ಜಾನುವಾರು ಮಾರಕಟ್ಟೆಯಲ್ಲಿ ವಸೂಲಿ ದಂಧೆ

ರಾಣೆಬೆನ್ನೂರ: ನಗರದ ಹಾವೇರಿ ರಸ್ತೆಯ ಎಪಿಎಂಸಿ ದನದ ಮಾರುಕಟ್ಟೆಯು ಅವ್ಯವಸ್ಥೆಯ ಆಗರವಾಗಿದ್ದು, ಸಂಚಾರ ದಟ್ಟಣೆ ಹಾಗೂ ಕಾನೂನು ಪಾಲನೆಯಲ್ಲಿ ತೊಡಗಬೇಕಾದ ಪೊಲೀಸರೇ ವಸೂಲಿ ದಂಧೆಗೆ ನಿಂತಿದ್ದಾರೆ ಎಂಬ ಆರೋಪಗಳು ಕೇಳಿಬರುತ್ತಿವೆ.

ಪ್ರತಿ ಭಾನುವಾರ ಇಲ್ಲಿನ ಮಾರುಕಟ್ಟೆಯಲ್ಲಿ ನೂರಾರು ಜಾನುವಾರುಗಳ ಮಾರಾಟ ನಡೆಯುತ್ತದೆ. ಮಾರುಕಟ್ಟೆಯಲ್ಲಿ ನಿರ್ವಹಣೆಯ ಕೊರತೆ ಇದ್ದು, ಮಾರುಕಟ್ಟೆಯನ್ನು ಟೆಂಡರ್ ಮೂಲಕ ಗುತ್ತಿಗೆ ನೀಡಲಾಗಿದೆ. ಇಲ್ಲಿಗೆ ಆಗಮಿಸುವ ಜಾನುವಾರುಗಳ ಸಂಖ್ಯೆಗೆ ಅನುಗುಣವಾಗಿ ಟೆಂಡರ್​ದಾರರು ಶುಲ್ಕ ವಸೂಲಿ ಮಾಡುತ್ತಿದ್ದರೆ, ಪೊಲೀಸರು ಮಾರುಕಟ್ಟೆಗೆ ಆಗಮಿಸುವ ವಾಹನಗಳಿಗೆ ನಿಯಮ ಬಾಹಿರವಾಗಿ ಶುಲ್ಕ ನಿಗದಿ ಮಾಡಿದ್ದಾರೆ.

ಹಿರಿಯ ಅಧಿಕಾರಿಗಳ ಅಣತಿಯಂತೆ ವಸೂಲಿ: ಮಾರುಕಟ್ಟೆಗೆ ಆಗಮಿಸುವ ಜಾನುವಾರು ತುಂಬಿದ ಬಹುತೇಕ ವಾಹನಗಳು ಯಾವುದೇ ಪರವಾನಗಿ ಹೊಂದಿರುವುದಿಲ್ಲ. ಇವುಗಳನ್ನು ತಡೆದು ತಪಾಸಣೆ ನಡೆಸುವ ಗೋಜಿಗೂ ಅಧಿಕಾರಿಗಳು ಹೋಗುವುದಿಲ್ಲ. ಸ್ಥಳೀಯವಾಗಿ ರೈತರು ಕೊಂಡ ಜಾನುವಾರುಗಳನ್ನು ಕೃಷಿ ಚಟುವಟಿಕೆಗೆ ಆಟೋ ಅಥವಾ ಗೂಡ್ಸ್ ವಾಹನಗಳಲ್ಲಿ ಸಾಗಿಸುತ್ತಾರೆ. ಆದರೆ, ನಿಜವಾಗಿಯೂ ರೈತರು ಜಾನುವಾರು ಕೊಂಡಿದ್ದಾರೆಯೇ? ಅಥವಾ ಕಸಾಯಿಖಾನೆಗಳ ಪಾಲಾಗುತ್ತಿವೆಯೇ ಎಂಬುದನ್ನು ಗುರುತಿಸುವಲ್ಲಿ ಅಧಿಕಾರಿಗಳು ವಿಫಲರಾಗಿದ್ದಾರೆ. ಪ್ರತಿ ವಾರ ಸುಮಾರು 200 ವಾಹನಗಳು ಇಲ್ಲಿಗೆ ಆಗಮಿಸುತ್ತವೆ ಎಂಬುದು ಗಮನಾರ್ಹ. ಮತ್ತೊಂದಡೆ ಕಾನೂನು- ಸುವ್ಯವಸ್ಥೆ ಕಾಯಬೇಕಾದ ಪೊಲೀಸರು, ಮಾರುಕಟ್ಟೆಗೆ ಆಗಮಿಸುವ ಸ್ಥಳೀಯ ವಾಹನಗಳಿಗೆ 10 ರೂ. ಹಾಗೂ ನೆರೆಯ ಗ್ರಾಮ ಅಥವಾ ತಾಲೂಕುಗಳಿಂದ ಆಗಮಿಸುವ ವಾಹನಗಳಿಗೆ 20 ರೂ. ನಿಗದಿ ಮಾಡಿದ್ದಾರೆ. ಇವೆಲ್ಲವೂ ಹಿರಿಯ ಅಧಿಕಾರಿಗಳ ಅಣತಿಯಂತೆ ವಸೂಲಿ ನಡೆಯುತ್ತಿದೆ ಎನ್ನಲಾಗಿದೆ. ಕೆಳ ಮಟ್ಟದ ಅಧಿಕಾರಿಗಳಿಂದ ಮೇಲ್ಮಟ್ಟದ ಅಧಿಕಾರಿಗಳವರೆಗೂ ಮಾಸಿಕ ವಂತಿಕೆ ನೀಡಲಾಗುತ್ತದೆ ಎನ್ನುವ ಆರೋಪ ಬಲವಾಗಿ ಕೇಳಿಬರುತ್ತಿದೆ.

