ಸಮರ್ಪಕವಾಗಿ ಕಾರ್ಯನಿರ್ವಹಿಸದ ದೀಪ, ಬೇಕಾಬಿಟ್ಟಿ ಚಾಲನೆಯಿಂದ ಸವಾರರಿಗೆ ತೊಂದರೆ
ನವೀನ್ ಶೆಟ್ಟಿ ಕೆರಾಡಿ ಆನೇಕಲ್
ನಗರದಲ್ಲೇ ಅತೀಹೆಚ್ಚು ವಾಹನಗಳು ಸಂಚಾರಿಸುವ ಜಿಗಣಿ ಎಪಿಸಿ ವೃತ್ತದಲ್ಲಿ ಸಿಗ್ನಲ್ಗಳು ಸಮರ್ಪಕವಾಗಿ ಕಾರ್ಯನಿರ್ವಹಿಸದ ಕಾರಣ ಟ್ರಾಫಿಕ್ ಜಾಮ್ ಉಂಟಾಗುತ್ತಿದ್ದು, ವಾಹನ ಸವಾರರ ತಲೆಬಿಸಿಗೆ ಕಾರಣವಾಗಿದೆ.
ಬನ್ನೇರುಟ್ಟ ಹಾಗೂ ಬೊಮ್ಮಸಂದ್ರ, ಆನೇಕಲ್ ಭಾಗದಿಂದ ಸಂಪರ್ಕ ಕಲ್ಪಿಸುವ ಜಿಗಣಿ ಎಪಿಸಿ ವೃತ್ತದಲ್ಲಿ ಸಿಗ್ನಲ್ ಅಳವಡಿಕೆ ಮಾಡಿ ಹಲವು ವರ್ಷಗಳೇ ಕಳೆದಿವೆ. ಆದರೆ, ಸಿಗ್ನಲ್ಗಳು ಸ್ಥಗಿತಗೊಂಡಿವೆ. ಇದರಿಂದಾಗಿ ವೃತ್ತದಲ್ಲಿ ಸಂಚಾರಿ ನಿಯಮಗಳು ಪಾಲನೆಯಾಗದೆ ಪದೇಪದೆ ಅಪಘಾತ ಸಂಭವಿಸುತ್ತಿದ್ದು, ಸಂಚಾರ ಪೊಲೀಸರ ರ್ನಿಲಕ್ಷ$್ಯದ ವಿರುದ್ಧ ನಾಗರಿಕರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
ಬೊಮ್ಮಸಂದ್ರ, ಜಿಗಣಿ, ವೀರಸಂದ್ರ ಕೈಗಾರಿಕಾ ಪ್ರದೇಶಕ್ಕೂ ಇದೇ ರಸ್ತೆಯಿಂದ ಸಂಪರ್ಕ ಇದ್ದು, ಸಾವಿರಾರು ವಾಹನಗಳು ಪ್ರತಿದಿನ ಈ ಮಾರ್ಗವಾಗಿ ಸಂಚರಿಸುತ್ತವೆ. ಸಿಗ್ನಲ್ಗಳು ಸಮರ್ಪಕವಾಗಿ ಕಾರ್ಯ ನಿರ್ವಹಿಸದೆ ವಾಹನ ದಟ್ಟಣೆ ಹೆಚ್ಚುತ್ತಿದ್ದು, ಸ್ವಲ್ಪ ಯಾಮಾರಿದರೂ ಅಪಾಯ ತಪ್ಪಿದಲ್ಲ ಎನ್ನುವ ಸ್ಥಿತಿ ಇದೆ.
ಬೆಳಗ್ಗೆ, ಸಂಜೆ ಸಮಸ್ಯೆ : ಬೆಳಗ್ಗೆ ಹಾಗೂ ಸಾಯಂಕಾಲದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಕಾರ್ಮಿಕರು ಎಪಿಸಿ ಸರ್ಕಲ್ ಮಾರ್ಗವಾಗಿ ಸಂಚರಿಸುತ್ತಾರೆ. ಇದರಿಂದಾಗಿ ಈ ಸಮಯದಲ್ಲಿ ಜನಜಂಗುಳಿ ಹೆಚ್ಚಾಗುತ್ತಿದೆ. ಆದರೆ, ಸಿಗ್ನಲ್ಗಳು ಸರಿಯಾಗಿ ಕೆಲಸ ಮಾಡದಿರುವುದು, ವೃತ್ತದಲ್ಲಿ ಪೊಲೀಸ್, ಹೋಂ ಗಾರ್ಡ್ ನಿಯೋಜನೆ ಇಲ್ಲದಿರುವುದರಿಂದ ಕೆಲ ವಾಹನ ಸವಾರರು ನಿಮಯ ಉಲ್ಲಂಘಿಸುತ್ತಿದ್ದಾರೆ. ವೇಗವಾಗಿ ವಾಹನ ಚಲಾಯಿಸಿಕೊಂಡು ಬರುತ್ತಾರೆ. ಈ ಪರಿಣಾಮ ಕಾರ್ಮಿಕರು ಜೀವ ಕೈಯಲ್ಲಿ ಹಿಡಿದೆ ರಸ್ತೆ ದಾಟುವಂತಾಗಿದೆ.
