ಜಲಜಾಗೃತಿ ಆಗದಿದ್ದಲ್ಲಿ ಅವನತಿ ತಪ್ಪಿದ್ದಲ್ಲ…

ಜಲಸಂಪನ್ಮೂಲವು ದೇಶದ ಪ್ರಗತಿಯಲ್ಲಿ ಪ್ರಧಾನ ಪಾತ್ರ ವಹಿಸುತ್ತದೆ. ಆದರೆ ಪ್ರಗತಿಯ ಹೆಸರಿನಲ್ಲಿ ನಾವು ಪ್ರಕೃತಿಯನ್ನು ನಾಶಮಾಡುತ್ತಿರುವುದರ ಪರಿಣಾಮವನ್ನು ಎದುರಿಸಬೇಕಾಗಿ ಬಂದಿದೆ. ಹಾಗಂತ ನಿರಾಶರಾಗದೆ, ಎಲ್ಲದಕ್ಕೂ ಸರ್ಕಾರದೆಡೆ ನೋಡದೆ, ಜನರೇ ಮುಂದಡಿಯಿಟ್ಟರೆ ಕೆಲಮಟ್ಟಿಗಾದರೂ ಪರಿಹಾರದ ಬೆಳಕು ಕಂಡೀತು.

ನನ್ನ ಹಳ್ಳಿಯಲ್ಲಿ ಒಂದು ಕಲ್ಲುಬಾವಿಯಿತ್ತು, ಈಗಲೂ ಇದೆ. ಆದರೆ ಆಗ ಇದ್ದಂತಿಲ್ಲ. ನಾವು ಚಿಕ್ಕವರಾಗಿದ್ದಾಗ ನಮ್ಮ ಹಳ್ಳಿಯ ಬಹುಪಾಲು ಮಂದಿ ಈ ಬಾವಿಯಿಂದಲೇ ಕುಡಿಯುವ ನೀರು ತರುತ್ತಿದ್ದರು. ನಮ್ಮ ಮನೆಯ ಮುಂದೆ ಒಂದು ಕಡೆ ಜಗಲಿ, ಮತ್ತೊಂದು ಕಡೆ ಬಾವಿಯಿದೆ. ಅದರಲ್ಲಿ ಸಮೃದ್ಧವಾಗಿ ನೀರೂ ಇತ್ತು. ಆದರೂ ನಮ್ಮಮ್ಮ ಅನೇಕ ಸಲ ಈ ಕಲ್ಲುಬಾವಿಯಿಂದಲೇ ನೀರು ತರುತ್ತಿದ್ದರು. ಏಕೆಂದರೆ ಅದು ಸಿಹಿನೀರಿನ ಬಾವಿ. ಆ ಕಲ್ಲುಬಾವಿಯ ನೀರಿನ ರುಚಿ ನಮ್ಮ ಬಾವಿ ನೀರಿಗಿರಲಿಲ್ಲ. ಅದೊಂದು ತಿಳಿಗೊಳ. ಸಾಕಷ್ಟು ಆಳವಿತ್ತು. ಇಳಿಯಲು ಸೋಪಾನ. ಯಾವ ಕಾಲದಲ್ಲಿ ಯಾರು ಈ ಕೊಳವನ್ನು ಕಟ್ಟಿಸಿದ್ದರೋ! ಶುಭ್ರವಾದ ತಿಳಿನೀರು. ಆದರೂ ಅದರ ಆಳ ತಿಳಿಯುತ್ತಿರಲಿಲ್ಲ. ಆ ಬಾವಿ ಎಂದೂ ಬತ್ತಿದ್ದಿಲ್ಲ. ಬೇಸಿಗೆಯಲ್ಲಿ ಕೆಲವು ಮೆಟ್ಟಿಲುಗಳಷ್ಟು ನೀರು ಕಡಿಮೆಯಾಗುತ್ತಿತ್ತು ನಿಜ, ಆದರೆ ಆಗಲೂ ಆಳ ತಿಳಿಯುತ್ತಿರಲಿಲ್ಲ. ಹೀಗಾಗಿಯೇ ಕೆಲವೊಮ್ಮೆ ಅದರಲ್ಲಿ ಹೆಣ ತೇಲುತ್ತಿತ್ತು. ಬದುಕಿನಲ್ಲಿ ಭರವಸೆ ಕಳೆದುಕೊಂಡ ಜೀವಗಳು ಅಲ್ಲಿ ಆಸರೆ ಪಡೆಯುತ್ತಿದ್ದವು. ಆದರೆ ಅದರಿಂದ ಅದರ ಪಾವಿತ್ರ್ಯ್ಕೇನೂ ಭಂಗ ಬಂದಿರಲಿಲ್ಲ. ಶುಭ ಸಮಾರಂಭಗಳಿಗೆ ಗಂಗೆಯನ್ನು ಅಲ್ಲಿಂದಲೇ ನಡೆಮಡಿ ಹಾಸಿ ತರುತ್ತಿದ್ದರು. ಈ ಕೊಳದ- ನಾವ್ಯಾರೂ ಹಾಗೆ ಕರೆಯುತ್ತಿರಲಿಲ್ಲ, ನಮಗೆ ಅದು ಕಲ್ಲುಬಾವಿಯೇ. ಬಹುಶಃ ಇದರ ಪರಿಕಲ್ಪನೆ ನಮ್ಮ ಊರಿಗೆ ಹತ್ತಿರದಲ್ಲೇ ಇರುವ ಮೇಲುಕೋಟೆಯ ಪ್ರಸಿದ್ಧ ಕಲ್ಯಾಣಿಯಿಂದ ಬಂದಿರಬೇಕು, ಅದರ ಕೂಸು ಇದು- ಆಸುಪಾಸಿನಲ್ಲಿ ಊರ ಜನ ಕೀರೆಮಡಿ ಮಾಡಿಕೊಂಡಿರುತ್ತಿದ್ದರು. ವರ್ಷವಿಡೀ ನಳನಳಿಸುವ ಕೀರೆಸೊಪ್ಪು ಕಲ್ಲುಬಾವಿಗೆ ಒಂದು ಹಸುರು ಆವರಣ ಕಲ್ಪಿಸಿತ್ತು. ಅದರಾಚೆಗೆ ತೆಂಗು, ಬಾಳೆ, ಅಡಿಕೆ ತೋಟಗಳು. ಅಲ್ಲಿ ವೀಳೆಯದ ಹಂಬುಗಳು. ಗುಂಭದಲ್ಲಿ ನೀರು ತೆಗೆದುಕೊಂಡು ಹೋಗಿ ಹಾಕಿ ಅದನ್ನು ಅಕ್ಕರೆಯಿಂದ ಬೆಳೆಸುವ ರೈತರು. ಎರಡಾಳುದ್ದ ಭೂಮಿ ಅಗೆದರೆ ಸಮೃದ್ಧ ನೀರು ಸಿಗುತ್ತಿತ್ತು. ವೀಳೆಯದೆಲೆ ಶುಭಕ್ಕೆ ಮಾತ್ರವಲ್ಲ ನಮ್ಮ ರೈತರಿಗೆ ಆದಾಯದ ಅವಕಾಶವನ್ನೂ ಕಲ್ಪಿಸಿತ್ತು. ನಮ್ಮ ಹಳ್ಳಿಯ ನಂದನವನವೆಂಬಂತೆ ಈ ಪ್ರದೇಶವಿತ್ತು.

