ಜಿಲ್ಲಾದ್ಯಂತ ಶ್ರದ್ಧಾಭಕ್ತಿಯ ತುಳಸಿ ಕಲ್ಯಾಣೋತ್ಸವ

blank

ಚಿತ್ರದುರ್ಗ: ಬೆಳಕಿನ ಹಬ್ಬ ದೀಪಾವಳಿ ಬಳಿಕ ಆರಂಭವಾಗುವ ಕಾರ್ತಿಕ ಮಾಸದಲ್ಲಿ ದೀಪಾರಾಧನೆ ಅತ್ಯಂತ ವಿಶೇಷ. ಈ ಅವಧಿಯಲ್ಲಿ ಲಕ್ಷ ದೀಪೋತ್ಸವ, ಇತರೆ ಉತ್ಸವಗಳು ಜರುಗಲಿದ್ದು, ಅದೇ ರೀತಿ ನಗರ ಸೇರಿ ಜಿಲ್ಲಾದ್ಯಂತ ಮಹಿಳೆಯರು ಶ್ರದ್ಧಾಭಕ್ತಿಯಿಂದ ಬುಧವಾರ ತುಳಸಿ ಮಾತೆಯ ಕಲ್ಯಾಣೋತ್ಸವವನ್ನು ಸಂಭ್ರಮದಿಂದ ಆಚರಿಸಿದರು.

ಹಿಂದು ಪರಂಪರೆ ಅನ್ವಯ ಸ್ತ್ರೀಯರು ಕುಟುಂಬದ ಒಳಿತಿಗಾಗಿ, ಮಕ್ಕಳ ಆರೋಗ್ಯಕ್ಕಾಗಿ ನಿತ್ಯ ತುಳಸಿ ಗಿಡವನ್ನು ಪೂಜಿಸುತ್ತಾರೆ. ಆದರೆ, ಈ ಮಾಸದ ಶುಕ್ಲಪಕ್ಷ ದ್ವಾದಶಿಯಂದು ಮಹಾವಿಷ್ಣುವಿಗೆ ಷೋಡಶೋಪಚಾರಗಳೊಂದಿಗೆ ವಿಶೇಷ ಪೂಜೆ ಅರ್ಪಿಸಿ, ತುಳಸಿ ಹಬ್ಬವನ್ನು ವ್ರತಾಚರಣೆಯೊಂದಿಗೆ ಮಡಿಯಿಂದ ವಿಶೇಷವಾಗಿ ಆಚರಿಸಿ, ಭಕ್ತಿಯ ಪರಾಕಾಷ್ಠೆಯಲ್ಲಿ ಮಿಂದೆದ್ದರು.

ಕಿರು ದೀಪಾವಳಿ ಎಂಬ ಹೆಸರಿನಿಂದಲೂ ಈ ಹಬ್ಬ ಈಗಲೂ ಪ್ರಚಲಿತದಲ್ಲಿದ್ದು, ಅನೇಕರು ಮನೆಗಳ ಮುಂಭಾಗದ ತುಳಸಿ ಗಿಡಗಳ ಕಟ್ಟೆಯನ್ನು ಮೊದಲು ಶುಚಿಗೊಳಿಸಿದರು. ಅದರ ಎದುರು ವರ್ಣಮಯ ರಂಗೋಲಿಗಳ ಚಿತ್ತಾರ ಮೂಡಿಸಿದರು.

ತುಳಸಿ-ಧಾತ್ರಿಯೊಂದಿಗೆ (ಬೆಟ್ಟದ ನಲ್ಲಿಕಾಯಿ) ಗಿಡವನ್ನು ಜತೆಗೂಡಿಸಿ, ಶುಭ್ರ ಸೀರೆ-ರವಿಕೆ ಹೊದಿಸುವುದರ ಜತೆ ವಿವಿಧ ಪುಷ್ಪಗಳಿಂದ ವೈವಿಧ್ಯಮಯವಾಗಿ ಅಲಂಕರಿಸಿದ್ದರು. ಸಂಧ್ಯಾಕಾಲ ಸಮೀಪಿಸುತ್ತಿದ್ದಂತೆ ಸುತ್ತಲೂ ದೀಪಗಳನ್ನು ಸಾಲಾಗಿ ಇಟ್ಟು ಪೂಜಿಸಿದ್ದರು.

ಸಿಹಿ ತಿನಿಸು, ಅವಲಕ್ಕಿ ಸೇರಿ ತರಹೇವಾರಿ ಖಾದ್ಯಗಳನ್ನು ಎಡೆಯಾಗಿ ಸಮರ್ಪಿಸಲಾಯಿತು. ವಿವಿಧ ಬಗೆಯ ಹಣ್ಣುಗಳನ್ನು ಇಡಲಾಗಿತ್ತು. ಅಕ್ಕಪಕ್ಕದ ಮನೆಗಳ ಸ್ತ್ರೀಯರನ್ನು ಪೂಜೆಗೆ ಆಹ್ವಾನಿಸಿ ಉಡಿ ತುಂಬುವ ಮೂಲಕ ಪರಸ್ಪರ ಶುಭಾಶಯ ವಿನಿಮಯ ಮಾಡಿಕೊಂಡರು.

