ಸಿಂಧನೂರು: ಸಹಕಾರಿ ಸಂಸ್ಥೆಗಳು ಜನಸಾಮಾನ್ಯರಿಗೆ ಅನುಕೂಲಕರವಾಗಿದ್ದು, ಯುವ ಜನತೆ ಸಹಕಾರಿ ಸಂಸ್ಥೆಗಳನ್ನು ಬೆಳೆಸಬೇಕೆಂದು ಸಿಂಧು ಕ್ರೆಡಿಟ್ ಸೌಹಾರ್ದ ಸಹಕಾರಿ ಸಂಘದ ಸಿಇಒ ಬಿ.ರಾಜಶೇಖರ ಹೇಳಿದರು.
ನಗರದ ಜ್ಞಾನಜ್ಯೋತಿ ಕಾಲೇಜಿನಲ್ಲಿ ಸೋಮವಾರ ಕಸಾಪದಿಂದ ಆಯೋಜಿಸಿದ್ದ ದತ್ತಿ ಉಪನ್ಯಾಸ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ನಂದಿನಿ ಹಾಗೂ ಅಮುಲ್ ಹಾಲಿನ ಉತ್ಪನ್ನಗಳನ್ನು ಮಾರಾಟ ಮಾಡುತ್ತಿರುವುದು ಸಹಕಾರಿ ಸಂಸ್ಥೆಗಳೇ ಆಗಿವೆ. ತಾಲೂಕಿನಲ್ಲಿ ಈ ಹಿಂದೆ ಸಹಕಾರಿ ಸಂಸ್ಥೆಗಳು ಆರಂಭಕ್ಕೆ ಮನೋಹರ ಮಸ್ಕಿ ಶ್ರಮಿಸಿದ್ದಾರೆ. ದೇಶದ ಜಿಡಿಪಿಯಲ್ಲಿ ಸಹಕಾರಿ ಸಂಘಗಳ ಪಾತ್ರ ಕೂಡ ಇದೆ ಎಂದರು.
ಕಸಾಪ ತಾಲೂಕು ಅಧ್ಯಕ್ಷ ಪಂಪಯ್ಯಸ್ವಾಮಿ ಸಾಲಿಮಠ ಮಾತನಾಡಿ, ಇಡೀ ರಾಜ್ಯದಲ್ಲಿ 58 ದತ್ತಿಗಳನ್ನು ಹೊಂದಿರುವ ಏಕೈಕ ತಾಲೂಕು ಸಿಂಧನೂರು ಆಗಿದೆ. ಪಾನ್ ಕಾರ್ಡ್, ಆಧಾರ್ ಕಾರ್ಡ್‌ನಂತೆ ಕಸಾಪ ಅಜೀವ ಸದಸ್ಯತ್ವ ಕಾರ್ಡ್ ಪಡೆದು ಈ ಮಣ್ಣಿನ ಋಣ ತೀರಿಸುವ ಕೆಲಸ ಆಗಬೇಕಾಗಿದೆ ಎಂದು ತಿಳಿಸಿದರು.
ಮಸ್ಕಿಯ ಭ್ರಮರಾಂಬ ಪತ್ತಿನ ಸೌಹಾರ್ದ ಸಹಕಾರಿ ಸಿಇಒ ವೀರೇಶ ಹಿರೇಮಠ ಮಾತನಾಡಿ, ‘ಯುವಜನತೆ ಹಾಗೂ ಆರ್ಥಿಕ ಪ್ರಗತಿಯಲ್ಲಿ ಸಹಕಾರ ಸಂಘಗಳ ಪಾತ್ರ’ದ ಕುರಿತು ಉಪನ್ಯಾಸ ನೀಡಿದರು. ಪ್ರಮುಖರಾದ ಚನ್ನಬಸವ ಸಜ್ಜನ ವಕೀಲ, ಪತ್ರಕರ್ತ ಪಂಪಾಪತಿ ಬೇರ‌್ಗಿ, ಅಕ್ಷಯ ಆಹಾರ ಜೋಳಿಗೆ ಕಾರ್ಯದರ್ಶಿ ಅಶೋಕ ನಲ್ಲಾ ಇದ್ದರು.