ಜಯಚಂದ್ರ ಹೇಳಿಕೆ ಖಂಡಿಸಿ ಬಿಜೆಪಿ ಪ್ರತಿಭಟನೆ

ಚಿಕ್ಕಮಗಳೂರು: ಪ್ರಧಾನಿ ನರೇಂದ್ರ ಮೋದಿ ಕುರಿತು ಮಾಜಿ ಸಚಿವ ಟಿ.ಬಿ.ಜಯಚಂದ್ರ ನೀಡಿರುವ ಅವಹೇಳನಕಾರಿ ಹೇಳಿಕೆ ಖಂಡಿಸಿ ಭಾನುವಾರ ಕಾಂಗ್ರೆಸ್ ಕಚೇರಿಗೆ ಮುತ್ತಿಗೆ ಹಾಕಲು ಯತ್ನಿಸಿದ ಬಿಜೆಪಿ ಕಾರ್ಯಕರ್ತರ ಪ್ರಯತ್ನ ಭಂಗಗೊಳಿಸಿದ ಪೊಲೀಸರು ಬಂಧಿಸಿ, ಆನಂತರ ಬಿಡುಗಡೆ ಮಾಡಿದರು.

ನಾನು ಮೋದಿ ನನ್ನನ್ನು ಸುಡಿ ಎನ್ನುವ ಭಿತ್ತಿ ಪತ್ರ ಹಿಡಿದು ಬಿಜೆಪಿ ಕಚೇರಿಯಿಂದ ಹೊರಟ ಪ್ರತಿಭಟನಾಕಾರರು, ಜಯಚಂದ್ರ ಹಾಗೂ ಕಾಂಗ್ರೆಸ್ ವಿರುದ್ಧ ಘೊಷಣೆ ಕೂಗಿದರು. ಟಿ.ಬಿ.ಜಯಚಂದ್ರ ಕೂಡಲೇ ದೇಶದ ಜನರ ಕ್ಷಮೆ ಯಾಚಿಸಬೇಕು ಎಂದು ಒತ್ತಾಯಿಸಿ ಜಿಲ್ಲಾ ಕಾಂಗ್ರೆಸ್ ಕಚೇರಿಯತ್ತ ಮೆರವಣಿಗೆ ಹೊರಡಲು ಅನುವಾದರು. ಪೊಲೀಸರು ಅವರನ್ನು ತಡೆದಾಗ ಜಗ್ಗದ ಕಾರ್ಯಕರ್ತರು ಪ್ರತಿಭಟನೆ ಮುಂದುವರಿಸಿದ್ದರಿಂದ ಎಲ್ಲರನ್ನೂ ಬಂಧಿಸಿ ವಾಹನಗಳಲ್ಲಿ ಕರೆದೊಯ್ದು ಆನಂತರ ಬಿಡುಗಡೆ ಮಾಡಲಾಯಿತು.

ಇದಕ್ಕೂ ಮೊದಲು ಜಿಲ್ಲಾ ಬಿಜೆಪಿ ಉಪಾಧ್ಯಕ್ಷ ಸಿ.ಆರ್.ಪ್ರೇಂಕುಮಾರ್ ಮಾತನಾಡಿ, ಬೆಂಕಿ ಹಚ್ಚುವ ವಿಕೃತಿ ಕಾಂಗ್ರೆಸ್​ನಲ್ಲಿದೆ. ಇಂದಿರಾ ಹತ್ಯೆ ಸಂದರ್ಭ ಕಾಂಗ್ರೆಸಿಗರು ಸಿಖ್ಖರ ನರಮೇಧ ನಡೆಸಿದ್ದು ಕಣ್ಣ ಮುಂದಿದೆ. ಮೊದಲಿನಿಂದಲೂ ಬೆಂಕಿ ಹಚ್ಚುವ ಸ್ವಭಾವ ಕಾಂಗ್ರೆಸ್​ನದ್ದು. ಸಮಾಜವನ್ನು ಒಟ್ಟಿಗೆ ಕೊಂಡೊಯ್ಯಬೇಕು ಎನ್ನುವ ಉದ್ದೇಶ ಆ ಪಕ್ಷಕ್ಕಿಲ್ಲ ಎಂದು ಟೀಕಿಸಿದರು.

ವೋಟಿನ ಆಸೆಗಾಗಿ ಯಾರೂ ಅರ್ಜಿ ಹಾಕದಿದ್ದರೂ ಟಿಪ್ಪು ಜಯಂತಿ ಆಚರಿಸುವ ಮೂಲಕ ಸಮಾಜದಲ್ಲಿ ಬೆಂಕಿ ಹಚ್ಚುತ್ತಿರುವುದು ಕಾಂಗ್ರೆಸ್ಸಿಗರು. ಅದು ಅವರ ಹುಟ್ಟುಗುಣ. ಜಯಚಂದ್ರ ಅವರ ಮನಸಿನಲ್ಲಿರುವುದು ನಾಲಿಗೆ ಮೇಲೆ ಬಂದಿದೆ. ಹಿಂದೆ ಕಾಂಗ್ರೆಸ್ಸಿಗರು ನರೇಂದ್ರ ಮೋದಿ ಅವರನ್ನು ಚಾಯ್ವಾಲ, ಮೌತ್ಕಿ ಸೌದಾಘರ್ ಎಂದೆಲ್ಲ ಜರಿದರು. ಆದರೆ ಇಂದು ನರೇಂದ್ರ ಮೋದಿ ಅವರು ವಿಶ್ವವೇ ಮೆಚ್ಚುವಂತೆ ಭಾರತವನ್ನು ಯಶಸ್ವಿಯಾಗಿ ಮುನ್ನಡೆಸುತ್ತಿದ್ದಾರೆ ಎಂದು ಹೇಳಿದರು.

ನಗರಸಭೆ ಮಾಜಿ ಅಧ್ಯಕ್ಷ ಎಂ.ಆರ್.ದೇವರಾಜ್ ಶೆಟ್ಟಿ ಮಾತನಾಡಿ, ಟಿ.ಬಿ.ಜಯಚಂದ್ರ ನೀಡಿರುವ ಹೇಳಿಕೆ ಎಲ್ಲ ಭಾರತೀಯರಿಗೂ ಮಾಡಿದ ಅಪಮಾನ. ಅವರ ಸ್ವಾಭಿಮಾನಕ್ಕೆ ಧಕ್ಕೆ ತರುವಂಥದ್ದು, ದೇಶವನ್ನು ಪ್ರೀತಿಸುವ ಜನರೆಲ್ಲರಿಗೂ ಇದರಿಂದ ನೋವಾಗಿದೆ ಎಂದರು.

ಜಿಪಂ ಸದಸ್ಯ ರವೀಂದ್ರ ಬೆಳವಾಡಿ, ಬಿಜೆಪಿ ಜಿಲ್ಲಾ ವಕ್ತಾರ ವರಸಿದ್ದಿ ವೇಣುಗೋಪಾಲ್, ನಗರಸಭೆ ಮಾಜಿ ಅಧ್ಯಕ್ಷ ಕೆ.ಎಸ್.ಪುಷ್ಪರಾಜ್, ಮಾಜಿ ಉಪಾಧ್ಯಕ್ಷ ರವೀಂದ್ರ ಪ್ರಭು, ವಿಕ್ರಾಂತ್ ದಿನೇಶ್ ಗೌಡ ಮತ್ತಿತರರು ಪ್ರತಿಭಟನೆಯಲ್ಲಿದ್ದರು.