ಟ್ರಾಫಿಕ್ ಕಿರಿ ಕಿರಿ:ಜಾನುವಾರು ಸಂತೆಯ ದಿನದಂದು ಹಾವೇರಿಯಿಂದ ನಗರಕ್ಕೆ ಸಂರ್ಪಸುವ ರಸ್ತೆಯು ಸಂಚಾರ ದಟ್ಟಣೆಯಿಂದ ಕೂಡಿರುತ್ತದೆ. ರಸ್ತೆಯ ಇಕ್ಕೆಲಗಳಲ್ಲಿ ಎಲ್ಲೆಂದರಲ್ಲಿ ವಾಹನಗಳನ್ನು ನಿಲ್ಲಿಸಲಾಗುತ್ತದೆ. ಮಾರುಕಟ್ಟೆಗೆ ಆಗಮಿಸುವ ಲಾರಿ, ಟೆಂಪೊ, ಆಟೋ ಮತ್ತಿತರರ ವಾಹನಗಳಿಗೆ ಸೂಕ್ತ ನಿಲ್ದಾಣದ ವ್ಯವಸ್ಥೆಯೂ ಇಲ್ಲ. ಇತ್ತ ವಾಹನಗಳ ಸಂಚಾರಕ್ಕೆ ತೊಂದರೆಯಾಗದಂತೆ ಸ್ಥಳೀಯ ಪೊಲೀಸರನ್ನು ನಿಯೋಜಿಸಿದರೂ ನೆಪ ಮಾತ್ರಕಷ್ಟೆ ಎನ್ನುತ್ತಾರೆ ವಾಹನ ಸವಾರರೊಬ್ಬರು.

ಭಾನುವಾರ ವ್ಯಾಪಾರವೇ ಪ್ರಮುಖ: ಇಲ್ಲಿನ ದನದ ಮಾರುಕಟ್ಟೆಯಲ್ಲಿ ಭಾನುವಾರದ ವ್ಯಾಪಾರದಂದು ಹಾವೇರಿ, ಶಿವಮೊಗ್ಗ ಸೇರಿದಂತೆ ಸುತ್ತಮುತ್ತಲ ಜಿಲ್ಲೆಗಳಲ್ಲದೆ, ನೆರೆಯ ರಾಜ್ಯಗಳಿಂದಲೂ ದಲ್ಲಾಳಿಗಳು ಆಗಮಿಸಿ ಜಾನುವಾರುಗಳನ್ನು ಕೊಳ್ಳುತ್ತಾರೆ. ವಿಶಾಲವಾದ ಮಾರುಕಟ್ಟೆ ಹಾಗೂ ವಾಣಿಜ್ಯ ನಗರಿ ಖ್ಯಾತಿಯಿಂದ ಜಾನುವಾರುಗಳ ವ್ಯಾಪಾರ-ವಹಿವಾಟು ಉತ್ತಮವಾಗಿಯೇ ನಡೆಯುತ್ತದೆ. ಆದರೆ, ಹಲವು ಲೋಪ ದೋಷಗಳು ಎದ್ದು ಕಾಣುತ್ತಿವೆ. ಮಾರುಕಟ್ಟೆಯಲ್ಲಿ ನಡೆಯುವ ಅಕ್ರಮಗಳು ಅಧಿಕಾರಿಗಳಿಗೆ ತಿಳಿದಿದ್ದರೂ ಮೌನ ವಹಿಸಿರುವುದು ಹಲವು ಅನುಮಾನಕ್ಕೆ ಕಾರಣವಾಗಿದೆ.

