Thursday, 15th November 2018  

Vijayavani

ಸಚಿವ ಸ್ಥಾನಕ್ಕಾಗಿ ಬಳ್ಳಾರಿ ಶಾಸಕರ ಲಾಬಿ - ತುಕಾರಾಂ ಸೇರಿದಂತೆ ಐವರ ಪೈಪೋಟಿ        RSS ಬೈಠಕ್​​ನಲ್ಲಿ ರಾಮಮಂದಿರ ಪ್ರತಿಧ್ವನಿ-ಶಬರಿಮಲೆ ಹೋರಾಟದಿಂದ ಹಿಂದೆ ಸರಿಯಲ್ಲ-ಷಾ ಸಮ್ಮುಖದಲ್ಲಿ ನಿರ್ಧಾರ        KRS ಬಳಿ 125 ಅಡಿ ಎತ್ತರದ ಕಾವೇರಿ ಮಾತೆ ಸ್ಟ್ಯಾಚ್ಯೂ ನಿರ್ಧಾರ-ಡಿಕೆಶಿ ನೇತೃತ್ವದ ಸಮಿತಿಯ ತೀರ್ಮಾನ        ರವಿ ಕೊಲೆ ಹಿಂದೆ ಸೈಲೆಂಟ್ ಸುನಿಲನ ನೆರಳು - ತುಮಕೂರು ಡಾಬಾದಲ್ಲೇ ನಡೆದಿತ್ತು ಹಂತಕ ಮೀಟಿಂಗ್        ತಮಿಳುನಾಡಿನಲ್ಲಿ ಗಜ ಆರ್ಭಟ-ಸಮುದ್ರದಲ್ಲಿ ಅಲೆಗಳ ಅಬ್ಬರ-ಬೆಂಗಳೂರಿನ ಹಲವೆಡೆ ಮಳೆ ಸಾಧ್ಯತೆ        ದೀಪ್​-ವೀರ್​​ ಕಲ್ಯಾಣೋತ್ಸವ-ನಿನ್ನೆ ಕೊಂಕಣಿ, ಇಂದು ಸಿಂಧಿ ಸ್ಟೈಲ್​ ಕಲ್ಯಾಣ-ಇಟಲಿಯಲ್ಲಿ ಅದ್ದೂರಿ ವಿವಾಹ       
Breaking News

ಜಿಂಕೆ ಹಾವಳಿ ತಡೆಗೆ ಪ್ರತಿಭಟನೆ

Monday, 09.07.2018, 9:59 PM       No Comments

ರೋಣ: ತಾಲೂಕಿನ ಕೃಷಿ ಜಮೀನುಗಳಲ್ಲಿ ಜಿಂಕೆ ಹಾವಳಿ ಹೆಚ್ಚಾಗಿದ್ದು, ಇದನ್ನು ತಡೆಗಟ್ಟಬೇಕು ಎಂದು ಒತ್ತಾಯಿಸಿ ಪಟ್ಟಣದ ತಹಸೀಲ್ದಾರ್ ಕಚೇರಿ ಎದುರಿನ ರಾಜ್ಯ ಹೆದ್ದಾರಿಯಲ್ಲಿ ರೈತರು ವಾಹನ ಸಂಚಾರ ತಡೆದು ಪ್ರತಿಭಟನೆ ನಡೆಸಿದರು.

