ಚಿತ್ರದುರ್ಗ: ಬಾನು ಕೆಂಪೇರಿತು, ಸೂರ್ಯಾಸ್ತವೂ ಸಮೀಪಿಸಿತು, ಕತ್ತಲು ಆವರಿಸಿತು. ಈ ಮಧುರ ಕ್ಷಣಕ್ಕಾಗಿ ಕಾತರದಿಂದ ಕಾಯುತ್ತಿದ್ದವರ ಮನಗಳಲ್ಲಿ ಸಂತಸದ ಛಾಯೆಯೂ ಮೂಡಿತು. ಯುವತಿಯರು, ಚಿಣ್ಣರು ಸಾಲು ಸಾಲಾಗಿ ಹಚ್ಚಿದ ನೂರಾರು ಹಣತೆಗಳು ಮನೆಯಂಗಳ ಬೆಳಗಿತು. ದೀಪೋತ್ಸವದ ಮೂಲಕ ದೀಪಾವಳಿ ಸಡಗರ ನಗರ ಸೇರಿ ಜಿಲ್ಲಾದ್ಯಂತ ವೈಭವಕ್ಕೆ ಸಾಕ್ಷಿಯಾಯಿತು…
ಬಲೀಂದ್ರ ಪೂಜೆಯಂದು ದೀಪಾವಳಿ ಆಚರಿಸುವವರ ಸಂಖ್ಯೆ ಹೆಚ್ಚಾದ್ದರಿಂದಾಗಿ ಶನಿವಾರ ಇನ್ನಷ್ಟು ಕಳೆಗಟ್ಟಿತು. ಸಂತೋಷ, ಸಂಭ್ರಮ ಹಲವೆಡೆ ಮನೆಮಾಡಿತು. ಕುಟುಂಬ ಸಮೇತ ಒಟ್ಟಾಗಿ ಸೇರಿ ಆಚರಿಸಿ, ಬೆಳಕಿನ ಹಬ್ಬದಲ್ಲಿ ಬಹುತೇಕರು ಮಿಂದೆದ್ದರು.
ರೇಷ್ಮೆ ಸೀರೆ ಸೇರಿ ವೈವಿಧ್ಯಮಯ ವಸ್ತ್ರ ಧರಿಸಿದ್ದ ನೀರೆಯರು ಆಕಾಶದಲ್ಲಿ ಮಿನುಗುವ ನಕ್ಷತ್ರದಂತೆ ಕಂಗೊಳಿಸಿದರು. ಮನೆಗಳಲ್ಲಿ ಪೂಜೆಗೆ ಮಂಟಪ ನಿರ್ಮಿಸಿ ಕಳಸ ಸ್ಥಾಪಿಸಿದರು. ದ್ವಾರ ಹಾಗೂ ದೇವರ ಬಾಗಿಲುಗಳಿಗೆ ಬಾಳೆಕಂದು, ಮಾವಿನ ತೋರಣ ಕಟ್ಟಿ, ಪುಷ್ಪಗಳೊಂದಿಗೆ ಸಿಂಗರಿಸಿದ್ದರು.
ಸಂಜೆ 6ರಿಂದ ರಾತ್ರಿ 11ರವರೆಗೂ ಯುವಸಮೂಹ, ಚಿಣ್ಣರು ಪಟಾಕಿಗಳನ್ನು ಹಚ್ಚಲು ಉತ್ಸುಕರಾದರು. ಮನೆಯ ಮುಂಭಾಗ, ಖಾಲಿ ಜಾಗಗಳಲ್ಲಿ ಸುರ್ ಸುರ್ ಬತ್ತಿ, ಭೂಚಕ್ರ, ಮಸಿ ಕುಡಿಕೆ ಹಚ್ಚಿ ಸಂಭ್ರಮಿಸಿದರು. ಶಬ್ದಸಹಿತವಾದವು ಹೆಚ್ಚಾಗಿ ಗಮನ ಸೆಳೆದವು. ಹಲವು ಬಗೆಯ ಪಟಾಕಿಗಳು ಕತ್ತಲೆಯಲ್ಲಿ ವರ್ಣರಂಜಿತ ಬೆಳಕಿನ ಚಿತ್ತಾರ ಮೂಡಿಸಿ ಮಕ್ಕಳನ್ನು ಆಕರ್ಷಿಸಿದವು.
ಮುಖ್ಯ ರಸ್ತೆ ಮಾರ್ಗದ ಬಹುತೇಕ ಅಂಗಡಿ, ಮುಂಗಟ್ಟುಗಳು ವಿದ್ಯುತ್ ದೀಪ, ಪುಷ್ಪಾಲಂಕಾರದಿಂದ ಕಂಗೊಳಿಸಿದವು. ಮನೆಯ ಮುಂಭಾಗದಲ್ಲಿ ಆಕಾಶ ಬುಟ್ಟಿಗಳು ರಾರಾಜಿಸಿದವು. ವಿವಿಧ ವರ್ಣದ ದೀಪ ಮತ್ತು ರಂಗೋಲಿಗಳು ಕಣ್ಣಿಗೆ ಆನಂದವನ್ನುಂಟು ಮಾಡಿ ಕಣ್ಮನ ಸೆಳೆದವು. ಬೆಳಕಿನ ಮೋಡಿಯೂ ಕಿರಿಯರಿಂದ ಹಿರಿಯರ ಮೊಗವನ್ನು ಅರಳಿಸಿತು.