ಟಿಪ್ಪರ್, ಲಾರಿಗಿಳಿಂದ ಕಿರಿಕಿರಿ: ಎಪಿಸಿ ಸರ್ಕಲ್ನಲ್ಲಿ ಟಿಪ್ಪರ್, ಲಾರಿಯಂತಹ ಭಾರಿ ಗಾತ್ರದ ವಾಹನಗಳು ಹೆಚ್ಚಿನ ಸಂಖ್ಯೆಯಲ್ಲಿ ಸಂಚರಿಸುತ್ತಿದ್ದು, ಇದರಿಂದ ದ್ವಿಚಕ್ರ ಹಾಗೂ ಚಿಕ್ಕ ವಾಹನಗಳು ಕಿರಿಕಿರಿ ಅನುಭವಿಸುವಂತಾಗಿದೆ. ಟ್ರಾಫಿಕ್ ಜಾಮ್ ಉಂಟಾಗುತ್ತಿರುವುದೇ ಭಾರಿ ಗಾತ್ರದ ವಾಹಗನಳಿಂದ ಎಂಬ ಆರೋಪ ಕೇಳಿ ಬರುತ್ತಿದೆ.
ನಿರ್ವಹಣೆ ಕೊರತೆ: ಈ ಹಿಂದೆ ವಿಶ್ವನಾಥ್ ಹಾಗೂ ಬಿ.ಕೆ.ಶೇಖರ್ ಇನ್ಸ್ಪೆಕ್ಟರ್ ಆಗಿದ್ದ ಅವಧಿಯಲ್ಲಿ ಕೈಗಾರಿಕಾ ಉದ್ಯಮಿಗಳ ಸಹಕಾರದಲ್ಲಿ ಎಪಿಸಿ ವೃತ್ತದಲ್ಲಿ ಸಿಗ್ನಲ್ ಅಳವಡಿಕೆ ಮಾಡಲಾಗಿತ್ತು. ಅಲ್ಲದೆ ಸಿಗ್ನಲ್ ಹಾಗೂ ಸುತ್ತಮುತ್ತ ಸಿಸಿ ಕ್ಯಾಮರಾ ಅಳವಡಿಸಿ, ಅವುಗಳನ್ನು ಪೊಲೀಸ್ ಠಾಣೆಯಿಂದಲೇ ನಿರ್ವಹಣೆ ಮಾಡಲು ಕ್ರಮ ಕೈಗೊಳ್ಳಲಾಗಿತ್ತು. ಆದರೆ, ಇತ್ತೀಚೆಗೆ ಸಿಗ್ನಲ್ಗಳು ನಿರ್ವಹಣೆ ಇಲ್ಲದೆ ಸ್ಥಗಿತಗೊಂಡಿದ್ದು, ವಾಹನ ಸವಾರರು ತೊಂದರೆ ಅನುಭವಿಸುವಂತಾಗಿದೆ.
ಜನರ ಸುರಕ್ಷತೆಗಾಗಿ ಸಿಗ್ನಲ್ ಅಳವಡಿಕೆ ಮಾಡಲಾಗಿದೆ. ಬೇಕಾಬಿಟ್ಟಿಯಾಗಿ ವಾಹನ ಚಲಾಯಿಸುವುದರಿಂದ ಅವರ ಜೀವಕ್ಕೆ ಕುತ್ತು!. ಇನ್ಮುಂದೆ ಸಂಚಾರ ನಿಯಮ ಉಲ್ಲಂಘಿಸುವವರ ವಿರುದ್ಧ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗುವುದು.
| ಮಂಜುನಾಥ್ ಇನ್ಸ್ಪೆಕ್ಟರ್, ಜಿಗಣಿ ಠಾಣೆ
ನಿರ್ವಹಣೆ ಇಲ್ಲದೆ ಸಿಗ್ನಲ್ಗಳು ಹಾಳಾಗಿವೆ. ಪರಿಣಾಮ ವಾಹನ ಸವಾರರು ವೇಗವಾಗಿ ಬರುತ್ತಾರೆ. ಇದರಿಂದಾಗಿ ಸಂಚಾರ ನಿಮಯ ಪಾಲಿಸುವವರು ಸ್ವಲ್ಪ ಎಚ್ಚರ ತಪ್ಪಿದರೂ ಅಪಘಾತದ ಸಂಭವ ಹೆಚ್ಚಿದೆ. ಇಲಾಖೆ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಬೇಕು.
| ರಾಜೇಂದ್ರ ಪ್ರಸಾದ್, ಸ್ಥಳಿಯ
ಜಿಗಣಿ ಎಪಿಸಿ ವೃತ್ತದಲ್ಲಿ ಸಿಗ್ನಲ್ ಅಳವಡಿಕೆ ಮಾಡಲಾಗಿದೆಯಾದರೂ ಜನ ಬೇಕಾಬಿಟ್ಟಿಯಾಗಿ ಓಡಾಡದೆ ಸಿಗ್ನಲ್ನಲ್ಲಿ ಸಂಚಾರಿ ನಿಯಮ ಪಾಲಿಸಿದರೆ ಅಪಘಾತಗಳ ಪ್ರಮಾಣ ಕಡಿಮೆಯಾಗುತ್ತದೆ. ಹೋಂಗಾರ್ಡ್
ಗಳನ್ನು ನೇಮಕ ಮಾಡಿದರೆ ಹೆಚ್ಚಿನ ಸಹಾಯವಾಗಲಿದೆ.
| ಆರ್.ಪುನೀತ್ ಕರವೇ, ಉಪಾಧ್ಯಕ್ಷ