ಈಗ ಕಲ್ಲುಬಾವಿ ಬತ್ತಿದೆ. ಕೀರೆಸೊಪ್ಪು ಕಣ್ಮರೆಯಾಗಿದೆ. ತೋಟ ಬಯಲಾಗಿದೆ. ವೀಳೆಯದೆಲೆಯನ್ನು ನಮ್ಮ ರೈತರೇ ಕೊಂಡು ತರುತ್ತಾರೆ. ಎರಡಾಳುದ್ದ ತೆಗೆದರೆ ಚಿಮ್ಮುತ್ತಿದ್ದ ಜಲದ ಸೆಲೆ ಈಗ ಏಳೆಂಟು ನೂರು ಅಡಿ ತೆಗೆದರೂ ಕಾಣಿಸುವುದಿಲ್ಲ. ಆಗ ನೆಲ ಕೊರೆಯುವ ಯಂತ್ರ ಎಲ್ಲಿತ್ತು? ನೆಲಕ್ಕೆ ತಳಕ್ಕೆ ಗುದ್ದಲಿಯೊತ್ತಿ ಕುಕ್ಕಿದರೆ ಜೀವಜಲ ಚಿಮ್ಮುತ್ತಿತ್ತು. ಈಗ ಏನಾಗಿದೆ? ಬೇಸಿಗೆಯಲ್ಲಂತೂ ಜನವಿರಲಿ, ಜಾನುವಾರುಗಳಿಗೂ ನೀರಿಲ್ಲದ ಸ್ಥಿತಿ ನಿರ್ಮಾಣವಾಗಿದೆ. ಇದಕ್ಕೆ ಯಾರು ಕಾರಣ? ಪ್ರಕೃತಿಗೇಕೆ ಈ ಮುನಿಸು?

