ಜಯಚಾಮರಾಜರನ್ನು ಮೆಚ್ಚಿದ್ದ ಪಟೇಲ್

ಮೈಸೂರು: ಕನ್ನಡ ನಾಡು ಒಂದಾಗಬೇಕು ಎಂಬ ಉದ್ದೇಶದಿಂದ ಮೈಸೂರು ಸಂಸ್ಥಾನವನ್ನು ಒಕ್ಕೂಟ ವ್ಯವಸ್ಥೆಗೆ ಸೇರಿಸಿ ಅಧಿಕಾರ, ಸಿಂಹಾಸನ ತ್ಯಾಗ ಮಾಡಿದ ಮಹನೀಯ ಜಯಚಾಮರಾಜ ಒಡೆಯರ್ ಎಂದು ಮಿಥಿಕ್ ಸೊಸೈಟಿಯ ಗೌರವ ಕಾರ್ಯದರ್ಶಿ ವಿ.ನಾಗರಾಜ್ ಪ್ರಶಂಸಿಸಿದರು.

ಶ್ರೀ ಜಯಚಾಮರಾಜ ಒಡೆಯರ್ ಅವರ ಜನ್ಮ ಶತಮಾನೋತ್ಸವ ಪ್ರಯುಕ್ತ ಕರ್ನಾಟಕ ರಾಜ್ಯ ಮುಕ್ತ ವಿವಿ, ಶ್ರೀ ನಾಲ್ವಡಿ ಕೃಷ್ಣರಾಜ ಒಡೆಯರ್ ಪೀಠ ಮತ್ತು ದಿ ಮಿಥಿಕ್ ಸೊಸೈಟಿ ವತಿಯಿಂದ ಮುಕ್ತ ವಿವಿಯ ಕಾವೇರಿ ಸಭಾಂಗಣದಲ್ಲಿ ಮಂಗಳವಾರದಿಂದ ಎರಡು ದಿನ ಹಮ್ಮಿಕೊಂಡಿರುವ ‘ಶ್ರೀ ಜಯಚಾಮರಾಜ ಒಡೆಯರ್ ಅವರ ಜೀವನ ಮತ್ತು ಸಾಧನೆಗಳು’ ಕುರಿತ ವಿಚಾರ ಸಂಕಿರಣದ ಉದ್ಘಾಟನಾ ಸಮಾರಂಭದಲ್ಲಿ ದಿಕ್ಸೂಚಿ ಭಾಷಣ ಮಾಡಿದರು.

ಜಯಚಾಮರಾಜರು ಕೂಡ ಗಾಂಧಿ, ವಿವೇಕಾನಂದ, ಸರ್ದಾರ್ ವಲ್ಲಭಭಾಯಿ ಪಟೇಲ್ ಅವರ ಸಾಲಿಗೆ ಸೇರುತ್ತಾರೆ. ಹೈದರಾಬಾದ್, ಬಾಂಬೆ ಯಾವುದೇ ಪ್ರಾಂತ್ಯಕ್ಕೆ ಸೇರಿದ ಪ್ರಜೆಯಾಗಿರಲಿ ನಮಗೆ ಜಯಚಾಮರಾಜರೇ ದೊರೆ ಎಂಬ ಭಾವನೆ ಬಂದಿದೆ. ಹೀಗಾಗಿ, ಅವರು ಕನ್ನಡಿಗರ ದೊರೆ ಎನ್ನಬಹುದಾಗಿದೆ ಎಂದರು.

ಆಳುವವರು ಪ್ರಜೆಗಳ ಭೌತಿಕ ಮತ್ತು ಲೌಖಿಕ ಅಗತ್ಯಗಳನ್ನು ಪೂರೈಸಬೇಕು ಎಂಬುದನ್ನು ಅರಿತಿದ್ದ ಅವರು, ಅದರಂತೆ ಆಡಳಿತ ನಡೆಸಿದ ಆದರ್ಶ ರಾಜ. ಅವರ ಅವಧಿಯಲ್ಲಿ ಮೈಸೂರು ಪ್ರಗತಿಯನ್ನು ನೋಡಿದ ಸರ್ದಾರ್ ವಲ್ಲಭಭಾಯಿ ಪಟೇಲರು ಮೈಸೂರು ರಾಜರಂತಹ ರಾಜರು ಇದ್ದರೆ ನಮಗೆ ಸ್ವಾತಂತ್ರೃ ಮತ್ತು ಪ್ರಜಾಪ್ರಭುತ್ವ ಬೇಕಾಗಿಲ್ಲ ಎಂದು ಹೇಳಿದ್ದರು ಎಂಬುದನ್ನು ಉಲ್ಲೇಖಿಸಿದರು.

