ಜಿಪಂ ಮಾಜಿ ನೌಕರ ಆತ್ಮಹತ್ಯೆಗೆ ಯತ್ನ

ಗದಗ: ಜಿಲ್ಲಾ ಪಂಚಾಯಿತಿಯಲ್ಲಿ ಹೊರಗುತ್ತಿಗೆಯಡಿ ತಾಂತ್ರಿಕ ಸಹಾಯಕನಾಗಿ ಕಾರ್ಯನಿರ್ವಹಿಸಿದ್ದ ಮಾಜಿ ನೌಕರ ಜಿಪಂ ಲೆಕ್ಕಪರಿಶೋಧನಾ ಕಚೇರಿ ಬಳಿ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿರುವ ಘಟನೆ ಶುಕ್ರವಾರ ಜರುಗಿದೆ.

ಬಳ್ಳಾರಿ ಜಿಲ್ಲೆ ಹೂವಿನಹಡಗಲಿಯ ಜಗದೀಶ ಶಂಕ್ರಪ್ಪ ಮುಲ್ಕಿಒಡೆಯರ (33) ಆತ್ಮಹತ್ಯೆಗೆ ಯತ್ನಿಸಿದ ವ್ಯಕ್ತಿ. ಇವರು 2015ರಲ್ಲಿ ವಿಜಯಪುರದ ಮೂಲದ ಕಲಾಚೇತನ ಯುವ ಸಂಸ್ಥೆ (ಎನ್​ಜಿಒ) ವತಿಯಿಂದ ಜಿಪಂನಲ್ಲಿ ತಾಂತ್ರಿಕ ಸಹಾಯಕನಾಗಿ ಕೆಲಸ ಮಾಡುತ್ತಿದ್ದರು. ತಮಗೆ 18 ತಿಂಗಳು ವೇತನ ನೀಡಿಲ್ಲ ಎಂದು ಆರೋಪಿಸಿ ಜಿಪಂ ಲೆಕ್ಕಪರಿಶೋಧಕ ಕಚೇರಿ ಬಳಿ ತನ್ನೊಂದಿಗೆ ಬಾಟಲ್​ನಲ್ಲಿ ತೆಗೆದುಕೊಂಡು ಬಂದಿದ್ದ ವಿಷ ಕುಡಿಯಲು ಪ್ರಯತ್ನಿಸಿದ್ದಾರೆ. ಇದನ್ನು ನೋಡಿದ ಜಿಪಂ ಸಿಬ್ಬಂದಿ ಎಚ್ಚೆತ್ತು ಬಾಟಲ್ ಕಸಿದುಕೊಂಡ ನಂತರ ಜಗದೀಶ ಅಸ್ವಸ್ಥಗೊಂಡಿದ್ದಾರೆ. ಆಗ ಸಿಬ್ಬಂದಿ ಘಟನೆಯನ್ನು ಜಿಪಂ ಸಿಇಒ ಮತ್ತು ಉಪಕಾರ್ಯದರ್ಶಿ ಗಮನಕ್ಕೆ ತಂದಿದ್ದರಲ್ಲದೆ, ಆಂಬುಲೆನ್ಸ್ ಗೆ ಕರೆ ಮಾಡಿ ಪೊಲೀಸರು ಮಾಹಿತಿ ನೀಡಿದ್ದಾರೆ. ಕೆಲ ಹೊತ್ತಿನಲ್ಲಿ ಸ್ಥಳಕ್ಕೆ ಬಂದ ಆಂಬುಲೆನ್ಸ್​ನಲ್ಲಿ ವಿಷ ಕುಡಿಯಲು ಯತ್ನಿಸಿದ ಅವರನ್ನು ಜಿಲ್ಲಾಸ್ಪತ್ರೆಗೆ ಸಾಗಿಸಿದ್ದಾರೆ. ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಜಗದೀಶ ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎಂದು ವೈದ್ಯರು ತಿಳಿಸಿದ್ದಾರೆ. ಜಿಪಂ ಸಿಬ್ಬಂದಿ ಮಹಾಂತೇಶ ನಿಟ್ಟಾಲಿ ಎಂಬುವರು ಜಗದೀಶ ಅವರ ಕೆಲಸವನ್ನು ರಿನಿವಲ್ ಮಾಡಿಕೊಡುವುದು ಹಾಗೂ ಬಾಕಿ ವೇತನ ಕೊಡಿಸುವ ಭರವಸೆ ನೀಡಿ 50 ಸಾವಿರ ರೂ. ಪಡೆದಿದ್ದರು. ಆದರೆ, ಮೂರು ವರ್ಷ ಕಳೆದರೂ ವೇತನವೂ ಸಿಕ್ಕಿಲ್ಲ. 50 ಸಾವಿರ ರೂ. ಗಳನ್ನು ಕಳೆದುಕೊಂಡಿದ್ದೇನೆ. ಹಿರಿಯ ಅಧಿಕಾರಿಗಳ ನಿರ್ಲಕ್ಷ್ಯಂದ ನಾನು ತೊಂದರೆ ಅನುಭವಿಸಬೇಕಾಗಿದೆ ಎಂದು ಜಗದೀಶ ಮುಲ್ಕಿಒಡೆಯರ ಆರೋಪಿಸುತ್ತಿದ್ದಾರೆ ಎಂಬ ಗುಸುಗುಸು ಜಿಪಂ ಕಚೇರಿಯಲ್ಲಿ ಕೇಳಿ ಬರುತ್ತಿದೆ.

