ಜಪಾನ್ ದೇಶ ಮುಂದುವರಿದಿದ್ದು ಹೇಗೆ?

| ಡಾ. ವಿಜಯಲಕ್ಷ್ಮಿ ಬಾಳೆಕುಂದ್ರಿ

ಇತ್ತೀಚೆಗೆ ನಾನು ಜಪಾನ್ ಪ್ರವಾಸ ಕೈಗೊಂಡಾಗ, ಆ ‘ಸೂಪರ್ಕ್ಲೀನ್’ ದೇಶ, ಅಲ್ಲಿನ ಜನರ ನಯ-ವಿನಯ, ಶಿಸ್ತು-ಶಿಷ್ಟಾಚಾರ, ದೇಶ-ಭಾಷಾ ಪ್ರೇಮ ಕಂಡು ಬೆಕ್ಕಸ ಬೆರಗಾದೆ! ಹಲವು ದೇಶ ಸುತ್ತಿದ್ದೇನೆ, ಪ್ರತಿ ದೇಶದಲ್ಲೂ ಅದರದೇ ಆದ ವಿಶೇಷ-ವೈಶಿಷ್ಟ್ಯಗಳನ್ನು ಕಂಡಿದ್ದೇನೆ. ಆದರೆ ತಮಗಾಗಿ ಬದುಕದೆ ದೇಶಕ್ಕಾಗಿ ದುಡಿಯುವ ಜಪಾನಿಯರು ವಿಶ್ವಕ್ಕೇ ಮಾದರಿ ಎಂದರೆ ತಪ್ಪಾಗಲಾರದು. ಜಪಾನ್ ಚಿಕ್ಕದೇಶವಾದರೂ ಚೊಕ್ಕವಾಗಿದೆ, ಮುಂದುವರಿದ ರಾಷ್ಟ್ರವಾಗಿ ಮಿಂಚುತ್ತಿದೆ. ಆದರೆ 130 ಕೋಟಿ ಜನಸಂಖ್ಯೆಯ ಭಾರತ ಏಕೆ ಹಿಂದೆ ಬಿದ್ದಿದೆ ಎಂದು ಚಿಂತನೆ ಮಾಡಿದಾಗ ನನಗನಿಸಿದ್ದು ಅವರಿಂದ ಕಲಿಯಬೇಕಾದ ವಿಷಯ ಎಷ್ಟೊಂದಿದೆ!

ಪ್ರಪ್ರಥಮವಾಗಿ ಶಿಸ್ತು-ಶಿಷ್ಟಾಚಾರ ಕಲಿಯಬೇಕಾದ ವಿಷಯ.

ಜಪಾನಿನ ಸೂಪರ್ ಎಕ್ಸ್​ಪ್ರೆಸ್ ಟ್ರೇನ್​ನಲ್ಲಿ ಪ್ರವಾಸ ಮಾಡಿ ದಂಗಾದೆ. ಒಸಾಕಾದಿಂದ ಟೋಕಿಯೋವರೆಗಿನ ಪ್ರಯಾಣ 3 ಗಂಟೆಯಲ್ಲಿ ಮುಗಿದಿತ್ತು. ಇದನ್ನೇ ಬಸ್​ನಲ್ಲಿ ಮಾಡಿದ್ದರೆ ಹನ್ನೆರಡೂವರೆ ಗಂಟೆ ಆಗುತ್ತಿತ್ತು. ಗಂಟೆಗೆ 400-600 ಕಿ.ಮೀ. ಚಲಿಸುವ ಈ ಟ್ರೇನು ತೇಲುತ್ತಿರುವಂತೆ ಭಾಸವಾಗುತ್ತದೆ. ಮಧ್ಯೆ ಮಧ್ಯೆ ದೊಡ್ಡ ಊರುಗಳಲ್ಲಿ 2 ನಿಮಿಷ ನಿಂತರೂ ಸಮಯಕ್ಕೆ ಸರಿಯಾಗಿ ನಿಗದಿತ ಸ್ಥಳ ತಲುಪುತ್ತದೆ!

ರಸ್ತೆಯಲ್ಲಿ ಫುಟ್​ಪಾತ್​ನಲ್ಲಿ ಕೂಡ ಅವರ ಶಿಸ್ತು ಅನುಕರಣೀಯ! ಪಾದಚಾರಿಗಳು ಒಂದು ಲೈನ್​ನಲ್ಲಿ ಎಡಬದಿಯಲ್ಲಿ ನಡೆಯುತ್ತಾರೆ. ಇದರಿಂದ ಆಚೆ ಹೋಗುವವರಿಗೆ ಈಚೆ ಹೋಗುವವರು ಡಿಕ್ಕಿ ಕೊಟ್ಟು ತಳ್ಳಿಹೋಗುವ ಪ್ರಮೇಯವೇ ಇಲ್ಲ. ರಸ್ತೆ ಆಚೆಯಿಂದ ಈಚೆ ದಾಟಬೇಕಾದರೂ ಶಿಸ್ತಿನ ಸಿಪಾಯಿಗಳಂತೆ ‘ಝೀಬ್ರಾ ಕ್ರಾಸ್’ನಲ್ಲಿ ದಾಟುತ್ತಾರೆ. ಯಾರೂ ಸಿಗ್ನಲ್ ಮೀರಿ ಮುಂದೆಹೋಗುವುದಿಲ್ಲ.