ಎಳೆ ಕರುಗಳು ಕಸಾಯಿಖಾನೆ ಪಾಲು: ಮಾರುಕಟ್ಟೆಯ ಒಳ ಪ್ರವೇಶಿಸುತ್ತಿದ್ದಂತೆ ಕೃಷಿಗೆ ಪೂರಕವಾದ ಎತ್ತುಗಳು, ಹೈನುಗಾರಿಕೆಗೆ ಪೂರಕವಾದ ಆಕಳು, ಎಮ್ಮೆ, ಹೀಗಿ ವಿಭಾಗಗಳಾಗಿ ವಿಗಂಡಿಸಲಾಗಿದೆ. ಕೊನೆಯಲ್ಲಿ ಕಸಾಯಿಖಾನೆಗೆ ತೆರಳುವ ಜಾನುವಾರುಗಳನ್ನು ಸಂಗ್ರಹಿಸಲಾಗುತ್ತದೆ. ಜರ್ಸಿ, ಸಿಂದಿ ಮತ್ತಿತರರ ಜಾತಿಯ ಹೋರಿ ಕರುಗಳು ಕಸಾಯಿಖಾನೆ ಸೇರುತ್ತಿವೆ. ಇವುಗಳಿಂದ ಯಾವುದೇ ಉಪಯೋಗವಿಲ್ಲ. ಸಾಕಿ ಸಲುಹಿದರೆ ಕೃಷಿ ಚಟುವಟಿಕೆಗೂ ಯೋಗ್ಯವಿಲ್ಲ. ಆದ್ದರಿಂದ ಸಿಕ್ಕಷ್ಟು ಹಣಕ್ಕೆ ಮಾರುತ್ತೇವೆ ಎನ್ನುತ್ತಾರೆ ಜಾನುವಾರು ಮಾರಲು ಬಂದ ರೈತರೊಬ್ಬರು.

ನೆರೆಯ ರಾಜ್ಯಕ್ಕೂ ಸಾಗಾಟ: ಜಾನುವಾರುಗಳನ್ನು ಕಸಾಯಿಖಾನೆಗೆ ಸಾಗಿಸುವಾಗ ಹಲವು ನಿಯಮಗಳನ್ನು ಪಾಲಿಸಬೇಕಿದೆ. ಆದರೆ, ಇಲ್ಲಿ ಅಕ್ರಮ ಕಸಾಯಿಖಾನೆ ದಂಧೆದಾರರಿಗೆ ಹೇಳುವವರೂ ಇಲ್ಲ, ಕೇಳುವವರೂ ಇಲ್ಲ ಎಂಬಂತಾಗಿದೆ. ಜಾನುವಾರು ಕೃಷಿ ಹಾಗೂ ಹೈನುಗಾರಿಕೆ ನಡೆಸಲು ಸಶಕ್ತವಾ ಗಿದೆಯೋ ಇಲ್ಲವೋ ಎಂಬುದನ್ನು ಪಶು ವೈದ್ಯಾಧಿಕಾರಿಗಳು ಪ್ರಮಾಣೀಕರಿಸಬೇಕಿದೆ. ಆದರೆ, ಇಲ್ಲಿ ಇಂಥ ಯಾವುದೇ ಪ್ರಮಾಣಪತ್ರ ಇಲ್ಲದೇ ಬೆಂಗಳೂರು, ಆಂಧ್ರಪ್ರದೇಶ, ತಮಿಳುನಾಡು ಸೇರಿ ಕೋಲಾರ ಜಿಲ್ಲೆಯ ಚಿಂತಾಮಣಿ, ತುಮಕೂರು, ಚಿತ್ರದುರ್ಗದ ಕಸಾಯಿಖಾನೆಗಳಿಗೆ ಟ್ರಕ್​ಗಳಲ್ಲಿ ಹಗಲು-ರಾತ್ರಿ ಎನ್ನದೇ ಸಾಗಾಟ ಮಾಡಲಾಗುತ್ತಿದೆ. ಇದನ್ನು ತಡೆಗಟ್ಟುವಲ್ಲಿಯೂ ಸ್ಥಳೀಯ ಪೊಲೀಸ್ ಅಧಿಕಾರಿಗಳು ಕ್ರಮ ಕೈಗೊಳ್ಳುತ್ತಿಲ್ಲ ಎಂದು ಸಾರ್ವಜನಿಕರು ಆರೋಪಿಸುತ್ತಿದ್ದಾರೆ.

