ಜಮೀನಿನ ಬದುಗಳಲ್ಲಿ ನೆಡುತೋಪು ಬೆಳೆಸಿ

ಮಧುಗಿರಿ/ದೊಡ್ಡೇರಿ: ಸಾಮಾಜಿಕ ಅರಣ್ಯ ಇಲಾಖೆ ವಲಯ ಅರಣ್ಯಾಧಿಕಾರಿ ಚಂದ್ರಪ್ಪ ರೈತರ ಜಮೀನಿನ ಬದುಗಳ ಸಮೀಪ ಹಾದು ಹೋಗುವ ರಸ್ತೆಯಲ್ಲಿ ಅಂದಾಜು 1,500 ಹುಣಸೆ ಗಿಡಗಳನ್ನು ನಾಟಿ ಮಾಡಿ ಬೆಳೆಸಲು ಕ್ರಮ ಕೈಗೊಂಡಿರುವುದು ಮಾದರಿ ಎಂದು ಕೇಂದ್ರ ಜಲ ಅಧ್ಯಯನ ತಂಡದ ನೋಡಲ್ ಅಧಿಕಾರಿ ಪಿ.ಕೆ. ಚಂಡೋಲಿಯಾ ಮೆಚ್ಚುಗೆ ವ್ಯಕ್ತಪಡಿಸಿದರು.

ದೊಡ್ಡೇರಿ ಹೋಬಳಿಯಲ್ಲಿ ಜಲ ಸಂರಕ್ಷಣೆ ಮತ್ತು ಮಳೆ ಕೊಯ್ಲು ಕಾಮಗಾರಿ ವೀಕ್ಷಣೆ, ಭೂತನಹಳ್ಳಿ, ಮಲ್ಲೇನಹಳ್ಳಿ ಮತ್ತು ಗೊಲ್ಲರಹಟ್ಟಿಗೆ ಹಾದು ಹೋಗುವ ರಸ್ತೆಯ ಸಮೀಪದ 5 ಕಿ.ಮೀ. ವ್ಯಾಪ್ತಿಯ ಅಂದಾಜು 42 ರೈತರ ಜಮೀನುಗಳ ಎರಡೂ ಬದುಗಳಲ್ಲೂ ಹುಣಸೆ ಸಸಿಗಳನ್ನು ನಾಟಿ ಮಾಡಿ ನೆಡು ತೋಪನ್ನು ಬೆಳೆಸಿರುವ ಪ್ರದೇಶವನ್ನು ವೀಕ್ಷಿಸಿ, ಈ ಬಗ್ಗೆ ಚಂದ್ರಪ್ಪ ಅವರಿಂದ ಮಾಹಿತಿ ಪಡೆದು ಮಾತನಾಡಿದರು.

42 ರೈತರ ತಲಾ ಒಂದು ಎಕರೆ ಜಮೀನಿನಲ್ಲಿ ತಲಾ20 ಸಸಿಗಳಂತೆ 1,500 ಹುಣಸೆ ಸಸಿಗಳನ್ನು ನಾಟಿ ಮಾಡಿದ್ದು, 7 ವರ್ಷಗಳ ನಂತರ ಒಂದು ಸಸಿಗೆ 20 ಸಾವಿರದಂತೆ ಅಂದಾಜು 4 ಲಕ್ಷ ರೂ. ಆದಾಯ ಪ್ರತಿ ರೈತರಿಗೆ ದೊರೆಯಲಿದೆ. 42 ರೈತರು ಮಾತ್ರ ಈ ಯೋಜನೆಯ ಪ್ರಯೋಜನ ಪಡೆಯುತ್ತಿದ್ದು, ಇದನ್ನು ಜಿಲ್ಲೆಯಾದ್ಯಂತ ವಿಸ್ತರಿಸಬೇಕೆಂದು ಸಲಹೆ ನೀಡಿದರು.

