ಜಾಧವ್ ವಿರುದ್ಧ ಕಾನೂನು ಹೋರಾಟ?

ಬೆಂಗಳೂರು: ಪಕ್ಷಕ್ಕೆ ರಾಜೀನಾಮೆ ಸಲ್ಲಿಸಿ ಕಲಬುರಗಿಯಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ಕಣಕ್ಕಿಳಿಯಲು ಹೊರಟಿರುವ ಡಾ.ಉಮೇಶ್ ಜಾಧವ್ ವಿರುದ್ಧ ಕಾನೂನು ಹೋರಾಟಕ್ಕೆ ಕಾಂಗ್ರೆಸ್ ಮುಂದಾಗಿದೆ. ಒಂದೊಮ್ಮೆ, ಜಾಧವ್ ಶಾಸಕ ಸ್ಥಾನಕ್ಕೆ ನೀಡಿದ ರಾಜೀನಾಮೆ ಅಂಗೀಕಾರ ಆಗದೆ ಕಣಕ್ಕಿಳಿದರೆ ಕಾನೂನು ಹೋರಾಟ ನಡೆಸಲು ಪಕ್ಷ ಉದ್ದೇಶಿಸಿದೆ ಎಂದು ಮೂಲಗಳು ತಿಳಿಸಿವೆ. ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಶಾಸಕಾಂಗದ ನಾಯಕ ಸಿದ್ದರಾಮಯ್ಯ, ಈಗ ನಾವು ದೂರು ಕೊಟ್ಟಿದ್ದೇವೆ, ಸ್ಪೀಕರ್ ತೀರ್ಮಾನ ಮಾಡುತ್ತಾರೆ. ಮುಂದಿನ ಬೆಳವಣಿಗೆ ನೋಡಿಕೊಂಡು ಕಾನೂನು ತಜ್ಞರ ಅಭಿಪ್ರಾಯ ಪಡೆದು ತೀರ್ಮಾನ ಮಾಡುತ್ತೇವೆ ಎಂದು ಹೇಳಿದರು. ಮಲ್ಲಿಕಾರ್ಜುನ ಖರ್ಗೆ ಸಿಎಂ ಆಗಬೇಕಿತ್ತು ಎಂಬ ಎಚ್.ಡಿ ದೇವೇಗೌಡ ಹೇಳಿಕೆ ವಿಚಾರವಾಗಿ ಪ್ರತಿಕ್ರಿಯೆ ನೀಡಿದ ಸಿದ್ದರಾಮಯ್ಯ, ನನಗೆ ಗೊತ್ತಿಲ್ಲದ್ದರ ಬಗ್ಗೆ ನಾನು ಏನೂ ಹೇಳಲ್ಲ ಎಂದು ನಸುನಕ್ಕರು. ಕೆಲ ಕ್ಷೇತ್ರಗಳಲ್ಲಿ ಸ್ಪರ್ಧೆಗೆ ಅಭಿಮಾನಿಗಳಿಂದ ಒತ್ತಾಯ ಇದೆ. ರಾಜ್ಯ ರಾಜಕಾರಣವೇ ಸಾಕಾಗಿ ಹೋಗಿದೆ. ಇನ್ನು ರಾಷ್ಟ್ರ ರಾಜಕಾರಣ ಏಕೆ ಬೇಕು? ಕೆಲವರು ಇದ್ದಾರೆ, ಅವರೇ ರಾಷ್ಟ್ರ ರಾಜಕಾರಣ ನೋಡಿಕೊಳ್ಳುತ್ತಾರೆ ಎಂದರು. ಇತ್ತೀಚೆಗೆ ಬರುತ್ತಿರುವ ಊಹಾಪೋಹದ ಬಗ್ಗೆ ನಾನು ಮಂಜು ಜತೆ ದೂರವಾಣಿಯಲ್ಲಿ ಮಾತನಾಡಿದೆ. ಅವರು ಬಿಜೆಪಿಗೆ ಹೋಗುವುದಿಲ್ಲ ಅಂದಿದ್ದಾರೆ. ಮೈತ್ರಿಯಲ್ಲಿ ಚುನಾವಣೆಗೆ ಹೋದಾಗ ಸಣ್ಣ-ಪುಟ್ಟ ಆಕ್ರೋಶ ಬರುತ್ತದೆ, ನಂತರ ನಿಧಾನವಾಗಿ ತಣ್ಣಗಾಗುತ್ತದೆ ಎಂದು ತಿಳಿಸಿದರು.

ಚಿಂಚೋಳಿ ಕ್ಷೇತ್ರದ ಕಾಳಗಿ ದತ್ತು ತೆಗೆದುಕೊಳ್ಳುವುದಾಗಿ ಹಿಂದೆ ಹೇಳಿದ್ದ ಸಚಿವ ಪ್ರಿಯಾಂಕ್ ಖರ್ಗೆ, ಈಗ ಚಿಂಚೋಳಿ ಜನ ತಮ್ಮನ್ನೇ ದತ್ತು ತೆಗೆದುಕೊಳ್ಳಿ ಎನ್ನುತ್ತಿದ್ದಾರೆ. ಹಾಗಿದ್ದರೆ ಚಿತ್ತಾಪುರ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ ಚಿಂಚೋಳಿಗೆ ಬಂದು ಚುನಾವಣೆಗೆ ನಿಂತು ಗೆದ್ದು ತೋರಿಸಲಿ. ನನ್ನ ರಾಜೀನಾಮೆ ಅಂಗೀಕಾರವಾಗುವ ವಿಶ್ವಾಸವಿದೆ.

| ಡಾ.ಉಮೇಶ ಜಾಧವ್ ಬಿಜೆಪಿ ಸಂಭಾವ್ಯ ಅಭ್ಯರ್ಥಿ