ಜಿಲ್ಲಾದ್ಯಂತ ಬಿಜೆಪಿ ಪ್ರತಿಭಟನೆ

ಶಿವಮೊಗ್ಗ: ರಾಜ್ಯದ ಸಮ್ಮಿಶ್ರ ಸರ್ಕಾರ ಮಾಧ್ಯಮ ಸೇರಿ ರಾಜಕೀಯ ಎದುರಾಳಿಗಳನ್ನು ಹತ್ತಿಕ್ಕಲು ಸೇಡಿನ ರಾಜಕಾರಣ ಮಾಡುತ್ತಿದೆ ಎಂದು ಆರೋಪಿಸಿ ಶಿವಮೊಗ್ಗ ನಗರ, ತಾಲೂಕು ಬಿಜೆಪಿ ಕಾರ್ಯಕರ್ತರು ಸೋಮವಾರ ಡಿಸಿ ಕಚೇರಿ ಎದುರು ಪ್ರತಿಭಟನೆ ನಡೆಸಿದರು.

ಶಾಸಕ ಕೆ.ಎಸ್.ಈಶ್ವರಪ್ಪ, ಎಂಎಲ್​ಸಿ ಆಯನೂರು ಮಂಜುನಾಥ್ ನೇತೃತ್ವದಲ್ಲಿ ಪ್ರತಿಭಟನೆ ನಡೆಸಿದ ಕಾರ್ಯಕರ್ತರು ಮತ್ತು ಮುಖಂಡರು, ಗೃಹ ಸಚಿವರ ದಬ್ಬಾಳಿಕೆ, ಅಭಿವ್ಯಕ್ತಿ ಸ್ವಾತಂತ್ರ್ಯ ಹರಣದ ವಿರುದ್ಧ ಕ್ರಮಕ್ಕೆ ಒತ್ತಾಯಿಸಿದರು.

ಬಿಜೆಪಿ ವಿರುದ್ಧ ನಡೆಯುತ್ತಿರುವ ಸೇಡಿನ ಕ್ರಮಗಳ ವಿರುದ್ಧ ದೂರು ನೀಡಿದ್ದರೂ ಕ್ರಮ ಕೈಗೊಂಡಿಲ್ಲ. ಬದಲಿಗೆ ರಾಜಕೀಯ ಎದುರಾಳಿಗಳ ವಿರುದ್ಧ ಪ್ರತೀಕಾರದ ಕ್ರಮಕ್ಕೆ ಮುಂದಾಗಿದ್ದಾರೆ. ಪ್ರಧಾನಿ ಮೋದಿ ಅವರನ್ನು ಗುಂಡಿಕ್ಕಿ ಕೊಲ್ಲುವಂತೆ ಹೇಳಿಕೆ ನೀಡಿದ್ದ ಮಾಜಿ ಶಾಸಕ ಬೇಳೂರು ಗೋಪಾಲಕೃಷ್ಣ ವಿರುದ್ಧ ದೂರು ನೀಡಿದ್ದರೂ ಕ್ರಮಕೈಗೊಂಡಿಲ್ಲ ಎಂದು ಅಸಮಾಧಾನ ಹೊರಹಾಕಿದರು.

ಜೆಡಿಎಸ್ ಶಾಸಕ ನಾರಾಯಣಗೌಡ ಅವರು ನಟರಾದ ಯಶ್, ದರ್ಶನ್​ಗೆ ನೇರವಾಗಿ ಬೆದರಿಕೆ ಹಾಕಿದ್ದರು. ಈ ಎರಡೂ ಪ್ರಕರಣಗಳಲ್ಲಿ ಜನರ ನಡುವೆ ದ್ವೇಷದ ವಾತಾವರಣ ಮೂಡಿಸಿ ಸಾಮಾಜಿಕ ಸಾಮರಸ್ಯ ಕೆಡಿಸುವಂತಹ ಗಂಭೀರ ಆರೋಪವಿದ್ದರೂ ಸರ್ಕಾರ ನಿರ್ಲಕ್ಷ್ಯ ಧೋರಣೆ ತಾಳುತ್ತಿದೆ ಎಂದು ದೂರಿದರು.

ಸ್ವತಃ ಸಿಎಂ ಕುಮಾರಸ್ವಾಮಿ ಮಾಧ್ಯಮ ಪ್ರತಿನಿಧಿಗಳನ್ನು ದೂಷಿಸುವುದು, ಬಹಿಷ್ಕರಿಸುವುದು ಹಾಗೂ ನಿಯಂತ್ರಿಸುವುದು ಸರ್ವಾಧಿಕಾರಿ ಮನೋಭಾವದ ಪ್ರತೀಕವಾಗಿದೆ. ಇದು ಪ್ರಜಾತಂತ್ರ ವ್ಯವಸ್ಥೆಗೆ ಮಾರಕ. ಸಾಮಾಜಿಕ ಜಾಲತಾಣಗಳಲ್ಲಿ ರಾಜ್ಯ ಸರ್ಕಾರ ಟೀಕಿಸಿದ ಕಾರಣಕ್ಕೆ ಬಿಜೆಪಿ ಹಿತೈಷಿಗಳು ಮತ್ತು ಪತ್ರಕರ್ತರನ್ನು ಜೈಲಿಗಟ್ಟಲು ಗೃಹ ಸಚಿವರೇ ವಿಶೇಷ ಆಸಕ್ತಿ ವಹಿಸುತ್ತಿದ್ದಾರೆ ಎಂದು ಕಿಡಿಕಾರಿದರು.

