ಜಯತೀರ್ಥರ ರಥೋತ್ಸವ ವೈಭವ


 ಮಳಖೇಡ: ಕಾಗಿಣಾ ನದಿ ತೀರದ ಮಳಖೇಡದ ಉತ್ತರಾದಿ ಮಠದಲ್ಲಿ ಶ್ರೀ ಜಯತೀರ್ಥರ ಮಧ್ಯಾರಾಧನೆ ನಿಮಿತ್ತ ಸೋಮವಾರ ಸಹಸ್ರಾರು ಭಕ್ತರ ಜೈಘೋಷಗಳ ಮಧ್ಯೆ ವೈಭವದ ಜೋಡು ರಥೋತ್ಸವ ಜರುಗಿತು.
ಬೆಳಗ್ಗೆ ತಪ್ತ ಮುದ್ರಾಧಾರಣೆ, ವಿದ್ವಾಂಸರಿಂದ ಪ್ರವಚನ, ತಿರುಪತಿಯಿಂದ ಆಗಮಿಸಿದ ವೆಂಕಟೇಶ್ವರ ದೇವರ ಶೇಷ ವಸ್ತ್ರವನ್ನು ಶ್ರೀ ಸತ್ಯಾತ್ಮತೀರ್ಥ ಶ್ರೀಪಾದರು ಜಯತೀರ್ಥರಿಗೆ ಸಮರ್ಪಿಸಿದರು. ರಥಾಂಗ ಹೋಮದ ನಂತರ ರಥೋತ್ಸವಕ್ಕೆ ಶ್ರೀಪಾದರು ಚಾಲನೆ ನೀಡಿದರು. ಕರ್ನಾಟಕ ಸೇರಿ ಆಂಧ್ರ, ತೆಲಂಗಾಣ, ಮಹಾರಾಷ್ಟ್ರ, ತಮಿಳುನಾಡು ರಾಜ್ಯಗಳ ಅಪಾರ ಭಕ್ತರು ದಾಸರ ಹಾಡುಗಳನ್ನು ಹಾಡುತ್ತ ಕುಣಿದು ಕುಪ್ಪಳಿಸಿದರು. ಮಹಾದ್ವಾರದವರೆಗೆ ಸಾಗಿ ಮರಳಿ ಮಠಕ್ಕೆ ಆಗಮಿಸಿದ ರಥೋತ್ಸವದುದ್ದಕ್ಕೂ ದಾಸರ ವೇಷಧಾರಿಗಳು ಗಮನ ಸೆಳೆದರು.
ಸನಾತನ ಪರಂಪರೆ ಉಳಿಸಿ ಬೆಳೆಸಿದ ಜಯತೀರ್ಥರ ಆರಾಧನೆಗೆ 10 ಸಾವಿರಕ್ಕೂ ಹೆಚ್ಚು ಭಕ್ತರು ಆಗಮಿಸಿ ದರ್ಶನ ಪಡೆದು ಕೃತಾರ್ಥರಾದರು. ರಥೋತ್ಸವ ನಂತರ ಭಕ್ತರು ಮಹಾಪ್ರಸಾದ ಸ್ವೀಕರಿಸಿದರು.
ಪಂ.ರಂಗಾಚಾರ್ಯ ಗುತ್ತಲ, ಮಳಖೇಡ ಮಠದ ವ್ಯವಸ್ಥಾಪಕ ಪಂ.ವೆಂಕಣ್ಣಾಚಾರ್ಯ ಪೂಜಾರ, ಮಣೂರಿನ ವೇದೇಶತೀರ್ಥ ವಿದ್ಯಾಪೀಠದ ಪಂ.ಅನಂತಾಚಾರ್ಯ ಅಕಮಂಚಿ, ಪಂ.ಗೋಪಾಲಾಚಾರ್ಯ ಅಕಮಂಚಿ, ಪಂ.ಹಣಮಂತಾಚಾರ್ಯ ಸರಡಗಿ, ಪಂ.ವಿನೋದಾಚಾರ್ಯ ಗಲಗಲಿ, ಪಂ.ಭೀಮಸೇನಾಚಾರ್ಯ, ಪಂ.ಗಿರೀಶಾಚಾರ್ಯ ಅವಧಾನಿ, ಪಂ.ಗಿರೀಶಾಚಾರ್ಯ ಕೊಪ್ಪರ, ಶ್ರೀನಿವಾಸಾಚಾರ್ಯ ಪದಕಿ, ಉತ್ತರಾದಿ ಮಠದ ಮಠಾಧಿಕಾರಿ ರಾಮಾಚಾರ್ಯ ಘಂಟಿ, ಮುಖಂಡರಾದ ರಾಘವೇಂದ್ರರಾವ ದೇಶಮುಖ, ರಾಮಾಚಾರ್ಯ ಜೋಶಿ ಮುಧೋಳ, ರವಿ ಲಾತೂರಕರ್, ರಂಗನಾಥ ದೇಸಾಯಿ, ನಾರಾಯಣಾಚಾರ್ಯ ಕಮಲಾಪುರ, ಜಯತೀರ್ಥ ಜೋಶಿ, ವಿನೂತ ಕುಲಕರ್ಣಿ ಚನ್ನೂರ, ರಘೋತ್ತಮ ಘಂಟಿ, ಕಮಲಾಕರ ಕುಲಕರ್ಣಿ ಮಳಖೇಡ, ಧನಂಜಯ ಟೆಂಗಳಿ, ಇತರರು ಭಾಗವಹಿಸಿದ್ದರು.

ಹರಿದ ಚೀಲದಲ್ಲಿ ಚಿನ್ನ ಇಟ್ಟಾಗ ಆ ಚೀಲಕ್ಕೆ ಬೆಲೆ ಇರುತ್ತದೆ. ಚೀಲದಿಂದ ಚಿನ್ನ ಬೇರ್ಪಡಿಸಿದಾಗ ಆ ಚೀಲಕ್ಕೆ ಯಾರೂ ಕೇಳುವುದಿಲ್ಲ. ಅದರಂತೆ ಈ ದೇಹವೆಂಬ ಹರಿದ ಚೀಲದಲ್ಲಿ ಆತ್ಮ ಎಂಬ ಭಗವಂತ ಇರುವವರೆಗೂ ಈ ದೇಹಕ್ಕೆ ಬೆಲೆ ಇರುತ್ತದೆ. ದೇಹದಿಂದ ಆತ್ಮ ಬೇರ್ಪಟ್ಟಾಗ ಈ ದೇಹವನ್ನು ಮುಟ್ಟಲೂ ಸಹ ಹಿಂಜರಿಯುತ್ತಾರೆ. ಚಿನ್ನಕ್ಕೆ ಬೆಲೆ ಹೊರತು ಚೀಲಕ್ಕಲ್ಲ. ಅದರಂತೆ ಚೈತನ್ಯ ಎಂಬ ಪರಮಾತ್ಮನಿಗೆ ಬೆಲೆ ಇದೆ ಹೊರತು ಈ ದೇಹಕ್ಕಲ್ಲ.
| ಶ್ರೀ ಸತ್ಯಾತ್ಮತೀರ್ಥ ಶ್ರೀಪಾದರು
ಉತ್ತರಾದಿ ಮಠದ ಪೀಠಾಧಿಪತಿಗಳು.

Leave a Reply

Your email address will not be published. Required fields are marked *