ಶ್ರೀಮನ್ನಾರಾಯಣ ಸಮೇತ ಮಹಾಲಕ್ಷ್ಮೀ ದೇವಿಯನ್ನು ಕೂಡ ಶ್ರದ್ಧೆಯಿಂದ ಪೂಜಿಸಲಾಯಿತು. ಹಲವು ದೇಗುಲಗಳಲ್ಲೂ ತುಳಸಿ ಕಲ್ಯಾಣೋತ್ಸವದ ಪೂಜಾ ಸೇವೆಗಳು ಜರುಗಿದವು. ಹಬ್ಬದ ಅಂಗವಾಗಿ ನಲ್ಲಿಕಾಯಿ ಗಿಡಕ್ಕೆ ಮಾರುಕಟ್ಟೆಗಳಲ್ಲಿ ಬೇಡಿಕೆ ಹೆಚ್ಚಿತ್ತು. ಹೂಗಳ ಖರೀದಿ ಭರಾಟೆಯೂ ಜೋರಾಗಿತ್ತು.

ವರ್ಷದಿಂದ ವರ್ಷಕ್ಕೆ ಮೆರುಗು: ತುಳಸಿಗೆ ಅಭಿಮುಖವಾಗಿ ಶ್ರೀಕೃಷ್ಣನ ಮೂರ್ತಿಯನ್ನು ಕೆಲವರು ಪ್ರತಿಷ್ಠಾಪಿಸಿ ಆರಾಧನೆಯಲ್ಲಿ ತೊಡಗಿದ್ದರು. ಮಹಾವಿಷ್ಣು ಯೋಗ ನಿದ್ರೆಯಿಂದ ಎದ್ದು ಭಕ್ತರಿಗೆ ದರ್ಶನ ನೀಡಿದ ಸುದಿನ. ಅಲ್ಲದೆ, ತುಳಸಿ ಮಾತೆಯ ವಿವಾಹದ ದಿನ ಎಂಬ ನಂಬಿಕೆ ಹಲವರಲ್ಲಿದೆ. ಹೀಗಾಗಿ ಆಚರಣೆ ಕೋಟೆನಾಡಲ್ಲೂ ವರ್ಷದಿಂದ ವರ್ಷಕ್ಕೆ ಮೆರುಗು ಪಡೆಯುತ್ತಿದೆ. ಮಂಗಳವಾರ ಕೂಡ ಹಲವೆಡೆ ಹಬ್ಬವನ್ನು ಸಡಗರದಿಂದ ಆಚರಿಸಲಾಯಿತು.

Share This Article

Alcohol In Winter: ಚಳಿಯಲ್ಲಿ ಮದ್ಯ ಸೇವನೆ ಎಷ್ಟು ಅಪಾಯಕಾರಿ ಗೊತ್ತಾ?

Alcohol In Winter: ಚಳಿಗಾಲ ಆರಂಭವಾಗಿದೆ ಮತ್ತು ತಾಪಮಾನವು ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಇದಲ್ಲದೆ, ಜ್ವರ…

ಚಳಿಗಾಲದಲ್ಲಿ ಸೀಬೆಹಣ್ಣನ್ನು ಹೇಗೆ ತಿಂದರೆ ಆರೋಗ್ಯಕ್ಕೆ ಪ್ರಯೋಜನಕಾರಿ; ಇಲ್ಲಿದೆ ಉಪಯುಕ್ತ ಮಾಹಿತಿ | Health Tips

ಸೀಬೆಹಣ್ಣು ತಿನ್ನುವುದರಿಂದ ಅನೇಕ ರೋಗಗಳನ್ನು ಗುಣಪಡಿಸಬಹುದು. ತಲೆಯಿಂದ ಕಾಲ್ಬೆರಳು ಉಗುರುಗಳವರೆಗೆ ಆರೋಗ್ಯಕರವಾಗಿರಲು ಇದು ಕಿತ್ತಳೆಗಿಂತ ಹೆಚ್ಚು…

ಕಾಂತಿಯುತ ತ್ವಚೆ ನಿಮ್ಮದಾಗಬೇಕೇ?; ಮಲಗುವ ಮುನ್ನ ಈ ಟಿಪ್ಸ್​ ಫಾಲೋ ಮಾಡಿ | Health Tips

ಸುಂದರ, ಆಕರ್ಷಣಿಯ ಮತ್ತು ಹೊಳೆಯುವ ಚರ್ಮವನ್ನು ಪಡೆಯಲು ಹಗಲಿನಲ್ಲಿ ಮಾತ್ರವಲ್ಲ ರಾತ್ರಿ ವೇಳೆಯು ಚರ್ಮದ ಕಾಳಜಿ…