Wednesday, 12th December 2018  

Vijayavani

ಟ್ರಿನಿಟಿ ಸರ್ಕಲ್​​​ ಬಳಿ ಬಿರುಕು ಬಿಟ್ಟ ಪಿಲ್ಲರ್ - 10 ಕಿಮೀ ವೇಗದಲ್ಲಿ ಮೆಟ್ರೋ ಓಡಾಟ - ಸಮಸ್ಯೆ ಬಗೆಹರಿಸೋದಾಗಿ ಹೇಳಿದ ಸಿಎಂ        ಸದನದ ಹೊರಗೆ NPS ಆದೇಶ ಹಿನ್ನೆಲೆ - ಸಿಎಂ ವಿರುದ್ಧ ಹಕ್ಕುಚ್ಯುತಿ ಮಂಡನೆಗೆ ಬಿಜೆಪಿ ಸಿದ್ದತೆ -  ಸಂಕಷ್ಟ ತಂದ ಪೆನ್ಶನ್‌ ಸ್ಕೀಂ        ಮಧ್ಯಪ್ರದೇಶದಲ್ಲಿ ಸರ್ಕಾರ ರಚನೆ ಕಸರತ್ತು -  ರಾಜ್ಯಪಾಲರನ್ನು ಭೇಟಿಯಾಗಿ ಕಾಂಗ್ರೆಸ್ ಹಕ್ಕು ಮಂಡನೆ        ನಾಳೆ ಕೆಸಿಆರ್ ಪಟ್ಟಾಭಿಷೇಕ- ಪ್ರಮಾಣವಚನಕ್ಕೆ ಚಂದ್ರಶೇಖರ್ ರಾವ್ ಸಿದ್ಧತೆ - ರಾಜ್ಯಪಾಲರನ್ನು ಭೇಟಿಯಾದ ನಾಯಕ        ಶ್ರೀರಂಗಪಟ್ಟಣದಲ್ಲಿ ಶೂಟಿಂಗ್ ವೇಳೆ ಅವಾಂತರ - ಭರತ ಬಾಹುಬಲಿ ತಂಡದ ಮೇಲೆ ಹೆಜ್ಜೇನು ದಾಳಿ -ಏಳು ಮಂದಿ ಆಸ್ಪತ್ರೆಗೆ       
Breaking News

ಜಲದೀಪ ಬೆಳಗಿದ ಬಂಡೆಪ್ಪಸ್ವಾಮಿ

Thursday, 26.10.2017, 3:01 AM       No Comments

| ಪ್ರಶಾಂತ ರಿಪ್ಪನ್​ಪೇಟೆ

ಬೆಳಕು ಅರಿವಿನ ಸಂಕೇತ, ಜ್ಞಾನದ ಕುರುಹು. ಬೆಳಕಿಗೆ ಎಲ್ಲ ಧರ್ಮ ಮತ್ತು ಸಂಪ್ರದಾಯಗಳಲ್ಲೂ ಮಾನ್ಯತೆ ಇದೆ. ಇಂತಹ ಜ್ಯೋತಿಯನ್ನು ಪ್ರಮುಖ ದೈವದಂತೆ ಪೂಜಿಸುವ ಅಪರೂಪದ ಕ್ಷೇತ್ರ ಬಂಡಿಗಣಿ ಸಾಲವಡಗಿ.

