ಜಮೀನು ಖರೀದಿ ತಾರತಮ್ಯ ಬಗೆಹರಿಸಿ

ನವಲಗುಂದ: ರೈತರ ಜಮೀನು ಖರೀದಿಯಲ್ಲಿ ತಾರತಮ್ಯ ಹೋಗಲಾಡಿಸಿ ಬೆಳಹಾರ ಗ್ರಾಮದ ಸರಹದ್ದಿನಲ್ಲಿ ಕೈಗೊಂಡಿರುವ ನೂತನ ಸೋಲಾರ್ ಪ್ರಾಜೆಕ್ಟ್ ಅನ್ನು ಮುಂದುವರಿಸಬೇಕು ಎಂದು ಶಾಸಕ ಶಂಕರಪಾಟೀಲ ಮುನೇನಕೊಪ್ಪ ನೋಕಾರ್ ಸೋಲಾರ್ ಕಂಪನಿ ಮತ್ತು ಸಂಬಂಧಿಸಿದ ಅಧಿಕಾರಿಗಳಿಗೆ ಸೂಚಿಸಿದರು.

ತಾಲೂಕಿನ ಬೆಳಹಾರ ಗ್ರಾಪಂನಲ್ಲಿ ಸೋಲಾರ್ ಪ್ರಾಜೆಕ್ಟ್ ಅಳವಡಿಕೆಯಿಂದಾಗಿ ರೈತರಿಗೆ ಆಗುತ್ತಿರುವ ಸಮಸ್ಯೆ ಮತ್ತು ಅವರಿಗೆ ಪರಿಹಾರ ಒದಗಿಸುವ ಸಲುವಾಗಿ ಶನಿವಾರ ನಡೆಸಿದ ಸಭೆಯಲ್ಲಿ ಅವರು ಮಾತನಾಡಿದರು. ಬೆಳಹಾರ ಗ್ರಾಮದ ಸರಹದ್ದಿನಲ್ಲಿ ಈಗಾಗಲೇ ಹರಿಯಾಣ ರಾಜ್ಯದ ಗುರ್​ಗಾಂವ್ ನೋಕಾರ್ ಸೋಲಾರ್ ಪ್ರಾಜೆಕ್ಟ್ ಲಿಮಿಟೆಕ್ ಕಂಪನಿಯವರು ರೈತರಿಂದ 78.33 ಎಕರೆ ಜಮೀನು ಖರೀದಿಸಿ ಸೋಲಾರ್ ಅಳವಡಿಕೆಗೆ ಮುಂದಾಗಿದ್ದಾರೆ. ಪ್ರಾರಂಭದಲ್ಲಿ ಕಂಪನಿಯವರು ಎಕರೆಗೆ 6.80 ಲಕ್ಷ ರೂ. ನಂತೆ ಖರೀದಿ ಮಾಡಿದರೆ, ನಂತರದಲ್ಲಿ 13 ರಿಂದ 15 ಲಕ್ಷ ರೂ. ನೀಡಿ ಜಮೀನು ಖರೀದಿಸಿದ್ದಾರೆ. ಇದರಿಂದ ರೈತರಿಗೆ ತಾರತಮ್ಯವಾಗಿದೆ.

ಸೋಲಾರ್ ಅಳವಡಿಕೆ ಸುತ್ತಲೂ ಕಾಂಪೌಂಡ್ ನಿರ್ವಣದಿಂದ ಪಕ್ಕದ ಹೊಲದಲ್ಲಿನ ಮಳೆ ನೀರು ಹರಿದು ಹೋಗಲು ದಾರಿ ಇಲ್ಲದಂತಾಗಿದೆ ಎಂದು ರೈತರು ಆರೋಪಿಸಿದ್ದಾರೆ. ರೈತರಿಗೆ ಹೊಲಕ್ಕೆ ಹೋಗಿಬರಲು ಅಡೆತಡೆಯಾಗದಂತೆ ಕಂಪನಿಯವರು ಪರಿಹಾರ ಕಂಡುಕೊಳ್ಳಬೇಕು. ರೈತರ ಸಹಕಾರವಿದ್ದರೆ ಮಾತ್ರ ಯೋಜನೆ ಯಶಸ್ವಿಗೊಳಿಸಲು ಸಾಧ್ಯ. ಈ ನಿಟ್ಟಿನಲ್ಲಿ ರೈತರ ಹೋರಾಟಕ್ಕೆ ಬೆಂಬಲವಾಗಿ ನಿಲ್ಲುತ್ತೇನೆ. ರೈತರ ಸಮಸ್ಯೆ ಪರಿಹರಿಸುವವರೆಗೂ ಹೋರಾಟದಿಂದ ಹಿಂದೆ ಸರಿಯುವ ಮಾತಿಲ್ಲ ಎಂದು ಎಚ್ಚರಿಸಿದರು. ಕಂಪನಿಯ ಅನೀಲಕುಮಾರ, ಧನಂಜಯಗೌಡ, ಪಾಂಡುರಂಗ ಜೋಶಿ, ಶರಣಪ್ಪ, ರವಿಚಂದ್ರ ದೊಡ್ಡಲಿಂಗಪ್ಪ ಅವರು ರೈತರ ಬೇಡಿಕೆಗಳಿಗೆ ಸ್ಪಂದಿಸುವುದಾಗಿ ಭರವಸೆ ನೀಡಿದರು.

ಮಲ್ಲನಗೌಡ ಹಿರೇಗೌಡ್ರ, ಅಮೃತಗೌಡ ಪಾಟೀಲ, ಕಲ್ಲಪ್ಪ ಪರಪ್ಪನವರ, ಬಸಪ್ಪ ಶಲವಡಿ, ನಿಂಗಪ್ಪ ಮಾದರ, ಶಂಕರಗೌಡ ಪಾಟೀಲ, ನಾಗನಗೌಡ ಪಾಟೀಲ ಎಸ್.ಬಿ. ದಾನಪ್ಪಗೌಡರ, ರುದ್ರಪ್ಪ ಮಗೆಣ್ಣವರ, ತಾಪಂ ಇಒ ಪವಿತ್ರಾ ಪಾಟೀಲ, ಪಿಡಿಒ ಗುರುಸಿದ್ದಪ್ಪ ಮಡಿವಾಳರ, ಇತರರಿದ್ದರು.