ಜಾಲತಾಣಗಳು ಈಗ ಚುನಾವಣೆ ಕಣ

ಕಾರವಾರ: ಲೋಕಸಭೆ ಚುನಾವಣೆಯ ಕಾವು ಸಾಮಾಜಿಕ ಜಾಲತಾಣಗಳಲ್ಲೂ ಏರತೊಡಗಿದೆ.

ಫೇಸ್​ಬುಕ್, ವ್ಯಾಟ್ಸ್ ಆಪ್, ಟ್ವಿಟ್ಟರ್​ಗಳಲ್ಲಿ ಚುನಾವಣೆ ಸಂಬಂಧ ಭಾರಿ ಚರ್ಚೆಗಳು ನಡೆಯುತ್ತಿವೆ. ಮತ ಚಲಾವಣೆ ಮಾಡಲು ಅವಕಾಶವಿರುವಂತೆ ವೋಟಿಂಗ್ ಲೈನ್​ಗಳು (ಆನ್​ಲೈನ್ ಪೋಲಿಂಗ್) ತೆರೆದುಕೊಂಡಿವೆ. ಲೋಕಸಭೆಯಿಂದ ಹಿಡಿದು ಲೋಕಲ್ ಸಮಸ್ಯೆಗಳ ಬಗೆಗೆ ಇಲ್ಲೇ ಮಾತುಕತೆಯಾಗುತ್ತದೆ. ಒಂದು ಪೋಸ್ಟ್​ಗೆ ಸಾವಿರಾರು ಕಮೆಂಟ್​ಗಳು ಬರುತ್ತಿವೆ.

ಈ ಮೊದಲು ಅಭ್ಯರ್ಥಿ ಒಂದು ಅವಧಿಗೆ ಕ್ಷೇತ್ರ ಸಂಚಾರ ಮಾಡುವುದೇ ಕಷ್ಟವಿತ್ತು. ಎಲ್ಲ ಕಡೆ ತೆರಳಿ ಸಭೆ ಆಯೋಜಿಸಬೇಕಿತ್ತು. ಮುಖಂಡರನ್ನು ಭೇಟಿಯಾಗಿ ಮನವಿ ಮಾಡಿಕೊಳ್ಳಬೇಕಿತ್ತು. ಈಗಲೂ ಅಂಥ ಪ್ರಚಾರದ ವೈಖರಿ ಇದೆ. ಅದರ ಜೊತೆಗೆ ಸಾಮಾಜಿಕ ಜಾಲತಾಣಗಳ ಹವಾ ಹೆಚ್ಚಾಗಿದೆ. ಸಾಮಾಜಿಕ ಜಾಲತಾಣಗಳೂ ಪಕ್ಷಗಳ ಪ್ರಚಾರದ ಒಂದು ಭಾಗವಾಗಿವೆ. ತಮ್ಮ ಸಂದೇಶಗಳನ್ನು ಆ ಮೂಲಕವೇ ನೀಡಲು ಮುಖಂಡರು ಮುಂದಾಗುತ್ತಿದ್ದಾರೆ.

ಪಕ್ಷಗಳ ಸ್ಥಳೀಯ ಘಟಕಗಳಲ್ಲೂ ವಿವಿಧ ವಿಭಾಗಗಳಿಗೆ ಮುಖ್ಯಸ್ಥರನ್ನು ನೇಮಿಸುವ ಜೊತೆಗೆ ಸಾಮಾಜಿಕ ಜಾಲತಾಣದ ಪ್ರಚಾರಕ್ಕೂ ಒಬ್ಬರನ್ನು ನೇಮಿಸಲಾಗುತ್ತಿದೆ. ಜಿಲ್ಲೆಯ ಕೆಲವು ಮುಖಂಡರು ತಮ್ಮ ಫೇಸ್​ಬುಕ್, ಟ್ವಿಟ್ಟರ್ ಖಾತೆಗಳನ್ನು ನಿರ್ವಹಿಸಲು ಕಂಪನಿಗಳಿಗೆ ಜವಾಬ್ದಾರಿ ವಹಿಸಿದ್ದೂ ಇದೆ. ಚುನಾವಣೆ ಆಯೋಗ ಕೂಡ ಈ ನಿಟ್ಟಿನಲ್ಲಿ ಒಂದು ಹೆಜ್ಜೆ ಮುಂದಿಟ್ಟಿದ್ದು, ಅಭ್ಯರ್ಥಿ ಸಲ್ಲಿಸುವ ಅಫಿಡವಿಟ್​ನಲ್ಲಿ ತನ್ನ ಸಾಮಾಜಿಕ ಜಾಲತಾಣಗಳ ಮಾಹಿತಿಯನ್ನೂ ನೀಡಬೇಕಾಗಿದೆ.