ಜಯಚಾಮರಾಜರು ಭಾರತೀಯ ತತ್ವ ಶಾಸ್ತ್ರ, ಅಧ್ಯಾತ್ಮದಲ್ಲಿ ವಿದ್ವತ್ ಹೊಂದಿದ್ದರು. ಪಾಶ್ಚಾತ್ಯರಿಗೆ ಉಪನ್ಯಾಸ ನೀಡುತ್ತಿದ್ದರು. ಅಲ್ಲದೆ, ತತ್ವಶಾಸ್ತ್ರದ ಸಾಕಷ್ಟು ಪುಸ್ತಕಗಳನ್ನು ಅವರು ರಚಿಸಿದ್ದಾರೆ ಎಂದು ತಿಳಿಸಿದರು.

ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ರಾಜವಂಶಸ್ಥ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್, ಕನ್ನಡ ಮಾತನಾಡುವವರು ಒಟ್ಟಿಗೆ ಇರಬೇಕು ಎಂಬ ಆಲೂರು ವೆಂಕಟರಾಯರ ಆಶಯದಲ್ಲಿ ಬಲವಾದ ನಂಬಿಕೆ ಹೊಂದಿದ್ದ ಜಯಚಾಮರಾಜರು ಮೈಸೂರು ಸಂಸ್ಥಾನವನ್ನು ಭಾರತದ ಒಕ್ಕೂಟಕ್ಕೆ ಸೇರಿಸಿ, ಕರ್ನಾಟಕದ ಏಕೀಕರಣಕ್ಕೆ ಚಾಲನೆ ನೀಡುವ ಮೂಲಕ ತಮ್ಮ ಅಧಿಕಾರವನ್ನು ತ್ಯಾಗ ಮಾಡಿದರು. ಜನಹಿತವನ್ನು ಬಯಸುತ್ತಿದ್ದ ಅವರು, ನಾಡಿನ ಜೀವವೈವಿಧ್ಯತೆಯ ಬಗ್ಗೆಯೂ ಅಪಾರ ಆಸಕ್ತಿ, ಕಾಳಜಿ ಹೊಂದಿದ್ದರು ಎಂದು ತಿಳಿಸಿದರು.

ಸಹಪ್ರಾಧ್ಯಾಪಕ ಡಾ.ಲ.ನ.ಸ್ವಾಮಿ ಅವರು ಶ್ರೀ ಜಯಚಾಮರಾಜ ಒಡೆಯರ್: ಜೀವನ ಮತ್ತು ಸಾಧನೆಗಳು, ಪತ್ರಗಾರ ಇಲಾಖೆಯ ನಿವೃತ್ತ ಉಪನಿರ್ದೇಶಕಿ ಡಾ.ಜೆ.ವಿ.ಗಾಯತ್ರಿ ಅವರು ಶ್ರೀ ಜಯಚಾಮರಾಜ ಒಡೆಯರ್: ಸ್ವಾತಂತ್ರೃ ಚಳವಳಿ ಮತ್ತು ಸಹಪ್ರಾಧ್ಯಾಪಕಿ ಡಾ.ವಿ.ಅನುರಾಧಾ ಅವರು 1958ರಿಂದ 1974ರವರೆಗಿನ ಸ್ಥಿತ್ಯಂತರಗಳು ಎಂಬ ವಿಷಯದ ಕುರಿತು ಮಾತನಾಡಿದರು.

ಕರಾಮುವಿ ಕುಲಪತಿ ಡಾ.ವಿದ್ಯಾಶಂಕರ್ ಅಧ್ಯಕ್ಷತೆ ವಹಿಸಿದ್ದರು. ಕುಲಸಚಿವ ಪ್ರೊ.ಬಿ.ರಮೇಶ್, ಮಿಥಿಕ್ ಸೊಸೈಟಿ ಅಧ್ಯಕ್ಷ ಪ್ರೊ.ಕೃ. ನರಹರಿ, ಶ್ರೀ ನಾಲ್ವಡಿ ಕೃಷ್ಣರಾಜ ಒಡೆಯರ್ ಪೀಠ ಸಂಯೋಜನಾಧಿಕಾರಿ ಡಾ.ಶಲ್ವಪ್ಪಿಳೈ ಅಯ್ಯಂಗಾರ್ ಇತರರು ಇದ್ದರು.

Leave a Reply

Your email address will not be published. Required fields are marked *