ಈ ಕುರಿತು ಮಾತನಾಡಿದ ಜಿಪಂ ಸಿಇಒ ಮಂಜುನಾಥ ಚವ್ಹಾಣ, ಜಗದೀಶ ಶಂಕ್ರಪ್ಪ ಮುಲ್ಕಿಒಡೆಯರ ಎಂಬುವರು 2015ರಲ್ಲಿ ವಿಜಯಪುರದ ಕಲಾ ಚೇತನ ಯುವಸಂಸ್ಥೆ (ಎನ್​ಜಿಒ) ಮೂಲಕ ಹೊರಗುತ್ತಿಗೆ ಆಧಾರದಡಿ ಜಿಪಂನಲ್ಲಿ ಕೆಲಸ ಮಾಡಿದ್ದರು. ಆದರೆ, ಸಮರ್ಪಕವಾಗಿ ಕೆಲಸ ಮಾಡದ ಕಾರಣ ಅವರ ಸೇವೆಯನ್ನು 2015ರಲ್ಲಿಯೇ ಸ್ಥಗಿತಗೊಳಿಸಲಾಗಿದೆ. ಅವರು ಜಿಪಂನಲ್ಲಿ ಎಷ್ಟು ದಿನ ಕೆಲಸ ಮಾಡಿದ್ದಾರೆ, ಅಷ್ಟು ದಿನದ ಸಂಬಳವನ್ನು ಪಾವತಿಸಲಾಗಿದೆ. ಅವರು ಕೆಲಸ ಮಾಡುತ್ತಿದ್ದ ಸಂಸ್ಥೆಯವರು ಅವರಿಗೆ ಹಣ ನೀಡದಿದ್ದರೆ ಜಿಪಂ ಹೊಣೆಯಲ್ಲ. ಇದೇ ವಿಷಯಕ್ಕೆ ಸಂಬಂಧಿಸಿದಂತೆ ಸಂಸ್ಥೆಯ ವಿರುದ್ಧ ನ್ಯಾಯಾಲಯದಲ್ಲಿ ಮೊಕದ್ದಮೆ ದಾಖಲಿಸಿದ್ದಾರೆ ಎಂದು ಗೊತ್ತಾಗಿದೆ ಎಂದು ಅವರು ವಿವರಿಸಿದರು. ಜಗದೀಶ ಮುಲ್ಕಿಒಡೆಯರ ಅವರನ್ನು ನಾನು ಮುಖತಃ ನೋಡೇ ಇಲ್ಲ. ಕಳೆದ ಅ. 30ರಂದು ವೇತನ ನೀಡಬೇಕೆಂದು ನನಗೆ ಮೆಸೇಜ್ ಕಳಿಸಿದರು. ಆ ಮೆಸೇಜ್ ನೋಡಿದ ಮೇಲೆ ಈ ಕುರಿತು ಪರಿಶೀಲಿಸಿ ಎಂದು ಸಿಬ್ಬಂದಿಗೆ ತಿಳಿಸಿದೆ. ಅವರು ಮೆಸೇಜ್ ಕಳಿಸಿದ ನಂಬರ್​ಗೆ ಸಿಬ್ಬಂದಿ ಕರೆ ಮಾಡಿ ಹಿರಿಯ ಅಧಿಕಾರಿಗಳನ್ನು ಭೇಟಿ ಮಾಡಿ ಪರಿಹರಿಸಿಕೊಳ್ಳಿ ಎಂದು ಸೂಚನೆ ನೀಡಿದ್ದಾರೆ. ಅದರಂತೆ ಜಗದೀಶ ಅ. 31ರಂದು ತಮ್ಮನ್ನು ಭೇಟಿ ಮಾಡಿ ರ್ಚಚಿಸಿದರು. ಈ ಕುರಿತು ಪರಿಶೀಲಿಸಿ ವರದಿ ಕೊಡಿ ಎಂದು ಉಪಕಾರ್ಯದರ್ಶಿಗೆ ಸೂಚನೆ ನೀಡಿದೆ. ಆದರೆ, ಜಗದೀಶ ಇಂದು ಕಚೇರಿಗೆ ಆಗಮಿಸಿ ಲೆಕ್ಕಪರಿಶೋಧಕರ ಕಚೇರಿ ಬಳಿ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದಾರೆ ಎಂದು ಸಿಇಒ ಮಂಜುನಾಥ ಚವ್ಹಾಣ ವಿವರಿಸಿದರು. ಈ ಸಂದರ್ಭದಲ್ಲಿ ಉಪಕಾರ್ಯದರ್ಶಿ ಎಸ್.ಸಿ. ಮಹೇಶ, ಇತರರು ಇದ್ದರು.