ಜಿಪಂ ಅಧ್ಯಕ್ಷರ ಪದತ್ಯಾಗ

ಚಿಕ್ಕಬಳ್ಳಾಪುರ: ಕಾಂಗ್ರೆಸ್ ವರಿಷ್ಠರ ಸೂಚನೆ ಹಿನ್ನೆಲೆಯಲ್ಲಿ ಜಿಪಂ ಅಧ್ಯಕ್ಷ ಎಚ್.ವಿ.ಮಂಜುನಾಥ್ ಪದತ್ಯಾಗಕ್ಕೆ ಮುಂದಾಗಿದ್ದಾರೆ.

ಬೆಂಗಳೂರಿನ ಕೆಪಿಸಿಸಿ ಕಚೇರಿಯಲ್ಲಿ ರಾಜ್ಯಾಧ್ಯಕ್ಷ ದಿನೇಶ್ ಗುಂಡೂರಾವ್ ನೇತೃತ್ವದಲ್ಲಿ ಸೋಮವಾರ ನಡೆದ ಸಭೆಯಲ್ಲಿ ಜಿಪಂ ಅಧ್ಯಕ್ಷ ರಾಜೀನಾಮೆಗೆ ಒಮ್ಮತದ ತೀರ್ಮಾನ ಕೈಗೊಳ್ಳಲಾಗಿದೆ. ಇದಕ್ಕೆ ಅಧ್ಯಕ್ಷರು ಸಹಮತ ವ್ಯಕ್ತಪಡಿಸಿದ್ದಾರೆ.

ಜಿಪಂನ 28 ಸದಸ್ಯರ ಪೈಕಿ 21 ಸದಸ್ಯರೊಂದಿಗೆ ಸ್ಪಷ್ಟ ಬಹುಮತ ಹೊಂದಿರುವ ಕಾಂಗ್ರೆಸ್​ನಲ್ಲಿ ಅಧ್ಯಕ್ಷ ಗಾದಿಗೆ ಹಿಂದಿನಿಂದಲೂ ಕಸರತ್ತು ನಡೆಯುತ್ತಲೇ ಇದೆ. ಹಿಂದೆ ಪಿ.ಎನ್.ಕೇಶವರೆಡ್ಡಿ ರಾಜೀನಾಮೆ ಬಳಿಕ ಎಚ್.ವಿ.ಮಂಜುನಾಥ್ ಅಧ್ಯಕ್ಷರಾಗಿದ್ದರು. 10 ತಿಂಗಳ ಅಧಿಕಾರಾವಧಿ ಒಪ್ಪಂದವಾಗಿತ್ತು ಎನ್ನಲಾಗಿದೆ. ಇದರನ್ವಯ ಸ್ವಪಕ್ಷೀಯ ಜಿಪಂ ಸದಸ್ಯರು ಕಳೆದ ಎರಡು ತಿಂಗಳ ಹಿಂದೆ ರಾಜೀನಾಮೆಗೆ ಒತ್ತಾಯಿಸಿದ್ದರು. ಜತೆಗೆ ಸಾಮಾನ್ಯ ಸಭೆಯಿಂದ ದೂರ ಉಳಿಯುವ ಮೂಲಕ ಅಸಮಾಧಾನ ವ್ಯಕ್ತಪಡಿಸಿದ್ದರು. ಇದಕ್ಕೆ ಕೋರಂ ಕೊರತೆಯಿಂದ ಒಮ್ಮೆ ಸಭೆ ಮುಂದೂಡಿದ್ದು, ಪಕ್ಷದಲ್ಲಿ ಭಿನ್ನಮತ ಸ್ಪೋಟಗೊಂಡಿತ್ತು.

ಮತ್ತೊಂದೆಡೆ ಸದಸ್ಯರು ಬೆಂಬಲಿತ ಶಾಸಕರ ಮೂಲಕ ಕೆಪಿಸಿಸಿ ಅಧ್ಯಕ್ಷರನ್ನು ಭೇಟಿ ಮಾಡಿ ಗಮನಸೆಳೆದಿದ್ದರು. ಆದರೆ, ಲೋಕಸಭೆ ಚುನಾವಣೆ ಸಂದರ್ಭದಲ್ಲಿ ಅಧ್ಯಕ್ಷರನ್ನು ಬದಲಾಯಿಸುವುದು ಸರಿಯಲ್ಲ. ಚುನಾವಣೆ ಮುಗಿದ ಬಳಿಕ ಸಭೆ ನಡೆಸಿ ತೀರ್ಮಾನ ಕೈಗೊಳ್ಳುವುದಾಗಿ ದಿನೇಶ್ ಗುಂಡೂರಾವ್ ಭರವಸೆ ನೀಡಿದ್ದರು.

