ಜಿಎಸ್​ಟಿ ಹಾದಿ ಸಲೀಸು

ದೇಶದ ತೆರಿಗೆ ಕ್ಷೇತ್ರದಲ್ಲಿ ಕ್ರಾಂತಿಕಾರಕ ಬದಲಾವಣೆ ತರಲಿದೆ ಎನ್ನಲಾಗಿರುವ ಬಹುನಿರೀಕ್ಷಿತ ಸರಕು ಮತ್ತು ಸೇವಾ ತೆರಿಗೆ (ಜಿಎಸ್​ಟಿ) ಜಾರಿ ಅನಿಶ್ಚಿತತೆಯಲ್ಲೇ ತೂಗಾಡುತ್ತಿದ್ದುದು ಗೊತ್ತಿರುವ ಸಂಗತಿಯೇ. ಆದರೆ ಇಂಥ ಎಲ್ಲ ಗೊಂದಲಗಳಿಗೆ ತೆರೆ ಎಳೆದಿರುವ ಕೇಂದ್ರ ವಿತ್ತ ಸಚಿವ ಅರುಣ್ ಜೇಟ್ಲಿ, ಪ್ರಸಕ್ತ ವರ್ಷದ ಜುಲೈ 1ರಿಂದಲೇ ಜಿಎಸ್​ಟಿ ಜಾರಿಯಾಗಲಿದೆಯೆಂದು ಘೊಷಿಸಿದ್ದಾರೆ. ಶನಿವಾರದ ಜಿಎಸ್​ಟಿ ಮಂಡಳಿ ಸಭೆಯಲ್ಲಿ ಕೈಗೊಳ್ಳಲಾದ ಮಹತ್ವದ ನಿರ್ಣಯಗಳು, ಈ ತೆರಿಗೆ ಪದ್ಧತಿಯ ಜಾರಿಗಿರುವ ಅಡಚಣೆಗಳನ್ನು ನಿವಾರಿಸುವಲ್ಲಿ ಪ್ರಮುಖ ಪಾತ್ರ ವಹಿಸಲಿವೆ. ಕೇಂದ್ರ ಜಿಎಸ್​ಟಿ ಮತ್ತು ಇಂಟಿಗ್ರೇಟೆಡ್ ಜಿಎಸ್​ಟಿ ಎಂಬೆರಡು ಮುಖ್ಯ ವಿಷಯಗಳ ಕುರಿತಾದ ಕರಡು ಮಸೂದೆಗೆ ಜಿಎಸ್​ಟಿ ಮಂಡಳಿ ಹಸಿರು ನಿಶಾನೆ ತೋರಿಸಿದ್ದು, ಇದು ಹಣಕಾಸು ಮಸೂದೆಯಾಗಿರುವುದರಿಂದ ಸಂಸತ್ತಿನಲ್ಲಿ ಸುಸೂತ್ರವಾಗಿ ಮಂಡಿಸಲ್ಪಟ್ಟು ಅನುಮೋದನೆಗೊಳ್ಳಲಿದೆ ಎಂಬುದು ವಿಷಯತಜ್ಞರ ಅಭಿಪ್ರಾಯ.

