ಜಾಹೀರಾತುಮುಕ್ತ ಬೆಂಗಳೂರು ಪಾಲಿಕೆ ಬೈಲಾಕ್ಕೆ ಕೋರ್ಟ್ ಸಮ್ಮತಿ: ಜಾಹೀರಾತು ಮಾಫಿಯಾಕ್ಕೆ ಬರೆ

ಬೆಂಗಳೂರು: ನಗರದಲ್ಲಿ ವಾಣಿಜ್ಯ ಜಾಹೀರಾತು ಪ್ರದರ್ಶನ ನಿಷೇಧಕ್ಕೆ ಸಂಬಂಧಿಸಿದಂತೆ ಬಿಬಿಎಂಪಿ ರೂಪಿಸಿದ್ದ ಜಾಹೀರಾತು ಬೈಲಾವನ್ನು 3 ತಿಂಗಳೊಳಗೆ ಅನುಷ್ಠಾನಕ್ಕೆ ತರುವಂತೆ ಹೈಕೋರ್ಟ್ ಶುಕ್ರವಾರ ನಿರ್ದೇಶನ ನೀಡಿದೆ. ಇದರೊಂದಿಗೆ ನಗರವನ್ನು ಜಾಹೀರಾತುಮುಕ್ತವನ್ನಾಗಿಸುವ ಪಾಲಿಕೆ ಪ್ರಯತ್ನಕ್ಕೆ ಜಯ ಸಿಕ್ಕಿದೆ.

ಎಲ್ಲೆಂದರಲ್ಲಿ ಜಾಹೀರಾತು ಪ್ರದರ್ಶನದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದ ಹೈಕೋರ್ಟ್, ಜಾಹೀರಾತು ನಿಷೇಧಕ್ಕೆ ಕ್ರಮ ಕೈಗೊಳ್ಳುವಂತೆ ಸೂಚನೆ ನೀಡಿತ್ತು. ಅದರಂತೆ 2019 ಜನವರಿಯಲ್ಲಿ ಬಿಬಿಎಂಪಿ ಹೊಸ ಬೈಲಾ ರೂಪಿಸಿ ಸರ್ಕಾರಕ್ಕೆ ಸಲ್ಲಿಸಿತ್ತು. ಆದರೆ, ಅದನ್ನು ಪರಿಗಣಿಸದ ನಗರಾಭಿವೃದ್ಧಿ ಇಲಾಖೆ ಜಾಹೀರಾತು ಪ್ರದರ್ಶನಕ್ಕೆ ಅನುಕೂಲವಾಗುವಂತೆ ತಾನೇ ಒಂದು ಬೈಲಾ ರೂಪಿಸಿ ಅನುಷ್ಠಾನಕ್ಕೆ ಬಿಬಿಎಂಪಿಗೆ ಕಳುಹಿಸಿತ್ತು. ನಗರಾಭಿವೃದ್ಧಿ ಇಲಾಖೆ ರೂಪಿಸಿದ್ದ ನಿಯಮಗಳಿಗೆ ಬಿಬಿಎಂಪಿ ಒಪ್ಪಿಗೆ ಸೂಚಿಸಿರಲಿಲ್ಲ. ಅದರ ನಡುವೆಯೇ ಬಿಬಿಎಂಪಿ ರೂಪಿಸಿದ್ದ ಬೈಲಾಗೆ ಅನುಮೋದನೆ ಕೊಡುವಂತೆ ಹೈಕೋರ್ಟ್ ಸೂಚಿಸಿದೆ. ಹೀಗಾಗಿ ಬೆಂಗಳೂರಿನಲ್ಲಿ ವಾಣಿಜ್ಯ ಜಾಹೀರಾತು ಪ್ರದರ್ಶನಕ್ಕೆ ನಿಷೇಧ ಹೇರಿದಂತಾಗಿದೆ.