ವಿಜಯಪುರ ಜಿಲ್ಲೆ ಮುದ್ದೇಬಿಹಾಳ ತಾಲೂಕಿನಲ್ಲಿರುವ ಬಂಡಿಗಣಿ ಸಾಲವಡಗಿ ಪುಟ್ಟ ಗ್ರಾಮ. ಮಹಾತಪಸ್ವಿ ಶಿರಹಟ್ಟಿಯ ಫಕೀರೇಶ್ವರ ಸ್ವಾಮಿಗಳ ಶಿಷ್ಯರಾಗಿದ್ದ ಶಿವಯೋಗಿ ಬಂಡೆಪ್ಪಯ್ಯ ಸ್ವಾಮಿಗಳು ಹೊತ್ತಿಸಿದ ಜ್ಯೋತಿ ಇಲ್ಲಿ ಕಳೆದ ಆರು ಶತಮಾನಗಳಿಂದ ನಿರಂತರವಾಗಿ ಬೆಳಗುತ್ತಿದೆ. ಬಂಡೆಪ್ಪಯ್ಯ ಸ್ವಾಮಿಯ ಮಠದಲ್ಲಿ ಯಾವುದೇ ದೇವರ ಮೂರ್ತಿ, ಗದ್ದುಗೆಗಳಿಲ್ಲ. ಗರ್ಭಗುಡಿಯಲ್ಲಿರುವುದು ನಂದಾದೀಪಗಳು ಮಾತ್ರ. ಇವು ಸಾಮಾನ್ಯ ಜ್ಯೋತಿಗಳಲ್ಲ, ಶ್ರೀ ಬಂಡೆಪ್ಪಯ್ಯ ಸ್ವಾಮಿಗಳು ನೀರನ್ನು ಹಾಕಿ ಹೊತ್ತಿಸಿದವು. ಇಲ್ಲಿ ನಾಲ್ಕು ಎಕರೆ ವಿಸ್ತೀರ್ಣದ ಮಠವನ್ನು ಕಟ್ಟುವವರೆಗೂ ಜಲದೀಪಗಳು ಹಾಗೆಯೇ ಉರಿಯುತ್ತಿದ್ದವಂತೆ. ನಂತರ ಭಕ್ತರು ಎಣ್ಣೆ ಹಾಕಿ ಬೆಳಗಿಸುತ್ತಿದ್ದು, ಇಂದಿಗೂ ಪ್ರಜ್ವಲಿಸುತ್ತಿವೆ. ಇಲ್ಲಿಗೆ ನಡೆದುಕೊಳ್ಳುವ ಸಾವಿರಾರು ಭಕ್ತರು ಇವುಗಳನ್ನೇ ಪೂಜಿಸುತ್ತಾರೆ.

ಕಾಣಿಕೆಹುಂಡಿ ಇಲ್ಲದ ಕ್ಷೇತ್ರ!

ಧಾರ್ವಿುಕ ಕ್ಷೇತ್ರಗಳೆಂದರೆ ಅಲ್ಲಿ ಕಾಣಿಕೆ ಡಬ್ಬಿ, ಸೇವಾ ಪಟ್ಟಿ, ವಂತಿಗೆ, ಚಂದಾ ವಸೂಲಿ ಇತ್ಯಾದಿ ಸೇವೆಗಳು ಸಹಜ. ಆದರೆ ಈ ಕ್ಷೇತ್ರದಲ್ಲಿ ಯಾವುದೇ ಕಾಣಿಕೆ ಡಬ್ಬಿಗಳಿಲ್ಲ. ಹಣಸಂಗ್ರಹಕ್ಕಾಗಿ ಚಂದಾವಸೂಲಿ, ಸೇವಾ ರಶೀದಿ ಇತ್ಯಾದಿ ಮಾಡುವ ಪದ್ಧತಿ ಇಲ್ಲ. ಮಠದ ಪರಂಪರೆಯವರೇ ಭಕ್ತರಿಗೆ ದಾಸೋಹಾದಿಗಳನ್ನು ಮಾಡುತ್ತಾರೆ.

ವರ್ಷಕ್ಕೆ ಎರಡು ಬಾರಿ ದೊಡ್ಡ ಜಾತ್ರೆಗಳು ನಡೆಯುತ್ತವೆ. ಆಗಿಹುಣ್ಣಿಮೆಯಂದು ರಥೋತ್ಸವ ಮತ್ತು ಕಾರ್ತಿಕ ಷಷ್ಠಿಯಂದು ದೀಪೋತ್ಸವ ಕಾರ್ಯಕ್ರಮ ವಿಜೃಂಭಣೆಯಿಂದ ನಡೆಯುತ್ತದೆ. ಅಂತಹ ಬೃಹತ್ ಜಾತ್ರೆಯ ಸಂದರ್ಭದಲ್ಲೂ ಯಾರಿಂದಲೂ ಹಣ ವಂತಿಗೆ ಎತ್ತುವುದಿಲ್ಲ. ಇದು ಭಾವೈಕ್ಯತೆಯ ಕೇಂದ್ರವೂ ಆಗಿದ್ದು, ಇಲ್ಲಿನ ಸ್ವಾಮಿಗಳ ಗುರುಗಳು ಫಕೀರೇಶ್ವರ ಪರಂಪರೆಯವರು. ಹೀಗಾಗಿ ಜಾತ್ರೆಯ ನಂತರ ಮುಸ್ಲಿಂ ಬಾಂಧವರಿಗೆ ಪ್ರತ್ಯೇಕ ದಾಸೋಹ ಮಾಡಿಸುವ ಪದ್ಧತಿಯಿದೆ.