ಪ್ರಕೃತಿಯೆಂಬ ಬೆರಗು: ಆದಿಯಿಂದಲೂ ಪ್ರಕೃತಿಗೂ ಮನುಷ್ಯನಿಗೂ ನಿಕಟ ಒಡನಾಟ. ಒಂದೆಡೆ ಪ್ರಕೃತಿಯ ಚೆಲುವು ಅವನ ಉಲ್ಲಾಸಕ್ಕೆ ಕಾರಣವಾದರೆ, ಮತ್ತೊಂದೆಡೆ ಪ್ರಕೃತಿಯ ಭೀಷಣರೂಪ ಆತನಿಗೆ ಭಯವುಂಟುಮಾಡುತ್ತಿತ್ತು. ಅಮಾವಾಸ್ಯೆಯ ಗಾಢ ಕತ್ತಲು, ಹುಣ್ಣಿಮೆಯ ಬೆಳದಿಂಗಳು ಅವನಿಗೆ ಬೆರಗಿನ ಸಂಗತಿಗಳು. ತಂಗಾಳಿಯ ಆಹ್ಲಾದ, ಬಿರುಗಾಳಿಯ ಅಬ್ಬರ ಅವನಿಗೆ ಅಚ್ಚರಿ. ಈ ಉಲ್ಲಾಸ, ಭಯ, ಬೆರಗುಗಳೇ ಪ್ರಕೃತಿಯನ್ನು ದೈವವಾಗಿ ಕಾಣಲು ಕಾರಣವಾಯಿತು. ಅಗ್ನಿ, ವಾಯು, ವರುಣ, ಭೂಮಿ, ಆಕಾಶ ಎಲ್ಲವೂ ಪೂಜನೀಯವಾದವು. ಇವೆಲ್ಲವೂ ಜೀವನಾವಶ್ಯಕ ಸಂಗತಿಗಳು. ಸ್ವಲ್ಪ ಸಗಣಿಯನ್ನು ತೆಗೆದುಕೊಂಡು ಅದಕ್ಕೆ ಗರಿಕೆಯನ್ನು ಸಿಕ್ಕಿಸಿದರೆ ಅದು ನಮ್ಮ ಪಾಲಿಗೆ ಬೆನಕನಾಗುವ ಪರಿ ನಾವು ಇಂದು ಗಂಭೀರವಾಗಿ ಚಿಂತಿಸಬೇಕಾದಂಥದು. ಇದು ಕೇವಲ ಮೂಢನಂಬಿಕೆಯಲ್ಲ, ಪ್ರಕೃತಿ-ಮನುಷ್ಯನ ಸಂಬಂಧವನ್ನು ಸೂಚಿಸುವಂಥದು. ಪ್ರಕೃತಿಯೊಡನೆ ಮನುಷ್ಯ ಸೌಹಾರ್ದಯುತ ಸಂಬಂಧ ಸ್ಥಾಪಿಸಿಕೊಳ್ಳಲು ನಿರಂತರ ಪ್ರಯತ್ನಿಸುತ್ತ ಬಂದಿದ್ದಾನೆ.

ಆದರೆ ಆಧುನಿಕ ಬದುಕಿನಲ್ಲಿ ಮನುಷ್ಯ-ಪ್ರಕೃತಿಯ ಸಂಬಂಧ ಏನಾಗಿದೆ? ಒಂದು ರೂಪಕದ ಮೂಲಕ ಇದನ್ನು ವಿವರಿಸಬಹುದು: ಮೊದಲು ಮನುಷ್ಯ ಹೊಂಡದಲ್ಲಿ ಮುಖ ನೋಡಿಕೊಳ್ಳುತ್ತಿದ್ದ. ಆಗ ಅವನಿಗೆ ತನ್ನ ಮುಖದ ಜತೆಗೆ ಆಕಾಶ, ಮರಗಿಡ, ಪಕ್ಷಿ ಪ್ರಾಣಿಗಳು, ಸುತ್ತಮುತ್ತಲಿನ ಅನೇಕ ಜೀವರಾಶಿಗಳೆಲ್ಲವೂ ಕಾಣುತ್ತಿದ್ದವು. ಈಗ ಮನುಷ್ಯ ಕನ್ನಡಿಯಲ್ಲಿ ಮುಖ ನೋಡಿಕೊಳ್ಳುತ್ತಾನೆ. ಈಗ ಅವನಿಗೆ ತನ್ನ ಮುಖ ಮಾತ್ರ ಕಾಣಿಸುತ್ತದೆ. ಮತ್ಯಾವುದೂ ಕಾಣಿಸದು.

ತನ್ನ ಜತೆಗೆ ಸುತ್ತಮುತ್ತಲಿನ ಎಲ್ಲರೂ, ಎಲ್ಲವೂ ಇರಬೇಕೆಂಬ ಅಂದಿನ ಸಮಷ್ಠಿ ಪ್ರಜ್ಞೆಗೂ ನಾನೊಬ್ಬನೇ ಇದ್ದರೆ ಸಾಕೆಂಬ ಇಂದಿನ ನಮ್ಮ ವ್ಯಕ್ತಿಕೇಂದ್ರಿತ ನಿಲುವಿಗೂ ಇರುವ ವ್ಯತ್ಯಾಸವೇ ನಾಗರಿಕತೆಯ ಬೆಳವಣಿಗೆಯ ಇತಿಹಾಸ. ಇಂದಿನ ಪ್ರಗತಿಯ ಪರಿಕಲ್ಪನೆಯೆಂದರೆ ಪ್ರಕೃತಿಯ ವಿನಾಶ. ಮನುಷ್ಯಕೇಂದ್ರಿತ ಚಿಂತನೆ. ಮನುಷ್ಯ ಇಂದು ತನ್ನ ಸ್ವಾರ್ಥಕ್ಕಾಗಿ ಸಸ್ಯ, ಪ್ರಾಣಿ ಎಲ್ಲ ಜೀವರಾಶಿಗಳನ್ನೂ ಬಲಿಕೊಡುತ್ತಿದ್ದಾನೆ. ಪರಿಣಾಮವಾಗಿ ತನ್ನ ಅವನತಿಯನ್ನು ತಾನೇ ತಂದುಕೊಳ್ಳುತಿದ್ದಾನೆ.

