ಜಮೀನು ಸಂಪರ್ಕ ರಸ್ತೆ ಹಾಳು

ರೋಣ:ರೋಣದಿಂದ ಕುರಹಟ್ಟಿ ಮಾರ್ಗವಾಗಿ ರೈತರ ಜಮೀನುಗಳಿಗೆ ತೆರಳುವ ಒಳರಸ್ತೆ ಸಂಪೂರ್ಣ ಹದಗೆಟ್ಟಿದ್ದು, ಇದನ್ನು ದುರಸ್ತಿಗೊಳಿಸಲು ಆಗ್ರಹಿಸಿ ರೈತರು ತಹಸೀಲ್ದಾರ್ ಶರಣಮ್ಮಾ ಕಾರಿ ಅವರಿಗೆ ಸೋಮವಾರ ಮನವಿ ಸಲ್ಲಿಸಿದರು.

ಈ ಸಂದರ್ಭದಲ್ಲಿ ರಾಜಣ್ಣಾ ಹೂಲಿ ಮಾತನಾಡಿ, ರಸ್ತೆ ದುರಸ್ತಿಗಾಗಿ ಜಿಪಂ ಇಂಜಿನಿಯರಿಂಗ್ ವಿಭಾಗ ಸೇರಿ ಹಲವರಿಗೆ ಮನವಿ ಸಲ್ಲಿಸಿದರೂ ಕ್ಯಾರೇ ಎನ್ನುತ್ತಿಲ್ಲ. ಒಂದು ವಾರದ ಹಿಂದೆ ರೈತ ರುದ್ರಪ್ಪ ಹಕಾರಿ ಅವರು ತಮ್ಮ ಜಮೀನಿಗೆ ಕೃಷಿ ಕಾರ್ಯಕ್ಕೆ ಹೋಗುತ್ತಿದ್ದಾಗ ಎತ್ತಿನ ಕಾಲು ಮುರಿದಿದೆ. ಹೀಗಾಗಿ, ರೈತರು ಈ ಮಾರ್ಗವಾಗಿ ಹೋಗಿ ತಮ್ಮ ಕೃಷಿ ಚಟುವಟಿಕೆ ಮಾಡಲು ಹಿಂದೇಟು ಹಾಕುವ ಪರಿಸ್ಥಿತಿ ನಿರ್ವಣವಾಗಿದೆ. ರಸ್ತೆ ದುರಸ್ತಿಗೆ ಸೂಕ್ತ ಕ್ರಮ ಕೈಗೊಳ್ಳಬೇಕು. ಇಲ್ಲದಿದ್ದರೆ ತಹಸೀಲ್ದಾರ್ ಕಚೇರಿಯ ಮುಂದೆ ಆಮರಣ ಉಪವಾಸ ಹೋರಾಟ ಕೈಗೊಳ್ಳುವುದಾಗಿ ಎಚ್ಚರಿಕೆ ನೀಡಿದರು.

ಇದಕ್ಕೆ ಸ್ಪಂದಿಸಿದ ತಹಸೀಲ್ದಾರ್, ಜಿಪಂ ಇಂಜಿನಿಯರ್ ಎಸ್.ಜಿ. ಕೊತಬಾಳ ಜತೆಗೆ ರೈತರೊಂದಿಗೆ ತೆರಳಿ ಕುರಹಟ್ಟಿ ಮಾರ್ಗದಲ್ಲಿ ಹಾಳಾದ ರಸ್ತೆ ವೀಕ್ಷಣೆ ಮಾಡಿದರು. ಈ ರಸ್ತೆ ದುರಸ್ತಿಗಾಗಿ ನೀರಾವರಿ ನಿಗಮದಿಂದ ದರಪಟ್ಟಿ ನಿಗದಿಪಡಿಸಲಾಗಿದೆ. ತಕ್ಷಣವೇ ಟೆಂಡರ್ ಕರೆದು ಆದಷ್ಟು ಬೇಗ ಸುಧಾರಿಸುವುದಾಗಿ ಹೇಳಿದರು.

ತಾತ್ಕಾಲಿಕ ದುರಸ್ತಿ ಭರವಸೆ ನೀಡಿದ ಅಧಿಕಾರಿ

ರೈತ ಶಿವನಗೌಡ ತಿಮ್ಮನಗೌಡ್ರ ಮಾತನಾಡಿ, ಈಗ ರೋಹಿಣಿ ಮಳೆ ಕೂಡಿಕೊಳ್ಳುತ್ತಿದೆ. ಕಳೆದ 3-4 ವರ್ಷ ಭೀಕರ ಬರದಿಂದ ತತ್ತರಿಸಿರುವ ರೈತರು ಈಗ ಬಿತ್ತನೆ ಕಾರ್ಯಕ್ಕೆ ಅಣಿಯಾಗುತ್ತಿದ್ದಾರೆ. ನೀವು ಟೆಂಡರ್ ಕರೆದು ರಸ್ತೆ ದುರಸ್ತಿಗೊಳಿಸಲು ಮೂರ್ನಾಲ್ಕು ತಿಂಗಳು ಬೇಕಾಗುತ್ತದೆ. ಅಲ್ಲಿಯವರೆಗೆ ರೈತರು ಏನು ಮಾಡಬೇಕು ಎಂದು ಪ್ರಶ್ನಿಸಿದರು. ಇದಕ್ಕೆ ಉಳಿದ ರೈತರೂ ದನಿಗೂಡಿಸಿದರು. ಆಗ ತಹಸೀಲ್ದಾರ್, ತಾತ್ಕಾಲಿಕವಾಗಿ ರಸ್ತೆಗೆ ಗರಸು ಹಾಕಿಸಿ, ಕೃಷಿ ಕಾರ್ಯಕ್ಕೆ ಅನುಕೂಲ ಮಾಡಿಕೊಡುವ ಭರವಸೆ ನೀಡಿದರು. ಇದರಿಂದ ರೈತರು ಸಮಾಧಾನಗೊಂಡರು. ಅಶೋಕ ಹಕಾರಿ, ರಾಮಣ್ಣಾ ಸುರಕೋಡ, ನಾಗಪ್ಪಾ ಮಣ್ಣೇರಿ, ಮಾನಪ್ಪಾ ಬಡಿಗೇರ, ಶಿವಪ್ಪಾ ಕರಿಲಿಂಗಣ್ಣವರ, ಬಸವರಾಜ ಹಕಾರಿ, ಬಸವರಾಜ ಕೊಟಗಿ ಇತರರು ಇದ್ದರು.