ಪಟ್ಟಣದ ಸಿದ್ಧಾರೂಢ ಮಠದಿಂದ ಸೂಡಿ ವೃತ್ತ, ಮುಲ್ಲಾನಭಾವಿ ಕ್ರಾಸ್, ಪೋತರಾಜನ ಕಟ್ಟೆಯ ಮಾರ್ಗವಾಗಿ ಮಿನಿ ವಿಧಾನಸೌಧದವರೆಗೆ ಬೃಹತ್ ಪ್ರತಿಭಟನೆ ಜರುಗಿತು. ಜಿಂಕೆ ಹಾವಳಿ ತಡೆಯುವಲ್ಲಿ ವಿಫಲರಾಗಿರುವ ಅರಣ್ಯ ಇಲಾಖೆಯ ಅಧಿಕಾರಿಗಳ ವಿರುದ್ಧ ರೈತರು ಘೊಷಣೆ ಕೂಗಿದರು. ಪುರಸಭೆ ಮಾಜಿ ಅಧ್ಯಕ್ಷ ಹುಚ್ಚಪ್ಪ ನವಲಗುಂದ ಮಾತನಾಡಿ, ತಾಲೂಕಿನಾದ್ಯಂತ ಜಿಂಕೆಗಳ ಹಾವಳಿಯಿಂದ ರೈತರ ವಿವಿಧ ಬೆಳೆಗಳು ಹಾನಿಯಾಗುತ್ತಿವೆ. ಇದರಿಂದ ಪ್ರತಿ ವರ್ಷ ನಷ್ಟವಾಗುತ್ತಿದ್ದು, ಅರಣ್ಯ ಇಲಾಖೆಯ ಅಧಿಕಾರಿಗಳಿಗೆ ಈ ಬಗ್ಗೆ ಹಲವು ಬಾರಿ ದೂರು ನೀಡಿದರೂ ಗಮನಹರಿಸುತ್ತಿಲ್ಲ. ಮುಂಗಾರು ಹಂಗಾಮಿನಲ್ಲಿ ಬಿತ್ತನೆ ಮಾಡಿದ ಹೆಸರು, ಗೋವಿನ ಜೋಳ, ತೊಗರಿ, ಸಜ್ಜಿ, ಕಡಲೆ, ಉಳ್ಳಾಗಡ್ಡಿ ಬೆಳೆ ಜಿಂಕೆಗಳಿಂದ ಹಾನಿಯಾಗುತ್ತಿವೆ. ಸತತ ಬರದಿಂದ ತತ್ತರಿಸಿದ್ದ ರೈತರಿಗೆ ಈಗ ಜಿಂಕೆ ಹಾವಳಿ ಸಮಸ್ಯೆ ಎದುರಾಗಿದ್ದು, ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.

ಎಸ್.ಎಸ್. ರಂಗಣ್ಣವರ ತರಾಟೆಗೆ: ಪ್ರತಿಭಟನಾ ಸ್ಥಳಕ್ಕೆ ಆಗಮಿಸಿದ ತಾಲೂಕು ಅರಣ್ಯಾಧಿಕಾರಿ ಎಸ್.ಎಸ್. ರಂಗಣ್ಣವರ ಅವರನ್ನು ಹಿಗ್ಗಾಮುಗ್ಗಾ ತರಾಟೆಗೆ ತೆಗೆದುಕೊಂಡ ರೈತರು, ಈ ಹಿಂದೆ ನಿಮಗೆ ಜಿಂಕೆ ಹಾವಳಿ ನಿಯಂತ್ರಿಸಲು ಹಲವು ಬಾರಿ ದೂರು ನೀಡಿದರೂ ಕ್ರಮ ಕೈಗೊಂಡಿಲ್ಲ. ನಿಮ್ಮ ಹಿರಿಯ ಅಧಿಕಾರಿಗಳು ಬಂದು ನಮ್ಮ ಸಮಸ್ಯೆ ಆಲಿಸುವವರೆಗೂ ಇಲ್ಲಿಂದ ಕದಲುವುದಿಲ್ಲ ಎಂದು ಪಟ್ಟು ಹಿಡಿದರು. 2 ಗಂಟೆಗೂ ಹೆಚ್ಚು ಕಾಲ ವಾಹನ ಸಂಚಾರ ತಡೆದಿದ್ದರಿಂದ ಸಾರ್ವಜನಿಕರು ಪರದಾಡಿದರು. ಪ್ರಾದೇಶಿಕ ವಲಯ ಅರಣ್ಯಾಧಿಕಾರಿ ಕಿರಣ ಅಂಗಡಿ ಪ್ರತಿಭಟನಾ ಸ್ಥಳಕ್ಕೆ ಆಗಮಿಸಿ, ಜಿಂಕೆಗಳಿಂದ ಉಂಟಾದ ಬೆಳೆ ಹಾನಿಗೆ ಪರಿಹಾರ ನೀಡುತ್ತೇವೆ ಎನ್ನುತ್ತಿದ್ದಂತೆ, ರೊಚ್ಚಿಗೆದ್ದ ರೈತರು ನಿಮ್ಮ ಬಿಡಿಗಾಸಿನ ಪರಿಹಾರ ನಮಗೆ ಬೇಕಿಲ್ಲ. ಜಿಂಕೆಗಳಿಂದ ನಮ್ಮ ಜಮೀನುಗಳಿಗೆ ಮುಕ್ತಿ ನೀಡಿ ಎಂದರು. ಇದಕ್ಕೆ ಉತ್ತರಿಸಿದ ಕಿರಣ ಅಂಗಡಿ, ಜಿಂಕೆಗಳಿಂದ ಮುಕ್ತಿಗೊಳಿಸಲು ಅಸಾಧ್ಯ. ಇದು ಸರ್ಕಾರ ಮಟ್ಟದಲ್ಲಿರುವ ಕೆಲಸ. ಜಿಂಕೆಗಳು ಸೂಕ್ಷ್ಮ ಪ್ರಾಣಿಗಳಾಗಿದ್ದು, ಅವುಗಳನ್ನು ಹಿಡಿದರೆ ಸತ್ತು ಹೋಗುವ ಸಂಭವ ಹೆಚ್ಚು. ಈ ಭಾಗದಲ್ಲಿ ಜಿಂಕೆ ವನ ಸ್ಥಾಪಿಸಲು ಸರ್ಕಾರ ಮಟ್ಟದಲ್ಲಿ ಚರ್ಚೆ ನಡೆದಿದ್ದು, ಅದು ಜಾರಿಯಾದರೆ ಶಾಶ್ವತ ಪರಿಹಾರದ ದೊರಕಲಿದೆ ಎಂದು ತಿಳಿಸಿದರು. ಪ್ರತಿಭಟನೆಯಲ್ಲಿ ಬಸವರಾಜ ನವಲಗುಂದ, ಮುತ್ತಣ್ಣಾ ಸಂಗಳದ, ಅಶೋಕ ದೇಶಣ್ಣವರ, ರಂಗನಗೌಡ ಅಚ್ಚನಗೌಡ್ರ, ಈರಪ್ಪ ಪಲ್ಲೇದ, ಹುಸೇನಸಾಭ ಗೋನಾಳ, ಇತರರಿದ್ದರು.