ಆಯುಕ್ತರಿಗೆ ಪರಮಾಧಿಕಾರ: ಬಿಬಿಎಂಪಿ ರೂಪಿಸಿರುವ ಬೈಲಾದಂತೆ ಜಾಹೀರಾತು ಪ್ರದರ್ಶನಕ್ಕೆ ಅನುಮತಿ ನೀಡುವುದು, ತಿರಸ್ಕರಿಸುವುದಕ್ಕೆ ಆಯುಕ್ತರಿಗೆ ಪರಮಾಧಿಕಾರ ನೀಡಲಾಗಿದೆ. ಪ್ರತಿ ಏಜೆನ್ಸಿ ಕೂಡ ಬಿಬಿಎಂಪಿಯಲ್ಲಿ ನೋಂದಣಿ ಮಾಡಿಸಿಕೊಂಡಿರಬೇಕು. ಅದಕ್ಕೆ ಆಯುಕ್ತರಿಂದ ಅನುಮತಿ ಪಡೆಯಬೇಕು ಎಂದು ತಿಳಿಸಲಾಗಿದೆ. ಹಾಗೆಯೇ, ಪ್ರತಿ 3 ವರ್ಷಕ್ಕೆ ಪರವಾನಗಿ ನವೀಕರಿಸಬೇಕು. ಅದಕ್ಕಿಂತ ಮುಖ್ಯವಾಗಿ ಯಾವುದೇ ರೀತಿಯ ಜಾಹೀರಾತು ಪ್ರದರ್ಶನಕ್ಕೂ ಮುನ್ನ ಬಿಬಿಎಂಪಿ ಆಯುಕ್ತರಿಂದ ಲಿಖಿತ ಆದೇಶ ಪಡೆದಿರಬೇಕು. ಇಲ್ಲದಿದ್ದರೆ, ಅದನ್ನು ಅಕ್ರಮ ಎಂದು ಪರಿಗಣಿಸಿ ಕಾನೂನು ರೀತಿಯಲ್ಲಿ ಕ್ರಮ ಕೈಗೊಳ್ಳಲಾಗುತ್ತದೆ ಎಂದು ತಿಳಿಸಲಾಗಿದೆ.

ಪಿಪಿಪಿಗೆ ಮಾತ್ರ ಅವಕಾಶ: ಬೃಹತ್ ಹೋರ್ಡಿಂಗ್ಸ್​ಗಳ ಅಳವಡಿಕೆಗೆ ಅವಕಾಶ ನೀಡದಿದ್ದರೂ ಸಾರ್ವಜನಿಕ ಖಾಸಗಿ ಸಹಭಾಗಿತ್ವದಲ್ಲಿ ನಿರ್ವಿುಸಲಾಗುವ ಸ್ಕೈವಾಕ್, ಶೌಚಗೃಹ, ಬಸ್ ಶೆಲ್ಟರ್​ಗಳಲ್ಲಿ ಜಾಹೀರಾತು ಪ್ರದರ್ಶನ ಮಾಡಬಹುದಾಗಿದೆ. ಅದಕ್ಕೆ ಬದಲಾಗಿ ಬಿಬಿಎಂಪಿಗೆ ಜಾಹೀರಾತು ಶುಲ್ಕ ಪಾವತಿಸಬೇಕು. ವಾಣಿಜ್ಯ ಜಾಹೀರಾತು ಹೊರತುಪಡಿಸಿ, ಸಾರ್ವಜನಿಕ ಸಂದೇಶ ನೀಡುವ, ಸರ್ಕಾರಿ ಜಾಹೀರಾತುಗಳಿಗೆ ಅವಕಾಶ ನೀಡಲಾಗಿದೆ. ಅದಕ್ಕೂ ಬಿಬಿಎಂಪಿ ಶುಲ್ಕ ವಿಧಿಸುತ್ತದೆ. ಜತೆಗೆ ಆಯುಕ್ತರಿಂದ ಅನುಮತಿ ಪಡೆಯಬೇಕಿದೆ.

ನಿಯಂತ್ರಣ ಸಮಿತಿ: ಅಕ್ರಮ ಜಾಹೀರಾತು ಪ್ರದರ್ಶನಕ್ಕೆ ತಡೆ ನೀಡಲು ಬಿಬಿಎಂಪಿ ಆಯುಕ್ತರ ನೇತೃತ್ವದ ಜಾಹೀರಾತು ನಿಯಂತ್ರಣ ಸಮಿತಿ ರಚಿಸಲಾಗುತ್ತದೆ. ಪೊಲೀಸ್ ಆಯುಕ್ತರು, ಬೆಸ್ಕಾಂನ ಎಂಡಿ, ಬಿಬಿಎಂಪಿ ತೆರಿಗೆ ಮತ್ತು ಆರ್ಥಿಕ ಸ್ಥಾಯಿ ಸಮಿತಿ ಅಧ್ಯಕ್ಷ, ಜಾಹೀರಾತು ವಿಭಾಗದ ಜಂಟಿ ಆಯುಕ್ತ, ಆಸ್ತಿ ವಿಭಾಗದ ವಿಶೇಷ ಆಯುಕ್ತರು ಸದಸ್ಯರಾಗಿರಲಿದ್ದಾರೆ. ಬಿಬಿಎಂಪಿ ರಸ್ತೆ ಮೂಲಸೌಕರ್ಯ ವಿಭಾಗದ ಮುಖ್ಯ ಇಂಜಿನಿಯರ್ ಸದಸ್ಯ ಕಾರ್ಯದರ್ಶಿಯಾಗಿ ಕೆಲಸ ಮಾಡಲಿದ್ದಾರೆ.

