ಬೆಳಗಾವಿ: ಅಕ್ರಮ ಕಲ್ಲು, ಮರಳು ಗಣಿಗಾರಿಕೆ, ಸಾಗಣೆ ತಡೆಗಟ್ಟಲು ಸಿಸಿಟಿವಿ ಒಳಗೊಂಡಿರುವ ಚೆಕ್‌ಪೋಸ್ಟ್ ಸ್ಥಾಪಿಸಲು ಮತ್ತು ಅಕ್ರಮದಾರರ ವಿರುದ್ಧ ಕ್ರಮ ಕೈಗೊಳ್ಳಲು ಜಿಲ್ಲಾಧಿಕಾರಿಗಳಿಗೆ ಮುಕ್ತ ಅವಕಾಶ ನೀಡಲಾಗಿದೆ ಎಂದು ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಸಚಿವ ಹಾಲಪ್ಪ ಆಚಾರ ಹೇಳಿದರು.
ಬೆಳಗಾವಿಯ ಸುವರ್ಣ ವಿಧಾನಸೌಧದಲ್ಲಿ ಶುಕ್ರವಾರ ಜರುಗಿದ ವಿವಿಧ ಇಲಾಖೆಗಳ ಪ್ರಗತಿ ಪರಿಶೀಲನೆ ಸಭೆ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು, ಅಕ್ರಮ ಕಲ್ಲು, ಮರಳು ಗಣಿಗಾರಿಕೆ ತಡೆಗಟ್ಟಲು ಗ್ರಾಮ ಮಟ್ಟದಿಂದಲೇ ಕಾರ್ಯಾಚರಣೆ ಆರಂಭಿಸಲಾಗುವುದು. ಪೊಲೀಸ್, ಕಂದಾಯ, ಗ್ರಾಪಂ ಸೇರಿ ವಿವಿಧ ಇಲಾಖೆಗಳ ಸಿಬ್ಬಂದಿ ಒಳಗೊಂಡಿರುವ ಚೆಕ್‌ಪೋಸ್ಟ್‌ಗಳನ್ನು ಹೆಚ್ಚಿನ ಸಂಖ್ಯೆಯಲ್ಲಿ ಸ್ಥಾಪನೆ ಮಾಡಲಾಗುವುದು. ಅದಕ್ಕಾಗಿ ಇಲಾಖೆಯಿಂದಲೇ ಅನುದಾನ ಬಿಡುಗಡೆ ಮಾಡಲಾಗುವುದು. ಕಲ್ಲು, ಮರಳು ಸಾಗಣೆ ಮಾಡುವ ವಾಹನಗಳ ಮೇಲೆ ತೀವ್ರ ನಿಗಾ ವಹಿಸಲಾಗುವುದು ಎಂದರು.
ನಿರ್ದಿಷ್ಟ ಪ್ರದೇಶದಲ್ಲಿ ಬಾಕ್ಸೈಟ್, ಸುಣ್ಣದ ಕಲ್ಲು, ಗ್ರೇ ಗ್ರಾನೈಟ್, ಕ್ರಷರ್, ಕಟ್ಟಡ ಕಲ್ಲು ಗಣಿಗಾರಿಕೆ ನಡೆಸಲು ಪರವಾನಗಿ ಪಡೆದುಕೊಂಡು ಅಕ್ರಮವಾಗಿ ಹೆಚ್ಚುವರಿ ಪ್ರದೇಶದಲ್ಲಿ ಗಣಿಗಾರಿಕೆ ನಡೆಸುತ್ತಿರುವ ವಿಷಯ ಗಮನಕ್ಕೆ ಬಂದಿದೆ. ಪರಿಶೀಲನೆ ನಡೆಸಿ ಕ್ರಮ ಜರುಗಿಸಲು ಜಿಲ್ಲಾಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ಅಕ್ರಮಕ್ಕೆ ಸಾಥ್ ನೀಡುವ ಅಧಿಕಾರಿಗಳ ವಿರುದ್ಧವೂ ಕ್ರಮ ಜರುಗಿಸಲಾಗುವುದು ಎಂದು ಹೇಳಿದರು.
ರಾಜ್ಯದಲ್ಲಿ 45 ಸಾವಿರ ದಶ ಲಕ್ಷ ಟನ್ ಮರಳು ಬೇಡಿಕೆ ಇದೆ. ಆದರೆ, 35 ಸಾವಿರ ದಶ ಲಕ್ಷ ಟನ್ ಮರಳು ಮಾತ್ರ ಲಭ್ಯವಿದೆ. ನೈಸರ್ಗಿಕ ಮರಳು ಬೇಡಿಕೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು, ನಮ್ಮಲ್ಲಿ 5 ದಶ ಲಕ್ಷ ಟನ್ ಮರಳು ಲಭ್ಯವಾಗಿದೆ. ಮರಳು ಅಭಾವ ತಪ್ಪಿಸುವ ಉದ್ದೇಶದಿಂದಲೇ ಎಂ-ಸ್ಯಾಂಡ್ ಮರಳಿಗೆ ಹೆಚ್ಚಿನ ಆದ್ಯತೆ ನೀಡಲಾಗುತ್ತಿದೆ. ಎಂ-ಸ್ಯಾಂಡ್ ಘಟಕಗಳ ಸ್ಥಾಪನೆಗೆ ಹೆಚ್ಚಿನ ಅವಕಾಶ ಕಲ್ಪಿಸಿಕೊಡಲಾಗುತ್ತಿದೆ ಎಂದರು.
