ಜಿಲ್ಲಾದ್ಯಂತ ಬಣ್ಣದೋಕುಳಿ ಸಡಗರ

ಕಾರವಾರ: ಜಿಲ್ಲೆಯ ಬೀದಿ..ಬೀದಿಗಳು ಗುರುವಾರ ಬಣ್ಣಗಳಿಂದ ರಂಗೇರಿದ್ದವು. ಮುಖಗಳನ್ನು ಪರಸ್ಪರ ಗುರುತು ಹಿಡಿಯದ ಮಟ್ಟಿಗೆ ಬಣ್ಣ ಬಳಿದುಕೊಂಡ ಜನರ ಸಂಭ್ರಮ ಮುಗಿಲು ಮುಟ್ಟಿತ್ತು.

ಹೋಳಿ ಹಬ್ಬವನ್ನು ಜಿಲ್ಲಾದ್ಯಂತ ಸಂಭ್ರಮದಿಂದ ಆಚರಿಸಲಾಯಿತು. ಕಾರವಾರದ ಮಕ್ಕಳು, ಮಹಿಳೆಯರು, ವೃದ್ಧರಾದಿಯಾಗಿ ‘ಹೋಳಿ, ಹೋಳಿ..ಹೋಳಿ’ ಎಂದು ಕೂಗುತ್ತ, ನೃತ್ಯ ಮಾಡುತ್ತ ಬಣ್ಣ ತುಂಬಿದ ಪಿಚಕಾರಿ ನೀರು ಹಾರಿಸುತ್ತ ಸಂಭ್ರಮಿಸಿದರು. ಮುಖವಾಡ ಹಾಕಿಕೊಂಡು, ತಮ್ಮ ಸ್ನೇಹಿತರ, ಸಂಬಂಧಿಕರ ಮನೆಗಳಿಗೆ ತೆರಳಿ ಬಣ್ಣ ಹಚ್ಚಿದರು. ಸರ್ಕಾರಿ ಕಚೇರಿಗಳಿಗೆ ಗುರುವಾರ ಹೋಳಿಯ ಬಿಸಿ ತಟ್ಟಿತು. ಗುರುವಾರ ರಜೆ ನೀಡದಿದ್ದರೂ ಕೆಲವು ಅಧಿಕಾರಿ, ಸಿಬ್ಬಂದಿ ಹೋಳಿಯಾಡಲು ತೆರಳಿದ್ದರು. ಇದರಿಂದ ಕಚೇರಿಗಳು ಬಣಗುಡುತ್ತಿದ್ದವು. ಅಂಗಡಿಗಳು ಮುಚ್ಚಿದ್ದವು. ಕಡಲ ತೀರದಲ್ಲಿ ನಾಲ್ಕು ಸಾವಿರಕ್ಕೂ ಅಧಿಕ ಜನರು ಸ್ನಾನ ಮಾಡಿದರು.

ರಂಗಿನಲ್ಲಿ ಮಿಂದೆದ್ದ ಶಿರಸಿ ನಗರ

ಶಿರಸಿ: ಹೋಳಿ ಹಬ್ಬದಲ್ಲಿ ಸಂಪೂರ್ಣ ನಗರವೇ ಬಣ್ಣದಲ್ಲಿ ಮಿಂದೆದ್ದಿತ್ತು. ಮಹಿಳೆಯರು, ವೃದ್ಧರೂ ಸಹ ಮನೆಯಿಂದ ಹೊರ ಬಂದು ಪರಸ್ಪರ ಬಣ್ಣ ಹಚ್ಚುವ ಮೂಲಕ ಹೋಳಿ ಹಬ್ಬಕ್ಕೆ ರಂಗೇರಿಸಿದರು.

ತಾಲೂಕಿನಲ್ಲಿ ಪ್ರತಿ ಎರಡು ವರ್ಷಗಳಿಗೆ ಒಮ್ಮೆ ಹೋಳಿ ಹಬ್ಬವನ್ನು ಆಚರಿಸಲಾಗುತ್ತದೆ. ಮಾರಿಕಾಂಬಾ ದೇವಿಯ ಜಾತ್ರೆ ಇರುವ ವರ್ಷ ಹೋಳಿ ಹಬ್ಬ ಇರುವುದಿಲ್ಲ. ಇದರಿಂದಾಗಿ ಹೋಳಿ ಹಬ್ಬ ಆಚರಣೆಗೆ ಸಾರ್ವಜನಿಕರು ಉತ್ಸಾಹ ತೋರುತ್ತಾರೆ.