‘ಶುಚಿತ್ವವೇ ದೈವತ್ವ’ ಎಂದು ಸಾರಿದ ಭಾರತದಲ್ಲಿ ನಮ್ಮ ಜನ ಸಾಮಾಜಿಕ ಪ್ರಜ್ಞೆ ಇಲ್ಲದೆ ಎಲ್ಲೆಂದರಲ್ಲಿ ಕಸ ಎಸೆಯುತ್ತಾರೆ. ಕೋಟ್ಯಂತರ ಜನ ದಿನನಿತ್ಯ ಹೀಗೆ ಕಸ ಎಸೆಯುತ್ತಿದ್ದರೆ ಅದನ್ನು ಗುಡಿಸಲು ಯಾರಿಂದ ಸಾಧ್ಯ? ನಮ್ಮಲ್ಲಿ ಸುಶಿಕ್ಷಿತರೇ ಕಸ ಎಸೆಯುತ್ತಾರೆ. ಪಾಪ, ಅನಕ್ಷರಸ್ಥ ಪೌರ ಕಾರ್ವಿುಕರು ವಿಂಗಡಿಸದಿದ್ದ ಕಸ ಎತ್ತಬೇಕು, ಸಮಯಕ್ಕೆ ಸರಿಯಾಗಿ ಸಂಬಳ ಸಿಗದಿದ್ದರೂ, ಸ್ವಚ್ಛಗೊಳಿಸಲು ಶ್ರಮಿಸಬೇಕು! ಒಬ್ಬ ವೈದ್ಯರ ಹೆಂಡತಿ ಪಿಕ್​ನಿಕ್​ಗೆ ಹೋದಾಗ ಸ್ವಚ್ಛಭಾರತ ಅಭಿಯಾನದಿಂದ ಪ್ರಭಾವಿತರಾಗಿ ‘ಎಲ್ಲರೂ ಖಾಲಿ ನೀರಿನ ಬಾಟಲ್ ಈ ಚೀಲದಲ್ಲಿ ಹಾಕಿ, ತಿಂಡಿ ತಿಂದ ಪ್ಲೇಟ್ ಇದರಲ್ಲಿ ಹಾಕಿ’ ಎಂದು ಮನವಿ ಮಾಡಿಕೊಂಡರೆ, ಒಬ್ಬ ವಿದ್ಯಾವಂತ (ಅವಿವೇಕಿ) ತಾಯಿ, ಮಕ್ಕಳಿಗೆ ಬುದ್ಧಿ ಹೇಳಬೇಕಾದವಳು ಗಹಗಹಿಸಿ ನಗುತ್ತ ‘ಸ್ವಚ್ಛಭಾರತ್’ ಎಂದು ಕೇಕೆಹಾಕಿ ಕೂಗಿ ಇಡ್ಲಿ ತಿಂದ ಪೊಟ್ಟಣವನ್ನು ಕಿಟಕಿಯಿಂದ ಹೊರಗೆ ಬಿಸಾಕಿದಳಂತೆ. ಇದು ನಮ್ಮ ದೇಶದ ದುಸ್ಥಿತಿ. ಆದರೆ ಜಪಾನಿನಲ್ಲಿ ಎಲ್ಲೂ ಯಾರೂ ಕಸ ಹೊರಗೆ ಎಸೆಯುವುದಿಲ್ಲ. ಇಡೀ ದೇಶ ಸುತ್ತಿದರೂ ಕಸ ಕಣ್ಣಿಗೆ ಕಾಣುವುದಿಲ್ಲ. ಕಾರಣ ಎಲ್ಲೆಡೆ 4 ಕಸದ ಡಬ್ಬಗಳಿರುತ್ತವೆ. ಒಂದು ಡಬ್ಬದಲ್ಲಿ ರೀಸೈಕಲ್ ಮಾಡಬೇಕಾದ ಪ್ಲಾಸ್ಟಿಕ್ ಬಾಟಲಿಗಳು, ಎರಡನೆಯದರಲ್ಲಿ ತಿಂಡಿ-ತಿನಿಸುಗಳ ತ್ಯಾಜ್ಯ, ಮೂರನೆಯದರಲ್ಲಿ ರದ್ದಿ ಕಾಗದ ಮತ್ತು ನಾಲ್ಕನೆಯದರಲ್ಲಿ ಇನ್ನಿತರ (ಗಾಜು, ಸೂಜಿ ಇತ್ಯಾದಿ) ತ್ಯಾಜ್ಯಗಳು ಇರುತ್ತವೆ. ಹೀಗೆ ಕಸ ಮೂಲದಲ್ಲಿಯೇ ವಿಂಗಡಣೆ ಆಗುವುದರಿಂದ ತ್ಯಾಜ್ಯದ ವಿಲೇವಾರಿ ಆಗುತ್ತದೆ! ಈ ವ್ಯವಸ್ಥೆಯನ್ನು ನಮ್ಮಲ್ಲೂ ಅಳವಡಿಸಿಕೊಂಡಿದ್ದೇ ಆದರೆ ಸ್ವಚ್ಛಭಾರತದ ಕನಸು ನನಸಾಗಬಹುದು.