ಸರ್ಕಾರದ ನೀತಿಯಿಂದ ದಂಧೆಗೆ ಅನುಕೂಲ?

ನಗರಾಭಿವೃದ್ಧಿ ಇಲಾಖೆ ಸಿದ್ಧಪಡಿಸಿದ್ದ ನಿಯಮ ಜಾರಿಗೊಳಿಸಿದ್ದರೆ ಅಕ್ರಮ ಜಾಹೀರಾತಿಗೆ ಅನುಕೂಲವಾಗುತಿತ್ತು. ಏಕೆಂದರೆ, 2006ರ ಜಾಹೀರಾತು ಬೈಲಾದಲ್ಲಿ ವಲಯಗಳನ್ನು ರೂಪಿಸಿ ವಿಧಾನಸೌಧ, ಕುಮಾರ ಕೃಪಾ ರಸ್ತೆ ಸೇರಿ 10 ಪ್ರದೇಶಗಳನ್ನು ಎ ವಲಯಕ್ಕೆ ಸೇರಿಸಲಾಗಿತ್ತು. ಆ ವಲಯದಲ್ಲಿ ಯಾವುದೇ ರೀತಿಯ ಜಾಹೀರಾತು ಅಳವಡಿಕೆಗೆ ನಿಷೇಧ ಹೇರಲಾಗಿತ್ತು. ಆದರೆ, ನಗರಾಭಿವೃದ್ಧಿ ಇಲಾಖೆಯ ನಿಯಮದಲ್ಲಿ ಆ ಪ್ರದೇಶಗಳಲ್ಲೂ ಜಾಹೀರಾತು ಅಳವಡಿಸಬಹುದು ಎಂದು ತಿಳಿಸಲಾಗಿತ್ತು. ಹಾಗೆಯೇ, ಅಕ್ರಮ ಜಾಹೀರಾತು ಫಲಕಗಳಿಗೆ ಪ್ರತಿದಿನಕ್ಕೆ 1 ಸಾವಿರ ರೂ.ನಂತೆ ದಂಡ ವಿಧಿಸುವುದಾಗಿ ತಿಳಿಸಲಾಗಿತ್ತು. ಹಾಗಾಗಿದ್ದರೆ ಮಾಸಿಕ ಕನಿಷ್ಠ 3ರಿಂದ 5 ಲಕ್ಷ ರೂ. ಜಾಹೀರಾತು ಬಾಡಿಗೆ ಪಡೆದು ಹೋರ್ಡಿಂಗ್ಸ್ ಅಳವಡಿಸಿದ್ದರೆ, ಬಿಬಿಎಂಪಿಗೆ ದಂಡದ ರೂಪದಲ್ಲಿ 30 ಸಾವಿರ ರೂ. ಪಾವತಿಸಿದರೆ ಸಾಕಾಗುತ್ತಿತ್ತು. ಈ ಎಲ್ಲ ಕಾರಣಗಳಿಂದ ನಿಯಮ ಜಾಹೀರಾತು ಮಾಫಿಯಾಕ್ಕೆ ಅನುಕೂಲವಾಗುವಂತಿದೆ ಎಂಬ ಆರೋಪ ಕೇಳಿಬಂದಿತ್ತು.

 

ಜಾಹೀರಾತುಮುಕ್ತ ಬೆಂಗಳೂರು ನಿರ್ವಣದ ಆಶಯ ಈಡೇರುವ ಸಮಯ ಬಂದಿದೆ. ಬಿಬಿಎಂಪಿ ಹಿಂದಿನಿಂದಲು ಜಾಹೀರಾತಿಗೆ ವಿರುದ್ಧವಾಗಿತ್ತು. ಹೈಕೋರ್ಟ್ ಆದೇಶದಿಂದ ಅದು ಸಾಧ್ಯವಾಗುತ್ತಿದೆ.
| ಗಂಗಾಂಬಿಕೆ ಮೇಯರ್

Leave a Reply

Your email address will not be published. Required fields are marked *