ಸಿನಿಮಾ

ಜಿಲ್ಲಾದ್ಯಂತ ಸಂಭ್ರಮಾಚರಣೆ, ಪಟಾಕಿ ಸಿಡಿಸಲು ಇಲ್ಲ ಅನುಮತಿ:ನಿಷೇದಾಜ್ಞೆ ಜಾರಿ

ಹಾಸನ: ವಿಧಾನಸಭೆ ಚುನಾವಣಾ ಹಿನ್ನೆಲೆಯಲ್ಲಿ ಸಿಆರ್‌ಪಿ ಸೆಕ್ಷನ್ 144 ಅಡಿಯಲ್ಲಿ ಇಂದು ಮತ ಎಣಿಕೆ ನಡೆಯುವ ನಗರದ ಸರ್ಕಾರಿ ಇಂಜಿನಿಯರಿಂಗ್ ಕಾಲೇಜು ಸುತ್ತಮುತ್ತ 200 ಮೀಟರ್ ವ್ಯಾಪ್ತಿಯಲ್ಲಿ ನಿಷೇದಾಜ್ಞೆ ಜಾರಿಗೊಳಿಸಿ ಜಿಲ್ಲಾ ಚುನಾವಣಾಧಿಕಾರಿ ಹಾಗೂ ಜಿಲ್ಲಾಧಿಕಾರಿ ಎಂ.ಎಸ್ ಅರ್ಚನಾ ಅವರು ಆದೇಶಿಸಿದ್ದಾರೆ.
ಯಾವುದೇ ಆಯುಧ ಕುಡುಗೋಲು, ಖಡ್ಗ, ಭರ್ಜಿ, ಚೂರಿ, ದೊಣ್ಣೆ, ಲಾಠಿ ಅಥವಾ ದೈಹಿಕ ದಂಡನೆಗೆ ಕಾರಣವಾಗುವ ಅಥವಾ ಪೂರಕವಾಗುವ ಇನ್ಯಾವುದೇ ವಸ್ತುಗಳನ್ನು ಹೊಂದುವುದನ್ನು ಮತ್ತು ಸಾಗಣೆ ಮಾಡುವುದನ್ನು ನಿಷೇಧಿಸಿದೆ. ಈ ಆದೇಶವು ಯಾವುದೇ ಕಾರ್ಯಕ್ರಮ, ಸಭೆ- ಸಮಾರಂಭಗಳಿಗೆ ಮತ್ತು ಆರಕ್ಷಕ ಸಿಬ್ಬಂದಿ ಕಾರ್ಯನಿರ್ವಹಣೆ ವೇಳೆ ಲಾಟಿಗಳನ್ನು ಉಪಯೋಗಿಸುವುದಕ್ಕೆ ಅನ್ವಯಿಸುವುದಿಲ್ಲ. ಹಾಗೂ ಚುನಾವಣಾ ಕರ್ತವ್ಯದಲ್ಲಿ ನಿರತರಾಗಿರುವ ಸಿಬ್ಬಂದಿ ಅವರ ಚುನಾವಣಾ ಕರ್ತವ್ಯ ನಿರ್ವಹಿಸುವ ಸ್ಥಳಕ್ಕೆ ಅನ್ವಯಿಸುವುದಿಲ್ಲ ಎಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ.

ಮತ ಎಣಿಕೆಗೆ ಪೊಲೀಸರ ಸರ್ಪಗಾವಲು
ಮತ ಎಣಿಕೆಗೆ ಸುಮಾರು 600 ಜನ ಅಧಿಕಾರಿಗಳು ಮತ್ತು ಸಿಬ್ಬಂದಿ ಬಳಸಿಕೊಳ್ಳಲಾಗಿದೆ. ಇದಲ್ಲದೆ ಭದ್ರತೆಗಾಗಿ 800 ಪೊಲೀಸ್ ಸಿಬ್ಬಂದಿ ನೇಮಕ ಮಾಡಲಾಗಿದೆ. ಇದರಲ್ಲಿ 200ರಿಂದ 250 ಕಾಲೇಜಿನ ಒಳಾಂಗಣದಲ್ಲಿ ಭದ್ರತೆಗಾಗಿ ಬಳಸಿಕೊಳ್ಳಲಾಗುವುದು. ಉಳಿದ 400 ರಿಂದ 450 ಮಂದಿಯನ್ನು ಕಾಲೇಜಿನ ಹೊರ ಭಾಗಕ್ಕೆ ನಿಯೋಜಿಸಲಾಗಿದೆ. ಇದರ ಜತೆಗೆ ಸಿಆರ್‌ಪಿಎಫ್ ಸೇರಿದಂತೆ ಅರೆ ಸೇನಾ ಪಡೆಗಳನ್ನು ಬಳಸಿಕೊಳ್ಳಲಾಗಿದೆ ಎಂದು ಮಾಹಿತಿ ನೀಡಿದರು.

