಸಾಧ್ಯತೆಯಿದ್ದು, ಸಚಿವ ಬಸವರಾಜ ಬೊಮ್ಮಾಯಿ ಹಾಗೂ ಜಿಲ್ಲಾಡಳಿತ ಕೂಡಲೆ ಸೂಕ್ತ ಕ್ರಮ ಕೈಗೊಂಡು ಆಸ್ಪತ್ರೆಯಲ್ಲಿ ತಾತ್ಕಾಲಿಕವಾಗಿಯಾದರೂ ಹೆಚ್ಚಿನ ಬೆಡ್​ಗಳ ವ್ಯವಸ್ಥೆ ಕಲ್ಪಿಸಬೇಕು ಎಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.

ಆಸ್ಪತ್ರೆಗೆ ಬರುವ ರೋಗಿಗಳ ಸಂಖ್ಯೆ ಅಧಿಕವಾಗುತ್ತಿದೆ. ಸದ್ಯ ಗಾದಿ ಮೇಲೆ ಮಲಗಿಸಿ ಚಿಕಿತ್ಸೆ ನೀಡುತ್ತಿದ್ದಾರೆ. ಆದರೆ, ಕೆಳಗಡೆ ಮಲಗಿಕೊಂಡಾಗ ಮೇಲೆ ಏಳಲು ತೊಂದರೆಯಾಗುತ್ತದೆ. ಆದ್ದರಿಂದ ಆರೋಗ್ಯ ಇಲಾಖೆ ಹೆಚ್ಚಿನ ಬೆಡ್​ಗಳ ವ್ಯವಸ್ಥೆ ಮಾಡಬೇಕು.

| ಮಲ್ಲಪ್ಪ ಎಲ್. ನೆರೆ ಸಂತ್ರಸ್ತ

ಜಿಲ್ಲೆಯಲ್ಲಿ ಪ್ರವಾಹ ಎದುರಾದ ಹಿನ್ನೆಲೆಯಲ್ಲಿ ರೋಗಿಗಳ ಸಂಖ್ಯೆ ಅಧಿಕವಾಗಿದೆ. ಆದ್ದರಿಂದ ಬೇಡ್​ಗಳು ಸಾಲುತ್ತಿಲ್ಲ. ನೆರೆ ಸಂತ್ರಸ್ತರಿಗೆ ಹೆಚ್ಚಿನ ಆದ್ಯತೆ ನೀಡಿ ಚಿಕಿತ್ಸೆ ನೀಡಲಾಗುತ್ತಿದೆ. ಅನಿವಾರ್ಯಯಿದ್ದವರಿಗೆ ಬೆಡ್​ಗಳ ವ್ಯವಸ್ಥೆ ಮಾಡುತ್ತಿದ್ದೇವೆ. ಸ್ವಲ್ಪ ಪರವಾಗಿಲ್ಲ ಎನ್ನುವ ರೋಗಿಗಳಿಗೆ ಗಾದಿ, ಹಾಸಿಗೆ, ದಿಂಬು ನೀಡಿ ನೆಲಹಾಸಿನ ಮೇಲೆ ಮಲಗಿಸುತ್ತಿದ್ದೇವೆ. ಯಾವ ರೋಗಿಗಳಿಗೂ ತೊಂದರೆಯಾಗಿಲ್ಲ.

| ಡಾ. ನಾಗರಾಜ ನಾಯಕ ಜಿಲ್ಲಾಸ್ಪತ್ರೆಯ ಶಸ್ತ್ರಚಿಕಿತ್ಸಕ

ಚೇತರಿಸಿಕೊಂಡರೂ ಹೋಗಲು ಹಿಂದೇಟು: ನೆಗಡಿ, ಕೆಮ್ಮು, ಜ್ವರ ಎಂದು ಬರುವ ರೋಗಿಗಳಿಗೆ ಚಿಕಿತ್ಸೆ ನೀಡಿ ಮನೆಯಲ್ಲಿ ಆರಾಮ ತೆಗೆದುಕೊಳ್ಳಿ ಎಂದು ವಾಪಸ್ ಕಳುಹಿಸಲು ಮುಂದಾದರೂ ರೋಗಿಗಳು ಆಸ್ಪತ್ರೆ ಬಿಟ್ಟು ಹೋಗಲು ಹಿಂದೇಟು ಹಾಕುತ್ತಿದ್ದಾರೆ. ದಾಖಲಾಗಿರುವ ರೋಗಿಗಳ ಆರೋಗ್ಯದಲ್ಲಿ ಚೇತರಿಸಿಕೊಂಡವರನ್ನು ಬಿಡುಗಡೆಗೊಳಿಸಿದರೂ ‘ನನಗೆ ಇನ್ನೂ ಆರಾಮ ಆಗಿಲ’ ಎಂದು ನೆಪಮಾಡಿಕೊಂಡು ಬೆಡ್ ಬಿಟ್ಟು ಇಳಿಯುತ್ತಿಲ್ಲ ಎಂದು ವೈದ್ಯರು ಅಸಹಾಯಕತೆ ವ್ಯಕ್ತಪಡಿಸಿದ್ದಾರೆ.

Leave a Reply

Your email address will not be published. Required fields are marked *