ನಿಪ್ಪಾಣಿ: ತಾಲೂಕಿನ ಶ್ರೀಪೇವಾಡಿ ಗ್ರಾಮದಲ್ಲಿರುವ ನಿಪ್ಪಾಣಿ ಸಹಕಾರಿ ಔದ್ಯೋಗಿಕ ವಸಾಹತುವಿನ ಮಾಧವಿ ಟೆಕ್ಸ್‌ಟೈಲ್ ಪವರ್‌ಲೂಮ್ ಜವಳಿ ಕಾರ್ಖಾನೆಯಲ್ಲಿ ಗುರುವಾರ ನಸುಕಿನಲ್ಲಿ ಶಾರ್ಟ್ ಸರ್ಕ್ಯೂಟ್‌ನಿಂದ ಬೆಂಕಿ ಅವಘಡ ಸಂಭವಿಸಿದ್ದು, ಅಪಾರ ಹಾನಿಯಾಗಿದೆ.
ರಮೇಶ ಚವ್ಹಾಣ ಅವರಿಗೆ ಸೇರಿದ ಈ ಕಾರ್ಖಾನೆ, ಲಾಕ್‌ಡೌನ್ ಹಿನ್ನೆಲೆಯಲ್ಲಿ ಬಂದ್ ಮಾಡಲಾಗಿತ್ತು. ಗುರುವಾರ ಬೆಳಗಿನ ಜಾವದಲ್ಲಿ ಕಾರ್ಖಾನೆಯಲ್ಲಿ ಇದ್ದಕ್ಕಿದ್ದಂತೆ ಬೆಂಕಿ ಕಾಣಿಸಿಕೊಂಡಿದೆ. ತಕ್ಷಣ ಸ್ಥಳೀಯ ನಿವಾಸಿಗಳು ಮಾಲೀಕ ರಮೇಶ ಹಾಗೂ ಅಗ್ನಿಶಾಮಕ ಸಿಬ್ಬಂದಿಗೆ ಮಾಹಿತಿ ನೀಡಿದ್ದಾರೆ. ಆದರೆ, ಅಗ್ನಿಶಾಮಕ ಸಿಬ್ಬಂದಿ ಬರುವಷ್ಟರಲ್ಲಿಯೇ ಬೆಂಕಿ ಆವರಿಸಿ ಕಾರ್ಖಾನೆ ಸುಟ್ಟು ಕರಕಲಾಗಿದೆ. ಬೆಳಗ್ಗೆ 9ರ ವರೆಗೂ ಬೆಂಕಿ ನಂದಿಸುವ ಕಾರ್ಯ ನಡೆದಿತ್ತು.
ತಡವಾಗಿ ಈ ಘಟನೆ ಗಮನಕ್ಕೆ ಬಂದ ಹಿನ್ನೆಲೆಯಲ್ಲಿ ಕೋಟ್ಯಂತರ ಬೆಲೆಯ ಉಡುಪು ತಯಾರಿಸುವ ಯಂತ್ರೋಪಕರಣ, ಸಿದ್ಧ ಉಡುಪುಗಳು ಮತ್ತು ಕಚ್ಚಾ ವಸ್ತುಗಳು ಬೆಂಕಿಗೆ ಆಹುತಿಯಾಗಿವೆ. ನಿಪ್ಪಾಣಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇದೇ ಕೈಗಾರಿಕಾ ವಸಾಹತು ಪ್ರದೇಶದಲ್ಲಿ ಎರಡು ತಿಂಗಳಲ್ಲಿ ಇದು ಎರಡನೇ ಘಟನೆಯಾಗಿದ್ದು, ಕೈಗಾರಿಕೋದ್ಯಮಿಗಳಲ್ಲಿ ಆತಂಕ ಮೂಡಿಸಿದೆ.