ಸ್ವತಃ ಗೃಹ ಸಚಿವ ಎಂ.ಬಿ.ಪಾಟೀಲ್ ಲಿಂಗಾಯತ ಧರ್ಮ ವಿಭಜನೆ ಯತ್ನದಲ್ಲಿ ಶಾಮೀಲಾಗಿದ್ದರು. ಇದೀಗ ಅವರೇ ಇತರರ ವಿರುದ್ಧ ಕ್ರಮಕ್ಕೆ ಪೊಲೀಸ್ ಇಲಾಖೆ ದುರ್ಬಳಕೆ ಮಾಡಿಕೊಳ್ಳುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ರಾಜಕೀಯ ದ್ವೇಷ ಬದಿಗಿಟ್ಟು ಆಡಳಿತ ನಡೆಸಲು ರಾಜ್ಯ ಸರ್ಕಾರಕ್ಕೆ ಸೂಚಿಸುವಂತೆ ರಾಜ್ಯಪಾಲರಿಗೆ ಮನವಿ ಸಲ್ಲಿಸಿದರು.

ಬಿಜೆಪಿ ನಗರ ಅಧ್ಯಕ್ಷ ಎನ್.ಜಿ.ನಾಗರಾಜ್, ಗ್ರಾಮಾಂತರ ಅಧ್ಯಕ್ಷ ಜಿ.ಇ.ವಿರೂಪಾಕ್ಷಪ್ಪ, ರೈತ ಮೋರ್ಚಾ ರಾಜ್ಯ ಪ್ರಧಾನ ಕಾರ್ಯದರ್ಶಿ ಎಸ್.ದತ್ತಾತ್ರಿ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಎಸ್.ಎನ್.ಚನ್ನಬಸಪ್ಪ, ಎಸ್.ಜ್ಞಾನೇಶ್ವರ್ ಇತರರಿದ್ದರು.

23ರ ಬಳಿಕ ಸಿಎಂ ಅಧಿಕಾರದಲ್ಲಿರಲ್ಲ:ಮೇ 23ರ ನಂತರ ಮೈತ್ರಿ ಸರ್ಕಾರ ಪತನಗೊಳ್ಳಲಿದೆ. ಸಿಎಂ ಕೂಡ ಅಧಿಕಾರದಲ್ಲಿ ಇರಲ್ಲ ಎಂದು ಶಾಸಕ ಕೆ.ಎಸ್.ಈಶ್ವರಪ್ಪ ಪುನರುಚ್ಛರಿಸಿದರು. ಪ್ರತಿಭಟನೆಯಲ್ಲಿ ಮಾತನಾಡಿ, ಸಿಎಂ ಕುಮಾರಸ್ವಾಮಿ ಮತ್ತು ಗೃಹ ಸಚಿವ ಎಂ.ಬಿ.ಪಾಟೀಲ್ ಪ್ರಜಾಪ್ರಭುತ್ವದ ಕಗ್ಗೊಲೆ ಮಾಡುತ್ತಿದ್ದಾರೆ. ಮೈತ್ರಿ ಸರ್ಕಾರ ಯಾವುದೆ ಕಾರಣಕ್ಕೂ ಉಳಿಯಲ್ಲ ಎಂದರು.

ಸಿದ್ದರಾಮಯ್ಯ ಜೈಲಿಗೆ ಹೋಗಲಿ:ಮೈತ್ರಿ ಸರ್ಕಾರದ ಸಮನ್ವಯ ಸಮಿತಿ ಅಧ್ಯಕ್ಷ ಸಿದ್ದರಾಮಯ್ಯ ಅವರ ಮೇಲೂ ಎಸಿಬಿ ಮತ್ತು ಲೋಕಾಯುಕ್ತದಲ್ಲಿ ಕೇಸ್​ಗಳಿದ್ದು ಅವುಗಳ ತನಿಖೆ ಆಗಲಿ ಎಂದು ಎಂಎಲ್​ಸಿ ಆಯನೂರು ಮಂಜುನಾಥ್ ಆಗ್ರಹಿಸಿದರು. ಸಿದ್ದರಾಮಯ್ಯ ಅವರ ಮೇಲೆ ಎಸಿಬಿ, ಲೋಕಾಯುಕ್ತದಲ್ಲಿ ಕೇಸ್​ಗಳು ದಾಖಲಾಗಿವೆ. ಆದರೆ ತನಿಖೆ ಆಗಿಲ್ಲ ಎಂದು ದೂರಿದರು.

Leave a Reply

Your email address will not be published. Required fields are marked *