ಸರಕು ಮತ್ತು ಸೇವಾ ತೆರಿಗೆಯ ಪರಿಣಾಮಕಾರಿತ್ವದ ಕುರಿತು ಹಲವು ನಿರೀಕ್ಷೆಗಳಿವೆ. ದೇಶದೆಲ್ಲೆಡೆ ಈಗ ಹತ್ತಕ್ಕೂ ಹೆಚ್ಚು ವಿವಿಧ ಸ್ವರೂಪದ ತೆರಿಗೆಗಳು ಚಾಲ್ತಿಯಲ್ಲಿದ್ದು, ಒಂದಿಡೀ ತೆರಿಗೆ ವ್ಯವಸ್ಥೆಯೇ ಸಂಕೀರ್ಣಮಯವಾಗಿರುವುದನ್ನು ಹಾಗೂ ಶ್ರೀಸಾಮಾನ್ಯನಿಗೆ, ಬಳಕೆದಾರನಿಗೆ ಸಮರ್ಪಕವಾಗಿ ಅವು ಅರ್ಥವಾಗದಂತಿರುವುದನ್ನು ಬಿಡಿಸಿ ಹೇಳಬೇಕಿಲ್ಲ. ಜಿಎಸ್​ಟಿ ಅನುಷ್ಠಾನಗೊಳ್ಳುತ್ತಿದ್ದಂತೆ ಇಂಥ ಎಲ್ಲ ಪರೋಕ್ಷ ತೆರಿಗೆಗಳೂ ಇಲ್ಲವಾಗಿ, ಒಟ್ಟಾರೆ ವ್ಯವಸ್ಥೆ ಪಾರದರ್ಶಕವಾಗುತ್ತದೆ ಮತ್ತು ಸುಲಭಗ್ರಾಹಿಯಾಗುತ್ತದೆ ಎಂಬುದು ಇದಕ್ಕಿರುವ ಸಕಾರಾತ್ಮಕ ಆಯಾಮ. ಹಲವು ನೆಲೆಗಟ್ಟಿನ ವ್ಯವಹಾರ ಪ್ರಕ್ರಿಯೆಗಳು ಸುಲಲಿತವಾಗುವುದಕ್ಕೆ ಇದು ಅನುವುಮಾಡಿಕೊಡುವುದರಿಂದ, ಜಿಎಸ್​ಟಿ ಅನುಷ್ಠಾನಕ್ಕೆ ತೆರೆದ ತೋಳಿನ ಸ್ವಾಗತವೇ ಸಿಗಲಿದೆ ಮತ್ತು ಈ ನಿಟ್ಟಿನಲ್ಲಿ ಯಾವುದೇ ವಿಳಂಬಕ್ಕಾಗಲೀ ಅಡಚಣೆಗಾಗಲೀ ಆಸ್ಪದ ಸಿಗುವುದಿಲ್ಲ ಎಂಬುದು ಬಹುತೇಕರ ಎಣಿಕೆ. ಇಲ್ಲಿ ಮತ್ತೊಂದು ಅಂಶವನ್ನೂ ಗಮನಿಸಬೇಕು. ಕಾಳಧನದ ಪಿಡುಗಿಗೆ ಕಡಿವಾಣ ಹಾಕುವ ಕ್ರಮದ ಒಂದು ಭಾಗವಾಗಿ ಅಧಿಕ ಮುಖಬೆಲೆಯ ಹಳೆಯ ನೋಟುಗಳ ಅನಾಣ್ಯೀಕರಣವನ್ನು ಕೇಂದ್ರ ಸರ್ಕಾರ ಈಗಾಗಲೇ ಕೈಗೊಂಡಿದ್ದು ಅದರ ಪೂರ್ಣ ಫಲಿತವಿನ್ನೂ ದಕ್ಕಬೇಕಿದೆ. ಈ ಮಧ್ಯೆ, ರಿಯಲ್ ಎಸ್ಟೇಟ್ ವಲಯದಲ್ಲಿ ಅಗಾಧ ಪ್ರಮಾಣದಲ್ಲಿ ಕಪ್ಪುಹಣದ ಹರಿವು ಕಂಡುಬಂದಿರುವುದರಿಂದ, ಈ ವಲಯವನ್ನೂ ಜಿಎಸ್​ಟಿ ವ್ಯಾಪ್ತಿಯಲ್ಲಿ ತರಲು ನಿರ್ಧರಿಸಲಾಗಿದ್ದು, ಇದರಿಂದ ಕಾಳಧನ ಸಂಗ್ರಹಕ್ಕೆ ಲಗಾಮು ಬೀಳಲಿದೆ ಎನ್ನಲಾಗುತ್ತಿದೆ.

ಭಾರತದ ತೆರಿಗೆ ಸ್ವರೂಪದಂತೆಯೇ ದೇಶದಲ್ಲಿರುವ ಒಕ್ಕೂಟ ವ್ಯವಸ್ಥೆಯೂ ಸಂಕೀರ್ಣ ನೆಲೆಗಟ್ಟುಗಳನ್ನು ಹೊಂದಿರುವುದು ಗೊತ್ತಿರುವಂಥದ್ದೇ. ಹೀಗಾಗಿ ದೇಶದ ಉದ್ದಗಲಕ್ಕೂ ಅನ್ವಯವಾಗುವಂಥ ಕಾನೂನೊಂದನ್ನು ಕಾರ್ಯರೂಪಕ್ಕೆ ತರುವುದು ಅಂದುಕೊಂಡಷ್ಟು ಸಲೀಸು ಕೆಲಸವಲ್ಲ; ಇದು ದೀರ್ಘಕಾಲದ ತಪಸ್ಸನ್ನು ಬೇಡುವ ಪ್ರಕ್ರಿಯೆ. ಇಷ್ಟಿದ್ದರೂ, ಆರಂಭಿಕ ಅಡಚಣೆ ಮತ್ತು ಗೊಂದಲಗಳ ಹೊರತಾಗಿಯೂ ಜಿಎಸ್​ಟಿ ಅನುಷ್ಠಾನದ ರೂಪುರೇಷೆಗಳು ಅಂತಿಮ ಹಂತಕ್ಕೆ ಬರುತ್ತಿರುವುದು ಸಮಾಧಾನಕರ ಸಂಗತಿ ಮಾತ್ರವೇ ಅಲ್ಲ, ದೇಶದ ಹಣಕಾಸು ರಂಗದಲ್ಲಿ ಸಹಕಾರಿ ಒಕ್ಕೂಟ ವ್ಯವಸ್ಥೆಯ ಬಲವರ್ಧನೆಯ ನಿಟ್ಟಿನಲ್ಲೂ ಅದು ಪೂರಕ ಅಂಶವಾಗಿ ಪರಿಣಮಿಸುತ್ತದೆ. ಇದೇ ರೀತಿಯಲ್ಲಿ, ದೇಶದ ಹಿತಾಸಕ್ತಿ ರಕ್ಷಣೆಗೆ ಇಂಬುಕೊಡುವ ಇನ್ನಿತರ ವಿಷಯಗಳಲ್ಲೂ ಇಂಥದೇ ಏಕಾಭಿಪ್ರಾಯ ರೂಪುಗೊಂಡಲ್ಲಿ, ಅದು ದೇಶದ ಸರ್ವಾಂಗೀಣ ಪ್ರಗತಿಗೆ ನೆರವಾಗುವುದರಲ್ಲಿ ಎರಡು ಮಾತಿಲ್ಲ.

Leave a Reply

Your email address will not be published. Required fields are marked *