ರಾಜರ ಕಾಲದಿಂದಲೂ ಸಾವಿರಾರು ಎಕರೆ ಭೂಮಿ ಈ ಮಠದ ಅಧೀನದಲ್ಲಿತ್ತು. ಮಠದ ಸೇವೆ ಮಾಡುವ ಪಾರಂಪರಿಕ ಕುಟುಂಬಗಳಿಗೆ ಆ ಜಮೀನು ನೀಡಲಾಗಿದ್ದು, ಸರ್ಕಾರಿ ದಾಖಲೆಗಳಲ್ಲಿ ಅವು ಮಠದ ಹೆಸರಿನಲ್ಲೇ ಇನಾಮುಭೂಮಿ ಎಂದು ನಮೂದಿಸಲ್ಪಟ್ಟಿವೆ.

ಮಠದ ಇತಿಹಾಸ

ಕಲಬುರಗಿ ಜಿಲ್ಲೆ ಜೇವರ್ಗಿ ತಾಲೂಕಿನ ಮಾಸಣಗೆರೆ ಎಂಬ ಗ್ರಾಮ ಬಂಡೆಪ್ಪಸ್ವಾಮಿಗಳ ಹುಟ್ಟೂರು. ಗದಗ ಜಿಲ್ಲೆಯ ಶಿರಹಟ್ಟಿ ಫಕೀರೇಶ್ವರ ಸ್ವಾಮಿಗಳ ಕೃಪೆಯಿಂದ ಜನಿಸಿದ ಇವರ ಪೂರ್ವಾಶ್ರಮದ ಹೆಸರು ಸಿದ್ದಯ್ಯ. ಗುರುಗಳ ಆಣತಿಯಂತೆ ಪಾಲಕರು ಸಿದ್ಧಯ್ಯನನ್ನು ಫಕೀರೇಶ್ವರ ಮಠಕ್ಕೆ ನೀಡಿದರು. ಮಠದಲ್ಲಿಯೇ ಬೆಳೆದ ಸಿದ್ದಯ್ಯನಿಗೆ ಫಕೀರಸ್ವಾಮಿಗಳು ಮುಂದೆ ನಿಂತು ಮದುವೆ ಮಾಡಿ ತಮ್ಮಲ್ಲಿದ್ದ ಕುಡುಗೋಲನ್ನೇ ಉಡುಗೊರೆಯಾಗಿ ನೀಡಿದರು. ಅಧ್ಯಾತ್ಮದಲ್ಲಿನ ಆಸಕ್ತಿಯ ಕಾರಣದಿಂದ ಸಿದ್ದಯ್ಯ ಲೋಕಸಂಚಾರ ಹೊರಟರು. ಹೀಗೆ ಬರುವಾಗ ಮಠಕಲ್ ದೇವನಹಳ್ಳಿ ಎಂದು ಕರೆಯಲ್ಪಡುತ್ತಿದ್ದ ಈ ಸ್ಥಳದಲ್ಲಿ ಯಥೇಚ್ಛವಾಗಿದ್ದ ಕಲ್ಲುಬಂಡೆಯನ್ನು ಕಂಡು ಇಲ್ಲಿ ಮಠವನ್ನು ಕಟ್ಟಬೇಕೆಂದು ಸಂಕಲ್ಪಿಸಿದರು. ಮಠ ಕಟ್ಟಲು ಪ್ರಶಸ್ತ ಸ್ಥಳವಾದರೆ ಇಲ್ಲಿ ಗಂಗಾಮಾತೆ ಉದ್ಭವಿಸಲೆಂದು ಗುರುಗಳು ನೀಡಿದ್ದ ಕುಡಗೋಲಿನಿಂದ ಬಂಡೆಯ ಮೇಲೆ ಬಡಿದಾಗ ಗುಪ್ತಗಾಮಿನಿಯಾಗಿ ಬಂದಿದ್ದ ಕೃಷ್ಣೆಯು ಧಾರಾಕಾರವಾಗಿ ಹರಿದಳು. ಕೇವಲ ಒಂದೂವರೆ ಅಡಿ ಆಳದ, ಒಂದು ಅಡಿ ಚಚ್ಚೌಕದ ಸಣ್ಣ ಹೊಂಡದಿಂದ, 10 ಎಚ್​ಪಿ ಮೋಟಾರ್​ನಿಂದಲೂ ಖಾಲಿ ಮಾಡಲಾಗದಷ್ಟು ಶುದ್ಧ ಕುಡಿಯುವ ನೀರು ಇಂದಿಗೂ ಇಲ್ಲಿ ಹರಿಯುತ್ತಿದೆ. ಇದೇ ನೀರಿನಿಂದ ದೀಪ ಬೆಳಗಿಸಿದರೆಂದು ಹೇಳಲಾಗುತ್ತದೆ.