ಗಣಿ ಮತ್ತು ಭೂ ವಿಜ್ಞಾನ ಇಲಾಖೆಯಲ್ಲಿ ಪಾರದರ್ಶಕತೆ ಕಾಪಾಡಲು ಹಲವು ಬದಲಾವಣೆಗಳನ್ನು ಮಾಡಿದ್ದರಿಂದ ನಿರೀಕ್ಷೆ ಮೀರಿ ರಾಜಸ್ವ ಸಂಗ್ರಹವಾಗಿದೆ. ವಾರ್ಷಿಕ 4,300 ಕೋಟಿ ರೂ. ರಾಜಸ್ವ ಗುರಿ ಹಾಕಿಕೊಳ್ಳಲಾಗಿತ್ತು. ಆದರೆ, 6,400 ಕೋಟಿ ರೂ. ರಾಜಸ್ವ ಸಂಗ್ರಹವಾಗಿದೆ. ಸರ್ಕಾರಕ್ಕೆ ಹೆಚ್ಚಿನ ಬರುವ 5 ಇಲಾಖೆಗಳಲ್ಲಿ ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಸೇರ್ಪಡೆಯಾಗಿದೆ ಎಂದು ವಿವರಿಸಿದರು. ವಿಧಾನ ಪರಿಷತ್ ಸದಸ್ಯ ಸಾಬಣ್ಣ ತಳವಾರ, ಜಿಲ್ಲಾಧಿಕಾರಿ ನಿತೇಶ ಪಾಟೀಲ, ಜಿಪಂ ಸಿಇಒ ದರ್ಶನ್ ಎಚ್.ವಿ ಇತರರು ಇದ್ದರು.
ಅನುದಾನ ವಿತರಣೆಗೆ ತಾಂತ್ರಿಕ ಸಮಸ್ಯೆ: ತಾಂತ್ರಿಕ ಸಮಸ್ಯೆಯಿಂದಾಗಿ ಅಂಗನವಾಡಿ ಕಾರ್ಯಕರ್ತೆ ಮತ್ತು ಸಹಾಯಕಿಯರ ಗೌರವಧನವನ್ನು ನಿಗದಿತ ಸಮಯದಲ್ಲಿ ಪಾವತಿಸಲು ವಿಳಂಬವಾಗಿದೆ. ಸರಿಪಡಿಸಿ ಗೌರವಧನ ಪಾತಿಸಲು ಸೂಚನೆ ನೀಡಲಾಗಿದೆ. ಅಂಗನವಾಡಿ ಕೇಂದ್ರಗಳಿಗೆ ನಿಗದಿತ ಸಮಯದಲ್ಲಿ ಕೋಳಿ ಮೊಟ್ಟೆ ವಿತರಣೆ ಮಾಡಲಾಗುವುದು. ರಾಜ್ಯದಲ್ಲಿ 1,000 ಅಂಗನವಾಡಿ ಕಟ್ಟಡ ನಿರ್ಮಿಸಲಾಗುವುದು. 586 ತೀವ್ರ ಅಪೌಷ್ಟಿಕ ಮಕ್ಕಳನ್ನು ಗುರುತಿಸಲಾಗಿದೆ. ಅದರಲ್ಲಿ 218 ಮಕ್ಕಳನ್ನು ಎನ್‌ಆರ್‌ಸಿ ಕೇಂದ್ರ ದಾಖಲಿಸಲಾಗಿದೆ ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಚಿವ ಹಾಲಪ್ಪ ಆಚಾರ ಹೇಳಿದರು.
ಕಾಂಗ್ರೆಸ್ ನಾಯಕರು ತಮ್ಮ ಸ್ವಾರ್ಥ, ರಾಜಕೀಯ ಲಾಭಕ್ಕಾಗಿ ಸಿದ್ದರಾಮೋತ್ಸವ ಮಾಡುತ್ತಿದ್ದಾರೆ ವಿನಃ ಜನರ ಕಲ್ಯಾಣಕ್ಕಾಗಿ ಅಲ್ಲ. ಕಾಂಗ್ರೆಸ್‌ನಲ್ಲಿಯೇ ಸಿದ್ದರಾಮೋತ್ಸವ ಕುರಿತು ಪರ-ವಿರೋಧ ಅಭಿಪ್ರಾಯ ವ್ಯಕ್ತವಾಗುತ್ತಿದೆ. ಜನರ ವಿಶ್ವಾಸ ಕಳೆದುಕೊಂಡಿರುವ ಕಾಂಗ್ರೆಸ್ ಯಾವತ್ತೂ ಅಧಿಕಾರಕ್ಕೆ ಬರುವುದಿಲ್ಲ.
| ಹಾಲಪ್ಪ ಆಚಾರ ಸಚಿವ