ಗುಂಡ್ಲುಪೇಟೆ: ಮೂಲಸೌಕರ್ಯ ಕಲ್ಪಿಸದ ಹಿನ್ನೆಲೆಯಲ್ಲಿ ಮತದಾನ ಬಹಿಷ್ಕರಿಸಿದ್ದ ಚಿಕ್ಕೆಲಚೆಟ್ಟಿ ಗ್ರಾಮಕ್ಕೆ ಜಿಲ್ಲಾಧಿಕಾರಿಗಳು ಬುಧವಾರ ಮಧ್ಯಾಹ್ನ ಭೇಟಿ ನೀಡಿ ಗ್ರಾಮಸ್ಥರ ಮನವೊಲಿಸಿದರು.
ಬಂಡೀಪುರ ಹುಲಿ ಯೋಜನೆಯ ಕುಂದಕೆರೆ ವಲಯದ ಕಾಡಂಚಿನ ಚಿಕ್ಕೆಲಚೆಟ್ಟಿ ಗ್ರಾಮದಲ್ಲಿ ಸುಮಾರು 101 ಮತದಾರರಿದ್ದಾರೆ. ವನ್ಯಜೀವಿಗಳ ಹಾವಳಿ ತಡೆಗೆ ಕ್ರಮ, ಹದಗೆಟ್ಟ ರಸ್ತೆ ದುರಸ್ತಿ, ಕುಡಿಯುವ ನೀರು, ವಿದ್ಯುತ್ ಹಾಗೂ ಬಸ್ ಸೌಕರ್ಯ ಕಲ್ಪಿಸುವಂತೆ ಗ್ರಾಮಸ್ಥರು ಒತ್ತಾಯಿಸಿದ್ದರು. ಕಳೆದ ಲೋಕಸಭೆ ಹಾಗೂ ಗ್ರಾಮಪಂಚಾಯಿತಿ ಚುನಾವಣೆ ಸಂದರ್ಭದಲ್ಲಿಯೂ ತಮ್ಮ ಬೇಡಿಕೆಗಳ ಈಡೇರಿಕೆಗಾಗಿ ಮತದಾನ ಬಹಿಷ್ಕಾರಕ್ಕೆ ಮುಂದಾಗಿದ್ದರು. ಆದರೆ ಅಂದಿನ ಅಧಿಕಾರಿಗಳು ಕೆಲ ಸಮಸ್ಯೆಗಳಿಗೆ ತಾತ್ಕಾಲಿಕವಾಗಿ ಪರಿಹರಿಸಿ ಕೊಡಿಸುವ ಮೂಲಕ ಮನವೊಲಿಸಿ ಮತದಾನ ಮಾಡಿಸಿದ್ದರು. ಆದರೆ ಮೂಲಸಮಸ್ಯೆಗಳು ಬಗೆಹರಿಯದ ಹಿನ್ನೆಲೆಯಲ್ಲಿ ಬುಧವಾರ ಮತದಾನ ಬಹಿಷ್ಕರಿಸಿದರು.
ವಿಷಯ ತಿಳಿದ ಕೂಡಲೇ ಗ್ರಾಮಕ್ಕ್ಕೆ ಚುನಾವಣಾಧಿಕಾರಿ ಮಲ್ಲಿಕಾರ್ಜುನ, ಕುಂದಕೆರೆ ವಲಯದ ಆರ್‌ಎಫ್‌ಒ ಶ್ರೀ ನಿವಾಸನಾಯ್ಕ ಹಾಗೂ ಕಂದಾಯಾಧಿಕಾರಿಗಳು ತೆರಳಿ ಮನವೊಲಿಸಲು ಮುಂದಾದರೂ ಗ್ರಾಮಸ್ಥರು ಒಪ್ಪಲಿಲ್ಲ. ಸ್ವತಃ ಜಿಲ್ಲಾಧಿಕಾರಿಗಳೇ ಮೊಬೈಲ್ ಮೂಲಕ ಮಾತನಾಡಿದರೂ ಸಮಸ್ಯೆಗಳಿಗೆ ಪರಿಹಾರ ಸಿಗುವವರೆಗೂ ಮತ ಹಾಕುವುದಿಲ್ಲ ಎಂದು ಗ್ರಾಮಸ್ಥರು ಪಟ್ಟು ಹಿಡಿದು ಮತಗಟ್ಟೆಯಿಂದ ದೂರವುಳಿದ್ದರು.
ಮಧ್ಯಾಹ್ನದ ವೇಳೆಗೆ ಗ್ರಾಮಕ್ಕೆ ಜಿಲ್ಲಾಧಿಕಾರಿ ಡಾ.ರಮೇಶ್ ಅವರೇ ಭೇಟಿ ನೀಡಿ ಗ್ರಾಮಸ್ಥರ ಮನವೊಲಿಸಿದ ಹಿನ್ನೆಲೆಯಲ್ಲಿ 60 ಜನರು ಮತದಾನ ಮಾಡಿದ್ದಾರೆ ಎಂದು ಚುನಾವಣಾಧಿಕಾರಿ ತಿಳಿಸಿದ್ದಾರೆ.