ಕುಡಿಯುವ ನೀರಿಗೂ ತತ್ವಾರ: ಮನುಷ್ಯನಿಗೆ ಅತ್ಯಗತ್ಯ ಬೇಕಾಗಿರುವಂಥದು ಉಸಿರಾಡಲು ಶುದ್ಧಗಾಳಿ, ಕುಡಿಯಲು ಶುದ್ಧನೀರು. ಇವೆರಡೂ ಪ್ರಕೃತಿಯ ಕೊಡುಗೆ. ಮನುಷ್ಯ ಸೃಷ್ಟಿಸಲಾರದ ವಸ್ತುಗಳು. ಇವತ್ತು ಜಗತ್ತಿನಾದ್ಯಂತ 66.3 ಕೋಟಿ ಜನರಿಗೆ ಕುಡಿಯಲು ಶುದ್ಧನೀರು ಸಿಗುತ್ತಿಲ್ಲ. ಭಾರತದಲ್ಲಿಯೇ ಈ ಸಂಖ್ಯೆ ಆರು ಕೋಟಿ ದಾಟುತ್ತದೆ. ಅಭಿವೃದ್ಧಿಶೀಲ ರಾಷ್ಟ್ರಗಳಲ್ಲಿ ಹವಾಮಾನ ವೈಪರೀತ್ಯದಿಂದಾಗಿ ಪ್ರತಿವರ್ಷ ಸುಮಾರು ಆರು ಲಕ್ಷ ಮಂದಿ ಸಾಯುತ್ತಿದ್ದಾರೆ. 1950ರಲ್ಲಿ ಶೇ. 11ರಷ್ಟಿದ್ದ ವಾಯುಮಾಲಿನ್ಯ ಈಗ ಶೇ. 40ರ ಆಸುಪಾಸಿನಲ್ಲಿದೆ. ವರ್ಷದಿಂದ ವರ್ಷಕ್ಕೆ ಜಲಕ್ಷಾಮ ಹೆಚ್ಚುತ್ತಲೇ ಇದೆ. ಮಲೆನಾಡಿನ ಕೆಲ ಪ್ರದೇಶಗಳೂ ಈಗ ಬರಪೀಡಿತ ಪ್ರದೇಶಗಳಾಗಿ ಪರಿವರ್ತಿತವಾಗುತ್ತಿವೆ. ಇದೇ ಪರಿಸ್ಥಿತಿ ಮುಂದುವರಿದರೆ 2040ರ ವೇಳೆಗೆ ಬೇಸಾಯವಿರಲಿ, ಕುಡಿಯುವ ನೀರಿನ ಕ್ಷಾಮದಿಂದ ಜನ ತತ್ತರಿಸಬೇಕಾಗುತ್ತದೆ. ಹಾಗಾದರೆ ಇದಕ್ಕೆ ಪರಿಹಾರವೇನು? ಇದನ್ನು ಎದುರಿಸುವುದು ಹೇಗೆ?

