ಹಾವೇರಿ: ಜಿಲ್ಲೆಯಲ್ಲಿ ಈವರೆಗೂ ಕರೊನಾ ಸೋಂಕು ಪತ್ತೆಯಾಗಿಲ್ಲ. ಆದರೂ ಎಲ್ಲ ಮನೆಗಳಿಗೆ ಭೇಟಿ ನೀಡಿ ಆರೋಗ್ಯ ತಪಾಸಣೆ ನಡೆಸಿ ವರದಿ ತಯಾರಿಸಬೇಕು. ಈ ಕಾರ್ಯದಲ್ಲಿ ವೈದ್ಯಕೀಯ ಸಿಬ್ಬಂದಿ ಕಡ್ಡಾಯವಾಗಿ ಭಾಗವಹಿಸಬೇಕು. ಜತೆಗೆ ಆಶಾ, ಅಂಗನವಾಡಿ, ಕಂದಾಯ ಹಾಗೂ ಪೊಲೀಸ್ ಇಲಾಖೆಯ ಸಿಬ್ಬಂದಿ ಜತೆಗಿರಬೇಕು. ಜಿಪಂ ಸಿಇಒ, ಡಿಎಚ್ಒ ಉಸ್ತುವಾರಿ ವಹಿಸಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವ ಬಸವರಾಜ ಬೊಮ್ಮಾಯಿ ಸೂಚಿಸಿದರು.
ಕರೊನಾ ನಿಯಂತ್ರಣ ಕುರಿತು ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಶುಕ್ರವಾರ ಆಯೋಜಿಸಿದ್ದ ಅಧಿಕಾರಿಗಳ ಸಭೆಯಲ್ಲಿ ಅವರು ಮಾತನಾಡಿದರು. ಆರೋಗ್ಯ ಸಮೀಕ್ಷೆ ಸಂದರ್ಭದಲ್ಲಿ ಸ್ಟೆತಸ್ಕೋಪ್ ಬಳಸಿಯೇ ತಪಾಸಣೆ ನಡೆಸಬೇಕು. ಯಾವುದೇ ಕಾರಣಕ್ಕೂ ಸಮುದಾಯದ ಹಂತಕ್ಕೆ ಕರೊನಾ ಹರಡಬಾರದು. ಕೃಷಿ ಪ್ರಧಾನವಾಗಿರುವ ಜಿಲ್ಲೆಯಲ್ಲಿ ಸಮುದಾಯ ಹಂತಕ್ಕೆ ಕರೊನಾ ಹರಡಿದರೆ ನಿಯಂತ್ರಣ ಕಷ್ಟವಾಗಲಿದೆ. ಈಗಿನಿಂದಲೇ ಕಟ್ಟೆಚ್ಚರ ವಹಿಸಬೇಕು. ಕಾರ್ವಿುಕ ವರ್ಗಗಳಲ್ಲಿ ಅಪೌಷ್ಟಿಕತೆ ಅಂಶ ಹೆಚ್ಚಾಗಿರುತ್ತದೆ. ರೋಗ ನಿರೋಧಕ ಶಕ್ತಿ ಕಡಿಮೆ ಇರುವುದರಿಂದ ವೈಜ್ಞಾನಿಕ ಆರೋಗ್ಯ ತಪಾಸಣೆ ಮಹತ್ವದ್ದಾಗಿದೆ ಎಂದರು.
ವೈದ್ಯಕೀಯ ಕಾರಣ ಹೊರತು ಹೊರ ಜಿಲ್ಲೆಯ ಹಾಗೂ ಹೊರ ರಾಜ್ಯದ ಪ್ರಯಾಣಿಕರು ಜಿಲ್ಲಾ ಗಡಿಯೊಳಗೆ ಬರದಂತೆ ಕಠಿಣ ಕ್ರಮ ಕೈಗೊಳ್ಳಬೇಕು. ಚೆಕ್ಪೋಸ್ಟ್ಗಳಲ್ಲಿ ಕಡ್ಡಾಯವಾಗಿ ತಪಾಸಣೆ ನಡೆಸಿ, ಪಾಸ್ ಇಲ್ಲದೆ ಅನಗತ್ಯವಾಗಿ ಜಿಲ್ಲೆಯೊಳಗೆ ಪ್ರವೇಶಿಸುವವರ ವಾಹನಗಳನ್ನು ವಶಕ್ಕೆ ಪಡೆಯಿರಿ. ಹಿರಿಯ ಅಧಿಕಾರಿಗಳು ಜಿಲ್ಲಾದ್ಯಂತ ಪ್ರವಾಸ ಕೈಗೊಂಡು ಲಾಕ್ಡೌನ್ ವ್ಯವಸ್ಥೆ ಬಿಗಿಗೊಳಿಸಿ ಎಂದರು.