ಇಂದು ಮದ್ಯ ನಿಷೇಧ
ಶಾಂತಿಯುತವಾಗಿ ಮತ ಎಣಿಕೆ ಕಾರ್ಯ ನಡೆಸುವ ಉದ್ದೇಶದಿಂದ ಮತ್ತು ಜಿಲ್ಲೆಯಲ್ಲಿ ಯಾವುದೇ ರೀತಿ ಅಹಿತಕರ ಘಟನೆ ನಡೆಯದಂತೆ ಮುಂಜಾಗ್ರತ ಕ್ರಮವಾಗಿ ಇಂದು ಬೆಳಗ್ಗೆ 6 ಗಂಟೆಯಿಂದ ನಾಳೆ ಬೆಳಗ್ಗೆ 6 ಗಂಟೆಯವರೆಗೆ ಜಿಲ್ಲೆಯಾದ್ಯಂತ ಮದ್ಯ ಮಾರಾಟ ನಿಷೇಧಿಸಿ ಜಿಲ್ಲಾಧಿಕಾರಿ ಎಂ.ಎಸ್. ಅರ್ಚನಾ ಅವರು ಆದೇಶ ಹೊರಡಿಸಿದ್ದಾರೆ.

ಜಿಲ್ಲಾದ್ಯಂತ ಸಂಭ್ರಮಾಚರಣೆಗೆ ನಿರ್ಬಂಧ
ಚುನಾವಣೆಯಲ್ಲಿ ವಿಜೇತರಾದ ಅಭ್ಯರ್ಥಿಗಳು ಪಟಾಕಿ ಸಿಡಿಸಿ ಸಂಭ್ರಮಾಚರಣೆಗೆ ನಿರ್ಬಂಧ ವಿಧಿಸಿ ಜಿಲ್ಲಾದ್ಯಂತ ನಿಷೇದಾಜ್ಞೆ ಜಾರಿ ಮಾಡಲಾಗಿದೆ. ಚುನಾವಣೆಯಲ್ಲಿ ಗೆದ್ದ ಅಭ್ಯರ್ಥಿಗಳು ವಿಜಯೋತ್ಸವ ಸಲುವಾಗಿ ಪಟಾಕಿ ಸಿಡಿಸಿ, ಮೆರವಣಿಗೆ ಮೂಲಕ ಘೋಷಣೆ ಕೂಗುವ ಸಾಧ್ಯತೆಗಳಿವೆ. ಇದರಿಂದಾಗಿ ಪರಾಭವಗೊಂಡ ಅಭ್ಯರ್ಥಿಗಳ ಬೆಂಬಲಿಗರು ಹಾಗೂ ವಿಜೇತ ಅಭ್ಯರ್ಥಿಗಳ ಕಾರ್ಯಕರ್ತರಿಗೂ ನಡುವೆ ವೈಮನಸ್ಸಿಗೆ ಕಾರಣವಾಗಿ ಗಲಾಟೆಯಾಗುವ ಸಂಭವವಿದೆ. ಹೀಗಾಗಿ ಶನಿವಾರ ಬೆಳಿಗ್ಗೆ 6 ಗಂಟೆಯಿಂದ ಭಾನುವಾರ ಬೆಳಿಗ್ಗೆ 6 ಗಂಟೆಯವರೆಗೆ ಮುಂಜಾಗ್ರತಾ ಕ್ರಮವಾಗಿ ಜಿಲ್ಲೆಯಲ್ಲಿ ಸಂಭ್ರಮಾಚರಣೆಗೆ ನಿಷೇಧ ಹೇರಲಾಗಿದೆ.
ಗೆದ್ದ ಅಭ್ಯರ್ಥಿಗಳ ಪರವಾಗಿ ಬಹಿರಂಗ ಸಾರ್ವಜನಿಕ ಸಭೆ ಸಮಾರಂಭ, ಮೆರವಣಿಗೆ ನಡೆಸುವುದು, 5 ಜನರಿಗಿಂತ ಹೆಚ್ಚು ಜನರು ಗುಂಪಾಗಿ ಸೇರುವುದು, ಆಯುಧ ಹಾಗೂ ಮಾರಕಾಸ್ತ್ರಗಳನ್ನು ಹಿಡಿದು ಓಡಾಡುವುದು ಹಾಗೂ ಯಾವುದೇ ರೀತಿಯ ಪ್ರಚಾರ ಸಾಮಗ್ರಿಗಳನ್ನು ಹಿಡಿದುಕೊಂಡು ಘೋಷಣೆ ಕೂಗಲು ಅವಕಾಶವಿರುವುದಿಲ್ಲ. ವಾಹನಗಳಿಗೆ ಧ್ವನಿವರ್ಧಕ ಬಳಸಲು ಅವಕಾಶವಿರುವುದಿಲ್ಲ, ಪಟಾಕಿ ಸಿಡಿಸುವುದನ್ನು ನಿರ್ಬಂಧಿಸಲಾಗಿದೆ. ಆದರೆ ಈ ನಿಷೇದಾಜ್ಞೆಯು ಮದುವೆ, ಮುಂಜಿ, ಶವಸಂಸ್ಕಾರ, ಇತರೆ ಕಾರ್ಯಕ್ರಮಗಳಿಗೆ, ಸರ್ಕಾರದಿಂದ ನಡೆಸಲ್ಪಡುವ ಯಾವುದೇ ಕಾರ್ಯಕ್ರಮಗಳಿಗೆ ಅನ್ವಯಿಸುವುದಿಲ್ಲ ಎಂದು ಜಿಲ್ಲಾಧಿಕಾರಿತಿಳಿಸಿದ್ದಾರೆ.

Latest Posts

ಲೈಫ್‌ಸ್ಟೈಲ್