ಬಿಜೆಪಿ ಮುಂದು: ಕ್ಷೇತ್ರದಲ್ಲಿ ಸಾಮಾಜಿಕ ಜಾಲತಾಣಗಳನ್ನು ಸಮರ್ಥವಾಗಿ ಬಳಸಿಕೊಳ್ಳುವಲ್ಲಿ ಬಿಜೆಪಿ ಮುಂದಿದೆ. ಪ್ರತಿ ವಿಧಾನಸಭೆ ಕ್ಷೇತ್ರಗಳಿಗೂ ಹತ್ತೆಂಟು ವ್ಯಾಟ್ಸ್ ಆಪ್ ಗ್ರುಪ್​ಗಳನ್ನು ಮಾಡಿ ತಮ್ಮ ಸರ್ಕಾರದ ಸಾಧನೆಗಳ ಪ್ರಚಾರ ನಡೆಸಿದೆ. ಅಲ್ಲದೆ, ಗಣ್ಯರ ಭಾಷಣವನ್ನು ಫೇಸ್​ಬುಕ್ ಲೈವ್ ಮೂಲಕ ನೀಡಲಾಗುತ್ತಿದೆ. ಬಿಜೆಪಿ ಅಭ್ಯರ್ಥಿ ಅನಂತಕುಮಾರ ಹೆಗಡೆ ಟ್ವಿಟ್ಟರ್​ನಲ್ಲಿ ಕ್ರಿಯಾ ಶೀಲರಾಗಿದ್ದಾರೆ. ಕಾಂಗ್ರೆಸ್​ನ ಹಲವು ಮುಖಂಡರು ಫೇಸ್​ಬುಕ್​ನಲ್ಲಿ ಕ್ರಿಯಾಶೀಲರಾಗಿದ್ದರು. ಸಚಿವ ಅನಂತ ಕುಮಾರ ಹೆಗಡೆ ಅವರ ಕಾರ್ಯಗಳ ಕುರಿತು ಸಾಕಷ್ಟು ಟೀಕೆಗಳನ್ನು ಹರಿಬಿಡುತ್ತಿದ್ದರು.

ಆದರೆ, ಇತ್ತೀಚಿನ ಟಿಕೆಟ್ ಹಂಚಿಕೆ ಗೊಂದಲ, ಬೆಳವಣಿಗೆಗಳ ನಂತರ ಅವರ ಪರ ಪೋಸ್ಟ್​ಗಳು ಕಡಿಮೆಯಾಗಿವೆ. ಜೆಡಿಎಸ್ ಈ ವಿಷಯದಲ್ಲಿ ಇನ್ನೂ ಭಾರಿ ಹಿಂದಿದೆ. ಕೆಲವೇ ಕೆಲವು ಕಾರ್ಯಕರ್ತರು ಜೆಡಿಎಸ್ ಪರ ಪೋಸ್ಟ್​ಗಳನ್ನು ಹರಿಬಿಡುತ್ತಿದ್ದಾರೆ.

ಮೋದಿಗೆ ಮತ ಹಾಕಿ ಎಂಬ ಚರ್ಚೆ: ಕೇಂದ್ರ ಸಚಿವ ಅನಂತ ಕುಮಾರ ಹೆಗಡೆ ಕಾರ್ಯವೈಖರಿಯ ಬಗೆಗೆ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಅಸಮಾಧಾನ ವ್ಯಕ್ತವಾಗುತ್ತಿದೆ. ಅವರು ಕಳೆದ 23 ವರ್ಷಗಳಲ್ಲಿ ಮಾಡಿದ್ದೇನು ಎಂಬ ಪ್ರಶ್ನೆಗಳನ್ನು ವಿರೋಧ ಪಕ್ಷಗಳ ನಾಯಕರ ಜೊತೆಗೆ ಸ್ವತಃ ಬಿಜೆಪಿ ಅಭಿಮಾನಿಗಳೂ ಎತ್ತುತ್ತಿದ್ದಾರೆ. ವಿಶೇಷ ಎಂದರೆ ಬಿಜೆಪಿ ಸಹ ಕೇಂದ್ರ ಸಚಿವ ಅನಂತ ಕುಮಾರ ಹೆಗಡೆ ಮಾಡಿದ ಕಾರ್ಯಗಳ ಕುರಿತು ಎಲ್ಲೂ ಹೇಳಿಕೊಳ್ಳುತ್ತಿಲ್ಲ. ಬಿಜೆಪಿಯ ಗ್ರುಪ್​ಗಳಲ್ಲಿ ಮೋದಿ ಸರ್ಕಾರದ ಸಾಧನೆಗಳನ್ನು ಹೇಳಲಾಗುತ್ತಿದೆ. ಮೋದಿ ಅವರಿಗೆ ಮತ ನೀಡಿ ಎಂದು ಕೇಳಲಾಗುತ್ತಿದೆಯೇ ಹೊರತು ಸ್ಥಳೀಯ ಸಂಸದರ ವಿಷಯ ಹೇಳುತ್ತಲೇ ಇಲ್ಲ.