ಮೂರು ನಿದರ್ಶನಗಳನ್ನು ಗಮನಿಸೋಣ- ಮೊದಲನೆಯದು ಕಾರ್ಖಾನೆಯೊಂದರ ಕತೆ. ಹದಿಮೂರು ಎಕರೆ ಪ್ರದೇಶದಲ್ಲಿರುವ ಈ ಕಾರ್ಖಾನೆಗೆ ಪ್ರತಿನಿತ್ಯ ಮೂರು ಲಕ್ಷ ಲೀಟರ್ ನೀರಿನ ಅಗತ್ಯವಿತ್ತು. ಕೊಳವೆಬಾವಿಯ ನೀರಿನ ಆಸರೆಯಿಂದ ಕಂಪನಿ ಕಾರ್ಯ ನಿರ್ವಹಿಸುತ್ತಿತ್ತು. ಮೂರು ವರ್ಷಗಳ ಹಿಂದೆ ಕೊಳವೆಬಾವಿಯಲ್ಲಿ ನೀರಿನ ಬದಲು ಕೆಸರು ಬರಲಾರಂಭಿಸಿತು. ಕಂಪನಿ ನೀರಿನ ಸಂಪನ್ಮೂಲ ಸೃಷ್ಟಿಸುವ ಬಗ್ಗೆ ಗಂಭೀರ ಚಿಂತನೆ ನಡೆಸಿತು. ತಜ್ಞರೊಡನೆ ರ್ಚಚಿಸಿ ಕೆಲವು ಕ್ರಮಗಳನ್ನು ಕೈಗೊಂಡಿತು. ಮೊದಲು ತಮ್ಮ ಹದಿಮೂರು ಎಕರೆ ವಿಸ್ತಾರ ಪ್ರದೇಶದಲ್ಲಿ ಇಂಗುಗುಂಡಿಗಳನ್ನು ನಿರ್ಮಿಸಿ ಮಳೆನೀರು ಭೂಮಿಯಲ್ಲಿ ಇಂಗುವಂತೆ ಮಾಡಿತು. ನಂತರ ಮಳೆನೀರು ಸಂಗ್ರಹದ ಕೊಳಗಳನ್ನು ರೂಪಿಸಿ ಮಳೆನೀರು ಅಲ್ಲಿಯೇ ನಿಲ್ಲುವಂತೆ ಮಾಡಿತು. ಕೊಳಗಳೆಂದರೆ ತೆರೆದ ಬಾವಿಗಳು. ಮೊದಲು ಗ್ರಾಮೀಣ ಪ್ರದೇಶಗಳಲ್ಲಿ ಇಂತಹ ತೆರೆದ ಬಾವಿಗಳೇ ನೀರಿನಾಸರೆಯಾಗಿದ್ದವು. ಮಳೆಗಾಲದಲ್ಲಿ ನೀರು ಇಂತಹ ಬಾವಿಗಳ ಮೂಲಕ ಭೂಮಿ ಸೇರುತ್ತಿತ್ತಲ್ಲದೆ, ಸುತ್ತಮುತ್ತಲ ಪರಿಸರವನ್ನೂ ತಂಪಾಗಿಸುತ್ತಿತ್ತು. ಮಲೆನಾಡಿನ ಕಾಫಿತೋಟಗಳಲ್ಲಂತೂ ಪ್ರತಿ ಬೆಳೆಗಾರರೂ ತಮ್ಮ ತಮ್ಮ ತೋಟಗಳಲ್ಲಿ ಸಣ್ಣ ಸಣ್ಣ ಕೆರೆಗಳನ್ನೇ ನಿರ್ಮಿಸಿಕೊಂಡಿರುತ್ತಿದ್ದರು. ಇವೆಲ್ಲ ಜಲಸಂಪನ್ಮೂಲಗಳು. ಬಿದ್ದ ಮಳೆ ಭೂಮಿಗೆ ಸೇರಿದರೆ ಸಹಜವಾಗಿಯೇ ಅಂತರ್ಜಲ ವೃದ್ಧಿಸುತ್ತದೆ. ಈಗ ಇವೆಲ್ಲ ಕಣ್ಮರೆಯಾಗುತ್ತಿವೆ. ಕೊಳವೆಬಾವಿಗಳ ಯುಗ ಆರಂಭವಾಗಿ ನೆಲದಾಳದ ನೀರನ್ನು ಇವು ಬಸಿಯುತ್ತವೆ ನಿಜ, ಇವುಗಳಿಂದ ಹನಿನೀರಾದರೂ ಭೂಮಿಯಲ್ಲಿ ಇಂಗುತ್ತದೆಯೇ? ಈ ಕಂಪನಿ ಕೊಳವೆಬಾವಿಗಳನ್ನು ಉಳಿಸಲು ತೆರೆದ ಬಾವಿಗಳ ಮೊರೆಹೋಯಿತು. ಈಗ ಕಂಪನಿ ಆವರಣದ ಕೊಳವೆಬಾವಿಗಳಲ್ಲಿ ಸಮೃದ್ಧವಾಗಿ ನೀರು ಬರುತ್ತಿದೆ. ಮಾತ್ರವಲ್ಲ, ಕಂಪನಿ ಅಕ್ಕಪಕ್ಕದ ಮನೆಗಳ ಬತ್ತಿಹೋಗಿದ್ದ ಬಾವಿಗಳಲ್ಲಿಯೂ ಈಗ ನೀರಿದೆ. ಕಂಪನಿ ಜಲಕ್ಷಾಮದಿಂದ ಪಾರಾಗಿದೆ. ಒಂದು ಕ್ಷಣ ಯೋಚಿಸಿ- ಕಳೆದ ಐವತ್ತು ವರ್ಷಗಳಲ್ಲಿ ಕಂಡಕಂಡಂತೆಯೇ ಬೆಂಗಳೂರಿನ ಎಷ್ಟು ಕೆರೆಗಳು ನಾಶವಾದವು. ಹಿಂದಿನ ಕಾಲದ ಮನೆಗಳಲ್ಲಿ ಮನೆಯ ಮುಂದೆ ಕೊಂಚ ಜಾಗ, ಅಲ್ಲೊಂದಿಷ್ಟು ಹೂವಿನ ಗಿಡಗಳು, ಹಿಂದೆ ಹಿತ್ತಿಲು, ಅಲ್ಲೊಂದು ಹಣ್ಣಿನ ಮರ ಸಾಮಾನ್ಯವಾಗಿ ಇರುತ್ತಿತ್ತು. ಪ್ರತಿ ಮನೆಯಲ್ಲೂ ತೆರೆದಬಾವಿಗಳಿರುತ್ತಿದ್ದವು. ಅವುಗಳಲ್ಲಿ ನೀರೂ ಇರುತ್ತಿತ್ತು. ಮಳೆಯ ನೀರು ನೆಲದಲ್ಲಿ ಇಂಗುತ್ತಿತ್ತು. ಮನೆಯ ಆವರಣದಲ್ಲಿ ಬಿದ್ದ ನೀರು ಹೊರಗೆ ಹರಿದುಹೋಗುತ್ತಿರಲಿಲ್ಲ. ಅಲ್ಲಿಯ ನೆಲದಲ್ಲಿಯೇ ನಿಧಾನ ಒಳಸೇರುತ್ತಿತ್ತು. ಪ್ರಕೃತಿ ಮನುಷ್ಯನ ಬದುಕಿನ ಭಾಗವಾಗಿತ್ತು. ಜೀವನ ವಿಧಾನದಲ್ಲೇ ಶುದ್ಧಗಾಳಿ, ಶುದ್ಧನೀರು ಪಡೆಯುವ ಕ್ರಮವಿತ್ತು. ನಾನು ಬಾಡಿಗೆಗಿದ್ದ ಎಲ್ಲ ಮನೆಗಳಲ್ಲೂ ತೆರೆದಬಾವಿಗಳಿದ್ದವು. ಪಾರಿಜಾತ, ಸೀಬೆಹಣ್ಣಿನ ಮರಗಳಿದ್ದವು. ಅವೆಲ್ಲ ಸಿರಿವಂತ ಮನೆಗಳೇನಲ್ಲ. ಆದರೆ ಉಸಿರಾಡಲು ಅವಕಾಶವಿತ್ತು. ಅಂಗಳದಲ್ಲಿ ಬೆಳದಿಂಗಳಿನ ಊಟವಿತ್ತು. ಈಗ ಸ್ವಂತ ಮನೆಯಲ್ಲಿದ್ದೇನೆ. ಬಾವಿಯೂ ಇಲ್ಲ, ಮರಗಳಿರಲಿ, ಮನೆಯ ಆವರಣದಲ್ಲಿ ಮಣ್ಣೂ ಇಲ್ಲ. ಮನೆಯ ಮುಂದಿನ ಫುಟ್​ಪಾತಿನಲ್ಲಿ ಪಾರಿಜಾತದ ಗಿಡವನ್ನು ನನ್ನ ಮಡದಿ ಅಕ್ಕರೆಯಿಂದ ಬೆಳೆಸಿದ್ದಾರೆ. ಅದೇ ಫುಟ್​ಪಾತಿನಲ್ಲಿ ನಾನೊಂದು ಹೊಂಗೆಮರ ಬೆಳೆಸಿದ್ದೇನೆ. ಈ ಲೇಖನ ಬರೆಯುವ ವೇಳೆ ಮನೆಯ ಮುಂದೆ ಹೊಂಗೆ ರಂಗವಲ್ಲಿ ಬಿಡಿಸಿದೆ. ಪಾರಿಜಾತದ ಕಂಪು ಮನೆಯನ್ನಾವರಿಸಿದೆ. ಆದರೆ ಇರುವ ಕೊಳವೆಬಾವಿ ಬತ್ತಿದೆ. ಕಾವೇರಿ ನೀರು ಸಾಲುತ್ತಿಲ್ಲ. ನೀರು ಕೊಳ್ಳುತ್ತಿದ್ದೇವೆ. ಎಂಥ ನೀರೋ? ಮುಂದೆ ಗಾಳಿಯನ್ನೂ ಕೊಳ್ಳುವ ಸ್ಥಿತಿ ಬರಬಹುದು. ಇನ್ನೂ ಮುಂದೆ ಗಾಳಿ ನೀರು ಕೊಳ್ಳಲಾದರೂ ಸಿಗುತ್ತದೆಯೋ? ನಾ ಕಾಣೆ. ಇದು ನಮ್ಮ ಪ್ರಗತಿ. ನೀತಿ- ‘ನಿಮ್ಮ ನಿಮ್ಮ ಮನೆಯ ಆವರಣದಲ್ಲಿ ಮಳೆನೀರು ಭೂಮಿ ಸೇರಲು ಇಂಗುಗುಂಡಿಗಳನ್ನಾದರೂ ಸ್ವಯಂಪ್ರೇರಣೆಯಿಂದ ನಿರ್ಮಿಸಿ’.