ಲಕ್ಷ್ಮೀ, ಹಿರಿಯರ ಪೂಜೆ ವಿಶೇಷ: ಲಕ್ಷ್ಮೀದೇವಿ, ಕುಲದೇವತೆ, ಹಿರಿಯರ ಪೂಜೆಗಾಗಿ ನೈವೇದ್ಯ ಸಮರ್ಪಿಸಲು ಮಹಿಳೆಯರು ತರಹೇವಾರಿ ಖಾದ್ಯ ತಯಾರಿಸಿದ್ದರು. ಇನ್ನು ಹಿರಿಯರು, ಯುವಕರು ಸಗಣಿಯಲ್ಲಿ ಗಣಪತಿ, ಹಟ್ಟಿ ಲಕ್ಕಮ್ಮ, ಗೊಲ್ಲಮ್ಮ ದೇವಿ ಮೂರ್ತಿ ನಿರ್ಮಿಸಿ, ಕಾಚಿಕಡ್ಡಿ, ಬ್ರಹ್ಮದಂಡೆ ಗಿಡ, ತಂಗಟೆ ಹೂಗಳೊಂದಿಗೆ ಮನೆಯಲ್ಲಿರುವ ಬಾಗಿಲುಗಳ ಎರಡೂ ಬದಿಗಳಲ್ಲಿಟ್ಟು, ದೇವರಿಗೆ ಹೂ, ಹಣ್ಣುಗಳ ಸಮರ್ಪಣೆಯೊಂದಿಗೆ ಪೂಜೆ ನೆರವೇರಿಸಿದರು.
ಗೋವುಗಳಿಗೆ ಪೂಜೆ: ನಗರ ಸೇರಿ ಗ್ರಾಮೀಣ ಭಾಗಗಳಲ್ಲಿ ಗೋವುಗಳನ್ನು ಸಿಂಗರಿಸಿ, ಪೂಜಿಸಲಾಯಿತು. ಲಂಬಾಣಿ ತಾಂಡಗಳಲ್ಲೂ ಸಮುದಾಯ ವಿಶೇಷವಾಗಿ ದೀಪಾವಳಿ ಆಚರಿಸಿ, ಸಂಭ್ರಮಿಸಿದರು.
ದೇವಿರಮ್ಮ ದೇವಿಗೆ ತುಪ್ಪದಾರತಿ: ಚಿಕ್ಕಮಗಳೂರು ಜಿಲ್ಲೆ ಚಂದ್ರದ್ರೋಣ ಪರ್ವತ ಶ್ರೇಣಿಯ ಬಿಂಡಿಗ ಮಲ್ಲೇನಹಳ್ಳಿಯ ಶಕ್ತಿದೇವತೆ ದೇವಿರಮ್ಮ ದೇವಿಯನ್ನು ಕೋಟೆನಾಡಿನಲ್ಲೂ ಆರಾಧಿಸುವವರ ಸಂಖ್ಯೆ ಹೆಚ್ಚು. ಹೀಗಾಗಿ ಅನೇಕ ಭಕ್ತರು ಪರ್ವತದ ದೇಗುಲ ದಿಕ್ಕಿನೆಡೆಗೆ ತಿರುಗಿ ಇಲ್ಲಿಂದಲೇ ತುಪ್ಪದ ದೀಪದಿಂದ ಮಹಾಮಂಗಳಾರತಿ ಸಮರ್ಪಿಸಿದರು. ಮಕ್ಕಳ ಆರೋಗ್ಯ ದೇವಿ ರಕ್ಷಿಸುತ್ತಾಳೆಂಬ ನಂಬಿಕೆಯೊಂದಿಗೆ ಪೂಜೆ ಸಲ್ಲಿಸುವ ಪ್ರತೀತಿ ಶತಮಾನಗಳಿಂದಲೂ ಮುಂದುವರಿದಿದೆ.
ದೇಗುಲಗಳಲ್ಲಿ ದೀಪಾರಾಧನೆ ಆರಂಭ: ಬಲಿಪಾಡ್ಯಮಿಯೊಂದಿಗೆ ಕಾರ್ತಿಕ ಮಾಸ ಆರಂಭವಾಗಿದ್ದು, ಹಲವು ದೇಗುಲಗಳಲ್ಲೂ ಸಂಭ್ರಮದ ವಾತಾವರಣ ನಿರ್ಮಾಣವಾಗಿತ್ತು. ಸಾವಿರಾರು ಭಕ್ತರು ಭೇಟಿ ನೀಡಿ ಪೂಜೆ, ಪ್ರಾರ್ಥನೆ ಸಲ್ಲಿಸಿದರು. ಮಾಸ ಮುಕ್ತಾಯ ಆಗುವುದರೊಳಗೆ ಒಂದು ದಿನ ಕಾರ್ತಿಕೋತ್ಸವ ಆಚರಿಸಿ, ದೇವರನ್ನು ಶ್ರದ್ಧಾಭಕ್ತಿಯಿಂದ ಪೂಜಿಸಲಿದ್ದು, ದೀಪಾರಾಧನೆ ಆರಂಭವಾಗಿದೆ.