ಮತ ಚಲಾವಣೆ: ಜಿಲ್ಲೆಯ ಸ್ಥಳೀಯ ವೆಬ್​ಸೈಟ್ ಆಯೋಜಿಸಿದ್ದ ಆನ್​ಲೈನ್ ಸರ್ವೆಯಲ್ಲಿ ಒಟ್ಟು 2589 ಮತಗಳು ಚಲಾವಣೆಯಾಗಿವೆ. ಅದರಲ್ಲಿ ಶೇ. 79 ಜನರು ಬಿಜೆಪಿಗೆ ಹಾಗೂ ಶೇ. 21 ಜನರು ಜೆಡಿಎಸ್​ಗೆ ಮತ ಚಲಾಯಿಸಿದ್ದಾರೆ.

ಅಭ್ಯರ್ಥಿ ಅಲ್ಲ, ಪ್ರಧಾನಿ: ಅನಂತ ಕುಮಾರ ಹೆಗಡೆ ಮೀನುಗಾರರಿಗಾಗಿ ಏನೂ ಮಾಡಿಲ್ಲ. ನಾನು ಅವರನ್ನು ವಿರೋಧಿಸುತ್ತೇನೆ. ಆದರೆ, ಬಿಜೆಪಿಗೆ ಮತ ಚಲಾಯಿಸುತ್ತೇನೆ ಎಂದು ಕಾಂಗ್ರೆಸ್ ಮುಖಂಡರೊಬ್ಬರು ಫೇಸ್ ಬುಕ್ ಪೋಸ್ಟ್ ಮಾಡಿದ್ದರು. ಅದಕ್ಕೆ ಹಲವರು ಬೆಂಬಲ ವ್ಯಕ್ತಪಡಿಸಿದ್ದಾರೆ. ನಾವು ಅಭ್ಯರ್ಥಿ ಮುಖ ನೋಡುವುದಿಲ್ಲ. ನಮ್ಮ ದೇಶಕ್ಕೆ ಮೋದಿ ಬೇಕು ಎಂದು ಕಮೆಂಟ್ ಮಾಡಿದ್ದಾರೆ.

ತಣ್ಣಗಾದ ಗ್ರುಪ್ ವಾರ್​ಗಳು: ಲೋಕಸಭಾ ಚುನಾವಣೆಯ ದಿನಾಂಕ ಘೊಷಣೆ ಮಾಡಿದ ಚುನಾವಣೆ ಆಯೋಗ ಸಾಮಾಜಿಕ ಜಾಲತಾಣಗಳ ಮೇಲೂ ನಿಗಾ ಇಡಲಾಗುವುದು ಎಂದು ತಿಳಿಸಿದೆ. ಗ್ರುಪ್​ಗಳಲ್ಲಿ ಪ್ರಚಾರ ಮಾಡಿದಲ್ಲಿ ಅಡ್ಮಿನ್​ಗಳ ಮೇಲೆ ಕ್ರಮ ವಹಿಸುವುದಾಗಿ ಸುದ್ದಿಗಳು ಹರಡಿದ್ದರಿಂದ ಹಲವು ವ್ಯಾಟ್ಸ್ ಆಪ್ ಗ್ರುಪ್​ಗಳು ಇದ್ದಕ್ಕಿದ್ದಂತೆ ತಣ್ಣಗಾಗಿದ್ದವು. ಅಲ್ಲಿ ನಡೆಯುತ್ತಿದ್ದ ರಾಜಕೀಯ ಚರ್ಚೆಗಳು ತಣ್ಣಗಾಗಿಬಿಟ್ಟಿದ್ದವು. ಆದರೆ, ಫೇಸ್​ಬುಕ್ ಹಾಗೂ ಇತರೆಡೆ ಚರ್ಚೆಗಳು ಮುಂದುವರುದಿವೆ.

ಸಾಮಾಜಿಕ ಜಾಲತಾಣಗಳಲ್ಲಿ ಪ್ರಚಾರ ಮಾಡಲು ನಿರ್ಬಂಧವಿಲ್ಲ. ಆದರೆ, ವೈಯಕ್ತಿಕ ನಿಂದನೆ, ಕೋಮು ಸೌಹಾರ್ದ ಕೆರಳಿಸುವ ಪೋಸ್ಟ್​ಗಳನ್ನು ಹಾಕಿದರೆ ಕ್ರಮ ವಹಿಸಲಾಗುವುದು. ಫೇಸ್​ಬುಕ್ ಅಥವಾ ಟ್ವಿಟ್ಟರ್​ನಲ್ಲಿ ಅನುಮತಿ ಪಡೆಯದೇ ಜಾಹೀರಾತು ಪ್ರಕಟಿಸಿದರೆ ಕ್ರಮ ವಹಿಸಲಾಗುವುದು. ಅದನ್ನು ಅಭ್ಯರ್ಥಿ ಅಥವಾ ಪಕ್ಷದ ಖರ್ಚಿಗೆ ಸೇರಿಸಲಾಗುವುದು. ವಾಟ್ಸ್​ಆಪ್ ವೈಯಕ್ತಿಕ ಎಂದು ಪರಿಗಣಿಸಲಾಗಿದೆ. —– ಡಾ.ಹರೀಶ ಕುಮಾರ ಕೆ. ಜಿಲ್ಲಾಧಿಕಾರಿ