ಜವಾಬ್ದಾರಿ ನಿಭಾಯಿಸುವ ಧೈರ್ಯ ನನಗಿದೆ

ಶಿರಸಿ: ಬರುವ ಎರಡು ವರ್ಷಗಳಲ್ಲಿ ರಾಜ್ಯದ ಹಳ್ಳಿ ಹಳ್ಳಿಗಳಲ್ಲಿ ಬಿಜೆಪಿ ಧ್ವಜ ಹಾರಿಸಲಿದ್ದೇವೆ. ಮುಂದಿನ ವಿಧಾನಸಭೆ ಚುನಾವಣೆಯಲ್ಲಿ ಕನಿಷ್ಠ 150 ಸ್ಥಾನ ಗೆಲ್ಲಲಿದ್ದೇವೆ ಎಂದು ರಾಜ್ಯಾಧ್ಯಕ್ಷ ನಳಿನಕುಮಾರ ಕಟೀಲ್ ಹೇಳಿದರು.

ನಗರದ ರಾಘವೇಂದ್ರ ಕಲ್ಯಾಣಮಂಟಪದಲ್ಲಿ ಬುಧವಾರ ಹಮ್ಮಿಕೊಳ್ಳಲಾದ ಅಭಿನಂದನಾ ಸಭೆಯಲ್ಲಿ ಅವರು ಮಾತನಾಡಿದರು. ಬಿಜೆಪಿಗೆ ರಾಜ್ಯದ ಜನತೆ ಸಂಪೂರ್ಣ ಬೆಂಬಲ ನೀಡಿಲ್ಲ. ಆದರೆ, ಅನಿವಾರ್ಯವಾಗಿ ಸರ್ಕಾರ ರಚಿಸುವಂತಾಯಿತು. ಸರ್ಕಾರದ ಮುಂದಿರುವ ಸವಾಲುಗಳನ್ನು ನಾವು ಸ್ವೀಕಾರ ಮಾಡಿದ್ದು, ಎಲ್ಲರಿಗೂ ನ್ಯಾಯ ಒದಗಿಸಿಕೊಡಲಿದ್ದೇವೆ ಎಂದರು.

ಸುಮ್ಮನೆ ಆಡಳಿತ ನಡೆಸುವುದಾದರೆ ಮನಮೋಹನ್ ಸಿಂಗ್ ಮತ್ತು ಸೋನಿಯಾ ಗಾಂಧಿ ಅವರೇ ದೇಶಕ್ಕೆ ಸಾಕಾಗಿತ್ತು. ಆದರೆ, ಬಿಜೆಪಿಯ ಗುರಿ ಎಂದಿಗೂ ಆಡಳಿತವನ್ನು ಹಿಡಿಯುವುದಲ್ಲ. ಸಬ್ ಕಾ ಸಾತ್, ಸಬ್ ಕಾ ವಿಕಾಸ್ ಧ್ಯೇಯ ವಾಕ್ಯದೊಂದಿಗೆ ಭಾರತವನ್ನು ಜಗತ್ತಿಗೇ ಮಾದರಿ ರಾಷ್ಟ್ರವನ್ನಾಗಿಸುವುದಾಗಿದೆ. ನಮ್ಮ ವಿಚಾರ ಧಾರೆ, ಕಾರ್ಯ ಪದ್ಧತಿಯಿಂದ ನಾವು ಎಂದಿಗೂ ವಿಚಲಿತರಾಗುವುದಿಲ್ಲ. ದೇಶ ಸ್ವಾತಂತ್ರ್ಯಾದ ಬಳಿಕ ರಾಮರಾಜ್ಯವಾಗಬೇಕು ಎಂಬುದು ಎಲ್ಲರ ಕನಸಾಗಿತ್ತು. ಆದರೆ, ನೆಹರೂ ಈ ಕನಸನ್ನು ದಾರಿ ತಪ್ಪಿಸಿದ್ದಾರೆ. ಭಾರತದ ಮುಕುಟವಾದ ಕಾಶ್ಮೀರದ ಜನತೆ ಸ್ವಾತಂತ್ರ್ಯನ್ನು ಅನುಭವಿಸಲು ನರೇಂದ್ರ ಮೋದಿಯವರು ಬರುವರೆಗೂ ಕಾಯಬೇಕಾಯಿತು. ವಂಶಾಡಳಿತ, ತುಷ್ಟೀಕರಣವನ್ನೇ ತತ್ತ್ವವಾಗಿಸಿಕೊಂಡ 63 ಪಕ್ಷಗಳು ದೇಶದಲ್ಲಿದ್ದರೆ ಸಿದ್ಧಾಂತದ ಅಡಿಯಲ್ಲಿ ನಡೆಯುತ್ತಿರುವ ಏಕೈಕ ಪಕ್ಷ ಬಿಜೆಪಿಯಾಗಿದೆ. ಮಠ ಮಂದಿರ, ಸಮಾಜ ಒಡೆದು ಆಡಳಿತ ನಡೆಸುತ್ತಿರುವವರಿಂದ ಬೇಸತ್ತಿರುವ ಜನತೆ ದೇಶಾದ್ಯಂತ ಬಿಜೆಪಿ ಬೆಂಬಲಿಸಿದ್ದಾರೆ ಎಂದರು.