ಎರಡನೆಯ ಉದಾಹರಣೆ- ರಾಜಸ್ಥಾನದ ಹಳ್ಳಿಯೊಂದರಲ್ಲಿ ಜನ-ಜಲ-ಜಂಗಲ್-ಜಾನ್ವಾರ್-ಜಮೀನ್ ಎಂಬ ಐದು ‘ಜ’ ಆಧಾರಿತ ಜೀವನ ಪದ್ಧತಿಯನ್ನು ಅಳವಡಿಸಿಕೊಳ್ಳುವುದರ ಮೂಲಕ ಆಧುನಿಕ ಸವಾಲುಗಳಿಗೆ ಪರಿಹಾರದ ಸಂದೇಶ ನೀಡುತ್ತಿದ್ದಾರೆ. ದೇವರಕಾಡು ಎಂದು ಘೊಷಿಸಿ ಹಳ್ಳಿಯ ಸುತ್ತಮುತ್ತಲಿನ ಕಾಡು ಸಂರಕ್ಷಿಸುವುದು, ಗೋಮಾಳದಲ್ಲಿ ಮರ ಬೆಳೆಸುವುದು, ಮಳೆಗಾಲಕ್ಕೆ ಮುನ್ನ ನೀರು ನಿಲ್ಲಲು ಒಡ್ಡುಗಳನ್ನು ನಿರ್ಮಿಸುವುದು, ನೀರು ಕಡಿಮೆ ಬೇಡುವ ಬೇಸಿಗೆಬೆಳೆ ಬೆಳೆಯುವುದು ಇತ್ಯಾದಿಗಳ ಮೂಲಕ ಸ್ವಾವಲಂಬಿ ಬದುಕು ರೂಪಿಸಿಕೊಂಡಿರುವ ಇಲ್ಲಿಯ ಜನರು ಬರದಿಂದ ದೂರವಿದ್ದಾರೆ. ಮಾತ್ರವಲ್ಲ, ಇದೆಲ್ಲದರ ಪರಿಣಾಮವಾಗಿ, ಬತ್ತಿಹೋಗಿದ್ದ ನಾಂಡೂವಾಲೀ ನದಿ ಈಗ ಮತ್ತೆ ನೀರುತುಂಬಿ ಹರಿಯುವಂತೆ ಮಾಡಿದ್ದಾರೆ. ಇದೇನು ಪವಾಡವಲ್ಲ, ಜನರ ಸಂಕಲ್ಪಬಲ. ಸರ್ಕಾರವನ್ನು ನೆಚ್ಚದೆ ಜನರೇ ತಮ್ಮ ಶ್ರಮ ಶ್ರದ್ಧೆಯಿಂದ ಇದನ್ನು ಸಾಧಿಸಿದ್ದಾರೆ.