ಸಾಮಾನ್ಯ ಸಭೆ ಬಳಿಕ ಪದತ್ಯಾಗ: ಜಿಪಂ ಕಚೇರಿ ಸಭಾಂಗಣದಲ್ಲಿ ಜೂ.25ರಂದು ಸಾಮಾನ್ಯ ಸಭೆ ನಡೆಯಲಿದೆ. ಮಾರನೇ ದಿನ ರಾಜೀನಾಮೆ ನೀಡಲು ಅಧ್ಯಕ್ಷರು ನಿರ್ಧರಿಸಿದ್ದಾರೆ. ಇದಕ್ಕೆ ಸ್ವಪಕ್ಷೀಯ ಸದಸ್ಯರು ಸಭೆಯಲ್ಲಿ ಭಾಗವಹಿಸಲಿದ್ದಾರೆ. ಬರದಿಂದ ಜನರು ಹಲವು ಸಮಸ್ಯೆ ಎದುರಿಸುತ್ತಿರುವುದರ ನಡುವೆ ಪದೇಪದೆ ಸಭೆಗಳನ್ನು ಮುಂದೂಡುವುದು ಸರಿಯಲ್ಲ. ಇದಕ್ಕೆ ಸಭೆಯನ್ನು ಯಶಸ್ವಿಯಾಗಿ ನಡೆಸಬೇಕೆಂದು ಕೆಪಿಸಿಸಿ ಅಧ್ಯಕ್ಷರು ಸಲಹೆ ನೀಡಿದ್ದಾರೆ. ತೆರವಾಗುತ್ತದೆ ಎನ್ನಲಾಗಿರುವ ಅಧ್ಯಕ್ಷ ಸ್ಥಾನಕ್ಕೆ ಜಿಪಂ ಸದಸ್ಯ ಪಿ.ಎನ್.ಪ್ರಕಾಶ್, ಎಂ.ಬಿ.ಚಿಕ್ಕನರಸಿಂಹಯ್ಯ, ಶಿವಣ್ಣ, ಸುಬ್ಬಾರೆಡ್ಡಿ ಹೆಸರು ಕೇಳಿಬಂದಿದೆ.

ಅಧ್ಯಕ್ಷರ ಪರ ಬ್ಯಾಟಿಂಗ್: ಮಾಜಿ ಸಂಸದ ಎಂ.ವೀರಪ್ಪ ಮೊಯ್ಲಿ, ಸಚಿವ ಎನ್.ಎಚ್.ಶಿವಶಂಕರರೆಡ್ಡಿ, ಮಾಜಿ ಶಾಸಕ ಎನ್.ಸಂಪಂಗಿ ಅಧ್ಯಕ್ಷರ ಪರ ಬ್ಯಾಟ್ ಬೀಸಿದರು. ಅಧ್ಯಕ್ಷರು ಉತ್ತಮ ಆಡಳಿತದ ಮೂಲಕ ಗಮನ ಸೆಳೆದಿದ್ದಾರೆ. ಹೀಗಿರುವಾಗ ರಾಜೀನಾಮೆ ಪಡೆಯುವ ಅವಶ್ಯಕತೆ ಇಲ್ಲ. ಈಗಾಗಲೇ ಪಕ್ಷದಲ್ಲಿ ಒಂದೇ ವರ್ಗದವರಿಗೆ ಹೆಚ್ಚಿನ ಅಧಿಕಾರ ಸಿಕ್ಕಿದೆ ಎಂಬ ಅಪವಾದವಿದೆ. ಇದರ ನಡುವೆ ಮೇಲ್ವರ್ಗದ ಏಕೈಕ ವ್ಯಕ್ತಿಯನ್ನು ಅಧಿಕಾರದಿಂದ ಕೆಳಗಿಳಿಸುವುದಿಲ್ಲ ಸರಿಯಲ್ಲ ಎಂದು ವಾದ ಮಂಡಿಸಿದರು. ಇದಕ್ಕೆ ಧ್ವನಿಗೂಡಿಸಿದ ಶಾಸಕ ಡಾ.ಕೆ.ಸುಧಾಕರ್, ಈ ಮೊದಲು ಒಪ್ಪಂದ ಮಾಡಿಕೊಂಡಿದ್ದು, ಲೋಕಸಭೆ ಚುನಾವಣೆ ಬಳಿಕ ರಾಜೀನಾಮೆ ಕೊಡಿಸಲು ತೀರ್ವನಿಸಲಾಗಿದೆ. ಇದಕ್ಕೆ ವಿರುದ್ಧವಾಗಿ ನಡೆದುಕೊಳ್ಳಬಾರದು ಎಂದು ಒತ್ತಾಯಿಸಿದರು. ಕೊನೆಗೆ ಎಲ್ಲರೂ ಸಹಮತ ವ್ಯಕ್ತಪಡಿಸಿದರು. ಶಾಸಕ ವಿ.ಮುನಿಯಪ್ಪ, ಮಾಜಿ ಸಂಸದ ಕೆ.ಎಚ್.ಮುನಿಯಪ್ಪ ಮತ್ತಿತರರಿದ್ದರು.

 

Leave a Reply

Your email address will not be published. Required fields are marked *