ಶಾಸಕರಾದ ರೂಪಾಲಿ ನಾಯ್ಕ, ಸುನೀಲ ನಾಯ್ಕ, ದಿನಕರ ಶೆಟ್ಟಿ, ಪಕ್ಷದ ನಾಯಕರಾದ ಮಹೇಶ ತೆಂಗಿನಕಾಯಿ, ಶಿವಾನಂದ ನಾಯ್ಕ, ಗಂಗಾಧರ ಭಟ್, ವಿ.ಎಸ್. ಪಾಟೀಲ, ಸುನೀಲ ಹೆಗಡೆ, ವಿನೋದ ಪ್ರಭು, ಎಂ.ಜಿ. ನಾಯ್ಕ ಇತರರಿದ್ದರು. ಜಿಲ್ಲಾಧ್ಯಕ್ಷ ಕೆ. ಜಿ. ನಾಯ್ಕ ಪ್ರಾಸ್ತಾವಿಕವಾಗಿ ಮಾತನಾಡಿದರು.

ಹಾರದ ಭಾರದ ಅರಿವಿದೆ
ರಾಜ್ಯಾಧ್ಯಕ್ಷ ಸ್ಥಾನ ಸುಲಭವಲ್ಲ ಎಂಬ ಅರಿವು ನನಗಿದೆ. ರಾಜ್ಯಾಧ್ಯಕ್ಷನಾಗಿದ್ದಕ್ಕೆ ಎಲ್ಲರೂ ಹಾರ ಹಾಕಿದ್ದಾರೆ. ಈ ಹಾರ ಎಷ್ಟು ಭಾರವಾಗಿದೆ ಎಂಬುದನ್ನೂ ಅರಿತಿದ್ದೇನೆ. ಆದರೆ, ಸಮರ್ಥವಾಗಿ ನಿಭಾಯಿಸುವ ಧೈರ್ಯ ನನಗಿದೆ ಎಂದು ನಳಿನಕುಮಾರ ಹೇಳಿದರು.