ಜಪಾನ್​ನಲ್ಲಿ ಎಲ್ಲಿ ಹೋದರೂ ಕೊಚ್ಚೆ, ಕೆಸರು, ರಸ್ತೆಗಳಲ್ಲಿ ಗುಂಡಿಗಳು ಕಾಣುವುದಿಲ್ಲ. ನಾನು ಹೋದಾಗ ಎರಡು ದಿನ ಸತತವಾಗಿ ಮಳೆ ಬರುತ್ತಿತ್ತು. ಆ ಮಳೆಯಲ್ಲಿಯೇ ನಾನು ಕೊಡೆ ಹಿಡಿದುಕೊಂಡು ಪಾರ್ಕ್​ನಲ್ಲಿ (ನಮ್ಮ ಲಾಲ್​ಬಾಗ್ ತರಹದ್ದು) 3 ಗಂಟೆ ಸುತ್ತುಹಾಕಿದೆ. ಎಷ್ಟು ಚೆನ್ನಾಗಿ ಗಿಡಮರಗಳನ್ನು ಬೆಳೆಸಿ ಉಳಿಸಿದ್ದನ್ನು, ಮರ ಬೀಳದಂತೆ ಅವುಗಳಿಗೆ ಕೋಲು ಕಟ್ಟಿ, ಬಟ್ಟೆ ಕಟ್ಟಿ ಚಿಕಿತ್ಸೆ ಮಾಡಿದ್ದನ್ನು ಕಂಡು ಚಕಿತಳಾದೆ.

ಆದರೆ, ನಮ್ಮಲ್ಲಿ ಸ್ವಚ್ಛತೆಯ ಕೊರತೆಯಿಂದ ಕಾಣಿಸಿಕೊಳ್ಳುವ ನ್ಯುಮೋನಿಯಾದಿಂದ ಪ್ರತಿ ವರ್ಷ 40 ಲಕ್ಷ ಮಕ್ಕಳು ಪ್ರಾಣ ಕಳೆದುಕೊಳ್ಳುತ್ತಿದ್ದಾರೆ. ಕಲುಷಿತ ನೀರಿನಿಂದ ಬರುವ ಕಾಯಿಲೆಗಳ ಚಿಕಿತ್ಸೆಗೆ ಭಾರತ ಪ್ರತಿವರ್ಷ 19,900 ಕೋಟಿ ರೂ. ಖರ್ಚು ಮಾಡುತ್ತಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆ ತಿಳಿಸಿದೆ. ಜಪಾನಿಯರ ಸರಾಸರಿ ಆಯಸ್ಸು 88 ವರ್ಷ. ಹಲವರು ಶತಾಯುಷಿಗಳು. ಆದರೆ ನಮ್ಮ ದೇಶದಲ್ಲಿ ಮಕ್ಕಳು ಕಣ್ಣುಬಿಡುವ ಮೊದಲೇ ಸಾಂಕ್ರಾಮಿಕ ರೋಗದಿಂದ ಕಣ್ಣುಮುಚ್ಚುವುದು ದೊಡ್ಡ ದುರಂತ. ಇದಕ್ಕೆ ನಮ್ಮಲ್ಲಿ ಸ್ವಚ್ಛತೆಯ ಕೊರತೆ ಪ್ರಮುಖ ಕಾರಣ.