ತನ್ನ ಅನುಮತಿಯಿಲ್ಲದೆ ಮಠ ಕಟ್ಟುತ್ತಿದ್ದಾರೆಂಬ ಕಾರಣಕ್ಕೆ ಇಲ್ಲಿನ ರಾಜನಾದ ಮೊದಲನೇ ಆದಿಲ್​ಶಾಹಿಯು ಸ್ವಾಮಿಗಳನ್ನು ಬಂಧಿಸಿದ. ಆದರೆ ಆತನ ರಾಜಗುರುಗಳಾಗಿದ್ದ ಫಕೀರೇಶ್ವರ ಸ್ವಾಮಿಗಳು ಕನಸಿನಲ್ಲಿ ಬಂದು, ನೀನು ಬಂಧಿಸಿರುವುದು ನನ್ನ ಶಿಷ್ಯನೆಂದು ಹೇಳಿದರು. ತಪ್ಪಿನ ಅರಿವಾಗಿ ಸ್ವಾಮಿಗಳನ್ನು ಬಿಟ್ಟ ಆದಿಲ್​ಶಾಹಿ, ಮಠಕ್ಕೆ 24 ಹಳ್ಳಿಗಳ ಜಹಗೀರು ಹಾಕಿಸಿ 1400 ಎಕರೆ ಭೂಮಿಯನ್ನು ಉಂಬಳಿಯಾಗಿ ನೀಡಿದ. ಆ ಪೈಕಿ ಅರ್ಧಕ್ಕರ್ದ ಭೂಮಿ ಇನಾಮು ಹೋಗಿದ್ದು ಉಳಿದ ಭೂಮಿಯನ್ನು ಮುನ್ನಡೆಸುತ್ತಿರುವುದಾಗಿ ವಿವರಿಸುತ್ತಾರೆ ಮಠದ ವಂಶಸ್ಥರು. ಮಠವನ್ನು ಕಟ್ಟಿ ಇಲ್ಲೇ ಇದ್ದ ಶಿಷ್ಯನನ್ನು ಮರಳಿ ಕರೆದೊಯ್ಯಬೇಕೆಂದು ಶಿರಹಟ್ಟಿಯಿಂದ ಫಕೀರಸ್ವಾಮಿಗಳು ಬಂದಾಗ; ಮರಳಿ ಹೋಗಲು ಮನಸ್ಸಿಲ್ಲದ ಸಿದ್ದಯ್ಯಸ್ವಾಮಿಗಳು ಬಂಡೆಯ ಕೆಳಗೆ ಅವಿತು ಕುಳಿತರು. ಅದನ್ನು ಕಂಡ ಫಕೀರೇಶ್ವರರು ‘ಎದ್ದು ಬಾರಪ್ಪ ಬಂಡೆಪ್ಪಸ್ವಾಮಿ’ ಎಂದು ಕರೆದರು. ಅಂದಿನಿಂದ ಸಿದ್ದಯ್ಯಸ್ವಾಮಿಗಳು ಬಂಡೆಪ್ಪ ಸ್ವಾಮಿಗಳೆಂದೇ ಖ್ಯಾತರಾಗಿ ಇಲ್ಲೇ ಐಕ್ಯರಾದರು.

Leave a Reply

Your email address will not be published. Required fields are marked *

Back To Top