ಜಾತ್ರೆಗಳು ಜ್ಞಾನದ ಕಣಜಗಳಾಗಲಿ

ಗದಗ: ಜಾತ್ರೆಗಳು ಕೇವಲ ಧಾರ್ವಿುಕ ಆಚರಣೆಗಳಿಗೆ ಮಾತ್ರ ಸೀಮಿತವಾಗಿರದೇ ಜನರಲ್ಲಿ ಜ್ಞಾನದ ಕ್ಷಿತಿಜವನ್ನು ಬಿತ್ತುವ, ಸಮಾಜದ ಒಳಿತಿಗೆ ಪೂರಕವಾಗುವಂಥ ಚಟುವಟಿಕೆಗಳನ್ನು ಕೈಗೊಳ್ಳುವಂತಾಗಬೇಕು. ಅಂದಾಗ ಮಾತ್ರ ಜಾತ್ರೆಗಳ ಆಚರಣೆಯು ಸಾರ್ಥಕತೆ ಪಡೆದುಕೊಳ್ಳುತ್ತವೆ ಎಂದು ಶ್ರೀ ಡಾ. ತೋಂಟದ ಸಿದ್ಧರಾಮ ಸ್ವಾಮೀಜಿ ಹೇಳಿದರು.

ನಗರದ ತೋಂಟದಾರ್ಯ ಮಠದಲ್ಲಿ ಶುಕ್ರವಾರ ಮಹಾರಥೋತ್ಸವದ ನಂತರ ಜರುಗಿದ ಕಾರ್ಯಕ್ರಮದಲ್ಲಿ ಸಾನ್ನಿಧ್ಯ ವಹಿಸಿ ಮಾತನಾಡಿದ ಅವರು, ಲಿಂಗೈಕ್ಯ ಡಾ. ತೋಂಟದ ಸಿದ್ಧಲಿಂಗ ಶ್ರೀಗಳು ಜಾತ್ರೆಗಳ ಸಂಪ್ರದಾಯಕ್ಕೆ ವೈಚಾರಿಕತೆಯ ಸ್ಪರ್ಶ ನೀಡಿದರು. ನಾಡಿನ ಇತರ ಜಾತ್ರೆಗಳಿಗೂ ಮಾದರಿಯಾಗುವಂತೆ ಹಲವಾರು ಸಾಹಿತ್ಯಿಕ, ಸಾಂಸ್ಕೃತಿಕ, ಸಾಮಾಜಿಕ ಕಾರ್ಯಕ್ರಮಗಳ ಮೂಲಕ ಶ್ರೀಮಠದ ಜಾತ್ರೆಯನ್ನು ರಾಷ್ಟ್ರೀಯ ಮಟ್ಟದಲ್ಲಿ ಪ್ರಸಿದ್ಧಗೊಳಿಸಿದ ಕೀರ್ತಿ ಲಿಂಗೈಕ್ಯ ಸಿದ್ಧಲಿಂಗ ಶ್ರೀಗಳಿಗೆ ಸಲ್ಲುತ್ತದೆ ಎಂದರು.

ಮೈಸೂರಿನ ಶರಣತತ್ತ್ವ ಚಿಂತಕ ಶಂಕರ ದೇವನೂರ ಮಾತನಾಡಿ, ಮಾನವಕುಲದ ಕಲ್ಯಾಣಕ್ಕಾಗಿ ಶ್ರಮಿಸಿದ ಬಸವಾದಿ ಶರಣರ ತತ್ತ್ವಗಳು ಸರ್ವಕಾಲಕ್ಕೂ ಪ್ರಸ್ತುತವಾಗಿವೆ. ಸತ್ಯ-ಶುದ್ಧ-ಸರಳ ಬದುಕಿನ ಮೂಲಕ ದೇವನೊಲುಮೆ ಸಾಧ್ಯ ಎಂದು ತೋರಿಸಿಕೊಟ್ಟ ಬಸವಾದಿ ಶರಣರು, ಕಾಯಕ-ದಾಸೋಹದಂಥ ಅದ್ವಿತೀಯ ಕೊಡುಗೆಗಳನ್ನು ಕೊಟ್ಟರು ಎಂದು ಹೇಳಿದರು.