ಪರಿಹಾರ ನೀಡಲು ಅರ್ಜಿ ಸ್ವೀಕಾರ: ರೋಣ ತಾಲೂಕು ಭಾಗದಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಹೆಸರು ಬೆಳೆ ಹಾನಿಯಾಗಿದೆ. ಸರಾಸರಿ ಉತ್ಪನ್ನ ಅಂದಾಜಿಸಿ ಪ್ರತಿ ಕ್ವಿಂಟಾಲ್ ಹೆಸರು ಬೆಳೆ ಹಾನಿಗೆ 3400 ರೂ.ಗಳಂತೆ ಪರಿಹಾರ ನೀಡುತ್ತೇವೆ. ಅಲ್ಲದೆ, ಇತರೆ ಬೆಳೆ ಹಾನಿಗೂ ಸೂಕ್ತ ಪರಿಹಾರ ನೀಡುವುದಾಗಿ ಕಿರಣ ಅಂಗಡಿ ಭರವಸೆ ನೀಡಿದರು. ನಮ್ಮ ಜಿಲ್ಲಾ ಕಚೇರಿಯಿಂದ ಒಬ್ಬ ಸಿಬ್ಬಂದಿಯನ್ನು ರೋಣ ತಾಲೂಕಿಗೆ ನಿಯೋಜಿಸಲಾಗಿದ್ದು, ಅರಣ್ಯ ಇಲಾಖೆಯ ತಾಲೂಕು ಕಚೇರಿಯಲ್ಲಿ ಅರ್ಜಿ ಸ್ವೀಕರಿಸಲಾಗುತ್ತಿದೆ. ರೈತರು ತಮ್ಮ ಚಾಲ್ತಿ ಪಹಣಿ ಪತ್ರಿಕೆ, ಖಾತೆ ಉತಾರ, ಆಧಾರ ಅಥವಾ ಪಡಿತರ ಕಾರ್ಡ್, ಬೆಳೆ ಹಾನಿಯಾದ ಜಮೀನಿನಲ್ಲಿ ನಿಂತು ರೈತರು ತೆಗೆಸಿಕೊಂಡಿರುವ ಒಂದು ಭಾವ ಚಿತ್ರದೊಂದಿಗೆ ಅರ್ಜಿ ಸಲ್ಲಿಸಬೇಕು. ನಿಮ್ಮ ಹೊಲಗಳಿಗೆ ಭೇಟಿ ನೀಡಿ, ಪರಿಶೀಲಿಸಿ ಪರಿಹಾರ ನೀಡುವುದಾಗಿ ಹೇಳಿದರು.

Leave a Reply

Your email address will not be published. Required fields are marked *

Back To Top