ಜಲಮೂಲಗಳ ಸಂರಕ್ಷಣೆಗೆ ‘ಜಲಾಮೃತ’

ಚಿಕ್ಕಬಳ್ಳಾಪುರ: ಬರದಿಂದ ತತ್ತರಿಸಿರುವ ಜಿಲ್ಲೆಯ ಜಲಮೂಲಗಳ ಸಂರಕ್ಷಣೆಗೆ ಜಲಾಮೃತ ಯೋಜನೆ ವರದಾಯಕ ಎಂದು ಕೃಷಿ ಸಚಿವ ಎನ್.ಎಚ್.ಶಿವಶಂಕರರೆಡ್ಡಿ ಹೇಳಿದರು.

ಜಿಲ್ಲಾಡಳಿತ ಭವನ ಸಭಾಂಗಣದಲ್ಲಿ ಶನಿವಾರ ಹಮ್ಮಿಕೊಂಡಿದ್ದ ಜಲಾಮೃತ ಹಾಗೂ ಸ್ವಚ್ಛಮೇವ ಜಯತೇ ಕಾರ್ಯಕ್ರಮದಲ್ಲಿ ಮಾತನಾಡಿದರು. ಪ್ರಸ್ತುತ ದಿನಗಳಲ್ಲಿ ಜಲ ಸಂರಕ್ಷಣೆ ಕೆಲಸ ಜರೂರಾಗಿ ನಡೆಯಬೇಕು. ಇತ್ತೀಚಿನ ವರ್ಷಗಳಲ್ಲಿ ಜಿಲ್ಲೆಯನ್ನು ಬರ ಹೆಚ್ಚಿಗೆ ಕಾಡಿದ್ದು, ನೀರಿನ ಹಾಹಾಕಾರ ಮತ್ತು ಮೇವಿನ ಕೊರತೆಗೆ ಹಲವು ಸಮಸ್ಯೆ ಉದ್ಭವವಾಗಿದೆ. ಇದರ ನಡುವೆಯೂ ರೈತರು ಕುಗ್ಗದೆ ಕೃಷಿ ಚಟುವಟಿಕೆ ಕೈಗೊಳ್ಳುತ್ತಿದ್ದಾರೆ ಎಂದರು.

ಜಿಲ್ಲೆಯ ಜನರು ಜಲಮೂಲಗಳ ಉಳಿವಿಗೆ ನಿರ್ಲಕ್ಷ್ಯ ತೋರಿದ್ದಾರೆ. ಅನೇಕ ಕೆರೆ ಮತ್ತು ಕಾಲುವೆಗಳು ಒತ್ತುವರಿಯಾಗಿವೆ. ನೀರಿನ ಸಂಗ್ರಹಣ ಸಾಮರ್ಥ್ಯ ಮತ್ತು ಅಂತರ್ಜಲಮಟ್ಟ ಕುಸಿದಿದ್ದು, ಇದೇ ರೀತಿ ಮುಂದುವರಿದರೆ ವಿನಾಶದ ದಿನಗಳಿಗೆ ನಾಂದಿ ಹಾಡಿದಂತಾಗುತ್ತದೆ ಎಂದರು.

ಜಿಲ್ಲೆಯಲ್ಲಿ ಪ್ರತಿಯೊಬ್ಬರೂ ಮಳೆ ನೀರು ಕೊಯ್ಲಿಗೆ ಪ್ರಮುಖ ಆದ್ಯತೆ ನೀಡಬೇಕು. ಹಾಗೆಯೇ ಈ ಭಾಗವನ್ನು ಗಿಡಮರಗಳ ಬೆಳೆಸುವಿಕೆ ಮೂಲಕ ಹಸಿರೀಕರಣಗೊಳಿಸಬೇಕು. ಇದಕ್ಕಾಗಿ ಜಿಲ್ಲೆಯಲ್ಲಿ 50 ಲಕ್ಷ ಸಸಿಗಳ ನೆಡುವ ಗುರಿ ಹೊಂದಲಾಗಿದೆ. ಇದಕ್ಕೆ ಎಲ್ಲರೂ ಕೈ ಜೋಡಿಸಬೇಕೆಂದು ಕೋರಿದರು.