ಮೂರನೆಯ ನಿದರ್ಶನ –  ನಮ್ಮ ಕೊಪ್ಪಳ ಜಿಲ್ಲೆಯ ಬತ್ತಿದ ತಲ್ಲೂರು ಕೆರೆಯ ಹೂಳು ತೆಗೆದು ಮತ್ತೆ ಜಲವುಕ್ಕುವಂತೆ ಮಾಡಿರುವುದು. ಕನ್ನಡ ನಟರೊಬ್ಬರ ನೆರವಿನಿಂದ ಇದು ಸಾಧ್ಯವಾಗಿದೆ. ಸುಮಾರು ಏಳೆಂಟು ನೂರು ಅಡಿ ಕೊರೆದರೂ ನೀರು ಬಾರದ ಇಲ್ಲಿ ವಿಸ್ತಾರ ಕೆರೆಯ ಹತ್ತಾರು ಅಡಿ ಹೂಳು ತೆಗೆದಾಗ ಜಲದ ಸೆಲೆ ಉಕ್ಕಿದೆ. ಜನ-ಜಾನುವಾರುಗಳಿಗೆ ಕುಡಿಯಲು ನೀರು ದೊರಕಿದೆ.

ಇವು ಕೆಲವು ಮಾದರಿ ನಿದರ್ಶನಗಳು. ಎಲ್ಲದಕ್ಕೂ ಸರ್ಕಾರದ ಕಡೆ ಕಣ್ಣುಹಾಯಿಸದೆ ಜನರೇ ತಮ್ಮ ಬದುಕನ್ನು ತಾವು ಚಂದ ಮಾಡಿಕೊಳ್ಳಲು ತೀರ್ಮಾನಿಸಿ, ಸಂಘಟಿತ ಪ್ರಯತ್ನ ಮಾಡಿದರೆ, ನಿಸ್ಸಂದೇಹವಾಗಿ ಸುಂದರ ಬದುಕು ಕಟ್ಟಿಕೊಳ್ಳಲು ಸಾಧ್ಯ. ನಮ್ಮ ಹಿಂದಿನ ಜನಪದರ ಜೀವನರೀತಿ ಇದಕ್ಕೆ ಮಾದರಿ. ಅದು ಯಾವ ಸರ್ಕಾರವೇ ಆಗಲಿ, ಅಧಿಕಾರವನ್ನು ಉಳಿಸಿಕೊಳ್ಳುವ, ಅಧಿಕಾರ ಪಡೆಯುವ ನಿರಂತರ ಪ್ರಯತ್ನದಲ್ಲಿರುತ್ತವೆಯೇ ಹೊರತು ನಿಜವಾಗಿ ಜನಕಲ್ಯಾಣದ ಬಗ್ಗೆ ಅವರಿಗೆ ಚಿಂತಿಸಲು ಸಮಯವಾದರೂ ಎಲ್ಲಿದೆ? ವಿಧಾನಸೌಧಕ್ಕೆ ನಮ್ಮೂರಿನ ಕಲ್ಲುಬಾವಿಯ ಸ್ಥಿತಿ ಹೇಗೆ ತಿಳಿಯಬೇಕು?