ನಂತರ ಹರಿಹರ ರೊಪ್ಪ ಗ್ರಾಮದಲ್ಲಿ ನರೇಗಾ ಯೋಜನೆಯಡಿಯಲ್ಲಿ 5.7 ಲಕ್ಷ ರೂ. ವೆಚ್ಚದಲ್ಲಿ ನಿರ್ವಿುಸಿರುವ ಚೆಕ್ ಡ್ಯಾಂ ಪರಶೀಲಿಸಿ ಅದರಿಂದ ಏನಾದರೂ ಅನುಕೂಲವಾಗಿದೆಯೇ ಎಂದು ರೈತ ಶಿವಶಂಕರ್ ಅವರನ್ನು ವಿಚಾರಿಸಿದಾಗ, ಈ ಹಿಂದೆ ಬೋರ್​ವೆಲ್​ಗಳು ವಿಫಲವಾಗಿದ್ದವು. ಈ ಚೆಕ್ ಡ್ಯಾಮ್ ನಿಮಾಣದಿಂದಾಗಿ ಮಳೆ ಬಂದ ಸಂದರ್ಭದಲ್ಲಿ ಸುತ್ತಮುತ್ತಲ ಕೊಳವೆ ಬಾವಿಗಳಲ್ಲಿ ಮತ್ತು ಬಾವಿಗಳಲ್ಲಿ ನೀರು ತುಂಬಿಕೊಳ್ಳುತ್ತಿದ್ದು, ರೈತರಿಗೆ ಬಹಳಷ್ಟು ಅನುಕೂಲವಾಗಿದೆ ಎಂದರು.

ಈ ಭಾಗದಲ್ಲಿ ಮತ್ತಷ್ಟು ಚೆಕ್ ಡ್ಯಾಂಗಳನ್ನು ನಿರ್ವಿುಸಲು ಸಂಬಂಧಪಟ್ಟ ಶಾಸಕರು ಮತ್ತು ಸಂಸದರಿಗೆ ಮನವಿ ಸಲ್ಲಿಸಿ ಎಂದು ದಬ್ಬೆಗಟ್ಟ ಗ್ರಾಪಂ ಅಧ್ಯಕ್ಷ ರಂಗನಾಥ ಗೌಡಗೆ ಸಲಹೆ ನೀಡಿದರು.

ಪಟ್ಟಣದ ಸಿದ್ಧಾರ್ಥ ಹೈಸ್ಕೂಲ್ ಮತ್ತು ಪುರಸಭೆ ಆವರಣದಲ್ಲಿ ಪುರಸಭೆ ವತಿಯಿಂದ ನಿರ್ವಿುಸಿರುವ ಮಳೆ ನೀರು ಕೊಯ್ಲು, ತಾಪಂ ಸಮೀಪದ ಕಲ್ಯಾಣಿ ಮತ್ತು ಇಂದಿರಾ ಕ್ಯಾಂಟೀನ್ ವೀಕ್ಷಿಸಿದರು. ಕೇಂದ್ರ ಜಲಶಕ್ತಿ ಅಭಿಯಾನದ ಸಹಾಯಕ ಕಾರ್ಯದರ್ಶಿ ಬಲರಾಮ್ ಪ್ರಸಾದ್, ತಾಂತ್ರಿಕ ಅಧಿಕಾರಿ ಬಿಮಲ್ ಕೆ. ನಾಯುಡು, ಜಿಪಂ ಇಇ ಪ್ರಕಾಶ್, ಎಇಇ ಸುರೇಶ್ ರೆಡ್ಡಿ, ಪಿಡಬ್ಲ್ಯುಡಿ ಇಇ ಹೊನ್ನೇಶಪ್ಪ, ತಾಪಂ ಇಒ ದೊಡ್ಡಸಿದ್ದಪ್ಪ, ಪುರಸಭೆ ಮುಖ್ಯಾಧಿಕಾರಿ ಡಿ.ಲೋಹಿತ್, ಕೃಷಿ ಇಲಾಖೆಯ ಸಹಾಯಕ ನಿರ್ದೇಶಕ ಹನುಮಂತರಾಯಪ್ಪ, ಪಿಡಿಒ ಸುಬ್ಬರಾಯ, ಶಿಲ್ಪಾ, ಮುಖಂಡ ತಿಮ್ಮೇಗೌಡ ಮತ್ತು ರೈತರು ಇದ್ದರು.

Leave a Reply

Your email address will not be published. Required fields are marked *