ಜಿಪಂ ಅಧ್ಯಕ್ಷ ಎಚ್.ವಿ.ಮಂಜುನಾಥ್ ಮಾತನಾಡಿ, ಶಾಶ್ವತ ಬರಗಾಲದ ದವಡೆಗೆ ಸಿಲುಕಿರುವ ಜಿಲ್ಲೆ ನಮ್ಮದು. ಇದರ ನಡುವೆಯೂ ನಾವೆಲ್ಲರೂ ನಿರ್ಲಕ್ಷ್ಯ ತೋರಿದ್ದಲ್ಲಿ ಈ ಭಾಗವು ರಾಜಸ್ಥಾನದ ಮರುಭೂಮಿ ಮಾದರಿಯಲ್ಲಿ ಪರಿವರ್ತನೆಯಾಗುತ್ತದೆ. ಸರ್ಕಾರ ಅನೇಕ ಯೋಜನೆ ಮತ್ತು ಕಾರ್ಯಕ್ರಮಗಳನ್ನು ಜಾರಿಗೆ ತರುತ್ತಿದೆ. ಇವುಗಳನ್ನು ಯಶಸ್ವಿಗೊಳಿಸುವ ಹೊಣೆ ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳ ಜತೆಗೆ ಜನರ ಮೇಲೂ ಇದೆ ಎಂದರು.

ಜಲಮೂಲಗಳ ಸಂರಕ್ಷಣೆಯಲ್ಲಿ ವಿದ್ಯಾರ್ಥಿ ಮತ್ತು ಶಿಕ್ಷಕರ ಪಾತ್ರದ ಕುರಿತು ಭಾಷಣಕಾರ ಕೃಷ್ಣೇಗೌಡ ವಿವರಿಸಿದರು. ರೋಟರಿ ಸಂಸ್ಥೆಯ ಕೋಟಿ ಸಸಿ ನಾಟಿ ಕಾರ್ಯಕ್ರಮದ ಮುಖ್ಯಸ್ಥ ಅಮರನಾರಾಯಣ ಮಾತನಾಡಿದರು. ಜಿಲ್ಲಾಧಿಕಾರಿ ಪಿ.ಅನಿರುಧ್ ಶ್ರವಣ್, ಜಿಪಂ ಉಪಾಧ್ಯಕ್ಷೆ ನಿರ್ಮಲಾ ಮುನಿರಾಜು, ಸಿಇಒ ಗುರುದತ್ ಹೆಗಡೆ, ಸದಸ್ಯರಾದ ಕೆ.ಎಂ.ಮುನೇಗೌಡ, ಕೆ.ಸಿ.ರಾಜಾಕಾಂತ್ ಮತ್ತಿತರರಿದ್ದರು.

ಸಾಧನೆಗೆ ಸನ್ಮಾನ: ಎರಡು ವಾರಗಳಲ್ಲಿ 8 ಸಾವಿರ ಸಸಿಗಳನ್ನು ನೆಟ್ಟ ಗ್ರಾಪಂ ಅಧ್ಯಕ್ಷೆ ಚಂದ್ರಕಲಾ ಮತ್ತು ಪಿಡಿಒ ಮಂಜುನಾಥ್ ಅವರನ್ನು ಸನ್ಮಾನಿಸಲಾಯಿತು. ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಶೇ.100 ಫಲಿತಾಂಶ ಪಡೆದ ಸರ್ಕಾರಿ 47 ಶಾಲೆಗಳ ಮುಖ್ಯಶಿಕ್ಷಕರು, ಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿಗಳು, ಲೋಕಸಭೆ ಚುನಾವಣೆಯಲ್ಲಿ ಉತ್ತಮ ಮಾದರಿ ಮತಗಟ್ಟೆಗಳನ್ನು ನಿರ್ವಿುಸಿದ ಅಧಿಕಾರಿಗಳನ್ನು ಸನ್ಮಾನಿಸಲಾಯಿತು.

ಜಾಥಾಗೆ ಚಾಲನೆ: ಚಿಕ್ಕಬಳ್ಳಾಪುರ ಜಿಲ್ಲೆಯ ಆರು ತಾಲೂಕುಗಳಲ್ಲಿ ಜಲಾಮೃತ ಯೋಜನೆ ಮಹತ್ವದ ಕುರಿತು ಅರಿವು ಮೂಡಿಸುವ ಸ್ವಚ್ಛ ಮೇವ ಜಯತೇ ರಥಕ್ಕೆ ಸಚಿವ ಎನ್.ಎನ್.ಶಿವಶಂಕರರೆಡ್ಡಿ ಚಾಲನೆ ನೀಡಿದರು. ಜಲಾಮೃತ ಹಾಗೂ ಸ್ವಚ್ಛತಾ ಕಾರ್ಯಕ್ರಮಗಳಿಗೆ ಸಂಬಂಧಿಸಿದ ಕೈಪಿಡಿ, ಶಿಕ್ಷಣ ಇಲಾಖೆಯ 2019-20ನೇ ಸಾಲಿನ ಕ್ರಿಯಾಯೋಜನೆ ಪುಸ್ತಕವನ್ನು ಬಿಡುಗಡೆಗೊಳಿಸಿದರು.

 

Leave a Reply

Your email address will not be published. Required fields are marked *