ದೆಹಲಿ ಜಾಟವಾ ಸಮಾಜದ ಕಾರ್ಯದರ್ಶಿ ಮನೋಜ ಭಾರತಿ ಮಾತನಾಡಿ, ಲಿಂಗೈಕ್ಯ ಡಾ. ಸಿದ್ಧಲಿಂಗ ಶ್ರೀಗಳು ಬುದ್ಧ-ಬಸವ-ಅಂಬೇಡ್ಕರ್ ತತ್ತ್ವಳನ್ನು ಮಾರ್ಗದರ್ಶನ ಮಾಡುವ ಮೂಲಕ ಜಾಟವಾ ಸಮಾಜದಲ್ಲಿದ್ದ ದೇವರು ಮತ್ತು ಧರ್ಮದ ಬಗೆಗಿನ ತಪ್ಪು ತಿಳಿವಳಿಕೆಗಳನ್ನು ಹೋಗಲಾಡಿಸಿದರು ಎಂದು ಹೇಳಿದರು.

ಕೇಂದ್ರ ಸಾಹಿತ್ಯ ಆಕಾಡೆಮಿ ಪ್ರಶಸ್ತಿ ಪುರಸ್ಕೃತ ಕಂಚ್ಯಾಣಿ ಶರಣಪ್ಪ ಹಾಗೂ ರಾಹುಲ್ ಸಂಕನೂರ ಅವರನ್ನು ಸನ್ಮಾನಿಸಲಾಯಿತು. ಧಾರವಾಡದ ಮುರುಘಾಮಠದ ಡಾ. ಮಲ್ಲಿಕಾರ್ಜುನ ಸ್ವಾಮೀಜಿ, ಭೈರನಹಟ್ಟಿ ದೊರೆಸ್ವಾಮಿ ವಿರಕ್ತಮಠದ ಶಾಂತಲಿಂಗ ಸ್ವಾಮೀಜಿ ಸಮ್ಮುಖ ವಹಿಸಿದ್ದರು. ಜಾತ್ರಾ ಸಮಿತಿ ಅಧ್ಯಕ್ಷ ಡಾ. ಎಂ.ಬಿ. ನಿಂಬಣ್ಣವರ ಸ್ವಾಗತಿಸಿದರು. ಎಸ್.ಎಸ್. ಗೌಡರ ನಿರೂಪಿಸಿದರು. ವಿವೇಕಾನಂದಗೌಡ ಪಾಟೀಲ ವಂದಿಸಿದರು.

ಸಾಹಿತ್ಯ ಲೋಕ ಶ್ರೀಮಂತ : ಯುಪಿಎಸ್​ಸಿ ಪರೀಕ್ಷೆಯಲ್ಲಿ 17ನೇ ರ್ಯಾಂಕ್ ಪಡೆದ ರಾಹುಲ್ ಸಂಕನೂರ ಮಾತನಾಡಿ, ಕೋಮು ಸೌಹಾರ್ದಕ್ಕೆ ಹೆಸರಾದ ತೋಂಟದಾರ್ಯ ಮಠವು ತನ್ನ ಸಾಮಾಜಿಕ ಕಾಳಜಿಯಿಂದ ನಾಡಿನಲ್ಲೇ ಪ್ರಸಿದ್ಧವಾಗಿದೆ. ಲಿಂಗೈಕ್ಯ ಡಾ. ತೋಂಟದ ಸಿದ್ಧಲಿಂಗ ಶ್ರೀಗಳು ಬಸವತತ್ವದ ಅಪ್ಪಟ ಅನುಯಾಯಿಯಾಗಿದ್ದರು. ಶ್ರೀಮಠದದಿಂದ ಬಿಡುಗಡೆಯಾದ ನೂರಾರು ಪುಸ್ತಕಗಳು ಸಾಹಿತ್ಯ ಲೋಕವನ್ನು ಶ್ರೀಮಂತಗೊಳಿಸಿವೆ ಎಂದರು.