ಎಲ್ಲ ತಾಲೂಕು ಕೇಂದ್ರಗಳಲ್ಲಿ ಐದು ಹಾಸಿಗೆಗಳ ಚಿಕಿತ್ಸಾ ಸೌಲಭ್ಯ ಇರುವಂತೆ ವ್ಯವಸ್ಥೆ ಮಾಡಿಕೊಳ್ಳಬೇಕು. ಹೊರಗುತ್ತಿಗೆ ಆಧಾರದ ಮೇಲೆ ವೈದ್ಯಕೀಯ ಸಿಬ್ಬಂದಿಯನ್ನು ನೇಮಕಕ್ಕೆ ಅಗತ್ಯ ಕ್ರಮಕೈಗೊಳ್ಳಿ ಎಂದರು.
ಸರ್ಕಾರಿ ಸೇವೆಗೆ ಒಂದೆರಡು ಪೆಟ್ರೋಲ್ ಬಂಕ್ಗಳನ್ನು ಗುರುತಿಸಿಕೊಳ್ಳಿ, ಉಳಿದಂತೆ ಪಾಸ್ ಇದ್ದವರಿಗೆ ಮಾತ್ರ ಇಂಧನ ನೀಡಬೇಕು. ಅನಗತ್ಯವಾಗಿ ಓಡಾಡುವವರಿಗೆ ಇಂಧನ ಸಿಗದಂತೆ ನೋಡಿಕೊಳ್ಳಿ. ಪಡಿತರ ವಿತರಣೆಗೆ ಒಟಿಪಿಗಾಗಿ ಕಾಯಬೇಡಿ. ಸಹಿ ಮಾಡಿಸಿಕೊಂಡು ಎರಡು ತಿಂಗಳ ಪಡಿತರ ಧಾನ್ಯ ನೀಡಿ ಎಂದರು.
ಸಭೆಯಲ್ಲಿ ಜಿಪಂ ಅಧ್ಯಕ್ಷ ಬಸನಗೌಡ ದೇಸಾಯಿ, ಶಾಸಕರಾದ ನೆಹರು ಓಲೇಕಾರ, ವಿರೂಪಾಕ್ಷಪ್ಪ ಬಳ್ಳಾರಿ, ಅರುಣಕುಮಾರ ಪೂಜಾರ, ಜಿಪಂ ಸದಸ್ಯರಾದ ವಿರೂಪಾಕ್ಷಪ್ಪ ಕಡ್ಲಿ, ಸಿದ್ದರಾಜ ಕಲಕೋಟಿ, ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಶಿವಕುಮಾರ ಸಂಗೂರ, ಜಿಲ್ಲಾಧಿಕಾರಿ ಕೃಷ್ಣ ಬಾಜಪೈ, ಜಿಪಂ ಸಿಇಒ ರಮೇಶ ದೇಸಾಯಿ, ಎಸ್ಪಿ ಕೆ.ಜಿ. ದೇವರಾಜ್, ಅಪರ ಜಿಲ್ಲಾಧಿಕಾರಿ ಎಂ. ಯೋಗೇಶ್ವರ, ಎಎಸ್ಪಿ ಮಲ್ಲಿಕಾರ್ಜುನ ಬಾಲದಂಡಿ, ಉಪವಿಭಾಗಾಧಿಕಾರಿಗಳಾದ ಡಾ. ದಿಲೀಪ ಶಶಿ, ಅನ್ನಪೂರ್ಣ ಮುದಕಮ್ಮನವರ, ಡಿಎಚ್ಒ ಡಾ. ರಾಜೇಂದ್ರ ದೊಡ್ಡಮನಿ, ಜಿಲ್ಲಾ ಶಸ್ತ್ರಚಿಕಿತ್ಸಕ ಡಾ. ನಾಗರಾಜ ನಾಯಕ ಇತರರಿದ್ದರು.
