ಗುಳೇದಗುಡ್ಡ: ಪಟ್ಟಣ ಸೇರಿ ತಾಲೂಕಿನಾದ್ಯಂತ ಬುಧವಾರ ತಡರಾತ್ರಿ ಹಾಗೂ ಗುರುವಾರ ಸುರಿದ ಭಾರಿ ಮಳೆಗೆ ತಾಲೂಕಿನ ಎಲ್ಲ ಹಳ್ಳಗಳು ತುಂಬಿ ಹರಿಯುತ್ತಿವೆ. ಪಟ್ಟಣದ ಹಲವೆಡೆ ಹಳ್ಳದ ನೀರು ನುಗ್ಗಿ ತೊಂದರೆಯುಂಟಾಗಿದೆ.
ಪಟ್ಟಣದ ಮೂಲಕ ಹರಿದು ಮಲಪ್ರಭ ಸೇರುವ ಹಳ್ಳ ತುಂಬಿ ಹರಿದಿದೆ. ಗುಳೇದಗುಡ್ಡ ಪಟ್ಟಣದಿಂದ ವಿವಿಧ ಹಳ್ಳಿಗಳಿಗೆ ಸಂಪರ್ಕ ಕಲ್ಪಿಸುವ ಸೇತುವೆಗಳು ಜಲಾವೃತಗೊಂಡಿವೆ. ಪರ್ವತಿ, ಹುಲ್ಲಿಕೇರಿ, ಕೆರಿ ಖಾನಾಪುರ, ಹುಲ್ಲಿಕೇರಿ ಎಸ್‌ಪಿ, ಪಟ್ಟದಕಲ್ಲಗೆ ಸಂಪರ್ಕ ಕಲ್ಪಿಸುವ ಸೇತುವೆ ನೀರಲ್ಲಿ ಮುಳುಗಿತ್ತು. ಆಸಂಗಿ, ಲಾಯದಗುಂದಿ, ಸಬ್ಬಲಹುಣಸಿ, ನಾಗರಾಳ, ಪಟ್ಟದಕಲ್ಲ ಸಂಪರ್ಕ ಬೆಳಗ್ಗೆಯಿಂದ ನಾಲ್ಕೈದು ಗಂಟೆ ಕಡಿತಗೊಂಡಿದ್ದರಿಂದ ದಿನನಿತ್ಯ ಗ್ರಾಮಗಳಿಂದ ಪಟ್ಟಣಕ್ಕೆ ಆಗಮಿಸುವ ಜನರು, ವಿದ್ಯಾರ್ಥಿಗಳಿಗೆ ತೊಂದರೆ ಉಂಟಾಯಿತು.
*ತುಂಬಿ ಹರಿಯುತ್ತಿರುವ ಮಲಪ್ರಭ: ಮಲಪ್ರಭ ನದಿಗೆ ಅಪಾರ ಪ್ರಮಾಣದ ನೀರು ಹರಿದು ಬರುತ್ತಿದೆ. ಮಲಪ್ರಭ ನದಿ ದಂಡೆ ಮೇಲಿರುವ ಗ್ರಾಮಗಳ ಗ್ರಾಮಸ್ಥರು ಜಾನುವಾರು ತೆಗೆದುಕೊಂಡು ನದಿ ದಡಕ್ಕೆ ಹೋಗದಂತೆ ಹಾಗೂ ಮಕ್ಕಳನ್ನು ನದಿ ಕಡೆಗೆ ಹೋಗದಂತೆ ಎಚ್ಚರಿಕೆ ವಹಿಸುವಂತೆ ಗ್ರಾಮಲೆಕ್ಕಾಧಿಕಾರಿಗಳು ಮುನ್ನೆಚ್ಚರಿಕೆ ನೀಡಿದ್ದಾರೆ.