ಜಾತ್ಯತೀತರು ಒಗ್ಗೂಡಲಿ

ಪಾಂಡವಪುರ: ಸಮಾಜ ಮತ್ತು ಸರ್ಕಾರಗಳ ತಪ್ಪಿನಿಂದ ರೈತರು ಮತ್ತು ಬಡವರು ನಿರಂತರ ಶೋಷಣೆಗೊಳಗಾಗುತ್ತಿದ್ದಾರೆ. ಹೀಗಾಗಿ ರೈತರು ದೇಶದ ಚುಕ್ಕಾಣೆ ಹಿಡಿಯಲು ಸಿದ್ಧತೆ ಮತ್ತು ಪ್ರೌಢಿಮೆ ಬೆಳೆಸಿಕೊಳ್ಳಬೇಕು ಎಂದು ಸ್ವಾತಂತ್ರೃ ಹೋರಾಟಗಾರ ಎಚ್.ಎಸ್.ದೊರೆಸ್ವಾಮಿ ಅಭಿಪ್ರಾಯಪಟ್ಟರು.

ತಾಲೂಕಿನ ಎಣ್ಣೆಹೊಳೆಕೊಪ್ಪಲು ಗ್ರಾಮದಲ್ಲಿ ವಿಶ್ವ ರೈತದಿನಾಚರಣೆ ಹಾಗೂ ಮಾಜಿ ಪ್ರಧಾನಿ ಚರಣ್‌ಸಿಂಗ್, ದಿ.ಕೆ.ಎಸ್.ಪುಟ್ಟಣ್ಣಯ್ಯ ಅವರ ಹುಟ್ಟುಹಬ್ಬದ ಪ್ರಯುಕ್ತ ಆಯೋಜಿಸಿದ್ದ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ದಿ.ಕೆ.ಎಸ್.ಪುಟ್ಟಣ್ಣಯ್ಯ ಅವರನ್ನು ಕಳೆದುಕೊಂಡಿರುವುದು ರಾಜ್ಯದ ಜನತೆಗೆ ತುಂಬಲಾರದ ನಷ್ಟವಾಗಿದೆ. ರೈತ ಸಂಘಟನೆ ಭಿನ್ನಾಭಿ ಪ್ರಾಯಗಳಿಂದ ಸಿಡಿದು ಹೋಗಿರಬಹುದು. ಆದರೆ ಎಲ್ಲವನ್ನು ಸರಿಪಡಿಸಿಕೊಂಡು ಸಂಘಟನೆಯನ್ನು ಮತ್ತಷ್ಟು ಬಲಿಷ್ಟಗೊಳಿಸಿ ಎಚ್ಚರಿಸುವ ಕೆಲಸ ಆಗಬೇಕಿದೆ. ಪುಟ್ಟಣ್ಣಯ್ಯ ಅವರು ಸದನದಲ್ಲಿ ರೈತರು ಮತ್ತು ಶ್ರಮಿಕ ವರ್ಗದ ಪರವಾಗಿ ತಮ್ಮ ಹಾಸ್ಯಭರಿತ ಮೊನಚು ಭಾಷಣದಿಂದ ಲೇವಡಿ ಮಾಡಿ ಸರ್ಕಾರವನ್ನು ಎಚ್ಚರಿಸುತ್ತಿದ್ದರು. ದೇಶಕ್ಕೆ ಸ್ವಾತಂತ್ರ್ಯ ಬಂದು 70 ವರ್ಷ ಕಳೆದರೂ ಬಡವರು ಬಡವರಾಗಿಯೇ ಇದ್ದಾರೆ. ಜಿಲ್ಲಾಧಿಕಾರಿಗಳು ಮತ್ತು ತಹಸೀಲ್ದಾರ್ ಅವರಿಗೆ ಕಾಟ ಕೊಟ್ಟು ಬಡವರ ಕೆಲಸ ಮಾಡಿಸಬೇಕಿದೆ. ಸಮಾಜದ ಸ್ವಾಸ್ಥ್ಯಕ್ಕಾಗಿ ಪುಟ್ಟಣ್ಣಯ್ಯ ಅವರು ಇನ್ನೂ ಕನಿಷ್ಟ 15 ವರ್ಷಗಳ ಕಾಲ ಬದುಕಿರಬೇಕಿತ್ತು ಎಂದರು.

ಪ್ರಧಾನಿ ಮೋದಿ ಅವರ ಸರ್ವಾಧಿಕಾರಿ ಧೋರಣೆಯಿಂದ ಆರ್‌ಎಸ್‌ಎಸ್ ಮತ್ತು ವಿಶ್ವ ಹಿಂದು ಪರಿಷತ್ ಸಂಘಟನೆಗಳು ಬೇಸತ್ತಿವೆ. ಮೋದಿ ಪಂಚ ರಾಜ್ಯಗಳ ಚುನಾವಣಾ ಫಲಿತಾಂಶದ ಫಲವನ್ನು ಉಂಡಿದ್ದಾರೆ. ವಿದೇಶಾಂಗ ಮಂತ್ರಿ ಇದ್ದರೂ ದೇಶ ದೇಶಗಳನ್ನು ಸುತ್ತುತ್ತಿರುವ ಮೋದಿ ಅವರಿಗೆ ಬುದ್ಧಿ ಕಲಿಸಲು ಜಾತ್ಯತೀತರು ಒಗ್ಗೂಡಬೇಕಿದೆ ಎಂದು ಹೇಳಿದರು. ಒಬ್ಬ ಧೀಮಂತ ರೈತ ಹೋರಾಟಗಾರ ಕೆ.ಎಸ್.ಪುಟ್ಟಣ್ಣಯ್ಯ ಅವರ ಸಾವಿಗೂ ಬೆಲೆ ನೀಡದೆ ಕ್ಷೇತ್ರದ ಜನ ದರ್ಶನ್ ಪುಟ್ಟಣ್ಣಯ್ಯ ಅವರನ್ನು ಸೋಲಿಸಿ ಬಿಟ್ಟರಲ್ಲ ಎಂದು ಮರುಕಪಟ್ಟರು.