ಗ್ರಾಮೀಣ ಪ್ರದೇಶದಲ್ಲಿ ಹುಲಿ ವೇಷ ಪ್ರಚಲಿತವಾಗಿದ್ದು, ಹೋಳಿ ಹುಣ್ಣಿಮೆ ದಿನದಂದು ಹೋಳಿ ಆಚರಿಸಿ ಬಳಿಕ ಕಾಮನನ್ನು ಸುಡುವ ಮೂಲಕ ಹಬ್ಬವನ್ನು ಪೂರ್ಣಗೊಳಿಸಲಾಗುತ್ತದೆ. ನಗರ ಪ್ರದೇಶದಲ್ಲಿ ಬೇಡರ ವೇಷ ಪ್ರಸಿದ್ಧವಾಗಿದೆ. ನಗರದ 20ಕ್ಕೂ ಅಧಿಕ ಕಡೆಗಳಲ್ಲಿ ಸ್ಥಾಪಿಸಲಾಗಿದ್ದ ರತಿ ಮನ್ಮಥರನ್ನು ವಿಸರ್ಜಿಸಿ ಕಾಮನ ಸುಡುವ ಮೂಲಕ ಹಬ್ಬ ಆಚರಿಸಲಾಗಿದೆ. ಇಲ್ಲಿಯ ದೇವಿಕೆರೆಯಲ್ಲಿ ಸಾವಿರಕ್ಕೂ ಅಧಿಕ ಜನ ಸೇರಿ ಪರಸ್ಪರ ಬಣ್ಣ ಹಚ್ಚಿಕೊಂಡು ಹೋಳಿ ಆಚರಿಸಿದ್ದಾರೆ. ಹಾಡಿಗೆ ಹೆಜ್ಜೆ ಹಾಕಿ ಸಂತಸ ಹಂಚಿಕೊಂಡಿದ್ದಾರೆ.

ಕೇಂದ್ರ ಸಚಿವ ಅನಂತಕುಮಾರ ಹೆಗಡೆ ನಗರದ ರಾಘವೇಂದ್ರ ಸರ್ಕಲ್​ನಲ್ಲಿ ಹೋಳಿ ಹಬ್ಬದಲ್ಲಿ ಪಾಲ್ಗೊಂಡು ಸಾರ್ವಜನಿಕರಿಗೆ ಬಣ್ಣ ಹಚ್ಚಿ ಶುಭ ಕೋರಿದರು. ಕಾಂಗ್ರೆಸ್ ಜಿಲ್ಲಾಧ್ಯಕ್ಷ ಭೀಮಣ್ಣ ನಾಯ್ಕ ಸೇರಿದಂತೆ ಇನ್ನಿತರ ಗಣ್ಯರು ಹೋಳಿ ಆಚರಣೆಯಲ್ಲಿ ಪಾಲ್ಗೊಂಡಿದ್ದರು.

ಪಟ್ಟಣದ ವಿವಿಧ ಬಡಾವಣೆಗಳಲ್ಲಿ ಬೆಳಗ್ಗೆಯಿಂದಲೇ ರಂಗಿನಾಟ ಆರಂಭಗೊಂಡಿತು. ಚಿಣ್ಣರು ತಮ್ಮ ಮನೆಯ ಎದುರು, ವಠಾರದಲ್ಲಿ ಬಣ್ಣ ಎರಚಾಟದಲ್ಲಿ ತೊಡಗಿದರೆ, ಯುವಕರು ಸ್ನೇಹಿತರ ಜತೆಗೂಡಿ ಬೈಕ್ ಮೇಲೆ ಪಟ್ಟಣದೆಲ್ಲಡೆ ಸುತ್ತಾಡಿ ಹೋಳಿ ಹಬ್ಬಕ್ಕೆ ಮೆರಗು ತಂದರು. ಬಗೆ ಬಗೆಯ ವೇಷ, ವಿಗ್ ಧರಿಸಿ, ಗುರುತು ಸಿಗದ ಹಾಗೆ ಮುಖಕ್ಕೆಲ್ಲ ಬಣ್ಣ ಹಚ್ಚಿಕೊಂಡು ಯುವಕರು ಸಂಭ್ರಮಿಸಿದರು. ವಯಸ್ಸಿನ ಮಿತಿಯಿಲ್ಲದೆ ಮಕ್ಕಳು, ಮಹಿಳೆಯರು, ಹಿರಿಯರು, ರಾಜಕಾರಣಿಗಳು, ಜನಪ್ರತಿನಿಧಿಗಳು ರಂಗಿನಾಟದಲ್ಲಿ ತೊಡಗಿದ್ದರಿಂದ ಇಡೀ ಪಟ್ಟಣ ವರ್ಣಮಯವಾಗಿ ಬಣ್ಣದೊಕುಳಿಯಲ್ಲಿ ಮಿಂದೆದ್ದಿತು.

ಎಲ್ಲೆಲ್ಲೂ ರಂಗಿನಾಟ

ಹಳಿಯಾಳ: ತಾಲೂಕಿನಾದ್ಯಂತ ಬಣ್ಣದ ಹಬ್ಬ ಹೋಳಿಯನ್ನು ಗುರುವಾರ ಸಡಗರದಿಂದ ಆಚರಿಸಲಾಯಿತು.