ಜಿಲ್ಲೆಯಲ್ಲಿ ಲ್ಯಾಬ್ ಸ್ಥಾಪನೆಗೆ ಪ್ರಸ್ತಾವನೆ
ಜಿಲ್ಲೆಯಲ್ಲಿ ಕರೊನಾ ಟೆಸ್ಟಿಂಗ್ ಲ್ಯಾಬ್ ಸ್ಥಾಪನೆಗೆ ಪ್ರಸ್ತಾವನೆ ಸಲ್ಲಿಸಲು ಜಿಲ್ಲಾಡಳಿತಕ್ಕೆ ಸೂಚಿಸಲಾಗಿದೆ. ಜಿಲ್ಲೆಯ ಎಲ್ಲ ವಿಧಾನಸಭೆ ಕ್ಷೇತ್ರಗಳಿಗೂ ಕುಡಿಯುವ ನೀರಿನ ಸಮಸ್ಯೆ ಉಲ್ಬಣಿಸಿದರೆ ತುರ್ತು ಪರಿಹಾರಕ್ಕೆ ಟಾಸ್ಕ್ ಫೋರ್ಸ್ಗೆ 50 ಲಕ್ಷ ರೂ. ಅನುದಾನ ಬಿಡುಗಡೆಗೊಳಿಸಲಾಗಿದೆ. ಜಿಲ್ಲೆಯ ಬಡವರಿಗೆ ವಿತರಿಸಲು ಈಗಾಗಲೇ 5ಸಾವಿರ ಲೀಟರ್ ಹಾಲು ಬರುತ್ತಿದೆ. ಅದನ್ನು 10ಸಾವಿರ ಲೀಟರ್ಗೆ ಹೆಚ್ಚಿಸಲು ಶಾಸಕರು ಬೇಡಿಕೆಯಿಟ್ಟಿದ್ದಾರೆ. ಈ ಕುರಿತು ಸಿಎಂ ಜತೆ ರ್ಚಚಿಸಲಾಗುವುದು ಎಂದು ಸುದ್ದಿಗೋಷ್ಠಿಯಲ್ಲಿ ಬೊಮ್ಮಾಯಿ ತಿಳಿಸಿದರು.
ಕರೊನಾ ಚಿಕಿತ್ಸೆಗೆ ಜಿಲ್ಲಾಸ್ಪತ್ರೆಯಲ್ಲಿ 8 ವೆಂಟಿಲೇಟರ್, 20 ಬೆಡ್ಗಳು ಸಿದ್ಧವಿವೆ. ಹೆಚ್ಚುವರಿಯಾಗಿ 30 ಬೆಡ್ಗಳನ್ನು ಸಿದ್ಧಗೊಳಿಸಲಾಗುತ್ತಿದೆ. ಎಲ್ಲ ತಾಲೂಕು ಆಸ್ಪತ್ರೆಗಳಲ್ಲಿ ಕನಿಷ್ಠ 5 ವೆಂಟಿಲೇಟರ್ ವ್ಯವಸ್ಥೆಗೆ ಸೂಚಿಸಲಾಗಿದೆ. ಜಿಲ್ಲಾ ಮಟ್ಟದಲ್ಲಿ ಕಂಟ್ರೋಲ್ ರೂಂ. ಸ್ಥಾಪಿಸಲಾಗಿದೆ. ಅಲ್ಲಿ ವೈದ್ಯರು ಲಭ್ಯವಿದ್ದು, ಆರೋಗ್ಯ ಸಮಸ್ಯೆಗಳಿಗೂ ಸಾರ್ವಜನಿಕರು ಪರಿಹಾರ ಪಡೆದುಕೊಳ್ಳಬಹುದು ಎಂದರು.
ಜಿಲ್ಲೆಯಲ್ಲಿ ಈವರೆಗೂ ಕರೊನಾ ಸೋಂಕು ಪತ್ತೆಯಾಗಿಲ್ಲ. ಆದರೂ ಗರಿಷ್ಠ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಲು ಸೂಚಿಸಲಾಗಿದೆ. ಜಿಲ್ಲೆಗೆ ಹೊರಗಿನಿಂದ ಬರುವವರ ಮೇಲೆ ನಿಗಾ ಇಡಲು ಸೂಚಿಸಲಾಗಿದೆ. ಚೆಕ್ಪೋಸ್ಟ್ಗಳಲ್ಲಿ ಸಿಸಿ ಕ್ಯಾಮರಾ ಅಳವಡಿಸಲಾಗಿದೆ ಎಂದರು.
ಅಗತ್ಯ ವಸ್ತುಗಳ ಪಟ್ಟಿಯಲ್ಲಿರುವ ದಿನಸಿ ಹಾಗೂ ತರಕಾರಿ ಮಾರಾಟ ಮಾಡುವವರು ದರಪಟ್ಟಿಯನ್ನು ಕಡ್ಡಾಯವಾಗಿ ಅಳವಡಿಸಿಕೊಳ್ಳಬೇಕು. ಕೆಲ ವಸ್ತುಗಳ ಬೆಲೆಯನ್ನು ಏರಿಕೆ ಮಾಡಿ ಮಾರಾಟ ಮಾಡುತ್ತಿರುವ ದೂರುಗಳು ಬಂದಿದ್ದು, ಕೂಡಲೇ ಅಧಿಕಾರಿಗಳು ಕ್ರಮ ಕೈಗೊಳ್ಳಬೇಕು. ಒಂದೊಮ್ಮೆ ಹೆಚ್ಚಿನ ಬೆಲೆಗೆ ದಿನಸಿ, ತರಕಾರಿ ಮಾರಾಟದ ದೂರು ಬಂದರೆ ಕ್ರಮ ಕೈಗೊಳ್ಳಿ.
| ಬಸವರಾಜ ಬೊಮ್ಮಾಯಿ, ಗೃಹ ಸಚಿವ