ಸ್ವರಾಜ್ ಇಂಡಿಯಾ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಯೋಗೇಂದ್ರ ಯಾದವ್ ಮಾತನಾಡಿ, ಆಡಳಿತ ಪಕ್ಷ ಹಾಗೂ ವಿರೋಧ ಪಕ್ಷಗಳಿಗೆ ಚುನಾವಣೆ ಸಂದರ್ಭದಲ್ಲಿ ರೈತರ ನೆನಪು ಬಂದಿದೆ. ರಾಹುಲ್ ಗಾಂಧಿ ಮತ್ತು ಪ್ರಧಾನಿ ನರೇಂದ್ರ ಮೋದಿ ಅವರು ರೈತರ ಬಗ್ಗೆ ಈಗ ಮಾತನಾಡಲಾರಂಭಿಸಿದ್ದಾರೆ ಎಂದು ಟೀಕಿಸಿದರು.

ಹಿಂದಿನಿಂದಲೂ ಭ್ರಷ್ಟಾಚಾರ, ತುರ್ತುಪರಿಸ್ಥಿತಿ, ಬೋಪರ್ಸ್, 2 ಜಿ ಹಗರಣಗಳ ವಿಷಯಗಳ ಆಧಾರದ ಮೇಲೆ ಚುನಾವಣೆ ನಡೆ ಯುತ್ತಿತ್ತು. ದೇಶದ ಇತಿಹಾಸದಲ್ಲಿ ಮೊದಲ ಬಾರಿಗೆ ರೈತರ ವಿಚಾರದ ಮೇಲೆ ಚುನಾವಣೆ ನಡೆಯುತ್ತಿದೆ. ಪುಟ್ಟಣ್ಣಯ್ಯ ಅವರು ರೈತರ ಸಾಲ ಮನ್ನಾ ಮಾಡುವುದಕ್ಕಿಂತ ರೈತರಿಗೆ ಸಾಲದಿಂದ ಮುಕ್ತಿ ಬೇಕು ಎನ್ನುವ ಮೂಲಕ ರೈತರ ಭವಿಷ್ಯದ ಚಿಂತನೆ ಮಾಡುತ್ತಿದ್ದರು ಎಂದರು.

ಬಡಗಲಪುರ ನಾಗೇಂದ್ರ ಮಾತನಾಡಿ, ಕೆ.ಎಸ್.ಪುಟ್ಟಣ್ಣಯ್ಯ ಸಾರ್ವಜನಿಕ ಜೀವನಕ್ಕೆ ಬಾರದಿದ್ದರೆ ಶತಾಯುಷಿಗಳಾಗುತ್ತಿದ್ದರು. ಕ್ರೀಡಾಪಟುವಾಗಿ, ಹಾಸ್ಯಗಾರರಾಗಿ ಸದಾ ನಗುತ್ತಿದ್ದ ಅವರು ಇಷ್ಟು ಬೇಗ ಸಾಯುತ್ತಿರಲಿಲ್ಲ. ರೈತರು, ದಲಿತರು, ಶ್ರಮಿಕರು ಪುಟ್ಟಣ್ಣಯ್ಯ ಅವರನ್ನು ನಾಯಕನೆಂದು ಒಪ್ಪಿಕೊಂಡಿದ್ದರು. ಅನುಭವ ಜ್ಞಾನದಿಂದ ಆರ್ಥಿಕ ತಜ್ಞರಾಗಿ, ಶಾಸಕರಾಗಿ, ಉತ್ತಮ ಆಡಳಿತಗಾರನಾಗಿ ಜನ ಮೆಚ್ಚುಗೆ ಗಳಿಸಿದ್ದರು ಎಂದು ಹೇಳಿದರು.

ಇದಕ್ಕೂ ಮೊದಲು ಕ್ಯಾತನಹಳ್ಳಿಯಲ್ಲಿರುವ ಕೆ.ಎಸ್.ಪುಟ್ಟಣ್ಣಯ್ಯ ಅವರ ಸಮಾಧಿಗೆ ತೆರಳಿ ಪೂಜೆ ಸಲ್ಲಿಸಿ ಪುಷ್ಪಾರ್ಚನೆ ಮಾಡಿ ಗೌರವ ಸಲ್ಲಿಸಲಾಯಿತು.ಕಾರ್ಯಕ್ರಮದಲ್ಲಿ ದೇವನೂರ ಮಹದೇವ, ಸುನೀತಾ ಪುಟ್ಟಣ್ಣಯ್ಯ, ಅಕ್ಷತಾ ಪುಟ್ಟಣ್ಣಯ್ಯ, ಸ್ಮಿತಾ ಪುಟ್ಟಣ್ಣಯ್ಯ, ನಂದಿನಿ ಜಯರಾಂ, ಕೆ.ಟಿ.ಗಂಗಾಧರ್, ವೈ.ಜಿ.ಬಾಲಕೃಷ್ಣೇಗೌಡ ಇತರರು ಇದ್ದರು.ಇದೇ ಸಂದರ್ಭದಲ್ಲಿ ಕೆ.ಎಸ್.ಪುಟ್ಟಣ್ಣಯ್ಯ ಅವರ ಪುತ್ಥಳಿಯನ್ನು ಎಚ್.ಎಸ್.ದೊರೆಸ್ವಾಮಿ ಅನಾವರಣಗೊಳಿಸಿದರು.