ಜಾನುವಾರು ಮಾರುಕಟ್ಟೆಗೆ ಸ್ಥಳೀಯ ಎಪಿಎಂಸಿ ವತಿಯಿಂದ ಅಗತ್ಯ ಸೌಲಭ್ಯಗಳನ್ನು ಕಲ್ಪಿಸಬೇಕು. ಮಾರುಕಟ್ಟೆಯಲ್ಲಿ ನಡೆಯುತ್ತಿರುವ ವಸೂಲಿ ದಂಧೆಗೂ ಕಡಿವಾಣ ಹಾಕುವ ನಿಟ್ಟಿನಲ್ಲಿ ಸಂಬಂಧಪಟ್ಟ ಅಧಿಕಾರಿಗಳು ತುರ್ತು ಗಮನಹರಿಸುವ ಅಗತ್ಯವಿದೆ ಎಂಬುದು ಪ್ರಜ್ಞಾವಂತ ರೈತರ ಒತ್ತಾಯವಾಗಿದೆ.

ಭಾನುವಾರದಂದು ಎಪಿಎಂಸಿಯ ಜಾನುವಾರು ಮಾರುಕಟ್ಟೆಯಲ್ಲಿ ಟ್ರಾಫಿಕ್ ಸಮಸ್ಯೆಯಾಗದಂತೆ ಕ್ರಮ ಕೈಗೊಳ್ಳಲಾಗಿದೆ. ಜಾನುವಾರುಗಳನ್ನು ಆಟೋ ಅಥವಾ ಗೂಡ್ಸ್ ವಾಹನಗಳಲ್ಲಿ ಸಾಗಿಸಲಾಗುತ್ತದೆ. ಇಲ್ಲಿಗೆ ಆಗಮಿಸುವ ವಾಹನಗಳನ್ನು ತಪಾಸಣೆ ನಡೆಸಲು ಮುಂದಾದರೆ ಕೃಷಿ ಚಟುವಟಿಕೆಗೆ ಜಾನುವಾರು ಕೊಂಡೊಯ್ಯಲಾಗುತ್ತದೆ ಎನ್ನುತ್ತಾರೆ. ಈ ವೇಳೆ ಜಾನುವಾರುಗಳು ಎಲ್ಲಿ ಹೋಗುತ್ತವೆ ಎಂಬುದನ್ನು ಸ್ಪಷ್ಟವಾಗಿ ಗುರುತಿಸಲು ಅಸಾಧ್ಯ. ಉಳಿದಂತೆ ಮಾರುಕಟ್ಟೆಯಲ್ಲಿ ಅನಧಿಕೃತವಾಗಿ ಶುಲ್ಕ ವಸೂಲಿ ಮಾಡುತ್ತಿರುವ ಕುರಿತು ಯಾವುದೇ ಮಾಹಿತಿ ಇಲ್ಲ.
| ಜಯಪ್ಪ ನಾಯ್ಕ, ಟ್ರಾಫಿಕ್ ಪಿಎಸ್​ಐ

ಎಪಿಎಂಸಿಯ ಜಾನುವಾರು ಮಾರುಕಟ್ಟೆಯಲ್ಲಿ ಶುಲ್ಕ ವಸೂಲಿ ಕುರಿತು ಯಾವುದೇ ಮಾಹಿತಿ ಇಲ್ಲ. ಆದರೆ, ಸಂಚಾರ ದಟ್ಟಣೆಯಾಗದಂತೆ ತಡೆಯಲು ಟ್ರಾಫಿಕ್ ಪೊಲೀಸರಿಗೆ ಸೂಚನೆ ನೀಡಲಾಗಿದೆ.
| ಲಿಂಗನಗೌಡ ನೆಗಳೂರ, ಸಿಪಿಐ, ನಗರ ವೃತ್ತ