ಅರಿಯದಿದ್ದರೆ ಅಳಿವು: ಜಲವೆಂದರೆ ಬರಿ ನೀರಲ್ಲ, ಅದು ಬದುಕಿನ ಜೀವಧಾತು. ಕೃಷಿ ಇರಲಿ, ಕೈಗಾರಿಕೆಯಿರಲಿ, ಇಂಧನವಿರಲಿ ಜಲ ನಮ್ಮೆಲ್ಲ ಚಟುವಟಿಕೆಗಳ ಮೂಲಾಧಾರ. ಒಂದು ದೇಶದ ಪ್ರಗತಿ ಪ್ರಧಾನವಾಗಿ ಜಲಸಂಪನ್ಮೂಲವನ್ನು ಅವಲಂಬಿಸಿದೆ. ಆದರೆ ಪ್ರಗತಿಯ ಹೆಸರಿನಲ್ಲಿ ನಾವು ಪ್ರಕೃತಿಯನ್ನು ನಾಶಮಾಡುತ್ತಿದ್ದೇವೆ. ಜೀವಸೆಲೆಯನ್ನು ಬತ್ತಿಸುತ್ತಿದ್ದೇವೆ. ತನ್ಮೂಲಕ ಅತ್ಯಂತ ಜೀವನಾವಶ್ಯಕ ಸಂಗತಿಗಳಾದ ನೀರು ಗಾಳಿಗಳಿಂದಲೂ ವಂಚಿತರಾಗುತ್ತಿದ್ದೇವೆ.

ಇದೀಗ ಬಂದ ಸುದ್ದಿ! ಕಳೆದ ಇಪ್ಪತ್ತೈದು ವರ್ಷಗಳಲ್ಲೇ ದಾಖಲೆಯ ಅಧಿಕ ಉಷ್ಣಾಂಶ ಬೆಂಗಳೂರಿನಲ್ಲಿ ದಾಖಲಾಗಿದೆ. 1992ರ ಮಾರ್ಚ್ ತಿಂಗಳಿನಲ್ಲಿ 37.4 ಡಿಗ್ರಿ ಉಷ್ಣಾಂಶ ದಾಖಲಾಗಿತ್ತು. ಈಗ ಅದು 38 ಡಿಗ್ರಿ ದಾಟಿದೆ. ಇನ್ನು ಮುಂದಿನ ದಿನಗಳ ಬಿಸಿಲನ್ನು ಊಹಿಸಿ. ಇದು ಬೆಂಗಳೂರಿನ ಪ್ರಶ್ನೆ ಮಾತ್ರವಲ್ಲ, ಜಾಗತಿಕ ತಾಪಮಾನವೇ ಹೀಗೆ ಏರುತ್ತಿದೆ. ದೇಶದ ರಾಜಧಾನಿ ದೆಹಲಿಯಲ್ಲಿ ಮಾರ್ಚ್​ನ ತಾಪಮಾನ ವಾಡಿಕೆಗಿಂತ ಆರು ಡಿಗ್ರಿಯಷ್ಟು ಜಾಸ್ತಿಯಿದ್ದು 72 ವರ್ಷಗಳಲ್ಲೇ ಅಧಿಕವೆಂಬ ದಾಖಲೆ ಬರೆದಿದೆ. ಇವೆಲ್ಲ ಓದಿ ಮರೆಯುವ ಸುದ್ದಿಗಳಲ್ಲ.

‘ಪ್ರಕೃತಿಯನ್ನು ಉಳಿಸಿ’ ಎಂಬುದು ‘ಜೀವ ಉಳಿಸಿ’, ‘ಸಕಲ ಜೀವರಾಶಿಗಳನ್ನು ಉಳಿಸಿ’ ಎಂಬರ್ಥದ ಸಾಮೂಹಿಕ ಚಳವಳಿಯಾಗಿ ರೂಪುಗೊಳ್ಳದಿದ್ದರೆ ಮಾನವ ತನ್ನ ಅವನತಿಯನ್ನು ತಾನೇ ತಂದುಕೊಂಡಂತೆ! ಅರಿವಿಗೆ ಇದು ಸಕಾಲ.

Leave a Reply

Your email address will not be published. Required fields are marked *