ನಮ್ಮ ದೇಶದಲ್ಲಿ ಕೋಟ್ಯಂತರ ಜನ ಬಯಲುಶೌಚ ಮಾಡುವುದನ್ನು ನಿಲ್ಲಿಸಿ ಮನೆಗಳಲ್ಲಿ ಶೌಚಗೃಹ ಕಟ್ಟಲು ನಮ್ಮ ಪ್ರಧಾನಿ ಬೇಡಿಕೊಳ್ಳುತ್ತಿದ್ದಾರೆ, ಚಿತ್ರನಟ ಅಮಿತಾಭ್ ಬಚ್ಚನ್ ಜಾಹೀರಾತು ಕೊಡುತ್ತಿದ್ದಾರೆ. ಬಯಲಿನಲ್ಲಿ ಶೌಚಕ್ಕೆ ಹೋಗಿ ಪ್ರತಿವರ್ಷ ಸಾವಿರಕ್ಕೂ ಮೇಲ್ಪಟ್ಟು ಮಹಿಳೆಯರು ಹಾವು ಕಚ್ಚಿ ಸಾಯುತ್ತಿರುವುದು ದೇಶದ ದೊಡ್ಡ ದುರಂತ. ಆದರೆ ಜಪಾನ್ ಶೌಚಗೃಹದಲ್ಲಿ ತಂತ್ರಜ್ಞಾನದ ಸದ್ಬಳಕೆ ಮಾಡಿಕೊಂಡಿರುವುದನ್ನು ಕಂಡು ನಿಬ್ಬೆರಗಾದೆ.

ಹೀಗೆ ಶ್ರಮ, ಶಿಸ್ತು, ಶುಚಿತ್ವ, ಶಿಷ್ಟಾಚಾರವನ್ನು ಬದುಕುವ ರೀತಿಯಾಗಿಸಿಕೊಂಡ ಜಪಾನಿಯರು ಬಗ್ಗಿ ವಿನಯದಿಂದ ನಮಸ್ಕರಿಸುತ್ತಾರೆ. ನಮ್ಮ ದೇಶದಲ್ಲಿ ತೆರಿಗೆ ವಂಚಿಸುವ ಹಲವು ರೀತಿಗಳನ್ನು ಹುಡುಕಿಕೊಂಡರೆ, ಜಪಾನಿಯರು ತಪ್ಪದೆ ತೆರಿಗೆ ಕಟ್ಟುವುದಲ್ಲದೆ ಹೊರದೇಶದಿಂದ ಬಂದ ಅತಿಥಿಗಳಿಗೆ ತೆರಿಗೆ ವಿನಾಯಿತಿ ಕೊಟ್ಟು ನಾವು ಏನೇ ಕೊಂಡರೂ ಆ ಹಣ ಮರುಪಾವತಿ ಮಾಡಿ ಅತಿಥಿಗಳಿಗೆ ತಮ್ಮ ಗೌರವ ಸೂಚಿಸುತ್ತಾರೆ. ಅವರು ಜಪಾನಿ ಭಾಷೆ ಬಿಟ್ಟು ಬೇರೆ ಭಾಷೆ ಮಾತನಾಡುವುದಿಲ್ಲ. ಅಂಗಡಿಯಲ್ಲಿ ನಾವು ಇಂಗ್ಲಿಷ್​ನಲ್ಲಿ ಕೇಳಿದರೆ ಹುಡುಗಿಯರಿಗೆ ಅರ್ಥವಾಗುವುದಿಲ್ಲ! ಆಗ ಅವರು ನಮ್ಮ ಬಾಯಿ ಹತ್ತಿರ ವಾಯ್್ಸ ರೆಕಾರ್ಡರ್ ಹಿಡಿಯುತ್ತಾರೆ. ನಾವು ಮಾತಾಡಿದ್ದು ತಕ್ಷಣ ಅವರಿಗೆ ಜಪಾನಿ ಭಾಷೆಯಲ್ಲಿ ತರ್ಜುಮೆ ಆಗುತ್ತದೆ. ನಸುನಗುತ್ತ ನಮಗೆ ಬೇಕಾದ ವಸ್ತುವನ್ನು ಕೊಡುತ್ತಾರೆ!

ಹೀಗೆ ಅಣುಬಾಂಬ್ ದಾಳಿಯ ನಂತರವೂ ಅಕ್ಷರಶಃ ದೇಶಕ್ಕಾಗಿ ದುಡಿದು, ಬದುಕಿ, ಶ್ರಮ-ಶ್ರದ್ಧೆ-ಶುಚಿತ್ವದಿಂದ ಸ್ವರ್ಗ ನಿರ್ವಿುಸಿದ ಜಪಾನಿಯರು ಆದರಣೀಯ ಮತ್ತು ಅನುಕರಣೀಯರಾಗಿದ್ದಾರೆ.

(ಲೇಖಕರು ಖ್ಯಾತ ಹೃದ್ರೋಗ ತಜ್ಞರು)

Leave a Reply

Your email address will not be published. Required fields are marked *