ಸಂಸದ ಅನಂತಕುಮಾರ ಹೆಗಡೆ ಅವರ ಆಪ್ತರಾಗಿರುವ ಕಟೀಲು, ಈ ಹಿಂದೆ ಹಲವು ಬಾರಿ ಜಿಲ್ಲೆಗೆ ಆಗಮಿಸಿದ್ದರಾದರೂ ರಾಜ್ಯಾಧ್ಯಕ್ಷ ಸ್ಥಾನದ ಜವಾಬ್ದಾರಿ ಹೊತ್ತು ಆಗಮಿಸುತ್ತಿರುವುದು ಮೊದಲ ಬಾರಿ.‘ಈ ಸ್ಥಾನ ನನಗೆ ವಹಿಸಿದಾಗ ಅಂಜಿಕೆ ಇತ್ತು. ಈಶ್ವರಪ್ಪ, ಬಿ.ಎಸ್. ಯಡಿಯೂರಪ್ಪ ಅವರಂತ ನಾಯಕರು ನಿಭಾಯಿಸಿದ ಹುದ್ದೆ ನನ್ನಿಂದ ನಿಭಾಯಿಸಲು ಸಾಧ್ಯವೇ ಎಂಬ ಆತಂಕ ಇತ್ತು. ಆದರೆ, ಅವರೆಲ್ಲರೂ ಜತೆಯಲ್ಲಿರುವುದರಿಂದ ನನ್ನಿಂದ ಸಾಧ್ಯ ಎಂದು ಒಪ್ಪಿಕೊಂಡಿದ್ದೇನೆ ಎಂದರು.

ಉತ್ತರ ಕನ್ನಡ ಜಿಲ್ಲೆಗೆ ಮಂತ್ರಿ ಪದವಿ ಇಲ್ಲ ಎಂಬ ಕೂಗಿದೆ. ಆದರೆ, ಅದು ತಾತ್ಕಾಲಿಕ. ಕಾಲ ಕೂಡಿ ಬಂದಾಗ ಉತ್ತರ ಕನ್ನಡಕ್ಕೆ ಮಂತ್ರಿ ಪದವಿ ಸಿಕ್ಕೇ ಸಿಗುತ್ತದೆ.
– ನಳಿನಕುಮಾರ ಕಟೀಲ್ .

ಐಬಿಯಲ್ಲಿ ಕೋರ್ ಕಮಿಟಿ ಸಭೆ
ರಾಜ್ಯಾಧ್ಯಕ್ಷ ನಳಿನಕುಮಾರ ಕಟೀಲ್ ಪಕ್ಷದ ಸಂಘಟನೆಗಾಗಿ ಇಲ್ಲಿಯ ಲೋಕೋಪಯೋಗಿ ಇಲಾಖೆ ನಿರೀಕ್ಷಣಾ ಮಂದಿರವನ್ನು ಬಳಸಿಕೊಂಡ ಘಟನೆ ನಡೆಯಿತು.

ನಗರಕ್ಕೆ ಆಗಮಿಸಿದ ಬಳಿಕ ನಿರೀಕ್ಷಣಾ ಮಂದಿರಕ್ಕೆ ತೆರಳಿದ ಕಟೀಲ್, ಅಲ್ಲಿ ಕೆಲ ಹೊತ್ತು ವಿಶ್ರಾಂತಿ ಪಡೆದರು. ಈ ವೇಳೆ ಪಕ್ಷದ ಕಾರ್ಯಕರ್ತರು ಅಲ್ಲಿಗೆ ಆಗಮಿಸಿದ್ದಾರೆ. ಪಕ್ಷದ ಸಂಘಟನೆ ಕುರಿತಂತೆ ಇಲ್ಲಿ ಅರ್ಧ ಗಂಟೆಗೂ ಅಧಿಕ ಕಾಲ ಸಭೆ ನಡೆಸಲಾಗಿದೆ. ಜಿಲ್ಲೆಯ ವಿವಿಧೆಡೆಯಿಂದ ಆಗಮಿಸಿದ್ದ 20ರಷ್ಟು ಕಾರ್ಯಕರ್ತರು ಈ ಸಭೆಯಲ್ಲಿದ್ದರು ಎಂದು ಪಾಲ್ಗೊಂಡ ಕಾರ್ಯಕರ್ತರೊಬ್ಬರು ತಿಳಿಸಿದ್ದಾರೆ.

Leave a Reply

Your email address will not be published. Required fields are marked *